ಎಐ ಕ್ಲೀನ್ ಅಪ್ ಟೂಲ್ ಪರಿಚಯಿಸಿದ ಆಪಲ್; ಐಫೋನ್ ಬಳಕೆದಾರರು ಫೋಟೊದಲ್ಲಿ ಅನಗತ್ಯ ಆಬ್ಜೆಕ್ಟ್ ಆಳಿಸುವುದು ಈಗ ಸುಲಭ
ಆಪಲ್ ಕಂಪನಿಯು ಫೋಟೊ ಎಡಿಟಿಂಗ್‌ಗಾಗಿ ಕ್ಲೀನ್ ಅಪ್ ಎಂಬ ಎಐ ಚಾಲಿತ ಸಾಧನವನ್ನು ಪರಿಚಯಿಸಿದೆ. ಒಂದೇ ಟ್ಯಾಪ್ ಮೂಲಕ ಫೋಟೋಗಳಿಂದ ಅನಗತ್ಯ ಆಬ್ಜೆಕ್ಟ್‌ಗಳನ್ನು ಸುಲಭವಾಗಿ ಅಳಿಸಲು ಅನುವು ಮಾಡಿಕೊಡುತ್ತದೆ. ಅದು ಹೇಗೆ ಎಂಬ ವಿವರ ಇಲ್ಲಿದೆ.
ಫೋಟೋದಲ್ಲಿರುವ ಅನಗತ್ಯ ಆಬ್ಜೆಕ್ಟ್ ಅಥವಾ ಬೇಡದ ಭಾಗಗಳನ್ನು ಅಳಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ಆಪಲ್ ಕಂಪನಿಯು ಹೊಸ ಅಪ್ಡೇಟ್ ಹೊರತಂದಿದೆ. ಇತ್ತೀಚಿನ ಐಒಎಸ್ ಅಪ್ಡೇಟ್‌ನಲ್ಲಿ ಹೊಸ ಎಐ ಚಾಲಿತ ಸಾಧನವಾದ ಕ್ಲೀನ್ ಅಪ್ ಅನ್ನು ಪರಿಚಯಿಸಿದೆ. ಈ ಉಪಕರಣವು ಗೂಗಲ್‌ನ ಮ್ಯಾಜಿಕ್ ಇರೇಸರ್‌ನಂತೇಯೇ ಕೆಲಸ ಮಾಡುತ್ತದೆ. ಸುಲಭವಾಗಿ ಫೋಟೋದಲ್ಲಿರುವ ಅನಗತ್ಯ ಆಬ್ಜೆಕ್ಟ್ ಅನ್ನು ಅಳಿಸುತ್ತದೆ. ಐಒಎಸ್ 18.1, ಐಪ್ಯಾಡ್ಒಎಸ್ 18.1 ಮತ್ತು ಮ್ಯಾಕ್ಒಎಸ್ 15.1ಗಾಗಿ ಆಪಲ್‌ನ ಇತ್ತೀಚಿನ ಡೆವಲಪರ್ ಬೀಟಾಗಳ ಭಾಗವಾಗಿ ಕ್ಲೀನ್ ಅಪ್ ಪರಿಚಯಿಸಲಾಗಿದೆ. ಹಾಗಿದ್ದರೆ ಈ ಫೀಚರ್ ಹೇಗಿದೆ? ಯಾವೆಲ್ಲಾ ಫೋನ್‌ಗಳಲ್ಲಿ ಲಭ್ಯವಿದೆ, ಈ ಕುರಿತ ವಿವರ ತಿಳಿಯೋಣ.
ಈ ಕ್ಲೀನ್ ಅಪ್ ಉಪಕರಣವು ಐಫೋನ್ ಬಳಕೆದಾರರಿಗೆ ತಮ್ಮ ಫೋಟೋಗಳಲ್ಲಿರುವ ಬೇಡದ ಆಬ್ಜೆಕ್ಟ್‌ಗಳನ್ನು ಸುಲಭವಾಗಿ ಹೆಚ್ಚು ಪ್ರಯತ್ನದ ಅಗತ್ಯವಿಲ್ಲದೆ ತೆಗೆದುಹಾಕಲು ಅನುವು ಮಾಡಿಕೊಡುತ್ತದೆ. ಸ್ಮಾರ್ಟ್ ಪತ್ತೆ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಬಳಕೆದಾರರು ಫೋಟೋದಲ್ಲಿರುವ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿಕೊಂಡು ಅದನ್ನು ಒಂದೇ ಟ್ಯಾಪ್ ಮೂಲಕ ಅಳಿಸಿಹಾಕಬಹುದು. ಇನ್ನೂ ಹೆಚ್ಚುವರಿಯಾಗಿ, ಅಂಥಾ ಆಬ್ಜೆಕ್ಟ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಅಳಿಸಲು ಆ ಭಾಗದ ಮೇಲೆ ವೃತ್ತವನ್ನು ಬಿಡಿಸಬಹುದು ಅಥವಾ ಬ್ರಷ್ ಮಾಡಬಹುದು. ಫೋಟೋ ಎಡಿಟಿಂಗ್ ಅನ್ನು ಇನ್ನೂ ಸುಗಮಗೊಳಿಸುವ ಗುರಿಯೊಂದಿಗೆ ಈ ವೈಶಿಷ್ಟ್ಯವನ್ನು ತರಲಾಗಿದೆ. ಹೀಗಾಗಿ ಇದು ಬಳಕೆದಾರ ಸ್ನೇಹಿಯಾಗಿದೆ.
ಈ ಫೀಚರ್ ಆಪಲ್‌ನ ಎಲ್ಲಾ ಫೋನ್‌ಗಳಲ್ಲಿ ಲಭ್ಯವಿಲ್ಲ. ಸದ್ಯ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಹೊಂದಿರುವ ಬಳಕೆದಾರರಿಗೆ ಕ್ಲೀನ್ ಅಪ್ ವೈಶಿಷ್ಟ್ರ್ಯ ಲಭ್ಯವಿದೆ. ಟೆಕ್‌ಕ್ರಂಚ್ ವರದಿಯ ಪ್ರಕಾರ, ಐಒಎಸ್ 18 ಡೆವಲಪರ್ ಬೀಟಾ 8 ಚಾಲನೆಯಲ್ಲಿರುವ ಇತರ ಐಫೋನ್‌ಗಳಲ್ಲಿ ಈ ವೈಶಿಷ್ಟ್ಯ ಲಭ್ಯವಿಲ್ಲ.
ಯಾವೆಲ್ಲಾ ಫೋನ್‌ಗಳಲ್ಲಿ ಫಿಚರ್ ಲಭ್ಯವಿದೆ?
ಸದ್ಯ, ಐಒಎಸ್ 18.1 ಅಧಿಕೃತವಾಗಿ ಬಿಡುಗಡೆಯಾದಾಗ ಕ್ಲೀನ್ ಅಪ್ ವೈಶಿಷ್ಟ್ಯವು ಐಫೋನ್ 15 ಪ್ರೊ ಸರಣಿಯನ್ನು ಮೀರಿ ಇತರ ಮಾದರಿಗಳಿಗೂ ಅಳವಡಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಈ ಹೊಸ ಕ್ಲೀನ್ ಅಪ್ ವೈಶಿಷ್ಟ್ಯವನ್ನು ಫೋಟೋಸ್ ಅಪ್ಲಿಕೇಶನ್‌ನಲ್ಲಿಯೇ ಸಂಯೋಜಿಸಲಾಗಿದೆ. ಫೋಟೋದಲ್ಲಿ ಆಯ್ದ ಭಾಗವನ್ನು ಪತ್ತೆಹಚ್ಚಲು ಮತ್ತು ಅಳಿಸಿಹಾಕಲು ಇದು ಎಐ ಅನ್ನು ಬಳಸುತ್ತದೆ. ಫೋಟೋದಲ್ಲಿ ಬೇಡದ ಒಂದು ಭಾಗವನ್ನು ಅಳಿಸಿದ ನಂತರ, ಎಡಿಟ್ ಮಾಡಲಾದ ಭಾಗವನ್ನು ಚಿತ್ರದ ಉಳಿದ ಭಾಗಗಳಿಗೆ ಅನುಗುಣವಾಗಿ ಸರಿಯಾಗಿ ಕಾಣುವಂತೆ ಮಾಡಲು ತಂತ್ರವನ್ನು ಬಳಸುತ್ತದೆ. ಆಗ ಒಟ್ಟಾರೆಯಾಗಿ ಆ ಫೋಟೋ ಎಡಿಟ್ ಮಾಡಿದ್ದರೂ, ಮಾಡದ ಫೋಟೊದಂತೆಯೇ ಕಾಣುತ್ತದೆ. ಈ ಟೂಲ್ ನೆರಳುಗಳು ಮತ್ತು ಪ್ರತಿಫಲನಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಆಪಲ್ ಹೇಳಿಕೊಂಡಿದೆ. ಎಡಿಟಿಂಗ್ ಪ್ರಕ್ರಿಯೆಯಲ್ಲಿ ಈ ಅಂಶಗಳನ್ನು ಸಹ ತೆಗೆದುಹಾಕಬಹುದು ಎಂದು ಖಚಿತಪಡಿಸುತ್ತದೆ.
ಗೂಗಲ್ ಮ್ಯಾಜಿಕ್ ಇರೇಸರ್
ಈ ವರ್ಷದ ಆರಂಭದಲ್ಲಿ ಗೂಗಲ್ ಸಂಸ್ಥೆಯು ಗೂಗಲ್ ಫೋಟೋಸ್‌ನಲ್ಲಿ ಮ್ಯಾಜಿಕ್ ಇರೇಸರ್ ಎಂಬ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಯಾವುದೇ ವೆಚ್ಚವಿಲ್ಲದೆ ಪರಿಚಿಯಿಸಿದ ಈ ಫೀಚರ್‌ಗೂ ಆಪಲ್ ಹೊರತಂದ ಕ್ಲೀನ್ ಅಪ್ ಟೂಲ್‌ಗೂ ಸಾಮ್ಯತೆ ಇದೆ.