Digital Jagathu: ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾಲದ ಅಪರಾಧಗಳು; ಎಐ, ಡೀಪ್‌ಫೇಕ್ ವಂಚಕರ ಬಲೆಗೆ ಬೀಳದಂತೆ ಎಚ್ಚರ ವಹಿಸುವುದು ಹೇಗೆ
How to detect AI Deepfake Scams: ತಂತ್ರಜ್ಞಾನಗಳು ಅಭಿವೃದ್ಧಿಯಾದಂತೆ ಹೊಸ ಬಗೆಯ, ಹೊಸ ರೀತಿಯ ಅಪರಾಧಗಳು ಹೆಚ್ಚಾಗುತ್ತಿವೆ. ಈಗಿನ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಡೀಪ್‌ಫೇಕ್ ತಂತ್ರಜ್ಞಾನದ ಕಾಲದಲ್ಲಿ ಹೊಸ ರೀತಿಯಲ್ಲಿ ವಂಚಕರು ನಿಮ್ಮನ್ನು ವಂಚಿಸಲು ಕಾಯುತ್ತಿದ್ದಾರೆ.
ಕಣ್ಣಾರೆ ಕಂಡರೂ ಪರಂಬರಿಸಿ ನೋಡು, ಕಿವಿಯಾರೆ ಕೇಳಿದರೂ ಪರಂಬರಿಸಿ ಕೇಳು. ಇದು ಈ ಎಐ ಕಾಲಕ್ಕೆ ಸೂಕ್ತವಾದ ಮಾತು. ನಿಮ್ಮ ಆಪ್ತರೊಬ್ಬರ ಧ್ವನಿ ಫೋನ್ ಕರೆಯಲ್ಲಿ ಕೇಳಿದರೂ ಅದು ಆಪ್ತರೋ ಅಥವಾ ಎಐ ಸೃಜಿಸಿದ ಧ್ವನಿಯೋ ಎಂದು ಪರಂಬರಿಸುವ ಅನಿವಾರ್ಯತೆಯ ಪರಿಸ್ಥಿತಿ ಬಂದಿದೆ. ವಿಡಿಯೋ ಕಾಲ್‌ನಲ್ಲಿ ನಮ್ಮ ಪರಿಚಿತರ ಮುಖವೇ ಕಂಡರೂ ಅದು ನಿಜಕ್ಕೂ ನಮ್ಮ ಪರಿಚಿತರೇ ಅಥವಾ ಡೀಪ್‌ಫೇಕ್ ಸೃಷ್ಟಿಸಿದ ಅವತಾರವೇ ಎಂದು ಪರಂಬರಿಸುವ ಸ್ಥಿತಿಯೂ ಬಂದಿದೆ. ಮೊನ್ನೆಯವರೆಗೆ ಹ್ಯಾಕಿಂಗ್ ಲಿಂಕ್‌ಗಳ ಮೂಲಕ ಫೋನ್, ಇಮೇಲ್, ಕಂಪ್ಯೂಟರ್ ಹ್ಯಾಕ್ ಮಾಡುತ್ತಿದ್ದ ವಂಚಕರು ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಅಪರಾಧಗಳಿಗೆ, ವಂಚನೆಗಳಿಗೆ ಬಳಸಲು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಎಐ, ಡೀಪ್‌ಫೇಕ್ ಇತ್ಯಾದಿ ಇತ್ತೀಚಿನ ತಂತ್ರಜ್ಞಾನಗಳ ಮೂಲಕ ಜನರನ್ನು ವಂಚಿಸುವುದು ಹೆಚ್ಚಾಗಲಿದೆ.
ಎಐ/ಡೀಪ್‌ಫೇಕ್ ಮೂಲಕ ಯಾವ ರೀತಿಯ ವಂಚನೆಗಳು ಎದುರಾಗಬಹುದು?
ಯಾವ ರೀತಿಯ ವಂಚನೆಗಳು ಎದುರಾಗಬಹುದು ಎಂದು ತಿಳಿದುಕೊಂಡರೆ ಸಂಭಾವ್ಯ ಅಪಾಯದ ಸಮಯದಲ್ಲಿ ಎಚ್ಚರಿಕೆವಹಿಸಬಹುದು. ಎಐ ಪ್ರೇರಿತ ಯಾವುದೇ ಘಟನೆ ನಡೆದರೂ ಜೀವಹಾನಿ ಮಾಡಿಕೊಳ್ಳುವಂತಹ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳದೆ ಪರಿಸ್ಥಿತಿಯಿಂದ ಪಾರಾಗಲು ಪರಿಸ್ಥಿತಿಯನ್ನು ಕಾಲದ ಕೈಗೆ ಕೊಟ್ಟು ಬಿಡುವುದು ಉತ್ತಮ. ಅಯ್ಯೋ ಯಾರದ್ದೋ ಜತೆ ನನ್ನ ಅಶ್ಲೀಲ ವಿಡಿಯೋ ಬಂದಿದೆ ಎಂದು ಭಯಪಟ್ಟು ಆತುರದಿಂದ ಕೆಟ್ಟ ನಿರ್ಧಾರ ತೆಗೆದುಕೊಳ್ಳದೆ ಸಾವಧಾನ ವಹಿಸುವ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ಎಐ ಕಾಲದಲ್ಲಿ ಯಾವೆಲ್ಲ ಬಗೆಯ ವಂಚನೆ, ಅಪರಾಧಗಳು ನಡೆಯಬಹುದು ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳೋಣ.
ವಾಯ್ಸ್ ಫಿಶಿಂಗ್ ಅಂತ ವಿಶಿಂಗ್
ವಂಚಕರು ಬಲಿಪಶುಗಳಿಗೆ ಫೋನ್ ಮೂಲಕ ಮಾಡುವ ವಂಚನೆ ಇದಾಗಿದೆ. ನಿಮಗೆ ಕರೆ ಮಾಡುವವರ ಧ್ವನಿ ಪರಿಚಿತರ ಧ್ವನಿಯಂತೆ ಇರಬಹುದು. ನಿಮ್ಮ ಅಪ್ಪನ, ಅಮ್ಮನ, ಮಕ್ಕಳ ಧ್ವನಿಯಾಗಿರಬಹುದು. ಆಫೀಸ್‌ನ ಬಾಸ್ ಧ್ವನಿಯಾಗಿರಬಹುದು. ನಿಮ್ಮ ಕಂಪನಿಯ ಸಿಇಒ ಧ್ವನಿಯಾಗಿರಬಹುದು. ಆಡಿಯೋ ಡೀಪ್‌ಫೇಕ್ ತಂತ್ರಜ್ಞಾನದ ನೆರವಿನಿಂದ ಅಪರಾಧಿಗಳು ಇತರರ ಧ್ವನಿಯನ್ನು ಅತ್ಯಂತ ನಿಖರವಾಗಿ ನಕಲು ಮಾಡಬಹುದು. ಹಣ ಪಾವತಿ ವಂಚನೆಗೆ ಇದು ದಾರಿಯಾಗಬಹುದು. ನಿಮ್ಮ ಮಗಳ ಧ್ವನಿಯಲ್ಲಿ ಕಾಲ್ ಬಂದರೆ, ನಿರ್ದಿಷ್ಟ ಅಕೌಂಟ್ ನಂಬರ್‌ಗೆ ಅರ್ಜೆಂಟ್ ಎರಡು ಲಕ್ಷ ರೂಪಾಯಿ ಹಾಕು ಎಂದರೆ, ಎಲ್ಲಾದರೂ ನೀವು ಹಣ ವರ್ಗಾವಣೆ ಮಾಡಿದರೆ ಆ ಹಣ ವಂಚಕರ ಪಾಲಾಗಬಹುದು. ಯಾವುದಾದರೂ ಕಂಪನಿಯೊಂದರ ಪ್ರಮುಖರ ಧ್ವನಿಯನ್ನು ಅನುಕರಿಸಿ ನಿಮಗೆ ಕರೆ ಬರಬಹುದು. ಕಂಪನಿಯ ಹಣಕಾಸು ಅಥವಾ ಪ್ರಮುಖ ಮಾಹಿತಿಯನ್ನು ನಿಮ್ಮಿಂದ ಪಡೆಯಬಹುದು. ನಿಮ್ಮ ಕುಟುಂಬದವರ ಧ್ವನಿಯಲ್ಲಿ ಅಪಾಯದಲ್ಲಿರುವುದಾಗಿ ತಿಳಿಸಿ ಬ್ಲಾಕ್‌ಮೇಲ್ ಇತ್ಯಾದಿಗಳನ್ನೂ ಮಾಡಬಹುದು. ಇದನ್ನು ಓದಿ: ಆನ್‌ಲೈನ್ ವಂಚಕರಿಗೆ ಹಣ ಕಳುಹಿಸಿದ್ದೀರಾ, ಕಳೆದುಕೊಂಡ ಹಣ ರಿಕವರಿ ಮಾಡುವುದು ಹೇಗೆ, ಈ 5 ಕ್ರಮ ಅನುಸರಿಸಿ
ವಿಡಿಯೋ ಡೀಪ್‌ಫೇಕ್ ವಂಚನೆಗಳು
ವಿಡಿಯೋಗಳ ಮೂಲಕ ಯಾವೆಲ್ಲ ರೀತಿಯ ವಂಚನೆ ಮಾಡಬಹುದು ಎಂದು ಊಹಿಸುವುದು ಕಷ್ಟ. ಯಾಕೆಂದರೆ, ಇಲ್ಲಿ ವಂಚನೆಯ ಸಾಧ್ಯತೆಗಳು ವಿಶಾಲವಾಗಿವೆ. ಇತ್ತೀಚೆಗೆ ರಶ್ಮಿಕಾ ಮಂದಣ್ಣರ ನಕಲಿ ವಿಡಿಯೋ ಸೃಷ್ಟಿಸಿದಂತಹ ವಿಡಿಯೋಗಳು ಸೃಷ್ಟಿಯಾಗಬಹುದು. ಜನ ಸಾಮಾನ್ಯರ ಅಂತಹ ಅಶ್ಲೀಲ ವಿಡಿಯೋವನ್ನು ಸೃಷ್ಟಿಸಿ ಬ್ಲ್ಯಾಕ್‌ಮೇಲ್ ಮಾಡಬಹುದು. ಹಣಕಾಸು ವಂಚನೆ ಮಾಡಲು ನಿಮ್ಮ ಆಪ್ತರನ್ನು ಹೋಲುವಂತೆ ವಂಚಕರು ವಿಡಿಯೋ ಕಾಲ್ ಮಾಡಬಹುದು. "ಅಮ್ಮ ನನಗೆ ನಿನ್ನಲ್ಲಿ ಅರ್ಜೆಂಟ್ ಏನೋ ಹೇಳೊಕ್ಕಿದೆ. ನನ್ನ ಕಾರಿಗೆ ಅಪಘಾತವಾಗಿದೆ. ತಕ್ಷಣ ರಿಪೇರಿ ಮಾಡಬೇಕು. ಅದಕ್ಕೆ ಐವತ್ತು ಸಾವಿರ ರೂಪಾಯಿ ತಕ್ಷಣ ಹಾಕು" ಹೀಗೆ ನಿಮ್ಮ ಮಗಳು ಅಥವಾ ಮಗನೇ ವಿಡಿಯೋ ಕಾಲ್‌ನಲ್ಲಿ ಹೇಳಿದಂತೆ ಸುಳ್ಳು ವಿಡಿಯೋ ಕಾಲ್ ಕೂಡ ಬರಬಹುದು. ಹೆಂಡತಿ ಅಥವಾ ಗಂಡನಿಂದ ಡೈವೋರ್ಸ್ ಪಡೆಯುವ ಸಲುವಾಗಿ ಮಾನಹರಣದ ನಕಲಿ ವಿಡಿಯೋ ಸೃಷ್ಟಿಸಬಹುದು.
ಫ್ರಾಡ್‌ಜಿಪಿಟಿ ವಂಚನೆ
ಈಗ ನಮ್ಮ ಇಮೇಲ್‌ಗೆ ಬರುವ ಸ್ಪ್ಯಾಮ್, ಫಿಶಿಂಗ್ ಇಮೇಲ್‌ಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ, ಫ್ರಾಡ್‌ಜಿಪಿಟಿಯಿಂದ ರಚಿಸಿದ ಇಂತಹ ಫಿಶಿಂಗ್ ಸಂದೇಶಗಳು ಅನುಮಾನವೇ ಬಾರದಂತೆ ಇರಬಹುದು. ಸುಲಭವಾಗಿ ನಮ್ಮನ್ನು ಲಿಂಕ್ ಕ್ಲಿಕ್ ಮಾಡುವಂತೆ, ವೈರಸ್ ಫೈಲ್ ಡೌನ್‌ಲೋಡ್ ಮಾಡುವಂತೆ ಮಾಡಬಹುದು. ಎಐ ಮೂಲಕವೇ ನಕಲಿ ದಾಖಲೆಗಳನ್ನು ಸೃಷ್ಟಿ ನಮಗೆ ಅನುಮಾನವೇ ಬರದಂತೆ ವರ್ತಿಸಬಹುದು. ಇವೆಲ್ಲ ಉದಾಹರಣೆಯಷ್ಟೇ. ಇಂತಹ ಹಲವು ಬಗೆಯ ಅಪರಾಧಗಳು, ವಂಚನೆಗಳು ಜರುಗಬಹುದು.
ಎಐ ಪ್ರೇರಿತ ವಂಚನೆಯಿಂದ ಪಾರಾಗುವುದು ಹೇಗೆ?
ಎಐ ಕಾಲದ ವಂಚನೆಯಿಂದ ಪಾರಾಗಲು ತುಸು ಹೆಚ್ಚಿನ ಜಾಗೃತಿ ಮತ್ತು ಜಾಗ್ರತೆಯ ಅಗತ್ಯವಿರುತ್ತದೆ. ನಿಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿ ವಂಚನೆ ನಡೆಯದಂತೆ ಮಾಡಲು ನಿಮ್ಮ ಕುಟುಂಬದ ಸದಸ್ಯರ ನಡುವೆ ಒಂದು ರಹಸ್ಯ ಸೇಫ್‌ಪದ ಬಳಸಿ. ಫೋನ್ ಕರೆ, ವಿಡಿಯೋ ಕರೆಯ ಕುರಿತು ಸಂದೇಹ ಬಂದಾಗ ಆ ರಹಸ್ಯ ಪದವನ್ನು ತಿಳಿಸುವಂತೆ ಹೇಳಬಹುದು. ಈ ಹಿಂದೆ ಮಾಡಿರುವಂತೆ ಕಂಪ್ಯೂಟರ್, ಮೊಬೈಲ್, ಇಮೇಲ್, ಪ್ರಮುಖ ಅಕೌಂಟ್‌ಗಳಿಗೆ ಎರಡು ಹಂತದ ದೃಢೀಕರಣ ಮತ್ತು ಸುರಕ್ಷಿತ ಪಾಸ್‌ವರ್ಡ್ ಬಳಸಿ. ಅಪರಿಚಿತ ಸಂಖ್ಯೆಗಳಿಂದ ಕರೆ ಬಂದಾಗ ದೃಢೀಕರಣ ಮಾಡಲು ವಾಪಸ್ ಅದೇ ಸಂಖ್ಯೆಗೆ ಕರೆ ಮಾಡಿ. ನಿಮಗೆ ಕರೆ ಮಾಡಿರುವ ವ್ಯಕ್ತಿಯನ್ನು(ನಕಲಿ ಅಲ್ಲ ಅಸಲಿ ವ್ಯಕ್ತಿಗೆ) ಬೇರೆ ವಿಧಾನಗಳ ಮೂಲಕ ಸಂಪರ್ಕಿಸಲು ಯತ್ನಿಸಿ. ಧ್ವನಿ ಅಥವಾ ವಿಡಿಯೋ ಅಸಲಿಯಂತೆ ಕಂಡರೂ ಯಾವುದಾದರೂ ವರ್ತನೆಯಲ್ಲಿ ನಕಲಿ ಕಾಣಿಸಬಹುದು. ಇಂತಹ ಅಸಹಜತೆ ಕಂಡುಬಂದಾಗ ಎಚ್ಚರವಾಗಿರಿ.
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.
ಡಿಜಿಟಲ್ ಜಗತ್ತು ಅಂಕಣ ಬರಹದ ಬಗ್ಗೆ ನಿಮ್ಮ ಅಭಿಪ್ರಾಯ, ಪ್ರತಿಕ್ರಿಯೆ, ಸಲಹೆಗಳಿಗೆ ಸ್ವಾಗತ. ಇಮೇಲ್: praveen.chandra@htdigital.in, ht.kannada@htdigital.in