Weight Loss Tips: ಮೂಲಂಗಿ ಎಂದರೆ ಮೂಗು ಮುರಿಯುವುದೇಕೆ? ತೂಕ ಇಳಿಸಲು ಮೂಲಂಗಿ ಜ್ಯೂಸ್ ಕುಡಿಯಿರಿ; ತಯಾರಿಸುವ ವಿಧಾನ ಹೀಗಿದೆ
Weight Loss Tips: ತೂಕ ಇಳಿಸಬೇಕು ಎಂದುಕೊಂಡವರು ಮೂಲಂಗಿ ಸೇವಿಸುತ್ತಿಲ್ಲವೆಂದರೆ ಇಂದಿನಿಂದಲೇ ನಿಮ್ಮ ಆಹಾರದ ದಿನಚರಿಗೆ ಇದನ್ನು ಸೇರಿಸಿಕೊಳ್ಳಿ. ಮೂಲಂಗಿಯಿಂದ ಇರುವ ಆರೋಗ್ಯ ಪ್ರಯೋಜನಗಳ ಬಗ್ಗೆ ಒಮ್ಮೆ ತಿಳಿದರೆ ನೀವು ಎಂದಿಗೂ ಮೂಲಂಗಿ ಎಂದರೆ ಮೂಗು ಮುರಿಯುವುದೇ ಇಲ್ಲ.
Weight Loss Tips: ಮೂಲಂಗಿ ಎಂದರೆ ಮೂಗು ಮುರಿಯುವವರ ಸಂಖ್ಯೆಯೇ ಹೆಚ್ಚು. ಆದರೆ ಉತ್ತಮ ಆರೋಗ್ಯಕ್ಕೆ ಹಾಗೂ ತೂಕ ಇಳಿಕೆಗೆ ಮೂಲಂಗಿ ಸೇವನೆ ಎಷ್ಟು ಮುಖ್ಯ ಎನ್ನುವುದು ಬಹುತೇಕರಿಗೆ ತಿಳಿದಿಲ್ಲ. ಮೂಲಂಗಿಯಲ್ಲಿ ಇರುವ ವಿಟಮಿನ್ ಎ, ಇ, ಸಿ, ಬಿ 6 ಹಾಗೂ ಕೆ ಅಂಶಗಳು ದೇಹಕ್ಕೆ ಸಾಕಷ್ಟು ಉಪಯುಕ್ತವಾಗಿದೆ.
ಇಷ್ಟು ಮಾತ್ರವಲ್ಲದೇ ಮೂಲಂಗಿಯು ಕ್ಯಾಲ್ಸಿಯಂ, ಪೋಟ್ಯಾಷಿಯಂ ಹಾಗೂ ಮೆಗ್ನಿಷಿಯಂನ ಉತ್ತಮ ಮೂಲವಾಗಿದೆ. ಹೀಗಾಗಿ ಕರುಳಿನ ಆರೋಗ್ಯ ಸುಧಾರಿಸಲು ಹಾಗೂ ತೂಕ ಇಳಿಕೆಗೆ ಮೂಲಂಗಿ ಹೇಳಿ ಮಾಡಿಸಿದಂತಹ ತರಕಾರಿಯಾಗಿದೆ. ನಿತ್ಯವೂ ಮೂಲಂಗಿ ಜ್ಯೂಸ್ ಕುಡಿಯುವುದರ ಮೂಲಕ ನೀವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಹಾಗಾದರೆ ಈ ಆರೋಗ್ಯಕರ ಮೂಲಂಗಿ ಜ್ಯೂಸ್ ತಯಾರಿಸುವುದು ಹೇಗೆ..? ಇಲ್ಲಿದೆ ವಿವರ
ಮೂಲಂಗಿ ಜ್ಯೂಸ್ ತಯಾರಿಸುವುದು ಹೇಗೆ..?
ಬೇಕಾಗುವ ಸಾಮಗ್ರಿಗಳು
- ಮೂಲಂಗಿ - 2
- ಸೇಬು - 1/2
- ನಿಂಬೆ - 1/2
- ನೀರು - 1/2 ಕಪ್
ಇದನ್ನೂ ಓದಿ: ತೂಕ ಇಳಿಸುವಲ್ಲಿ ರಾಗಿ ಹೇಗೆ ಸಹಾಯ ಮಾಡುತ್ತದೆ? ರಾಗಿಯಿಂದ ತಯಾರಿಸಬಹುದಾದ ಆರೋಗ್ಯಕರ ರೆಸಿಪಿಗಳು ಇಲ್ಲಿವೆ
ತಯಾರಿಸುವ ವಿಧಾನ
ಕತ್ತರಿಸಿಕೊಂಡ ಮೂಲಂಗಿ ಹಾಗೂ ಸೇಬು ಹಣ್ಣಿಗೆ ನಿಂಬೆ ರಸ, ನೀರನ್ನು ಸೇರಿಸಿಕೊಂಡು ಚೆನ್ನಾಗಿ ಗ್ರೈಂಡ್ ಮಾಡಿಕೊಳ್ಳಿ. ಇದನ್ನು ಶೋಧಿಸಿಕೊಂಡು ಬೇರೆ ಪಾತ್ರೆಗೆ ಹಾಕಿಕೊಳ್ಳಿ.ಈಗ ನಿಮ್ಮ ಮೂಲಂಗಿ ಜ್ಯೂಸ್ ಸವಿಯಲು ಸಿದ್ಧ. ಮೂಲಂಗಿ ಜ್ಯೂಸ್‌ಗೆ ಸೇಬು ಹಾಗೂ ನಿಂಬೆ ರಸವನ್ನು ಸೇರಿಸಿರುವುದರಿಂದ ಇದು ಮೂಲಂಗಿಯ ಕಟುವಾದ ರುಚಿಯನ್ನು ತಡೆಯುತ್ತದೆ.
ಮೂಲಂಗಿ ಜ್ಯೂಸ್ ಸೇವನೆಯಿಂದ ಏನೆಲ್ಲ ಪ್ರಯೋಜನವಿದೆ..?
ಮೂಲಂಗಿಯನ್ನು ವಿವಿಧ ಪೋಷಕಾಂಶಗಳ ಪವರ್ ಹೌಸ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇವುಗಳು ದೇಹದ ಆರೋಗ್ಯವನ್ನು ಸುಧಾರಿಸಲು ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡುತ್ತದೆ. ಮೂಲಂಗಿ ಜ್ಯೂಸ್ ಸೇವನೆಯಿಂದ ಇರುವ ಆರೋಗ್ಯ ಪ್ರಯೋಜನದ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ
ಮೂಲಂಗಿಯಲ್ಲಿ ಆಂಟಿ ಆಕ್ಸಿಡಂಟ್ ಪ್ರಮಾಣ ಅತ್ಯಧಿಕವಾಗಿರುತ್ತದೆ. ಇವುಗಳು ದೇಹದಲ್ಲಿನ ವಿಷಕಾರಿ ಅಂಶವನ್ನು ತೊಡೆದು ಹಾಕಲು ಸಹಕಾರಿಯಾಗಿದೆ. ಯಕೃತ್ತು, ಕರುಳು ಹಾಗೂ ಮೂತ್ರಪಿಂಡದ ಆರೋಗ್ಯವನ್ನು ಸುಧಾರಿಸಲು ಮೂಲಂಗಿ ಸಹಕಾರಿ ಎನ್ನಲಾಗಿದೆ. ಮೂಲಂಗಿಯಲ್ಲಿರುವ ನೈಸರ್ಗಿಕ ಕಿಣ್ವಗಳು ಸರಾಗವಾದ ಜೀರ್ಣಕ್ರಿಯೆ ಪ್ರಕ್ರಿಯೆಗೆ ಸಹಕಾರಿಯಾಗಿವೆ. ಮಲಬದ್ಧತೆ ತಡೆಯಲು ಮೂಲಂಗಿ ಸಹಕಾರಿಯಾಗಿದೆ. ಕರುಳಿನ ಆರೋಗ್ಯ ಸುಧಾರಿಸುವಲ್ಲಿ ಮೂಲಂಗಿ ಮುಖ್ಯ ಪಾತ್ರ ವಹಿಸುತ್ತದೆ.
ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವ ಮೂಲಂಗಿ
ವಿಟಮಿನ್ ಸಿ ಅಂಶವನ್ನು ಅಗಾಧ ಪ್ರಮಾಣದಲ್ಲಿ ಹೊಂದಿರುವ ಮೂಲಂಗಿಯು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ನಮ್ಮ ದೇಹವು ವಿವಿಧ ರೋಗಗಳ ವಿರುದ್ಧ ಹೋರಾಡಲು ಮೂಲಂಗಿ ಸಹಾಯ ಮಾಡುತ್ತದೆ. ಮೂಲಂಗಿಯಲ್ಲಿ ಪೊಟ್ಯಾಷಿಯಂ ಅಗಾಧ ಪ್ರಮಾಣದಲ್ಲಿ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಕೂಡ ಮೂಲಂಗಿಯ ಪಾತ್ರ ಮಹತ್ವದ್ದು ಎಂದೇ ಹೇಳಬಹುದು.
ಮೂಲಂಗಿಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೋರಿ ಹಾಗೂ ಕಾರ್ಬೋಹೈಡ್ರೇಟ್ ಅಂಶವಿದೆ. ಹೀಗಾಗಿ ತೂಕ ಇಳಿಸಬೇಕು ಎಂದುಕೊಂಡವರು ಇದರ ರಸವನ್ನು ನಿಶ್ಚಿಂತೆಯಿಂದ ಕುಡಿಯಬಹುದು. ಅಮೆರಿಕದ ಕೃಷಿ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 100 ಗ್ರಾಂ ಮೂಲಂಗಿಯಲ್ಲಿ ಕೇವಲ 3.4 ಗ್ರಾಂ ಕಾರ್ಬೋಹೈಡ್ರೇಟ್ ಅಂಶವಿದೆ ಎನ್ನಲಾಗಿದೆ.