ಕನ್ನಡ ಸುದ್ದಿ / ಜೀವನಶೈಲಿ /
Password Saftey: ಮೊಬೈಲ್, ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್ ಸುರಕ್ಷತೆ ಹೇಗೆ? ಆನ್‌ಲೈನ್ ಕಳ್ಳರಿಂದ ಸುರಕ್ಷಿತವಾಗಿರಲು 12 ಟಿಪ್ಸ್
Strong Password Tips and Tricks: ಮೊಬೈಲ್ ಅಥವಾ ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳಲ್ಲಿ ಆನ್‌ಲೈನ್ ಪಾಸ್‌ವರ್ಡ್ ಸುರಕ್ಷಿತವಾಗಿಡುವುದು ಅತ್ಯಂತ ಅಗತ್ಯ. ಪಾಸ್‌ವರ್ಡ್ ಸುರಕ್ಷತೆಗೆ ಈ ಮುಂದಿನ ಸಲಹೆಗಳನ್ನು ಪಾಲಿಸಿರಿ.
Password Saftey: ಮೊಬೈಲ್, ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್ ಸುರಕ್ಷತೆ ಹೇಗೆ? ಆನ್‌ಲೈನ್ ಕಳ್ಳರಿಂದ ಸುರಕ್ಷಿತವಾಗಿರಲು ಟಿಪ್ಸ್
ಆನ್‌ಲೈನ್ ಲೋಕಕ್ಕೆ ಪ್ರವೇಶಿಸಲು ಈಗ ಪಾಸ್‌ವರ್ಡ್ ಅನಿವಾರ್ಯ. ಆದರೆ, ಆನ್‌ಲೈನ್ ಪ್ರವೇಶಿಸಲು ನೆರವಾಗುವ ಪಾಸ್‌ವರ್ಡ್ ಕುರಿತು ಕೆಲವರು ಎಚ್ಚರಿಕೆವಹಿಸುವುದಿಲ್ಲ. ಇದೇ ಕಾರಣಕ್ಕೆ ಬಹುತೇಕರು ಸೈಬರ್ ಕಳ್ಳರ ವಂಚನೆಗೆ ಒಳಗಾಗುತ್ತಾರೆ. ಮೊಬೈಲ್ ಪಾಸ್‌ವರ್ಡ್, ಕಂಪ್ಯೂಟರ್‌ನಲ್ಲಿರುವ ವಿವಿಧ ಖಾತೆಗಳ ಪಾಸ್‌ವರ್ಡ್ ಸುರಕ್ಷಿತವಾಗಿರಿಸಲು ಗಮನ ನೀಡುವುದು ಅತ್ಯಂತ ಅಗತ್ಯ.
ಪಾಸ್‌ವರ್ಡ್ ಸುರಕ್ಷತೆ ಹೇಗೆ?
- ಫೇಸ್‌ಬುಕ್, ಟ್ವಿಟ್ಟರ್, ಬ್ಯಾಂಕ್ ಖಾತೆಗಳಿಗೆ ಈಗ ಟು ಫ್ಯಾಕ್ಟರ್ ಲಾಗಿನ್ ಅವಕಾಶ ನೀಡಲಾಗಿದೆ. ನೀವು ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಪಾಸ್‌ವರ್ಡ್ ನೀಡಿದರೂ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ಮೊಬೈಲ್‌ನಲ್ಲಿರುವ ದೃಢೀಕರಣ ಆಪ್ ಮೂಲಕ ನೀವು ಓಕೆ ನೀಡಿದರೆ ಮಾತ್ರ ಲಾಗಿನ್ ಆಗಲು ಇದು ನೆರವಾಗುತ್ತದೆ.
- ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಂಕಿಂಗ್ ಇತ್ಯಾದಿಗಳಿಗೆ ಅಧಿಕೃತ ಆ್ಯಪ್‌ಗಳನ್ನೇ ಬಳಸಿ. ಎಲ್ಲಾ ಆ್ಯಪ್‌ಗಳಿಗೂ ಒಂದೇ ಪಾಸ್‌ವರ್ಡ್ ನೀಡಬೇಡಿ.
- ಜನರು ಸುಲಭವಾಗಿ ಊಹಿಸಬಹುದಾದ ಸರಳ ಪಾಸ್‌ವರ್ಡ್ ಬರೆಯಬೇಡಿ. ಅಂದರೆ, 1234, 4321, 0000, ನಿಮ್ಮಹೆಸರು123 ಇತ್ಯಾದಿ ಬರೆಯಬೇಡಿ. ಈ ರೀತಿಯ ಪಾಸ್ವರ್ಡ್ ಅನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಬಹುದು.
- ಅಟ್, ಆ್ಯಷ್, ಕೊಶ್ಚನ್ ಮಾರ್ಕ್, ಪರ್ಸಂಟೇಜ್ ಇತ್ಯಾದಿ ಸಿಂಬಲ್‌ಗಳನ್ನು ನಿಮ್ಮ ಪಾಸ್‌ವರ್ಡ್‌ನೊಳಗೆ ಬಳಸಿದರೆ ಪಾಸ್‌ವರ್ಡ್ ಅನ್ನು ಸುಲಭವಾಗಿ ಊಹಿಸಲು ಯಾರಿಗೂ ಸಾಧ್ಯವಿಲ್ಲ.
- ಬ್ಯಾಂಕ್ ಅಕೌಂಟ್ ಇತ್ಯಾದಿಗಳಿಗೆ ಪಾಸ್‌ವರ್ಡ್ ಬರೆಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಿ. ಹಣದ ವಹಿವಾಟು ನಡೆಸುವಾಗ ಒಟಿಪಿ ಅಥವಾ ಒನ್‌ಟೈಂ ಪಾಸ್‌ವರ್ಡ್ ಸೌಲಭ್ಯ ಇಲ್ಲದ ತಾಣಗಳನ್ನು ಬಳಸಬೇಡಿ.
- ನಿಮ್ಮ ಪಾಸ್‌ವರ್ಡ್ ಅನ್ನು ಎಲ್ಲೂ ಬರೆದಿಡದಿರುವುದು ಉತ್ತಮ. ಕೆಲವರು ಎಟಿಎಂ ಕಾರ್ಡ್‌ನ ಹಿಂಬದಿಯಲ್ಲೇ ಬರೆದಿಡುವುದುಂಟು. ಇದರಿಂದ ಎಟಿಎಂ ಕಾರ್ಡ್ ಕಳೆದುಕೊಂಡಾಗ ಅದರ ಹಣವು ಸುಲಭವಾಗಿ ಕಳ್ಳರ ಪಾಲಾಗಬಹುದು.
- ಪಾಸ್‌ವರ್ಡ್‌ಗಳನ್ನು ಮೊಬೈಲ್ ಕಾಂಟ್ಯಾಕ್ಟ್‌ಗಳಲ್ಲಿ ಸೇವ್ ಮಾಡಬೇಡಿ. ಯಾಕೆಂದರೆ, ನಿಮ್ಮ ಕಾಂಟ್ಯಾಕ್ಟ್‌ಗಳನ್ನು ಬಹುತೇಕ ಆ್ಯಪ್‌ಗಳು ಆಕ್ಸೆಸ್ ಮಾಡುತ್ತವೆ.
- ಫೋನ್ ಕರೆ ಮಾಡಿ ಯಾರಾದರೂ ಪಾಸ್‌ವರ್ಡ್ ಕೇಳಿದರೆ ನೀಡಬೇಡಿ. ನಾವು ಬ್ಯಾಂಕಿನವರು ಎಂದು ಕರೆ ಮಾಡಿ ವಂಚಿಸುವ ಘಟನೆಗಳು ಹೆಚ್ಚಾಗಿವೆ. ಯಾರಾದರೂ ಕರೆ ಮಾಡಿ ಒಟಿಪಿ ಕೇಳಿದರೂ ನೀಡಬೇಡಿ.
- ಫಿಷಿಂಗ್ ಎಂಬ ಜಾಲಕ್ಕೆ ಬೀಳದಿರಿ. ಕೆಲವೊಮ್ಮೆ ನಿಮ್ಮ ಬ್ಯಾಂಕ್ ವೆಬ್‌ಸೈಟ್ ಅನ್ನು ಹೋಲುವ ವೆಬ್ ಲಿಂಕ್ ಕಾಣಿಸಿಕೊಳ್ಳಬಹುದು. ಅಲ್ಲಿ ನೀವು ನಿಮ್ಮ ಪಾಸ್‌ವರ್ಡ್ ನೀಡುವಂತೆ ಹೇಳಬಹುದು. ಪಾಸ್‌ವರ್ಡ್ ನೀಡಿದರೆ ನಿಮ್ಮ ಖಾತೆಯಿಂದ ಹಣ ಗುಳುಂ ಆಗುವುದು ಗ್ಯಾರಂಟಿ. ಇದೇ ರೀತಿ, ನಿಮ್ಮ ಇನ್‌ಕಾಂ ಟ್ಯಾಕ್ಸ್‌ನಲ್ಲಿ ಬಾಕಿ ಉಳಿದ ಹಣವನ್ನು ಮರುಪಾವತಿಸುತ್ತೇವೆ ಎಂಬ ಲಿಂಕ್‌ಗಳೂ ಇಮೇಲ್‌ನಲ್ಲಿ, ಸಂದೇಶಗಳಲ್ಲಿ ಹರಿದಾಡಬಹುದು. ಇಲ್ಲೂ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
- ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿರಿ. ಮೊಬೈಲ್‌ನಲ್ಲಿ ಇಂಟರ್‌ನೆಟ್ ಖಾಲಿಯಾಗುತ್ತೆ ಎಂದು ಆ್ಯಪ್‌ಗಳನ್ನು ಅಪ್‌ಡೇಟ್ ಮಾಡದೆ ಇರಬೇಡಿ. ಅದರಲ್ಲೂ ಬ್ಯಾಂಕಿಂಗ್ ಅಥವಾ ವ್ಯಾಲೆಟ್‌ಗಳನ್ನು ಅಪ್‌ಡೇಟ್ ಮಾಡಲು ಮರೆಯದಿರಿ. ಪ್ರತಿಯೊಂದು ಸಂಸ್ಥೆಗಳೂ ತಮ್ಮ ಸಾಫ್ಟ್‌ವೇರ್‌ಗಳನ್ನು ಸದಾ ಅಪ್‌ಡೇಟ್ ಮಾಡುತ್ತಿರುವ ಪ್ರಮುಖ ಉದ್ದೇಶ ‘ಭದ್ರತೆಯ ಕಾರಣ’ವೇ ಆಗಿದೆ.
- ಕಠಿಣ ಪಾಸ್‌ವರ್ಡ್ ಬಳಸಿ. ಸಿಂಬಲ್‌ಗಳು ನೋಡಲು ಒರಟಾಗಿದ್ದರೂ ನಿಮ್ಮನ್ನು ಕಳ್ಳರಿಂದ ಪಾರುಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಅಂಕೆ ಅಥವಾ ಅಕ್ಷರಗಳನ್ನು ಕದಿಯುವುದು ಸುಲಭ. ಆದರೆ, ಸಿಂಬಲ್‌ಗಳು ಅಷ್ಟು ಸುಲಭವಾಗಿ ವೆಬ್ ಕಳ್ಳರ ಪಾಲಾಗುವುದಿಲ್ಲ.
- ಹೆಚ್ಚಿನ ತಾಣಗಳು ನಿಮ್ಮ ಪಾಸ್‌ವರ್ಡ್ ಅನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆ ಎಂಬ ಆಯ್ಕೆಯನ್ನು ತೋರಿಸುತ್ತವೆ. ಅಲ್ಲಿ ಓಕೆ ಎನ್ನಬೇಡಿ. ನೆವರ್ ಎಂಬ ಬಟನ್ ಒತ್ತಿ. ಪ್ರತಿಸಲವೂ ಹೊಸದಾಗಿ ಪಾಸ್‌ವರ್ಡ್ ಬರೆದು ಲಾಗಿನ್ ಆಗಲು ಮರೆಯದಿರಿ.
ಆಹಾರ, ಆರೋಗ್ಯ, ಬ್ಯೂಟಿ ಟಿಪ್ಸ್, ರೆಸಿಪಿ, ಪ್ರವಾಸ, ಫಿಟ್ನೆಸ್, ಆಯುರ್ವೇದ, ಪೇರೆಂಟಿಂಗ್ ಟಿಪ್ಸ್ ಸೇರಿದಂತೆ ನಿಮ್ಮ ದೈನಂದಿನ ಜೀವನ ಸುಗಮಗೊಳಿಸುವ ಉಪಯುಕ್ತ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ದ ಲೈಫ್ಸ್ಟೈಲ್ ವಿಭಾಗ ನೋಡಿ.