World Students Day: ಇಂದು ವಿಶ್ವ ವಿದ್ಯಾರ್ಥಿಗಳ ದಿನ; ಅಬ್ದುಲ್ ಕಲಾಂ ಜನ್ಮದಿನದಂದೇ ಈ ದಿನ ಆಚರಿಸುವುದು ಯಾಕೆ?
ಪ್ರತಿವರ್ಷ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವಾಗಿ (World Students' Day) ಆಚರಿಸಲಾಗುತ್ತದೆ. ಭಾರತದ ಖ್ಯಾತ ವಿಜ್ಞಾನಿ ಹಾಗೂ 11ನೇ ರಾಷ್ಟ್ರಪತಿಯಾಗಿದ್ದ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ನೆನಪಿಗೆ ಈ ದಿನ ಆಚರಿಸಲಾಗುತ್ತದೆ.
ಭಾರತದ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರಿಗೆ ಗೌರವಾರ್ಥವಾಗಿ, ಪ್ರತಿವರ್ಷ ಅವರು ಹುಟ್ಟಿದ ದಿನವಾದ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವಾಗಿ (World Students' Day) ಆಚರಿಸಲಾಗುತ್ತದೆ. ಈ ವರ್ಷ ಅಕ್ಟೋಬರ್ 15ರ ಮಂಗಳವಾರದಂದು ಭಾರತದಲ್ಲಿ ಈ ದಿನವನ್ನು ಆಚರಿಸಲಾಗುತ್ತಿದೆ. ಮಕ್ಕಳ ಬಗ್ಗೆ ಅತೀವ ಅಕ್ಕರೆ ಹೊಂದಿದ್ದ ಕಲಾಂ ಅವರು, ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಮಾರ್ಗದರ್ಶನ ನೀಡಿದ್ದಾರೆ, ಸ್ಫೂರ್ತಿದಾಯಕ ಮಾತುಗಳಿಂದ ಭವಿಷ್ಯ ರೂಪಿಸಿದ್ದಾರೆ. ಶಿಕ್ಷಣ ಮತ್ತು ವಿದ್ಯಾರ್ಥಿಗಳ ಕಡೆಗೆ ಕಲಾಂ ಅವರ ಒಲವನ್ನು ಗುರುತಿಸುವ ಮತ್ತು ಗೌರವಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತಿದೆ.
ವಿಶ್ವಸಂಸ್ಥೆಯು 2010ರಲ್ಲಿ ಅಕ್ಟೋಬರ್ 15 ಅನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿತು. ಪ್ರತಿ ವರ್ಷ ವಿಶ್ವ ಸಂಸ್ಥೆಯು ಈ ದಿನದ ಆಚರಣೆಗೆ ಒಂದು ಥೀಮ್ ಅನ್ನು ನಿರ್ಧರಿಸುತ್ತದೆ. 2024ರ ವಿಶ್ವ ವಿದ್ಯಾರ್ಥಿಗಳ ದಿನಾಚರಣೆಯ ವಿಷಯವೆಂದರೆ, 'ವಿದ್ಯಾರ್ಥಿಗಳನ್ನು ಬದಲಾವಣೆ ತರುವ ವ್ಯಕ್ತಿಗಳಾಗಿ ಸಶಕ್ತಗೊಳಿಸುವುದು'.
ವಿಶ್ವ ವಿದ್ಯಾರ್ಥಿಗಳ ದಿನವು ಸಮಾಜ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ವಿದ್ಯಾರ್ಥಿಗಳ ಪ್ರಮುಖ ಪಾತ್ರವನ್ನು ಎತ್ತಿ ತೋರಿಸುತ್ತದೆ. ಈ ದಿನವು ಭಾರತದ ಮಾಜಿ ರಾಷ್ಟ್ರಪತಿ, ವಿಜ್ಞಾನಿ ಮತ್ತು ಶಿಕ್ಷಣತಜ್ಞ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವನ್ನು ಸ್ಮರಿಸಲಾಗುತ್ತದೆ. ಈ ದಿನವು ಶಿಕ್ಷಣದ ಪ್ರಾಮುಖ್ಯತೆ ಮತ್ತು ಕಲಿಕೆಯ ಅವಕಾಶಗಳ ಅಗತ್ಯತೆಯ ಬಗ್ಗೆ ಅರಿವು ಮೂಡಿಸುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಕಲಾಂ ಅವರ ಸಾಧನೆ ಅನಂತ. ಆದರೂ ಯುವ ಮನಸ್ಸುಗಳಿಗೆ ಬೋಧನೆ ಮಾಡುವುದು ಅವರ ನಿಜವಾದ ಉತ್ಸಾಹವಾಗಿತ್ತು. ಅವರ ಮಾತುಗಳ ಸ್ಪೂರ್ತಿದಾಯಕ.
ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದ ಕಲಾಂ ಅವರು, ವಿಜ್ಞಾನ ಮತ್ತು ಭೌತಶಾಸ್ತ್ರವನ್ನು ಅಧ್ಯಯನ ಮಾಡಿದರು. ಉಪನ್ಯಾಸಗಳ ಮೂಲಕ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಮತ್ತು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅತ್ಯಂತ ಮಹತ್ವದ ಭಾರತೀಯ ಕ್ಷಿಪಣಿಗಳ ಅಭಿವೃದ್ಧಿಗಾಗಿ ಶ್ರಮಿಸಿದ ಅವರನ್ನು 'ಭಾರತದ ಕ್ಷಿಪಣಿ ಮನುಷ್ಯ' ಎಂದೂ ಕರೆಯಲಾಗುತ್ತದೆ.
2002ರಲ್ಲಿ ಭಾರತದ 11ನೇ ರಾಷ್ಟ್ರಪತಿಯಾಗಿಯೂ ಸೇವೆ ಸಲ್ಲಿಸಿದರು. ಕಲಾಂ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸಲಾಗಿದೆ. ಭಾರತ ಸರ್ಕಾರದ ವೈಜ್ಞಾನಿಕ ಸಲಹೆಗಾರರಾಗಿ ಅವರು ಮಾಡಿದ ಕೆಲಸಕ್ಕಾಗಿ ಅವರಿಗೆ ಪದ್ಮಭೂಷಣ ಮತ್ತು ಪದ್ಮ ವಿಭೂಷಣ ಪ್ರಶಸ್ತಿಗಳೂ ಸಂದಿವೆ. ಕಲಾಂ ಅವರು 2015ರ ಜುಲೈ 27ರಂದು ಐಐಎಂ-ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದಾಗ ಕುಸಿದು ಬಿದ್ದು ಹೃದಯ ಸ್ತಂಭನದಿಂದ ನಿಧನರಾದರು.
ವಿದ್ಯಾರ್ಥಿಗಳ ದಿನ ಆಚರಿಸುವುದು ಏಕೆ ಮುಖ್ಯ?
ವಿಶ್ವ ವಿದ್ಯಾರ್ಥಿಗಳ ದಿನವನ್ನು ಹಲವಾರು ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಇದು ವಿದ್ಯಾರ್ಥಿಗಳು ಮತ್ತು ಅವರ ಸಾಧನೆಗಳನ್ನು ಗೌರವಿಸುವ ದಿನವಾಗಿದೆ. ಮುಖ್ಯವಾಗಿ ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ದಿನ. ಜಗತ್ತು ಎಷ್ಟೇ ಅಭಿವೃದ್ಧಿ ಹೊಂದಿದರೂ ಶೈಕ್ಷಣಿಕ ಸವಾಲುಗಳ ಬಗ್ಗೆ ಈ ದಿನ ಜಾಗೃತಿ ಮೂಡಿಸುತ್ತದೆ. ಶೈಕ್ಷಣಿಕ ಪ್ರಯಾಣದಲ್ಲಿ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಧ್ವನಿಯೆತ್ತಲು ಮತ್ತು ಶಿಕ್ಷಣ ವ್ಯವಸ್ಥೆಯೊಳಗಿನ ಅಂತರವನ್ನು ಪರಿಹರಿಸಲು ಈ ದಿನ ವೇದಿಕೆಯಾಗಿದೆ.