ಯೂನಿವರ್ಸಲ್ ಸಮಸ್ಯೆಗೆ ಪರಿಹಾರವಾದ ಯುಎಸ್‌ಬಿ ಕಂಡುಹಿಡಿದಿದ್ದು ಭಾರತೀಯರು; ಯುಎಸ್‌ಬಿ ಪುರಾಣದ ಕುರಿತು ವೈಎನ್ ಮಧು ಬರಹ
ಇಂಟೆಲ್ ಉದ್ಯೋಗಿಯಾಗಿದ್ದ ಮಧ್ಯಪ್ರದೇಶದ ಅಜಯ್ ಭಟ್ ಯುಎಸ್‌ಬಿ ರೂವಾರಿ. ಅಜಯ್ ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿರುವರು! ಅವರು ಮಾಡಿದ್ದೇನೆಂದರೆ ಹೇಗೆ ಜಗತ್ತಿನ ಕೋಟ್ಯಾಂತರ ಬಗೆಯ ಟೆಕ್ ಉಪಕರಣಗಳು ಒಂದೇ ಸೂತ್ರ ಪಾಲಿಸಿಕೊಂಡು ಪರಸ್ಪರ ಸಂಯಮದಿಂದ ಮಾತಾಡಿಕೊಳ್ಳಬಹುದು ಎಂದು ಯೋಚಿಸಿ ಆ ಪ್ರೊಟೊಕಾಲ್‌ನಂತೆ ಸಂವಹಿಸುವ ಕೇಬಲ್ ಡಿಸೈನ್ ಮಾಡಿದ್ದು.
ತಂತ್ರಜ್ಞಾನ ಹೇಗೆ ಎಂದರೆ ನಮಗೆ ಎಲ್ಲವನ್ನೂ ಸರಳವಾಗಿ, ಸರಾಗವಾಗಿ ಆಗುವಂತೆ ಮಾಡುವಂಥದ್ದು. ಹಿಂದೆಲ್ಲಾ ನೂರಾರು ವೆರೈಟಿ ಕೇಬಲ್‌ಗಳು ತಲೆಚಿಟ್ಟು ಹಿಡಿಸುತ್ತಿದ್ದವು. ಆದರೆ ಇದಕ್ಕೆ ಯೂನಿವರ್ಸಲ್ ಪರಿಹಾರ ಎಂಬಂತೆ ಯುಎಸ್‌ಬಿ ಕೇಬಲ್ ಅನ್ನು ಕಂಡುಹಿಡಿಯಲಾಯಿತು. ಅಂದ ಹಾಗೆ ಈ ಯುಎಸ್‌ಬಿ ಅನ್ನು ಕಂಡುಹಿಡಿದ ಕ್ರೆಡಿಟ್ ಭಾರತೀಯರದ್ದು. ಹೀಗೊಂದು ಯುಎಸ್‌ಬಿ ಪುರಾಣವನ್ನು ಬಿಚ್ಚಿಟ್ಟಿದ್ದಾರೆ ವೈಎನ್ ಮಧು ಅವರ ಬರಹವನ್ನು ನೀವೂ ಓದಿ.
ಯುಎಸ್‌ಬಿ ಪುರಾಣ: ವೈಎನ್ ಮಧು ಬರಹ
ನೀವು ಯುಎಸ್‌ಬಿ ಕೇಳಿದ್ದೀರಲ್ವಾ? ಕೇಳೋದೇನು, ಯುಸ್‌ಬಿ ಬಳಸದಿರುವ ದಿವಸವೇ ಇರಲಿಕ್ಕಿಲ್ಲ ಅನ್ನಬಹುದು ಮತ್ತು ಪ್ರತಿ ಸಲ ಲ್ಯಾಪ್‌ಟಾಪಿಗೆ ಉಲ್ಟಾ ಚುಚ್ಚಿ ಮತ್ತೆ ತಿರುಗಿಸಿ ಸರಿಯಾಗಿ ಚುಚ್ಚಿರ್ತೀರಿ. ಬಹುಶಃ ಪ್ರಪಂಚದಲ್ಲಿ ಯಾವೊಬ್ಬನೂ ಮೊದಲ ಸಲ ಯುಸ್‌ಬಿ ಸರಿಯಾಗಿ ಸಿಕ್ಕಿಸಿದ ಉದಾಹರಣೆಯೇ ಇಲ್ಲ ಅನ್ಸುತ್ತೆ. ಇರಲಿ, ಇದರ ಕತೆ ಮಾತ್ರ ಬಹಳ ಆಸಕ್ತಿಕರವಾಗಿದೆ. ಕಂಪ್ಯೂಟರ್ ಲೋಕದಲ್ಲಿ ಇದೊಂದು ಕ್ರಾಂತಿಕಾರಿ ಅವಿಷ್ಕಾರ, ಮತ್ತೂ... ಇದನ್ನು ಕಂಡುಹಿಡಿದದ್ದು ಭಾರತೀಯ! ಅಗತ್ಯವಾಗಿ ಇಂಥದಕ್ಕೆ ನೀವೆಲ್ಲ ಹೆಮ್ಮೆಪಟ್ಟುಕೊಳ್ಳಬಹುದು.
ತೊಂಭತ್ತರ ದಶಕದ ಎಲ್ಲರಿಗೂ ಇದು ಗೊತ್ತಿರುತ್ತೆ, ಅನುಭವಕ್ಕೆ ಬಂದಿರುತ್ತೆ- ಆಗೆಲ್ಲ ನಾವು ಒಂದು ಕಂಪ್ಯೂಟರೊಂದಿಗೆ ಇನ್ನಿತರ ಉಪಕರಣಗಳನ್ನು ಕನೆಕ್ಟ್ ಮಾಡಲು ತಿಣುಕಾಡಬೇಕಿತ್ತು. ಮೌಸಿಗೆ ಒಂದು ಥರ, ಕೀಬೋರ್ಡಿಗೆ ಒಂದು ಥರ, ಮಾನಿಟರಿಗೆ ಇನ್ನೊಂದು ಥರ ಪ್ಲಗ್ಗುಗಳು (ಇವನ್ನು ಪೋರ್ಟ್ ಅನ್ನಬೇಕು) ಇರುತ್ತಿದ್ದವು. ಹಸಿರು-ನೀಲಿ ಬಣ್ಣಗಳಲ್ಲಿ, ದುಂಡು-ಚಪ್ಪಟೆ ಆಕಾರಗಳಲ್ಲಿ, ಮತ್ತು ಒಂದೊಂದರಲ್ಲೂ ಅದು ಯಾಕೆ ಹಾಗಿದೆ ಎಂದು ಗೊಂದಲವಾಗುವಷ್ಟು ಬಗೆಯ ಪಿನ್ನುಗಳು. ಹೆಡ್ ಫೋನಿಗೆಂದೇ ಕಡ್ಡಿಯಾಕಾರದ ಪೋರ್ಟ್ ಇತ್ತು (3.5mm ಆಕ್ಸ್ ಕೇಬಲ್ ಅಂತಿದ್ವಲ). ಮತ್ತು ಹೊಸ ಕೀಬೋರ್ಡ್, ಮೌಸು, ಹೆಡ್‌ಫೋನು ಕೊಂಡರೆ ಅದಕ್ಕೊಂದು ಸೆಪರೇಟು ಸಿಡಿ ಕೊಡ್ತಿದ್ದರು, ಸಾಫ್ಟವೇರ್ ಇನ್ಸ್ಟಾಲ್ ಮಾಡಿಕೊಳ್ಳಲು.
ಇದೆಲ್ಲ ಖುದ್ದು ಐಟಿ ಜನರಿಗೇ ತಲೆ ಚಿಟ್ಟು ಹಿಡಿಸುತ್ತಿತ್ತು. ಆಗಿನ ಹೆಸರಾಂತ ಕಂಪನಿಗಳು (ಇಂಟೆಲ್, ಐಬಿಎಂ, ಕಾಂಪಾಕ್ ಮುಂತಾಗಿ) ಸೇರಿಕೊಂಡು ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಲೇ ಬೇಕು ಎಂದು ಒಟ್ಟುಗೂಡಿ ಯೋಚಿಸಿದಾಗ ಹುಟ್ಟಿಕೊಂಡದ್ದೇ ಯುಎಸ್‌ಬಿ, ಯೂನಿವರ್ಸಲ್ ಸೀರಿಯಲ್ ಬಸ್. ಹೆಸರಲ್ಲೇ ಸೂಚಿಸುವಂತೆ ಸರ್ವರಿಗೂ ಸಲ್ಲುವ, ಎಲ್ಲರೂ ಒಪ್ಪುವ ಅಪ್ಪುವ ಯೂನಿವರ್ಸಲ್ ಪರಿಹಾರ.
ಇಂಟೆಲ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಮಧ್ಯಪ್ರದೇಶದ ಅಜಯ್ ಭಟ್ ಇದರ ರೂವಾರಿ. ಇವರೊಂದಿಗೆ ಇನ್ನೊಬ್ಬರಿದ್ದಾರೆ ಬಾಲ ಎಂದು. ಅಜಯ್ ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಹೊಂದಿರುವರು! ಐಟಿ ಜಗತ್ತಿನ ʼರಾಕ್ ಸ್ಟಾರ್ʼ ಎನಿಸಿಕೊಂಡವರು. ಅವರು ಮಾಡಿದ್ದೇನೆಂದರೆ ಹೇಗೆ ಜಗತ್ತಿನ ಕೋಟ್ಯಾಂತರ ಬಗೆಯ ಟೆಕ್ ಉಪಕರಣಗಳು ಒಂದೇ ಸೂತ್ರ ಪಾಲಿಸಿಕೊಂಡು ಪರಸ್ಪರ ಸಂಯಮದಿಂದ ಮಾತಾಡಿಕೊಳ್ಳಬಹುದು ಎಂದು ಯೋಚಿಸಿ ಆ ಸೂತ್ರ (ಪ್ರೊಟೊಕಾಲ್) ನಂತೆ ಸಂವಹಿಸುವ ಕೇಬಲ್ ಡಿಸೈನ್ ಮಾಡಿದ್ದು.
ಯುಎಸ್‌ಬಿ ಮೂರು ಸರಳ ಉಪಯೋಗಗಳ ಮೂಲಕ ಜಗತ್ತನ್ನೇ ಬದಲಿಸಿತು. ಒಂದು- ನೂರಾರು ವೆರೈಟಿ ಕೇಬಲ್‌ಗಳನ್ನು ಅವುಗಳಿಂದ ತಲೆ ಚಿಟ್ಟು ಹಿಡಿಯುವುದನ್ನು, ಹೊಂದಾಣಿಕೆಯಿಲ್ಲದ ಕೇಬಲ್ಲುಗಳಿಂದ ಲೋಕ ಗೊಬ್ಬರದ ಗುಂಡಿಯಾಗುವುದನ್ನು ಏಕ್ದಂ ಇಲ್ಲವಾಗಿಸಿತು. ಮೌಸ್, ಕೀಬೋರ್ಡ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್ ಏನೇ ಇರಲಿ, ಎಲ್ಲವೂ ಈಗ ಯುಎಸ್‌ಬಿ ಮೂಲಕ ಕನೆಕ್ಟ್ ಆಗುತ್ತವೆ. ಎರಡು, ಈ ರೀತಿಯ ಯಾವುದೇ ಹೊರಗಿನ ಉಪಕರಣವನ್ನು ಕಂಪ್ಯೂಟರಿಗೆ ಕನೆಕ್ಟ್ ಮಾಡಬೇಕಂದರೆ ಕಂಪ್ಯೂಟರು ಆ ಉಪಕರಣದೊಂದಿಗೆ ಹೇಗೆ ವರ್ತಿಸಬೇಕು ಎಂದು ಅರ್ಥ ಮಾಡಿಸುವ ಸಾಫ್ಟವೇರ್ ಇರಬೇಕು. ಅದನ್ನು ಮೊದಲು ಸಿಡಿ ಮೂಲಕ ಇನ್ಸ್ಟಾಲ್ ಮಾಡಿಕೊಳ್ಳಬೇಕಿತ್ತು. ಈಗ ಯುಎಸ್‌ಬಿ ಸಿಗಿಸಿದರೆ ಸಾಕು, ಕಂಪ್ಯೂಟರ್ ಅದರ ಮೂಲಕವೇ ನಿಮ್ಮ ಮೌಸ್ ಅಥವಾ ಕೀಬೋರ್ಡ್ ಗುರುತಿಸಿ ಅದರಿಂದಲೇ ಸಾಫ್ಟ್ವೇರ್ (ಇದನ್ನು ಡ್ರೈವರ್ ಅನ್ನಬೇಕು) ಕಾಪಿ ಮಾಡಿಕೊಂಡು ತಂತಾನೇ ಇನ್ಸ್ಟಾಲ್ ಮಾಡಿಕೊಳ್ಳುತ್ತದೆ. ಇವತ್ತು ನೀವು ಯಾವ ಬಗೆಯ ಪ್ರಿಂಟರನ್ನು ಯಾವ ಲ್ಯಾಪ್‌ಟಾಪಿಗೆ ಕನೆಕ್ಟ್ ಮಾಡಿದರೂ ಯಾವುದೇ ಸಾಫ್ಟವೇರ್ ಇನ್ಸ್ಟಾಲ್ ಮಾಡದೇ ಪ್ರಿಂಟ್ ತೆಗೆಯಬಹುದಾಗಿದೆ. ಇದಕ್ಕೆಲ್ಲ ಯುಎಸ್‌ಬಿ ಕ್ರಾಂತಿ ಕಾರಣ.
ಮೂರು- ರಿವರ್ಸ್ ಚಾರ್ಜಿಂಗ್! ಮೊದಲೆಲ್ಲ ಕಂಪ್ಯೂಟರಿಂದ ಹೊರಗೆ ಕರೆಂಟ್ ಹರಿಯುವ ಮಾದರಿಯೇ ಇರಲಿಲ್ಲ. ಮಾಹಿತಿಗೆ ಒಂದು ಕೇಬಲ್, ಕರೆಂಟಿಗೆ ಇನ್ನೊಂದು ಕೇಬಲ್ ಇರ್ತಿದ್ದವು. ಯೂಎಸ್‌ಬಿ ಆ ತಲೆನೋವನ್ನೂ ಇಲ್ಲವಾಗಿಸಿತು. ಇದಷ್ಟೇ ಅಲ್ಲ, ಮೊದಲಿದ್ದ ಕೇಬಲ್‌ಗಳಿಗೆ ಹೋಲಿಸಿದರೆ ಡೇಟಾದ ವೇಗ ನೂರು ಪಟ್ಟು ಜಾಸ್ತಿಯಾಯಿತು.ಆರಂಭದಲ್ಲಿ ಕೆಲವು ಮೆಗಾಬಿಟ್ ಇದ್ದ ವೇಗ ಈಗ ಯುಎಸ್‌ಬಿಯ ಮೂರನೇ ಅವತರಣಿಕೆಯಲ್ಲಿ ಗಿಗಾಬಿಟ್ಟಿಗೇರಿದೆ (ಸಾವಿರ ಪಟ್ಟು). ಹಾಗಾಗಿಯೇ ನಮ್ಮ ಬಾಹ್ಯ ಹಾರ್ಡ್ ಡಿಸ್ಕ್‌ಗಳನ್ನು ಸಹ ಯುಎಸ್‌ಬಿ ಮೂಲಕ ಕನೆಕ್ಟ್ ಮಾಡಬಹುದಾಗಿದೆ. (ಹಾರ್ಡ್ ಡ್ರೈವ್ ಅನ್ನಬೇಕಿದ್ದವನ್ನು ಯುಎಸ್‌ಬಿ ಡ್ರೈವ್ ಅನ್ನುವಷ್ಟು ಪ್ರಭಾವ).
ಯುಎಸ್‌ಬಿ ಕೇಬಲನ್ನು ಕತ್ತರಿಸಿದರೆ ಒಳಗೆ ನಿಮಗೆ ನಾಲ್ಕು ಸಣ್ಣ ವಯರುಗಳು ಕಾಣಸಿಗುತ್ತವೆ. ಒಂದು ಅಫ್ ಕೋರ್ಸ್ ಕರೆಂಟಿನ ವಯರು! ಇನ್ನೊಂದು ಕರೆಂಟ್‌ನಿಂದಾಗಿ ಅದಕ್ಕೊಂದು ಗ್ರೌಂಡಿಂಗ್ ವಯರು. ಇನ್ನೆರಡು ಡಿ ಪ್ಲಸ್ ಮತ್ತು ಡಿ ಮೈನಸ್. ಬಿಳಿ ಮತ್ತು ಹಸಿರು ಬಣ್ಣದಲ್ಲಿರುತ್ತವೆ. ಇವೆರಡೂ ಡಾಟಾ ಹರಿಯಲು ಬಳಕೆಯಾಗುತ್ತವೆ. ಇಲ್ಲಿ ಡಿ ಎಂದರೆ ಡೇಟಾ. ಇವುಗಳಲ್ಲಿ ಡೇಟಾ ಹೇಗೆ ಹರಿಯುತ್ತದೆ? ಎರಡು ವಯರುಗಳಲ್ಲಿ ಹರಿಯುವ ಕರೆಂಟಿನ(ವೋಲ್ಟೇಜಿನ) ವ್ಯತ್ಯಾಸವೇ ಕಂಪ್ಯೂಟರ್ ಭಾಷೆ (ಒಂದು ಸೊನ್ನೆಗಳು.. ). ಯುಸ್‌ಬಿಯ ವೇಗ ಹೇಗೆ ಜಾಸ್ತಿಯಾಯ್ತು ಎಂದು ನಿಮಗೆ ಈಗ ಕಲ್ಪನೆಗೆ ಸಿಗಬಹುದು. ಒಂದೇ ವಯರಿನ ಮೂಲಕ ಡೇಟಾ ಕಳಿಸಬೇಕಂದರೆ ಅದರಲ್ಲೇ ಒಮ್ಮೆ ಹೆಚ್ಚು ಒಮ್ಮೆ ಕಡಿಮೆ ಕರೆಂಟು ಹರಿಸಿ ಸಂವಹನ ಸಾಧಿಸಬೇಕು. ನಿಧಾನ ಆಗುತ್ತೆ. ಅದೇ ಎರಡು ಕೇಬಲ್ ಇದ್ದಾಗ... ಡಬಲ್ ಅಲ್ಲ ಸಾವಿರ ಪಟ್ಟು ಜಾಸ್ತಿಯಾಗುತ್ತದೆ! ಹೇಗೆಂದರೆ... ಒಬ್ಬರ ಹಿಂದೆ ಒಬ್ಬರು ಸಾಲಾಗಿ ನಿಂತಿರುವ ನೂರು ಮಕ್ಕಳದ್ದು ಒಂದೇ ಬಾಯಿ ಎಂದು ಲೆಕ್ಕವಾದರೆ ಅವರನ್ನೇ ಅಕ್ಕಪಕ್ಕ ನಿಲ್ಲಿಸಿದಾಗ ಒಟ್ಟಿಗೆ ನೂರು ಬಾಯಿಗಳು ಸಿಕ್ಕಂತಾಯಿತಲ್ಲ!
ಸರಿ ಆಯ್ತು, ಹಾಗಾದರೆ ಈಗೆಲ್ಲ ಸಿ-ಟೈಪ್ ಅಂತ ಬಂದಿದೆಯಲ್ಲ ಅದೇನು?
ಅದೂ ಸಹ ಯುಎಸ್‌ಬಿಯೇ! ನೀವೆಲ್ಲ ಯುಎಸ್‌ಬಿಯೆಂದು ಬಳಸುತ್ತಿರುವ ಕೇಬಲ್ಲು ಟೈಪ್-ಎ ಎಂದಾದರೆ ಇದು ಟೈಪ್-ಸಿ ಯಾಕೆ ಎಂದು ಸುಲಭವಾಗಿ ಅರ್ಥವಾಗುತ್ತದೆ. ನಡುವೆ ಬಂದ ನೂರೆಂಟು ಆಕಾರಗಳು ಟೈಪ್-ಬಿ ಜಾತಿಗೆ ಸೇರಿದವು. ಟೈಪ್ ಸಿ ಇನ್ನಷ್ಟು ಕ್ರಾಂತಿಕಾರಿಯಷ್ಟೇ. ಮಾಮೂಲಿ ಯುಎಸ್‌ಬಿಗಳಲ್ಲಿ ಸಣ್ಣ ಉಪಕರಣಗಳನ್ನು ಮಾತ್ರ ಚಾರ್ಜ್ ಮಾಡಬಹುದು. ಟೈಪ್-ಸಿ ನಲ್ಲಿ ಲ್ಯಾಪಟಾಪನ್ನೇ ಚಾರ್ಜ್ ಮಾಡಬಹುದು. ಹೀಗೆ ವ್ಯಾಪ್ತಿ ಹಿಗ್ಗಿರುವುದರಿಂದ ಟೈಪ್-ಸಿ ಇನ್ನಷ್ಟು ʼಯೂನಿವರ್ಸಲ್ʼ ಆಗಿದೆ. ಊಹಿಸಿದಂತೆ ಮಾಹಿತಿ ಹರಿಯುವ ವೇಗ ಸಹ ಜಾಸ್ತಿಯಿದೆ. ಮುಖ್ಯವಾಗಿ ಮಾಮೂಲಿ ಯುಎಸ್‌ಬಿಯಲ್ಲಿದ್ದ ದೊಡ್ಡ ಐಬನ್ನು ಟೈಪ್-ಸಿ ಒಡೆದುಹಾಕಿದೆ, ನೀವು ಯಾವ ದಿಕ್ಕಿನಿಂದ ಬೇಕಾದರೂ ಅದನ್ನು ಲ್ಯಾಪಟಾಪಿಗೆ ಚುಚ್ಚಬಹುದಾಗಿದೆ!