Teachers Day 2024: ಶಿಕ್ಷಕರ ದಿನ ಆಚರಿಸುವ ಉದ್ದೇಶ, ಮಹತ್ವವೇನು, ಬೇರೆ ದೇಶಗಳಲ್ಲಿ ಟೀಚರ್ಸ್‌ ಡೇ ಯಾವಾಗ; ಇಲ್ಲಿದೆ ಮಾಹಿತಿ-teachers day 2024 why is teachers day celebrated know the history and significance of shikshak diwas rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Teachers Day 2024: ಶಿಕ್ಷಕರ ದಿನ ಆಚರಿಸುವ ಉದ್ದೇಶ, ಮಹತ್ವವೇನು, ಬೇರೆ ದೇಶಗಳಲ್ಲಿ ಟೀಚರ್ಸ್‌ ಡೇ ಯಾವಾಗ; ಇಲ್ಲಿದೆ ಮಾಹಿತಿ

Teachers Day 2024: ಶಿಕ್ಷಕರ ದಿನ ಆಚರಿಸುವ ಉದ್ದೇಶ, ಮಹತ್ವವೇನು, ಬೇರೆ ದೇಶಗಳಲ್ಲಿ ಟೀಚರ್ಸ್‌ ಡೇ ಯಾವಾಗ; ಇಲ್ಲಿದೆ ಮಾಹಿತಿ

ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್‌ 5ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಈ ದಿನ ನಮಗೆ ವಿದ್ಯೆ ಕಲಿಸಿ, ಬದುಕಿನ ಮಾರ್ಗ ತೋರಿದ ಶಿಕ್ಷಕ ವೃಂದವನ್ನು ಗೌರವಿಸಲಾಗುತ್ತದೆ. ಪ್ರತಿವರ್ಷ ಸೆಪ್ಟೆಂಬರ್ 5ರಂದೇ ಶಿಕ್ಷಕ ದಿನವನ್ನು ಆಚರಿಸುವುದೇಕೆ, ಈ ದಿನದ ಇತಿಹಾಸ, ಮಹತ್ವದ ಬಗ್ಗೆ ತಿಳಿಯಬೇಕಾದ ಮಾಹಿತಿ ಇದು.

ಶಿಕ್ಷಕರ ದಿನಾಚರಣೆ
ಶಿಕ್ಷಕರ ದಿನಾಚರಣೆ (PC: Canva)

ನಮ್ಮೆಲ್ಲರ ಜೀವನದಲ್ಲೂ ತಂದೆ–ತಾಯಿಗಳಂತೆ ಶಿಕ್ಷಕರ ಪಾತ್ರವು ಬಹಳ ಮಹತ್ವದ್ದು. ಕೈಹಿಡಿದು ಅಕ್ಷರ ತಿದ್ದಿ, ಓದಿ–ಬರೆಯಲು ಕಲಿಸುವುದಷ್ಟೇ ಬದುಕಿನ ಕೌಶಲಗಳನ್ನೂ ಕಲಿಸುತ್ತಾ ಜೀವನದಲ್ಲಿ ಮುಂದೆ ಸಾಗುವಂತೆ ಮಾಡುವ ಶಿಕ್ಷಕರು ಒಂದರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ ಶಿಲ್ಪಿಗಳು. ಬದುಕಿನಲ್ಲಿ ನಮ್ಮನ್ನು ಸರಿಯಾದ ದಾರಿಯಲ್ಲಿ ಸಾಗುವಂತೆ ಮಾಡುವವರೇ ಶಿಕ್ಷಕರು. ಇಂತಹ ದೈವಸ್ವರೂಪಿ ಶಿಕ್ಷಕರಿಗೆ ಗೌರವ ಸಲ್ಲಿಸುವ ಸಲುವಾಗಿ ಒಂದು ದಿನವನ್ನು ನಿಗದಿ ಪಡಿಸಲಾಗಿದೆ, ಅದುವೇ ಶಿಕ್ಷಕರ ದಿನಾಚರಣೆ.

ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಜನ್ಮದಿನ 

ಭಾರತದಾದ್ಯಂತ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದು ಭಾರತದ ಎರಡನೇ ರಾಷ್ಟ್ರಪತಿ ಹಾಗೂ ಮೊದಲ ಉಪ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಹುಟ್ಟಿದ ದಿನ. ಗೌರವಾನ್ವಿತ ಶಿಕ್ಷಣತಜ್ಞರಾಗಿದ್ದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ರಾಧಾಕೃಷ್ಣನ್ ಅವರ ಅದ್ಭುತ ಗುಣಗಳು, ವರ್ಚಸ್ಸಿನಿಂದ ವಿದ್ಯಾರ್ಥಿಗಳು ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ವ್ಯಕ್ತಿತ್ವವು ಅವರ ವಿದ್ಯಾರ್ಥಿಗಳಿಂದ ಅಪಾರ ಗೌರವವನ್ನು ಹುಟ್ಟುಹಾಕಿತು. ಅವರ ಜನ್ಮದಿನವನ್ನು ಆಚರಿಸಲು ಉತ್ಸುಕರಾಗಿದ್ದ ವಿದ್ಯಾರ್ಥಿಗಳ ಗುಂಪಿಗೆ ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಸೂಚಿಸಿದರು.

ಡಾ. ರಾಧಾಕೃಷ್ಣನ್ ಅವರು 1962 ರಿಂದ 1967 ರವರೆಗೆ ಭಾರತದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದಾಗ, ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಸೆಪ್ಟೆಂಬರ್ 5 ರಂದು ಅವರ ಜನ್ಮದಿನವನ್ನು ಆಚರಿಸಲು ಅವಕಾಶ ನೀಡುವಂತೆ ಕೇಳಿಕೊಂಡರು. ಅವರು ಆಡಂಬರದ ಆಚರಣೆಗೆ ಒಪ್ಪಲಿಲ್ಲ, ಆದರೆ ಆ ದಿನವಾದರೆ ನಾನು ಹೆಚ್ಚು ಸಂತೋಷವಾಗಿರುತ್ತೇನೆ ಎಂದು ಡಾ ರಾಧಾಕೃಷ್ಣನ್ ಹೇಳಿದರು. ಶಿಕ್ಷಕರ ದಿನವನ್ನಾಗಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. 

ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ಎಂದು ಆಚರಿಸಿದರೂ ವಿಶ್ವ ಶಿಕ್ಷಕರ ದಿನ ಎಂದು ಪ್ರಪಂಚದ ಕೆಲವು ಭಾಗಗಳಲ್ಲಿ ಅಕ್ಟೋಬರ್ 5 ರಂದು ಆಚರಿಸಲಾಗುತ್ತದೆ. ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಮಹತ್ವದ ಹಾಗೂ ಶಾಶ್ವತ ಬದಲಾವಣೆ ತರುವ, ಶಿಕ್ಷಕರ ಶಿಕ್ಷಕರಿಗೆ ಗೌರವ ಸಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯ ಎಂಬುದನ್ನು ಮನಗಂಡ ಯುನೆಸ್ಕೊ 1994ರಲ್ಲಿ ಅಕ್ಟೋಬರ್ 5 ಅನ್ನು ವಿಶ್ವ ಶಿಕ್ಷಕರ ದಿನ ಎಂದು ಘೋಷಿಸಿತು.

ಶಿಕ್ಷಕರ ದಿನದ ಇತಿಹಾಸ ಮಹತ್ವ

ಮೊದಲೇ ಹೇಳಿದಂತೆ ಶಿಕ್ಷಕರ ದಿನ ಎಂದರೆ ನಮಗೆ ವಿದ್ಯೆ, ಬುದ್ಧಿ ಕಲಿಸಿ ಬದುಕಿನ ಮಾರ್ಗ ತೋರಿದ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನ. ಪ್ರತಿ ವಿದ್ಯಾರ್ಥಿಗಳ ಬಾಳಿನಲ್ಲೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಶಿಕ್ಷಕರ ಸ್ಥಾನಮಾನದ ಕುರಿತು 1966 ರಲ್ಲಿ ಶಿಫಾರಸು ಒಂದನ್ನು ಮುಂದಿರಿಸುತ್ತದೆ.

ಯುನೆಸ್ಕೊ ಶಿಫಾರಸು ಶಿಕ್ಷಣತಜ್ಞರ ಹಕ್ಕುಗಳು ಮತ್ತು ಕಟ್ಟುಪಾಡುಗಳಿಗೆ ಮಾನದಂಡಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಮತ್ತು ಅವರ ಆರಂಭಿಕ ತರಬೇತಿ, ಮುಂದುವರಿದ ಶಿಕ್ಷಣ, ನೇಮಕಾತಿ ಮತ್ತು ಕೆಲಸದ ಪರಿಸ್ಥಿತಿಗಳ ಅವಶ್ಯಕತೆಗಳ ಮೇಲೆ ಇದು ಕನ್ನಡಿ ಹಿಡಿಯುತ್ತದೆ.

ಶಿಕ್ಷಕರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮೂಲಭೂತ ತತ್ವಗಳನ್ನು ಸ್ಥಾಪಿಸುವುದು, ಅವರ ಆರಂಭಿಕ ಮತ್ತು ನಡೆಯುತ್ತಿರುವ ಶಿಕ್ಷಣದ ಮಾನದಂಡಗಳು, ಶಿಕ್ಷಕರನ್ನು ನೇಮಿಸಿಕೊಳ್ಳುವ ನೀತಿಗಳು, ಉದ್ಯೋಗ ಪರಿಸ್ಥಿತಿಗಳು ಮತ್ತು ಬೋಧನೆ ಮತ್ತು ಕಲಿಕೆಯ ಪರಿಸರದ ಗುಣಮಟ್ಟ ಹೇಗಿದೆ ಈ ಎಲ್ಲದರ ಮೇಲೆ ಯುನೆಸ್ಕೊ ಶಿಫಾರಸು ಬೆಳಕು ಚೆಲ್ಲುತ್ತದೆ.

ಭಾರತದಲ್ಲಿ ಶಿಕ್ಷಕರ ದಿನಾಚರಣೆ 

ಭಾರತದಲ್ಲಿ 1962ರಿಂದಲೇ ಶಿಕ್ಷಣ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಶಾಲೆ, ಕಾಲೇಜುಗಳಲ್ಲಿ ಈ ದಿನ ಸರ್ವಪಲ್ಲಿ ರಾಧಾಕೃಷ್ಣ ಅವರನ್ನು ಗೌರವಿಸುವ ಜೊತೆಗೆ ಶಿಕ್ಷಕರನ್ನ ಗೌರವಿಸಿ, ಸ್ಮರಿಸುವ ಕೆಲಸಗಳು ನಡೆಯುತ್ತವೆ. ಈ ದಿನ ಶಾಲಾ, ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನೂ ನಡೆಸಲಾಗುತ್ತದೆ.