Sunday Motivation: ಇಲ್ಲ, ಬೇಡ, ಆಗೋಲ್ಲ, ಸಾಧ್ಯವಿಲ್ಲ.. ನೋ ಎನ್ನಲು ಹಿಂಜರಿಯಬೇಡಿ; ಹೌದಪ್ಪಗಳಿಗೆ ಭಾನುವಾರದ ಸ್ಪೂರ್ತಿದಾಯಕ ಪಾಠ
Sunday Motivation: ಜೀವನದಲ್ಲಿ ಸಾಕಷ್ಟು ಜನರು "ನೋ" ಎಂದು ಹೇಳಲಾಗದೆ ಯಶಸ್ಸಿನಿಂದ ದೂರ ಉಳಿಯುತ್ತಾರೆ. ಎಲ್ಲದಕ್ಕೂ ಯೆಸ್ ಎನ್ನಬೇಕಿಲ್ಲ. ನಿಮಗೆ ಇಷ್ಟವಾಗದ ವಿಷಯಗಳಿಗೆ ಧೈರ್ಯವಾಗಿ "ಇಲ್ಲ" (How to Say no) ಎಂದು ಹೇಳಲು ಕಲಿಯಿರಿ.
ನೋ ಎಂದು ಹೇಳಲು ಹಿಂಜರಿದರೆ ಅದೇ ಅಭ್ಯಾಸವಾಗಿ ಹೋಗುತ್ತದೆ. ಆರಂಭದಿಂದಲೇ ನೋ ಎನ್ನಲು ಕಲಿಯಬೇಕು, ಇಲ್ಲವಾದರೆ ಪ್ರತಿದಿನ "ಹೌದು" ಮುಂದುವರೆಯುತ್ತದೆ. ಜೀವನದಲ್ಲಿ ಯೆಸ್ ಎನ್ನುವುದಕ್ಕೆ ಎಷ್ಟು ಮಹತ್ವ ಇದೆಯೋ ನೋ ಎನ್ನುವುದಕ್ಕೂ ಅಷ್ಟೇ ಮಹತ್ವವಿದೆ. ಸಾಕಷ್ಟು ಜನರಿಗೆ ನೋ ಎಂದು ಹೇಳಲು ಹಿಂಜರಿಕೆಯಾಗುತ್ತದೆ. ನನ್ನ ಬಗ್ಗೆ ತಪ್ಪಾಗಿ ತಿಳಿದುಕೊಳ್ಳಬಹುದು, ನನಗೆ ಜೀವನದಲ್ಲಿ ಅವಕಾಶ ಕಡಿಮೆಯಾಗಬಹುದು, ನನ್ನ ಬಗ್ಗೆ ಏನೋ ಅಂದುಕೊಳ್ಳಬಹುದು, ಅವರು ದೊಡ್ಡವರು.. ಅವರಿಗೆ ನೋ ಹೇಳೋದು ಹೇಗೆ... ಹೀಗೆ ನೋ ಹೇಳದೆ ಇರಲು ನಿಮ್ಮಲ್ಲಿ ಸಾಕಷ್ಟು ಕಾರಣ ಇರಬಹುದು. ಆದರೆ, "ಸತ್ಯ ಏನೆಂದು ನಿಮಗೆ ಗೊತ್ತಿದ್ದರೆ", "ಅದು ಸರಿಯಿಲ್ಲ ಎಂದು ನಿಮಗೆ ಅನಿಸಿದರೆ" ಧೈರ್ಯವಾಗಿ ನೋ ಎನ್ನಿ.
ಕೆಲವು ಉದಾಹರಣೆಗಳು: ನೋ ಎನ್ನಲೇಬೇಕು
ಅರ್ಥವಾಗಿಲ್ವ? ನೀವು ಹುಡುಗಿ, ನಿಮಗೊಬ್ಬ ದಿನ ಡಬಲ್ ಮೀನಿಂಗ್ ಮೆಸೆಜ್ ಮಾಡಲು ಆರಂಭಿಸಿದ್ದಾನೆ. ಆ ವ್ಯಕ್ತಿಯ ಕುರಿತು ಏನೋ ಗೌರವ ಇದ್ದ ಕಾರಣ ಅದನ್ನು ನಿಮಗೆ ತಡೆಯಲಾಗುತ್ತಿಲ್ಲ. "ನೋ ಸರ್, ಹಾಗೆ ಕಳುಹಿಸಬೇಡಿ, ನನಗಿಷ್ಟವಿಲ್ಲ" ಎಂದು ಧೈರ್ಯವಾಗಿ ತಿಳಿಸಿ. ಅದರ ಬದಲು ನೋ ಹೇಳದೆ ಇದ್ದರೆ ಏನಾಗಬಹುದು. ಮೊದಲ ದಿನ ಸ್ಮೈಲಿ ಇಮೋಜಿ ಕಳುಹಿಸುತ್ತಾರೆ. ಎರಡನೇ ದಿನ ಕಣ್ಣಲ್ಲಿ ಲವ್ ತುಂಬಿರುವ ಇಮೋಜಿ ಕಳುಹಿಸುತ್ತಾನೆ. ಮೂರನೇ ದಿನ ಕಿಸ್ ಇಮೋಜಿ ಕಳುಹಿಸುತ್ತಾನೆ. ನಾಲ್ಕನೇ ದಿನ ತುಟಿಗಳ ಇಮೋಜಿ ಕಳುಹಿಸುತ್ತಾನೆ. ಬಳಿಕ ಏನೇನೋ ಸಂದೇಶ ಕಳುಹಿಸುತ್ತಾನೆ. ನಂತರ ನೇರವಾಗಿ ಕೇಳುತ್ತಾನೆ. ಆರಂಭದಲ್ಲಿಯೇ ನೋ ಎಂದಿದ್ದರೆ ಚೆನ್ನಾಗಿತ್ತು, ಆರಂಭದಲ್ಲಿ ಸಾಧ್ಯವಾಗದೆ ಇದ್ದರೆ ಎಲ್ಲೋ ದಾರಿ ತಪ್ಪುತ್ತಿದೆ ಎನಿಸಿದಾಗ ನೋ ಎನ್ನಿ.
ಸಾಧನೆ ಮಾಡುವ ಸಲುವಾಗಿ “ನೋ” ಎಂದು ಹೇಳಿ
ನೀವು ಏನೋ ಸಾಧನೆ ಮಾಡಬೇಕೆಂದು ಎಂದಿದ್ದೀರಿ. ಜೀವನದಲ್ಲಿ ಇದೇ ಓದಬೇಕೆಂದಿದ್ದೀರಿ. ಆದರೆ, ಮನೆಯವರು, ಸುತ್ತಮುತ್ತಲಿನವರು ಬೇರಾವುದೋ ಸಬ್ಜೆಕ್ಟ್ ಓದಬೇಕೆಂದು ಒತ್ತಡ ಹೇರುತ್ತಿದ್ದಾರೆ. ಅವರಿಗೂ ಧೈರ್ಯವಾಗಿ ನೋ ಎನ್ನಿ. ಅದಕ್ಕಿಂತ ನಾನು ಕಲಿಯಲು ಬಯಸುತ್ತಿರುವ ವಿಷಯಕ್ಕೆ ಯಾವ ಸ್ಕೋಪ್ ಇದೆ ತಿಳಿಸಿ.
ಕೆಟ್ಟ ಚಟಗಳಿಗೆ ನೋ ಎನ್ನಿ
ಕಾಲೇಜು ಅಥವಾ ಫ್ರೆಂಡ್ಸ್ ಗುಂಪು ಇರುತ್ತದೆ. ಸ್ನೇಹಿತರು ಸಿಗರೇಟು ಸೇದಲು ಒತ್ತಾಯ ಮಾಡಬಹುದು. ಆದರೆ, ನಿಮಗೆ ಇಷ್ಟವಿಲ್ಲ. ಸ್ನೇಹಿತರ ಗುಂಪಲ್ಲಿ ನನ್ನ ಬಗ್ಗೆ ಏನೋ ಅಂದುಕೊಳ್ಳಬಹುದು, ನನ್ನ ಬಗ್ಗೆ ತಪ್ಪಾಗಿ ತಿಳಿಯಬಹುದು ಎಂದು ಒಂದು ಧಮ್ ಎಳೆಯುವಿರಿ. ಮತ್ತೆ ಎರಡು ಧಮ್, ಒಂದು ಸಿಗರೇಟ್, ದಿನಕ್ಕೆ ನಾಲ್ಕು ಸಿಗರೇಟ್, ವಾರಕ್ಕೆ ನಾಲ್ಕು ಪ್ಯಾಕ್... ಸಿಗರೇಟು ದಾಸರಾಗುವಿರಿ. ಮೊದಲ ದಿನವೇ ಸಿಗರೇಟು ಸೇದು ಎಂದವನಿಗೆ ನೋ ಎಂದಿದ್ದರೆ... ಚಟ ಹಿಡಿಯುತ್ತಿತ್ತೇ? ಇದೇ ರೀತಿ, ಕುಡಿತ, ಡ್ರಗ್ಸ್, ಕೆಟ್ಟ ಅಭ್ಯಾಸಗಳು ಕೂಡ "ಯೆಸ್" ಕಾರಣಕ್ಕೆ ಬಂದಿರಬಹುದು.
ಆಫೀಸ್‌ನಲ್ಲಿ ಹೌದಪ್ಪ ಆಗಬೇಡಿ
ಇದೇ ರೀತಿ ಆಫೀಸ್‌ನಲ್ಲೂ ಮೇಲಾಧಿಕಾರಿ, ಮ್ಯಾನೇಜರ್, ಸಹೋದ್ಯೋಗಿಗಳಿಗೆ ನೋ ಎನ್ನಲು ನಿಮಗೆ ಕಷ್ಟವಾಗಬಹುದು. ಆದರೆ, ಯೆಸ್ ಎನ್ನುವುದು ಸರಿಯಲ್ಲ ಎನಿಸಿದರೆ ಧೈರ್ಯವಾಗಿ ನೋ ಎನ್ನಿ. ನೋ ಎನ್ನುವುದು ವೀಕ್‌ನೆಸ್ ಅಲ್ಲ ಎಂದು ತಿಳಿಯಿರಿ. ನಿಮ್ಮ ಮೇಲೆ ಅತಿಯಾದ ಕೆಲಸದ ಒತ್ತಡ ಹಾಕಿದಾಗ, ಇತರರು ತಮ್ಮ ಕೆಲಸವನ್ನು ನಿಮ್ಮಲ್ಲಿ ಮಾಡಿಸಿದಾಗ, ನಿಮ್ಮ ಮೇಲೆ ಏನಾದರೂ ಮಾನಸಿಕ ದೌರ್ಜನ್ಯ ನಡೆಸಿದಾಗ ಧೈರ್ಯವಾಗಿ ನೋ ಎನ್ನಿ.
ಹೀಗೆ, ಪ್ರತಿಯೊಬ್ಬರಿಗೂ ನೋ ಎನ್ನಲು ಸಾಕಷ್ಟು ಕಾರಣ ಇರಬಹುದು. ಆದರೆ, ನೋ ಎನ್ನದೇ ಪರಿತಪಿಸುತ್ತಿರಬಹುದು. ಯಾರೇ ಆಗಿರಲಿ, ಎಷ್ಟು ದೊಡ್ಡ ವ್ಯಕ್ತಿಯೇ ಆಗಿರಲಿ, ನಿಮಗೆ ಇಷ್ಟವಾಗದ ವಿಷಯಕ್ಕೆ ನೋ ಎನ್ನಿ. ಪರಿಣಾಮ ಏನೇ ಇರಲಿ. ಖಂಡಿತಾ ಒಂದು ದಿನ ಅದರಿಂದ ಒಳ್ಳೆಯದಾಗುತ್ತದೆ. ಯಾರನ್ನೋ ಖುಷಿಪಡಿಸಲು ಸದಾ ಯೆಸ್ ಎನ್ನಬೇಡಿ. ಸದಾ ಹೌದಪ್ಪ ಆಗಬೇಡಿ. ನೋ ಎನ್ನಬೇಕಾದ ಸಮಯದಲ್ಲಿ "ಇಲ್ಲ, ಆಗೋಲ್ಲ, ಸಾಧ್ಯವಿಲ್ಲ, ಬೇಡ" ಎಂದು ಹೇಳಲು ಮರೆಯದಿರಿ.
ವಿಭಾಗ