ಹೃದಯದ ಆರೋಗ್ಯಕ್ಕೂ ಕೊಲೆಸ್ಟ್ರಾಲ್ ಪರೀಕ್ಷೆಗೂ ಇದೆ ಸಂಬಂಧ; ಕೆಟ್ಟ ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಬೇಡವೇ ಬೇಡ-world heart day 2024 health tips why cholesterol test is important heart health and bad cholesterol jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹೃದಯದ ಆರೋಗ್ಯಕ್ಕೂ ಕೊಲೆಸ್ಟ್ರಾಲ್ ಪರೀಕ್ಷೆಗೂ ಇದೆ ಸಂಬಂಧ; ಕೆಟ್ಟ ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಬೇಡವೇ ಬೇಡ

ಹೃದಯದ ಆರೋಗ್ಯಕ್ಕೂ ಕೊಲೆಸ್ಟ್ರಾಲ್ ಪರೀಕ್ಷೆಗೂ ಇದೆ ಸಂಬಂಧ; ಕೆಟ್ಟ ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಬೇಡವೇ ಬೇಡ

ವಿಶ್ವ ಆರೋಗ್ಯ ದಿನ 2024: ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತಿರುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗುತ್ತಿದೆ. ಹೀಗಾಗಿ ಎಲ್‌ಡಿಎಲ್‌ಸಿ ಮಟ್ಟ ಕಡಿಮೆ ಇರುವಂತೆ ನೋಡಿಕೊಳ್ಳಬೇಕು. ಹೃದಯದ ಆರೋಗ್ಯಕ್ಕೆ ಕೊಲೆಸ್ಟ್ರಾಲ್‌ ಪರೀಕ್ಷೆ ಯಾಕೆ ಮುಖ್ಯ ಎಂದು ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ರಾಜ್‌ಪಾಲ್ ಸಿಂಗ್ ಸಲಹೆ ನೀಡಿದ್ದಾರೆ.

ಹೃದಯದ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಪರೀಕ್ಷೆ ಮುಖ್ಯ; ಕೆಟ್ಟ ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಬೇಡ
ಹೃದಯದ ಆರೋಗ್ಯಕ್ಕೆ ಕೊಲೆಸ್ಟ್ರಾಲ್ ಪರೀಕ್ಷೆ ಮುಖ್ಯ; ಕೆಟ್ಟ ಕೊಲೆಸ್ಟ್ರಾಲ್ ನಿರ್ಲಕ್ಷ್ಯ ಬೇಡ (Pixabay)

ಇತ್ತೀಚೆಗೆ ಹೃದಯ ಸಂಬಂಧಿ ಕಾಯಿಲೆಗಳಿಂದ ಮರಣ ಹೊಂದುತ್ತಿರುವವರ ಸುದ್ದಿ ಹೆಚ್ಚಾಗಿ ಕೇಳಿಬರುತ್ತಿವೆ. ಹೃದಯಾಘಾತಕ್ಕೆ ವಯಸ್ಸಿನ ಹಂಗೇ ಇಲ್ಲ ಎಂಬಂತಾಗಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಯಾರೇ ಆದರೂ, ಹೃದಯ ಸಂಬಂಧಿ ಕಾಯಿಲೆಯಿಂದ ದಿಢೀರ್‌ ಪ್ರಾಣಚೆಲ್ಲುತ್ತಾರೆ. ಹೃದಯ ರೋಗದಿಂದ ಮರಣ ಹೊಂದುವ ಸಂಖ್ಯೆಯಲ್ಲಿ ಭಾರತ ಬಹಳ ಮುಂದೆ ಇದೆ ಎಂಬುದು ಖೇದಕರ ಸಂಗತಿ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆಯೇ ಜಾಗತಿಕ ಹೃದ್ರೋಗ ಸಂಬಂಧಿತ ಸಾವುಗಳ ಐದನೇ ಒಂದು ಭಾಗದಷ್ಟು ಸಾವು ಭಾರತದಲ್ಲಿ ಸಂಭವಿಸುತ್ತದೆ ಎಂದು ವರದಿ ಮಾಡಿದೆ. ಏನಕ್ಕೂ ಈ ಕುರಿತು ಎಲ್ಲರೂ ಎಚ್ಚರ ವಹಿಸಿಕೊಳ್ಳುವುದು ಒಳ್ಳೆಯದು. ಆ ಹಿನ್ನೆಲೆಯಲ್ಲಿ ನೋಡುವುದಾದರೆ ಕೊಲೆಸ್ಟ್ಪಾಲ್ ಪರೀಕ್ಷೆ ತುಂಬಾ ಮುಖ್ಯ.

ನಿಮ್ಮ ಹೃದಯವನ್ನು ರಕ್ಷಿಸಿಕೊಳ್ಳಲು ನಿಯಮಿತವಾಗಿ ಕೊಲೆಸ್ಟ್ರಾಲ್ ತಪಾಸಣೆ ಮಾಡುವುದು ಮತ್ತು ಎಲ್‌ಡಿಎಲ್‌ಸಿ (ಬ್ಯಾಡ್ ಕೊಲೆಸ್ಟ್ರಾಲ್) ಕುರಿತು ಗಮನ ಹರಿಸುವುದು ಬಹಳ ಮುಖ್ಯ ಎಂದು ಖುದ್ದು ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಸಂಸ್ಥೆಯೇ ಹೇಳಿದೆ. ಹೀಗಾಗಿ ವಿಶ್ವ ಹೃದಯ ದಿನದ ಸಂದರ್ಭದಲ್ಲಿ ಈ ಅಗತ್ಯ ಮಾಹಿತಿ ನಿಮಗೆ ತಿಳಿದಿರಲಿ.

ಕೆಟ್ಟ ಕೊಲೆಸ್ಟ್ರಾಲ್

ಬ್ಯಾಡ್ ಕೊಲೆಸ್ಟ್ರಾಲ್ ಕುರಿತು ತಿಳಿಯುವ ಮೊದಲಿಗೆ ಕೊಲೆಸ್ಟ್ರಾಲ್ ಎಂದರೇನೆಂದು ತಿಳಿಯೋಣ. ಕೊಲೆಸ್ಟ್ರಾಲ್ ಅನ್ನುವುದು ರಕ್ತದಲ್ಲಿ ಕಂಡು ಬರುವ ಕೊಬ್ಬಿನ ಅಂಶ. ಆದರೆ ಈ ಕೊಲೆಸ್ಟ್ರಾಲ್‌ನಲ್ಲಿ ಗುಡ್ ಕೊಲೆಸ್ಟ್ರಾಲ್ ಮತ್ತು ಬ್ಯಾಡ್ ಕೊಲೆಸ್ಟ್ರಾಲ್ ಇರುತ್ತದೆ. ಗುಡ್ ಕೊಲೆಸ್ಟ್ರಾಲ್ ದೇಹಕ್ಕೆ ಒಳ್ಳೆಯದು ಮಾಡುತ್ತದೆ. ಆದರೆ ಕೆಟ್ಟ ಕೊಲೆಸ್ಟ್ರಾಲ್ ಅಪಾಯಕಾರಿ. ಆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಎಲ್‌ಡಿಎಲ್‌ಸಿ ಅಂತ ಕರೆಯುತ್ತಾರೆ. ಎಲ್‌ಡಿಎಲ್‌ಸಿ ಅಥವಾ “ಬ್ಯಾಡ್” ಕೊಲೆಸ್ಟ್ರಾಲ್ ಹೃದಯದ ಅಪಧಮನಿಗಳಲ್ಲಿ ಕೊಬ್ಬಿನ ಅಂಶಗಳನ್ನು ಉಂಟು ಮಾಡಬಹುದಾಗಿದೆ. ಕಾಲಕ್ರಮೇಣ ಆ ಕೊಬ್ಬಿನ ಅಂಶ ಜಾಸ್ತಿಯಾದಂತೆ ಅವು ರಕ್ತದ ಹರಿವಿಗೆ ನಿರ್ಬಂಧ ಒಡ್ಡುತ್ತದೆ. ಆ ಕಾರಣದಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಉಂಟಾಗಬಹುದು.

ಈಗೀಗ ಎಲ್‌ಡಿಎಲ್‌ಸಿ ಮಟ್ಟ ಬಹಳ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಎಲ್‌ಡಿಎಲ್‌ಸಿ ಮಟ್ಟ ಹೆಚ್ಚಾಗುತ್ತಿರುವುದರಿಂದಲೇ ಹೃದ್ರೋಗ ಉಂಟಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಎಲ್‌ಡಿಎಲ್‌ಸಿ ಮಟ್ಟವನ್ನು ಕಡಿಮೆ ಇರುವಂತೆ ನೋಡಿಕೊಳ್ಳಬೇಕು.

ಈ ಕುರಿತು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ರಾಜ್‌ಪಾಲ್ ಸಿಂಗ್ ಅವರು ಹೇಳುವುದು ಹೀಗೆ.

ಕೊಲೆಸ್ಟ್ರಾಲ್ ಮಟ್ಟದ ಮೇಲೆ ನಿಗಾ ವಹಿಸುವುದು ಮತ್ತು ಅದನ್ನು ಸೂಕ್ತವಾಗಿ ನಿಭಾಯಿಸುವುದು ಬಹಳ ಮುಖ್ಯ. ಅದರಲ್ಲೂ ವಿಶೇಷವಾಗಿ ಎಲ್‌ಡಿಎಲ್‌ಸಿ ಮೇಲೆ ನಿಗಾ ವಹಿಸಬೇಕು. ನನ್ನ ಶೇ.60ಕ್ಕಿಂತ ಹೆಚ್ಚು ರೋಗಿಗಳಿಗೆ ತಮ್ಮ ಎಲ್‌ಡಿಎಲ್‌ಸಿ ಮಟ್ಟಗಳ ಕುರಿತು ತಿಳಿದೇ ಇಲ್ಲ. ಈ ಅರಿವಿನ ಕೊರತೆಯಿಂದಲೇ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಎಲ್‌ಡಿಎಲ್‌ಸಿ ಅಪಾಯದ ಮಟ್ಟ ಮೀರುವುದರಿಂದಲೇ ಭಾರತದಲ್ಲಿ ಹೃದಯರಕ್ತನಾಳದ ಕಾಯಿಲೆ ಉಂಟಾಗುತ್ತಿದೆ ಎಂಬುದನ್ನು ನಾವು ಗಮನಿಸಬೇಕು. ಸಿಎಸ್ಐ ಮಾರ್ಗಸೂಚಿಗಳ ಪ್ರಕಾರ 18ನೇ ವಯಸ್ಸಿನಲ್ಲಿ ಲಿಪಿಡ್ ಪ್ರೊಫೈಲ್ ಸ್ಕ್ರೀನಿಂಗ್‌ಗಳನ್ನು ಪ್ರಾರಂಭಿಸಬೇಕು. ಅದರಿಂದ ಆರಂಭಿಕ ಹಂತದಲ್ಲಿಯೇ ಸಮಸ್ಯೆಗಳನ್ನು ಪತ್ತೆ ಹಚ್ಚಬಹುದು. ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದರಿಂದ ಮತ್ತು ಸೂಕ್ತ ಔಷಧಿಗಳನ್ನು ಪಡೆಯುವ ಮೂಲಕ ರೋಗಿಗಳು ತಮ್ಮ ಎಲ್‌ಡಿಎಲ್‌ಸಿ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬಹುದು. ಆ ಮೂಲಕ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುವುದನ್ನು ತಪ್ಪಿಸಬಹುದು ಎಂದು ಅವರು ಹೇಳುತ್ತಾರೆ.

ಕೊಲೆಸ್ಟ್ರಾಲ್ ಏಕೆ ಪರೀಕ್ಷಿಸಬೇಕು?

ಎಲ್‌ಡಿಎಲ್‌ಸಿ ಮಟ್ಟ ಅಥವಾ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟ ಒಬ್ಬರಿಗೆ ಒಂದೊಂದು ರೀತಿ ಇರುತ್ತದೆ. ನಿಮ್ಮ ವಯಸ್ಸು, ವೈದ್ಯಕೀಯ ಸಮಸ್ಯೆ ಮತ್ತು ಇತರ ಅಂಶಗಳ ಆಧಾರದಲ್ಲಿ ಎಲ್‌ಡಿಎಲ್‌ಸಿ ಮಟ್ಟ ನಿರ್ಧಾರ ಆಗುತ್ತದೆ. ಈ ಕಾರಣದಿಂದಲೇ ನೀವು ಅವಶ್ಯವಾಗಿ "ನಿಮ್ಮ ಎಲ್‌ಡಿಎಲ್‌ಸಿ ಮಟ್ಟನ್ನು ತಿಳಿಯಬೇಕು." ಅದಕ್ಕಾಗಿ ಕೊಲೆಸ್ಟ್ರಾಲ್ ಪರೀಕ್ಷೆ ಮಾಡಬೇಕು.

ಡಾ. ರಾಜ್‌ಪಾಲ್ ಸಿಂಗ್, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್.
ಡಾ. ರಾಜ್‌ಪಾಲ್ ಸಿಂಗ್, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕ ಮತ್ತು ಹಿರಿಯ ಇಂಟರ್‌ವೆನ್ಷನಲ್ ಕಾರ್ಡಿಯಾಲಜಿಸ್ಟ್.

ಹೃದಯದ ಆರೋಗ್ಯ ಕಾಪಾಡಿಕೊಳ್ಳಿ

ಕಾರ್ಡಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (ಸಿಎಸ್ಐ) ಪ್ರಕಾರ ಬ್ಯಾಡ್ ಕೊಲೆಸ್ಟ್ರಾಲ್ ಮಟ್ಟ ವಯಸ್ಸು, ಲಿಂಗ, ವೈದ್ಯಕೀಯ ಸಮಸ್ಯೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಅಂಶಗಳ ಆಧಾರದಲ್ಲಿ ಪ್ರತೀ ವ್ಯಕ್ತಿಗಳಿಗೂ ಬೇರೆಯೇ ಆಗಿರುತ್ತದೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ದಾರಿ, ಗುರಿ ಬೇರೆಯೇ. ಹಾಗಾಗಿ ನೀವು ನಿಮ್ಮ ವೈದ್ಯರ ಜೊತೆ ಸಮಾಲೋಚನೆಯನ್ನು ನಡೆಸಿ ನಿಮ್ಮ ವೈಯಕ್ತಿಕ ಎಲ್‌ಡಿಎಲ್‌ಸಿ ಮಟ್ಟ ತಿಳಿದುಕೊಳ್ಳಬೇಕು. ಆ ಮಟ್ಟ ಮೀರದಂತೆ ನೋಡಿಕೊಳ್ಳಬೇಕು.

ಕೊಲೆಸ್ಟ್ರಾಲ್ ನಿರ್ವಹಣೆ

ನಿಮಗೆ ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಇದೆ ಅಂತಿಟ್ಟುಕೊಳ್ಳಿ, ಆಗ ನೀವು ನಿಮ್ಮ ಎಲ್‌ಡಿಎಲ್‌ಸಿ ಮೇಲೆ ಬೇರೆಯವರಿಗಿಂತ ಹೆಚ್ಚು ನಿಗಾವಹಿಸಬೇಕು. ಮಧುಮೇಹ, ರಕ್ತದೊತ್ತಡ ನಿಮ್ಮ ಹೃದಯರೋಗದ ಅಪಾಯವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೀವು ಕೊಲೆಸ್ಟ್ರಾಲ್ ಮೇಲೆ ಹೆಚ್ಚಿನ ಗಮನ ನೀಡಬೇಕು. ಜೊತೆಗೆ ನಿಮ್ಮ ಚಿಕಿತ್ಸಾ ಯೋಜನೆಯನ್ನು ಚಾಚೂತಪ್ಪದೆ ಪಾಲಿಸುವುದು ಬಹಳ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಎಲ್ಲರೂ ಲಿಪಿಡ್ ಪ್ರೊಫೈಲ್ ಪರೀಕ್ಷೆ ನಡೆಸಬೇಕು. ಜೊತೆಗೆ ವೈಯಕ್ತಿಕ ಎಲ್‌ಡಿಎಲ್‌ಸಿ ಮಟ್ಟ ತಿಳಿಯಲು ವೈದ್ಯರ ಜೊತೆ ಸಮಾಲೋಚನೆ ನಡೆಸುವುದು ಬಹಳ ಮುಖ್ಯವಾಗಿದೆ. ಅದರಿಂದಲೇ ಹೃದ್ರೋಗದ ಆತಂಕವನ್ನು ನಿವಾರಿಸಬಹುದು.

mysore-dasara_Entry_Point