Weight Loss: ಚಳಿಗಾಲದಲ್ಲಿ ತೂಕ ಇಳಿಯೋ ಜೊತೆಗೆ, ಬೆಲ್ಲಿ ಫ್ಯಾಟ್ ಕೂಡ ಕಡಿಮೆ ಆಗ್ಬೇಕಾ? ಹಾಗಿದ್ರೆ ಈ 5 ಪಾನೀಯಗಳನ್ನು ಕುಡೀರಿ
ಚಳಿಗಾಲದಲ್ಲಿ ದೇಹ ಬೆಚ್ಚಗಿದ್ದು, ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಬಗೆ ಬಗೆ ಕಷಾಯಗಳನ್ನು ಕುಡಿಯಬೇಕು. ಈ ಕಷಾಯಗಳು ದೇಹಾರೋಗ್ಯಕ್ಕೆ ಮಾತ್ರವಲ್ಲ, ತೂಕ ಇಳಿಕೆಗೂ ಸಹಕಾರಿ. ಇವು ಚಯಾಪಚಯ ಕ್ರಿಯೆಯನ್ನು ವೃದ್ಧಿಸಿ, ಬೆಲ್ಲಿ ಫ್ಯಾಟ್ ಇಳಿಸಲು ಸಹಕರಿಸುತ್ತವೆ. ಇದನ್ನು ಸುಲಭವಾಗಿ ಮನೆಯಲ್ಲೂ ಮಾಡಿಕೊಂಡು ಕುಡಿಯಬಹುದು. ಅಂತಹ ಕೆಲವು ಕಷಾಯಗಳ ಬಗ್ಗೆ ಇಲ್ಲಿದೆ ಮಾಹಿತಿ.
ಚಳಿಗಾಲದಲ್ಲಿ ದೇಹಕ್ಕೆ ಆಲಸ್ಯ ಕಾಡುವುದು ಸಹಜ. ಹಾಗಾಗಿ ಜಾಗಿಂಗ್, ವಾಕಿಂಗ್, ಜಿಮ್‌ಗೆ ಹೋಗುವುದಕ್ಕೆ ಬ್ರೇಕ್ ಹಾಕಿ ಇರುತ್ತೇವೆ. ಈಗಂತೂ ತೂಕ ಇಳಿಸೋದು ಸವಾಲೇ ಸರಿ. ಇದರ ನಡುವೆ ಬೆಲ್ಲಿ ಫ್ಯಾಟ್ ಕೂಡ ಜೊತೆಯಾಗಿರುತ್ತದೆ. ಹಾಗಂತ ತೂಕ ಇಳಿಸದೇ ಇರಲು ಸಾಧ್ಯವಿಲ್ಲ. ಇದಕ್ಕಾಗಿ ಬೇರೆ ಮಾರ್ಗಗಳನ್ನು ಹುಡುಕುತ್ತಿದ್ದರೆ, ಈ ಪಾನೀಯಗಳು ನಿಮಗೆ ಸಹಾಯ ಮಾಡುತ್ತವೆ. ಇವು ಚಯಾಪಚಯ ಶಕ್ತಿಯನ್ನು ವೃದ್ಧಿಸುತ್ತದೆ. ಅಲ್ಲದೆ ಕ್ಯಾಲೊರಿ ಕಡಿಮೆ ಮಾಡಲು ಸಹಕಾರಿ. ಇದರಿಂದ ತೂಕ ಇಳಿಕೆ ಹಾಗೂ ಬೆಲ್ಲಿ ಕರಗಿಸಲು ಸಾಧ್ಯವಾಗುತ್ತದೆ. ಈ ಕಷಾಯಗಳನ್ನು ಮನೆಯಲ್ಲೇ ಮಾಡಿಕೊಂಡು ಕುಡಿಯುವುದರಿಂದ ಚಳಿಗಾಲದ ಆರೋಗ್ಯ ಸಮಸ್ಯೆಗಳೂ ದೂರಾಗುತ್ತವೆ.
ಚಳಿಗಾಲದಲ್ಲಿ ತೂಕ ಇಳಿಸುವ 5 ಪಾನೀಯಗಳು
ಗ್ರೀನ್ ಟೀ: ತೂಕ ಇಳಿಕೆಗೆ ಹೇಳಿ ಮಾಡಿಸಿದ ಪಾನೀಯ ಅಂದ್ರೆ ಗ್ರೀನ್ ಟೀ. ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಸಮೃದ್ಧವಾಗಿರುತ್ತದೆ.ಇದು ದೇಹದಲ್ಲಿನ ಟಾಕ್ಸಿನ್ ಅಂಶವನ್ನು ಹೊರಹಾಕಲು ಸಹಕಾರಿ. ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಅಲ್ಲದೇ ಇದನ್ನು ಕುಡಿಯುವುದರಿಂದ ಹೊಟ್ಟೆ ತುಂಬಿದಂತಿರುತ್ತದೆ. ಹಾಗಾಗಿ ಪದೇ ಪದೇ ಅನಾರೋಗ್ಯಕರ ಆಹಾರ ಸೇವನೆ, ಆಹಾರದ ಕಡುಬಯಕೆಯನ್ನು ನಿಯಂತ್ರಿಸುತ್ತದೆ.
ಆಪಲ್ ಸೀಡರ್ ವಿನೇಗರ್ ಮತ್ತು ಬಿಸಿನೀರು: ಪ್ರತಿದಿನ ಬೆಳಿಗ್ಗೆ ಬಿಸಿನೀರಿಗೆ ಒಂದು ಚಮಚ ಆಪಲ್ ಸೀಡರ್ ವಿನೇಗರ್ ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ವೃದ್ಧಿಸುತ್ತದೆ.
ಅರಿಸಿನದ ಹಾಲು: ಹಿಂದಿನಿಂದಲೂ ಆರೋಗ್ಯ ರಕ್ಷಣೆ ಹಾಗೂ ತೂಕ ಇಳಿಕೆಗೆ ಅರಿಸಿನದ ಹಾಲು ಸೇವನೆ ಬೆಸ್ಟ್. ಇದರಲ್ಲಿನ ಔಷಧೀಯ ಗುಣಗಳಿಂದ ಆರೋಗ್ಯ ಹಾಗೂ ತೂಕ ಇಳಿಕೆ ಎರಡಕ್ಕೂ ಸಹಾಯ ಮಾಡುತ್ತದೆ. ಇದರಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದು ಉರಿಯೂತದ ಗುಣಲಕ್ಷಣಗಳನ್ನು ನಿವಾರಿಸುತ್ತದೆ. ಇದು ಚಯಾಪಚಯವನ್ನು ವೃದ್ಧಿಸುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.
ಇದನ್ನೂ ಓದಿ: ತೂಕ ಇಳಿಸೋ ಪ್ಲಾನ್ ಇದ್ಯಾ, ಹಾಗಿದ್ರೆ ನಿಮ್ಮ ಫುಡ್‌ಲಿಸ್ಟ್‌ನಲ್ಲಿ ಸೋಯಾ ಚಂಕ್‌ಗೂ ಇರಲಿ ಜಾಗ; ಇದನ್ನ ಹೇಗೆಲ್ಲಾ ತಿನ್ನಬಹುದು ನೋಡಿ
ಬಿಸಿನೀರು, ನಿಂಬೆರಸ: ಇದು ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಪಾನೀಯವಾಗಿದೆ. ನಿಂಬೆರಸದಲ್ಲಿ ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಅಂಶ ಹಾಗೂ ಇತರ ಅಗತ್ಯ ಪೋಷಕಾಂಶಗಳು ಇರುವ ಕಾರಣ ಇದು ಕ್ಯಾಲೊರಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹರ್ಬಲ್ ಟೀ: ಹರ್ಬಲ್ ಟೀ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ಇದರಲ್ಲಿನ ಉರಿಯೂತ ವಿರೋಧಿ ಗುಣಲಕ್ಷಣಗಳು ಸಮೃದ್ಧವಾಗಿರುತ್ತದೆ. ಇದು ಜೀರ್ಣಕ್ರಿಯೆ ಹಾಗೂ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಇದು ನಮ್ಮ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಕಾರಿ. ಇದು ಕ್ಯಾಲೋರಿ ಕರಗಿಸಲು ಸಹಾಯ ಮಾಡುತ್ತದೆ.
ಇದರೊಂದಿಗೆ ಶುಂಠಿ ಟೀ, ದಾಲ್ಚಿನ್ನಿ ಟೀ, ನಿಂಬೆರಸ, ಜೇನುತುಪ್ಪದ ನೀರು ಈ ಎಲ್ಲಾ ಪಾನೀಯಗಳು ತೂಕ ಇಳಿಕೆಯಾಗಲು ಸಹಕಾರಿ. ಆದರೆ ಇದನ್ನು ಪ್ರತಿದಿನ ತಪ್ಪದೇ ಸೇವಿಸುವುದು ಮುಖ್ಯವಾಗುತ್ತದೆ. ಆದರೆ ಕೆಲವರಿಗೆ ಈ ಪಾನೀಯಗಳು ಮಾತ್ರ ತೂಕ ಇಳಿಕೆಗೆ ಸಹಕಾರಿಯಾಗಿರುವುದಿಲ್ಲ.