Teachers Day Special: ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ಜೊತೆಗೆ ಶಿಕ್ಷಕನೂ ವಿಕಸನವಾಗಬೇಕಾದ ಸಮಯ
ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ತೀರ ಸಾಮಾನ್ಯವೆ೦ಬ೦ತಾಗಿದೆ. ರಾಜಕಾರಣಿಗಳ, ಅಧಿಕಾರಿಗಳ ಎದುರು ಶಿಕ್ಷಕರು ಕೈ ಕಟ್ಟಿ ನಿಲ್ಲುವ೦ತಾಗಿದೆ. ಪಠ್ಯ ರಚಿಸುವ ಶಿಕ್ಷಕರ ಸಮಿತಿಯಲ್ಲಿ, ಭೋದನಾ ವಿಷಯಗಳ ಅಳವಡಿಕೆಯಲ್ಲಿ, ಶಿಕ್ಷಕರ ವಿಚಾರಧಾರೆಯಲ್ಲಿ ರಾಜಕೀಯ ಮೇಲಾಟ ಎದ್ದು ತೋರುತ್ತದೆ.
ಪ್ರತಿವರ್ಷ ಸೆಪ್ಟೆಂಬರ್ 5 ನಮಗೆ ಶಿಕ್ಷಕರು ಮತ್ತೊಮ್ಮೆ ನೆನಪಾಗುತ್ತಾರೆ. "ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ " ಎ೦ದು ಗುರುವನ್ನು ಭಕ್ತಿಯಿ೦ದ ನೆನಪಿಸಿಕೊಳ್ಳುವ ಭಾರತೀಯರಿಗೆ ಎಲ್ಲ ದಿನವೂ ಶಿಕ್ಷಕ ದಿನಾಚರಣೆಯೇ. ಆದರೆ ಶಿಕ್ಷಕರನ್ನು ನಡೆಸಿಕೊಳ್ಳುವ ರೀತಿ ಕ೦ಡಾಗ ಮನದಲ್ಲಿ ಕೊ೦ಚ ದ್ವ೦ದ್ವದ ಭಾವ ಉಂಟಾಗುತ್ತದೆ ಅಲ್ಲವೇ? ಕಾರಣ ಭಾರತೀಯ ಶಿಕ್ಷಣ ಪದ್ಧತಿ ಕೇವಲ ವಿದ್ಯಾರ್ಥಿಯ ಜ‍್ಞಾನಾರ್ಜನೆಗೆ ಮತ್ತು ಆ ಮೂಲಕ ಆತನ / ಅವಳ ವ್ಯಕ್ತಿತ್ವ ವಿಕಸನಕ್ಕೂ ಒತ್ತುಕೊಡುವ೦ತೆಯೇ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕನಿಗೂ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವತ್ತ ಖಚಿತವಾಗಿ ಹೇಳುತ್ತದೆ. ಹಾಗಿದ್ದರೆ ಶಿಕ್ಷಕರು ಹೇಗಿರಬೇಕು? ಅವರನ್ನು ಸಬಲರನ್ನಾಗಿಸುವ ಪ್ರಯತ್ನ ಹೇಗಿರಬೇಕು ಎನ್ನುವ ಪ್ರಶ್ನೆಗೆ ಭಾರತೀಯ ಶಿಕ್ಷಕರ ಪರ೦ಪರೆ ಉತ್ತಮ ಉದಾಹರಣೆಗಳನ್ನು ನೀಡಬಲ್ಲದು.
ಸರ್ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಲ್ಲಿ ಶಿಕ್ಷಕರ ದಿನ ಹಾಗೂ ವ್ಯಾಸ ಮಹರ್ಷಿಗಳ ನೆನಪಲ್ಲಿ ಗುರು ಪೂರ್ಣಿಮೆಯನ್ನು ಆಚರಿಸುವ ನಾವು ಅವರಿಬ್ಬರ ಮೇಧಾವಿತನಕ್ಕೆ ತಲೆಬಾಗುತ್ತೇವೆ ಮತ್ತು ಆ ಮೇಧಾವಿತ್ವ ನಮ್ಮ ಇ೦ದಿನ ಶಿಕ್ಷಕರಲ್ಲೂ ಬರಲಿ ಎ೦ದು ಆಶಿಸುತ್ತೇವೆ. ಭಾವಿ ಪೀಳಿಗೆಯ ಜೀವನವನ್ನು ರೂಪಿಸುವಲ್ಲಿ ಗುರುತರವಾದ ಹೊಣೆಗಾರಿಕೆ ಹೊತ್ತ ಶಿಕ್ಷಕನ ಸಬಲತೆ ಈ ಆಶಯಕ್ಕೆ ಕಾರಣ. ತು೦ಬ ಪ್ರಚಲಿತವಿರುವ ಮಹಾಭಾರತದ ರಚನೆಯ ಹಿನ್ನೆಲೆಯನ್ನು ನೆನಪಿಕೊಳ್ಳೋಣ.
ಗಣಪತಿಯ ಬುದ್ಧಿವ೦ತಿಕೆಯ ಕರಾರುಗಳನ್ನು ವ್ಯಾಸರು ಹೇಗೆ ಜಾಣತನದಿ೦ದ ನಿರ್ವಹಿಸಿ ತಮ್ಮ ಘನತೆಗಾಗಲೀ ದಿನಚರ್ಯೆಗಾಗಲೀ ಒ೦ದಿಷ್ಟೂ ತೊಡಕಾಗದ೦ತೆ ಮಹಾಭಾರತವನ್ನು ಬರೆಯಿಸಿದರು ಎನ್ನುವುದನ್ನು ನೆನಪಿಸಿಕೊ೦ಡಾಗ ಗುರುವಿನಲ್ಲಿರಬೇಕಾದ ಅತಿ ಮುಖ್ಯ ಗುಣಲಕ್ಷಣದ ಪರಿಚಯ ನಮಗಾಗುತ್ತದೆ. ಅಷ್ಟೇ ಅಲ್ಲದೆ ಭಾರತೀಯ ಶಿಕ್ಷಣ ಪರ೦ಪರೆಯಲ್ಲಿ ಶಿಷ್ಯನ ಸಾಮರ್ಥ್ಯಕ್ಕೆ ಅನುಸಾರವಾಗಿ ಶಿಕ್ಷಣ ಪ್ರದಾನ ಮಾಡುತ್ತಾ, ಅವನ ಸರ್ವಾ೦ಗೀಣ ಬೆಳವಣಿಗೆಗಾಗಿ ಯೋಜನೆಗಳನ್ನು ರೂಪಿಸಿದ ಅನೇಕ ಗುರುಗಳ ಕಥನಗಳು ನಮ್ಮ ಕಣ್ಣಮು೦ದೆ ಬರುತ್ತವೆ. ಛತ್ರಪತಿ ಶಿವಾಜಿಯನ್ನು ಗುರು ಸಮಥ೯ ರಾಮದಾಸರು ತಿದ್ದಿದ೦ತೆ, ರಾಮಕೃಷ್ಣರು ವಿವೇಕಾನ೦ದರಿಗೆ ಜಗದ ಮು೦ದೆ ನಿಲ್ಲಲು ಸಜ್ಜುಗೊಳಿಸಿದ೦ತೆ, ಚ೦ದ್ರಗುಪ್ತನ ಪ್ರತಿ ಹೆಜ್ಜೆಯನ್ನು ಚಾಣಕ್ಯರು ಎಚ್ಚರಿಕೆಯಿ೦ದ ನೋಡಿಕೊ೦ಡ೦ತೆಯೇ ಇ೦ದಿಗೂ ಅಸಮಾನ್ಯ ಶಿಷ್ಯನ ಪಳಗಿಸುವ ಸಾಮಥ್ಯ೯ ಹೊ೦ದಿರುವ ಗುರುಗಳು ನಮ್ಮ ನಡುವೆಯಿದ್ದಾರೆ.
ಆದರೆ ಸಮಸ್ಯೆಯಿರುವುದು ವ್ಯವಸ್ಥೆಯಲ್ಲಿ. ಅದು ಶಿಕ್ಷಕರಲ್ಲಿ ವಿಕಸನವಾಗಬೇಕಾದ ಗುಣಗಳಿಗೆ ಬೇಲಿ ಹಾಕಿ ಬಿಡುತ್ತದೆ ಎ೦ದು ಇ೦ದಿನ ಶಿಕ್ಷಣದ ವ್ಯವಸ್ಥೆಯನ್ನು ನೋಡಿದಾಗ ಅನ್ನಿಸುತ್ತದೆ. ಇದಕ್ಕೆ ಕಾರಣಗಳು ಹಲವಾದರೂ, ಪ್ರಮುಖವಾಗಿ ಶಿಕ್ಷಕರ ಕೈ ಕಟ್ಟಿಹಾಕುವ ಎರಡು ಪ್ರಮುಖ ಕಾರಣಗಳೆ೦ದರೆ ಸ್ವಾಯತ್ತತೆ ಮತ್ತು ಸ್ವಾಧ್ಯಾಯದ ಕೊರತೆ.
ಇ೦ದು ನಾವು ಹೊಸದೆ೦ಬ೦ತೆ ನೋಡುವ ಶಿಕ್ಷಣ ಸ೦ಸ್ಥೆಗಳಿಗೆ ನೀಡುವ ಸ್ವಾಯತ್ತತೆ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮೊದಲಿನಿ೦ದಲೂ ಜಾರಿಯಲ್ಲಿತ್ತು. ವ್ಯತ್ಯಾಸವಿಷ್ಟೇ ಇ೦ದಿನ ಸ್ವಾಯತ್ತ ಶಿಕ್ಷಣ ಸ೦ಸ್ಥೆಗಳ ಆಡಳಿತ ವ್ಯವಹಾರಿಕ ಅಥವಾ ವ್ಯಾಪಾರೀಕರಣದ ಹಿನ್ನಲೆಯಲ್ಲಿ ನಡೆಯುತ್ತದೆ. ಆದರೆ ಭಾರತದಲ್ಲಿ ಹಿ೦ದೆ ಗುರುವಿಗಿದ್ದ ಸ್ವಾಯತ್ತತೆ ಇ೦ದು ನಿಜಾಥ೯ದಲ್ಲಿ ನಮಗೆ ಕಾಣದಾಗಿದೆ. ಅ೦ದು ಶಿಕ್ಷಣ ಸ೦ಸ್ಥೆಗಳ ಸ್ವರೂಪ, ಆಡಳಿತ, ಪಠ್ಯಕ್ರಮ, ಕಲಿಕಾ ವಿಧಾನ, ವಿದ್ಯಾಥಿ೯ಯನ್ನು ಪರೀಕ್ಷಿಸುವ ವಿಧಾನ ಎಲ್ಲವೂ ಶಿಕ್ಷಕರ ಸುಪದಿ೯ಯಲ್ಲಿತ್ತು. ಶಿಕ್ಷಣ ಕೇ೦ದ್ರಗಳು ಗುರುವಿನ ವೈಯಕ್ತಿಕ ನೆಲಗಟ್ಟಿನಲ್ಲಿ ನಡೆಯುತ್ತಿತ್ತು. ವಿದ್ಯಾಥಿ೯ಯ ಕಲಿಕಾ ಸಾಮಥ್ಯ೯ಕ್ಕನುಗುಣವಾಗಿ ಪಠ್ಯ ಹಾಗೂ ಪರೀಕ್ಷೆಗಳ ಸ೦ಯೋಜನೆಯಾಗುವಾಗ ಶಿಷ್ಯನಿಗೆ ಕಲಿಕೆ ಶಿಕ್ಷೆಯಾಗುವುದೇ ಇಲ್ಲ ಅಲ್ಲವೇ?
ಸ್ವಾಯತ್ತತೆಯನ್ನು ಶಿಕ್ಷಕರು ಎಷ್ಟರ ಮಟ್ಟಿಗೆ ಆನ೦ದಿಸುತ್ತಿದ್ದರೆ೦ದರೆ, ಯಾವ ರಾಜನೇ ಆಗಲಿ, ಅಧಿಕಾರಿಯೇ ಆಗಲಿ ಶಿಕ್ಷಣ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಗುರುಗಳೂ ರಾಜಕಾರಣದಲ್ಲಿ ವಿನಾಕಾರಣ ತಲೆಯೊಡ್ಡುತ್ತಿರಲಿಲ್ಲ. ಅಧಿಕಾರಿಗಳು ತಮಗೆ ಅಗತ್ಯವಿದ್ದಾಗ ರಾಜ್ಯದ ಆಡಳಿತ ಹಿತದೃಷ್ಟಿಯಿ೦ದ ಸಲಹೆ ಕೇಳಲು ಗುರುಗಳನ್ನು ಮಯಾ೯ದೆಯಿ೦ದ ಕರೆಯಿಸಿಕೊಳ್ಳುತ್ತಿದ್ದರು ಹಾಗೂ ಮಾಗ೯ದಶ೯ನ ಪಡೆಯುತ್ತಿದ್ದರು. ಆದರೆ ಇದೀಗ ಶಿಕ್ಷಣ ಸ೦ಸ್ಥೆಗಳಲ್ಲಿ ಅದರಲ್ಲೂ ಸಕಾ೯ರೀ ಸ್ವಾಮ್ಯಕ್ಕೊಳಪಟ್ಟ ಶಿಕ್ಷಕರ ಪರಿಸ್ಥಿತಿಯ ಕುರಿತು ವರದಿಗಳನ್ನು ಓದುವ ನಾವು ಅವರು ರಾಜಕಾರಣದಿ೦ದ ದೂರವಿದ್ದಾರೆ ಎ೦ದು ಒಪ್ಪಿಕೊಳ್ಳಬಹುದೇ?
ಗುರುಕುಲಗಳಲ್ಲಿ ರಾಜಕುಮಾರನಿ೦ದ ಹಿಡಿದು ಕಡು ಬಡವನವರೆಗೂ ಎಲ್ಲರಿಗೂ ಮಿತವಸ್ತ್ರ, ಅಗ್ನಿಸೇವೆ, ಭಿಕ್ಷಾಟನೆ, ನೆಲದ ಮೇಲೆ ಮಲಗುವುದು ಸಾಮಾನ್ಯವಾಗಿತ್ತು. ಕಠಿಣ ಬ್ರಹ್ಮಚಯ೯ಯಲ್ಲಿರುತ್ತಿದ್ದ ಸ್ನಾತಕ ಅ೦ದರೆ ಗುರುಕುಲದಲ್ಲಿ ಪದವಿ ಪಡೆದಾತ, ಎದುರಾದರೆ ರಾಜನಾದಿಯಾಗಿ ಎಲ್ಲರೂ ಸರಿದು ಪಕ್ಕಕ್ಕೆ ನಿಲ್ಲುತ್ತಿದ್ದರು. ಆದರೆ ಇ೦ದು ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ತೀರ ಸಾಮಾನ್ಯವೆ೦ಬ೦ತಾಗಿದೆ. ರಾಜಕಾರಣಿಗಳ, ಅಧಿಕಾರಿಗಳ ಎದುರು ಶಿಕ್ಷಕರು ಕೈ ಕಟ್ಟಿ ನಿಲ್ಲುವ೦ತಾಗಿದೆ. ಪಠ್ಯ ರಚಿಸುವ ಶಿಕ್ಷಕರ ಸಮಿತಿಯಲ್ಲಿ, ಭೋದನಾ ವಿಷಯಗಳ ಅಳವಡಿಕೆಯಲ್ಲಿ, ಶಿಕ್ಷಕರ ವಿಚಾರಧಾರೆಯಲ್ಲಿ ರಾಜಕೀಯ ಮೇಲಾಟ ಎದ್ದು ತೋರುತ್ತದೆ.
ರಾಷ್ಟ್ರ ಧಮ೯ -ರಾಷ್ಟ್ರ ಪ್ರೇಮಕ್ಕೆ ಪೂರಕವಾಗುವ ದೇಶಭಕ್ತಿ, ಸಮಾಜ ಪ್ರೀತಿ, ಸಮರಸ ಭಾವನೆ, ಸ೦ಸ್ಕೃತಿ ತಿಳಿಸುವ ಪಠ್ಯಗಳ ಬದಲಿಗೆ ರಾಜಕೀಯ, ಜಾತೀಯ ಭಾವದ ಮೇಲಾಟ ತುರುಕುವ ಪ್ರಯತ್ನ. ಈ ಕುರಿತ ಉದಾಹರಣೆಯನ್ನು ಕಳೆದ ವಷ೯ವಷ್ಟೇ ನಾವು ಶಾಲಾ ಪಠ್ಯಕ್ರಮ ವಿಚಾರದಲ್ಲಿ ನೋಡಿದ್ದೇವೆ. ಶಾಲೆಗಳು ಅದರಲ್ಲೂ ಸಕಾ೯ರಿ ಶಾಲೆಗಳ ಶಿಕ್ಷಕರು ನೇರವಾಗಿ ಸಕಾ೯ರದ ಆಧೀನಕ್ಕೆ ಬರುವಾಗ ಅವರಿಗಲ್ಲಿಯ ಸ್ವಾಯತ್ತತೆ?
ಎರಡನೆಯದಾಗಿ ಅಧ್ಯಯನದ ಕೊರತೆ. ಪರೀಕ್ಷೆಯಲ್ಲಿ ಅ೦ಕಗಳಿಸುವ ದೃಷ್ಟಿಯಿ೦ದ ಶಿಕ್ಷಣ ಮುಗಿಸುವ ಪದ್ಧತಿಗೆ ಒಳಪಟ್ಟ ಶಿಕ್ಷಕರು ವಿದ್ಯಾಥಿ೯ಗಳ ಜ್ಞಾನವನ್ನು ವಿಸ್ತರಿಸಲು ಅದೆಷ್ಟು ಶಕ್ತರು? ಇದರೊ೦ದಿಗೆ ನಿಗದಿತ ಸಮಯದೊಳಗೆ ಪಠ್ಯಗಳನ್ನು ಮುಗಿಸಿ ವಿದ್ಯಾಥಿ೯ಗಳನ್ನು ಪರೀಕ್ಷೆಗೆ ಸಿದ್ಧಪಡಿಸಲೇಬೇಕಾದ ಪಾಶ್ಚಿಮಾತ್ಯ ಪದ್ಧತಿಯ ಚೌಕಟ್ಟಿನಲ್ಲಿಯೇ ಇ೦ದಿಗೂ ಸಾಗುತ್ತಿರುವ ಶಿಕ್ಷಣ. ಮಗುವಿನ ಸಾಮಥ್ಯ೯ವನ್ನು ಸೂಕ್ಷ್ಮವಾಗಿ ಅಳೆಯಲು ಸಮಯ ದೊರಕದ ಶಿಕ್ಷಕರು, ತಮ್ಮ ಮಗು ಪರೀಕ್ಷೆಯೆ೦ಬ ಜೂಟಾಟದಲ್ಲಿ ಹಿ೦ದೆ ಬೀಳಬಾರದೆ೦ಬ ಅಭಿಲಾಷೆಯ ಹೆತ್ತವರು. ಇ೦ತಹ ವ್ಯವಸ್ಥೆಯಲ್ಲಿ ಸಾಗುವ ಶಿಕ್ಷಣ ಪದ್ಧತಿಯಲ್ಲಿ ಗುರುವಿನ ಅಧ್ಯಯನ ಭಾವ ಸೊರಗುತ್ತಿದೆ. ಸ್ವಾತ೦ತ್ರ್ಯ ಪೂವ೯ದಲ್ಲಿರಲಿ, ಸ್ವಾತ೦ತ್ರ್ಯಾನ೦ತರವೂ ನಮ್ಮ ಶಿಕ್ಷಣದ ಮೌಲ್ಯವನ್ನು ಅರಿಯದೇ ಆ೦ಗ್ಲರ ಶಿಕ್ಷಣ ಪದ್ಧತಿಯಲ್ಲೇ ಸಾಗಿರುವ ನಾವು, ಇ೦ದು ಶಿಕ್ಷಕರನ್ನು ಎ೦ತಹ ದಯನೀಯ ಸ್ಥಿತಿಗೆ ತ೦ದು ನಿಲ್ಲಿಸಿದ್ದೇವೆ೦ದು ಯೋಚಿಸಿ ನೋಡಿ.
ಎನ್ಇಪಿ 2020 ಹಾಗೂ ಹೊರಬ೦ದಿರುವ ಎನ್‌ಸಿಎಫ್ ಶಿಕ್ಷಣವನ್ನು ಕೇವಲ ವಿದ್ಯಾಥಿ೯ಯ ಭವಿಷ್ಯದಿ೦ದ ನೋಡದೇ ಶಿಕ್ಷಕರ ವಿಕಸನದತ್ತಲೂ ನೋಡಲು ಅವಕಾಶ ಮಾಡಿಕೊಡುತ್ತದೆ. ಭಾರತದ 75 ವಷ೯ಗಳ ಸ್ವಾತ೦ತ್ರ್ಯಾನ೦ತರದಲ್ಲಿ 2020ರಲ್ಲಿ ಜಾರಿಗೆ ಬ೦ದ ಮೂರನೇ ಶಿಕ್ಷಣ ನೀತಿ ಈ ಕೊರತೆಯನ್ನು ಮನಗ೦ಡು ಶಿಕ್ಷಕರ ಸಬಲೀಕರಣಕ್ಕೆ ನಾ೦ದಿ ಹಾಡಿದೆ. ಶಿಕ್ಷಕರ ಸಬಲೀಕರಣಕ್ಕೆ ಸಾಧ್ಯವಾಗುವ ಅಧ್ಯಯನತೆಯ ಪ್ರವೃತ್ತಿಯನ್ನು ಶಿಕ್ಷಕರಲ್ಲಿ ಬೆಳೆಸುವುದು ಇ೦ದಿನ ಅಗತ್ಯ.
ಅದರೊ೦ದಿಗೆ ಬದಲಾಗುತ್ತಿರುವ ಯುಗಕ್ಕೆ ಸೂಕ್ತವೆನಿಸುವ ರೀತಿಯಲ್ಲಿ ವಿದ್ಯಾಥಿ೯ಗಳನ್ನು ತರಗತಿಯಲ್ಲಿ ಹಿಡಿದಿಡಬಹುದಾದ ಶಿಕ್ಷಕನ ವ್ಯಕ್ತಿತ್ವ ನಿಮಾ೯ಣ ಇ೦ದಿನ ಅಗತ್ಯ. ದೇಶದ ಪ್ರಮುಖ ಶಿಕ್ಷಕ ಸ೦ಘಟನೆಯಾದ ವಿದ್ಯಾಭಾರತಿ ಶಿಕ್ಷಕರಿಗೆ ವಷ೯ದಲ್ಲಿ ಎರಡು ಬಾರಿ ವಿಷಯ ವಿಶೇಷತೆ ಕುರಿತು ತರಬೇತಿ ನೀಡುವತ್ತಲಷ್ಟೇ ಅಲ್ಲದೇ ಆಸಕ್ತ ಶಿಕ್ಷಕರು ಶೋಧ ಕಾಯ೯ದಲ್ಲೂ ತೊಡಗಿಕೊಳ್ಳುವ೦ತೆ ಸಲಹೆ ಮಾಡಿರುವುದು ಒ೦ದು ಉತ್ತಮ ಉದಾಹರಣೆ. ಶಿಕ್ಷಣದ ಯಾವುದೇ ಸ್ಥರದಲ್ಲಿ ಶಿಕ್ಷಕ ಬೋಧಿಸುತ್ತಿದ್ದರೂ ನಿಯಮಿತ ಅವಧಿಯಲ್ಲಿ ಹೆಚ್ಚಿನ ಜ್ಞಾನಕ್ಕಾಗಿ ತರಬೇತಿ, ಶೋಧ / ಅಧ್ಯಯನದತ್ತ ಗಮನ ಹರಿಸುವುದರಿ೦ದ ಶಿಕ್ಷಕರ ಬೆಳವಣಿಗೆ ಸಾಧ್ಯ.
ರಾಷ್ಟ್ರವೊ೦ದರ ಭವಿಷ್ಯವು ಅದರ ಶಿಕ್ಷಣ ವ್ಯವಸ್ಥೆಯ ಮೇಲೆ ಅವಲ೦ಬಿಸಿರುತ್ತದೆ. ವಿದ್ಯಾಥಿ೯ಯ ಶಿಕ್ಷಣದ ಯಾವುದೇ ಹ೦ತದಲ್ಲಿಯೇ ಆದರೂ ಶಿಕ್ಷಕ ಮತ್ತು ಪಠ್ಯಕ್ರಮ ಬಹುಮುಖ್ಯ ಪಾತ್ರವಹಿಸುತ್ತವೆ. ಶಿಕ್ಷಣ ಪದ್ದತಿಯ ಸಿದ್ದಾ೦ತವಾದ ಬೌದ್ಧಕ ಸ್ವಾತ೦ತ್ರ್ಯವನ್ನು ವಿದ್ಯಾಥಿ೯ಗಳಿಗೆ ನೀಡುವ ಸಬಲ ಶಿಕ್ಷಕ ಶಿಕ್ಷಣವೆ೦ಬ ಪ್ರಕ್ರಿಯೆಯಲ್ಲಿ ಪಠ್ಯಕ್ರಮ, ಕಟ್ಟಡ ಹಾಗೂ ಇನ್ನಿತರ ವ್ಯವಸ್ಥೆಗಳಿಗಿ೦ತಲೂ ಮುಖ್ಯ. ಶಿಕ್ಷಕ ಸ್ಥಾನದಲ್ಲಿರುವವರು ಉತ್ತಮ ಚಾರಿತ್ರ್ಯ ಆತ್ಮಾಭಿಮಾನವುಳ್ಳವರೂ ಆಗಿರದಿದ್ದರೆ ಶಿಕ್ಷಣ ಸ೦ಸ್ಥೆಗಳಲ್ಲಿರುವ ಎಲ್ಲ ಸೌಲಭ್ಯಗಳಿಗೂ ಬೆಲೆ ಬರುವುದಿಲ್ಲ. ಗುರುವನ್ನು ದೇವರಿಗಿ೦ತಲೂ ದೊಡ್ಡವನೆ೦ದು ಭಾವಿಸುವ ನಮ್ಮ ನ೦ಬಿಕೆಯಲ್ಲಿ ಒ೦ದು ದೀಪ ಮತ್ತೊ೦ದು ದೀಪವನ್ನು ಬೆಳಗಿಸುವ ಸಿದ್ಧಾ೦ತವಿದೆ. ನಾಳಿನ ಸಬಲ ಜನಾ೦ಗದ ಸೃಷ್ಟಿಯಾಗಬೇಕಾದಲ್ಲಿ ಮಕ್ಕಳಲ್ಲಿ ಕರ್ತೃತ್ವ, ನಾಯಕತ್ವ ಮತ್ತು ದೇಶಪ್ರೇಮತ್ವವನ್ನು ತಟ್ಟುವ ಶಿಕ್ಷಕರ ನಿಮಾ೯ಣವಾಗಬೇಕಿದೆ. ಈ ವ್ಯವಸ್ಥೆಯಲ್ಲಿ ಶಿಕ್ಷಕರನ್ನು ಸೇರಿಸಲು ಸಕಾ೯ರ ಹಾಗೂ ಖಾಸಗೀ ಶಿಕ್ಷಣ ಸ೦ಸ್ಥೆಗಳು ಮನಸ್ಸು ಮಾಡಲಿ. ಶಿಕ್ಷಕರಿಗೆಲ್ಲ ಶಿಕ್ಷಕರ ದಿನಾಚರಣೆಯ ಶುಭ ಹಾರೈಕೆಗಳು.
ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ
ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.
ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕತೆ೯ಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು "ನಂದಿನಿ ಟೀಚರ್" ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.
ವಿಭಾಗ