Ather EV: ಕರ್ನಾಟಕದ ಓಲಾ ಘಟನೆ ಮರೆಯುವ ಮುನ್ನವೇ ಚೆನ್ನೈನಲ್ಲಿ ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ather Ev: ಕರ್ನಾಟಕದ ಓಲಾ ಘಟನೆ ಮರೆಯುವ ಮುನ್ನವೇ ಚೆನ್ನೈನಲ್ಲಿ ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

Ather EV: ಕರ್ನಾಟಕದ ಓಲಾ ಘಟನೆ ಮರೆಯುವ ಮುನ್ನವೇ ಚೆನ್ನೈನಲ್ಲಿ ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

ಕರ್ನಾಟಕದಲ್ಲಿ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಕುರಿತು ಸಾಕಷ್ಟು ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಗ್ರಾಹಕರಂತೂ ಶೋರೂಂಗೆ ಬೆಂಕಿ ಹಚ್ಚಿದ್ದರು. ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಪ್ರತಿಸ್ಪರ್ಧಿ ಅಥೆರ್‌ ಸ್ಕೂಟರ್‌ಗೂ ಗ್ರಾಹಕರೊಬ್ಬರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ather EV: ಚೆನ್ನೈನಲ್ಲಿ ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ
Ather EV: ಚೆನ್ನೈನಲ್ಲಿ ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ ಗ್ರಾಹಕ

ಬೆಂಗಳೂರು: ಭಾರತದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಜನಪ್ರಿಯತೆ ಪಡೆಯುತ್ತಿವೆ. ಸಾಕಷ್ಟು ಜನರು ಪೆಟ್ರೋಲ್‌ ಸ್ಕೂಟರ್‌ಗಳ ಬದಲು ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ನೀಡುವ ತೊಂದರೆಗಳಿಂದ ಪರಿತಪಿಸಿದ ಕೆಲವು ಗ್ರಾಹಕರ ಆಕ್ರೋಶಕ್ಕೂ ಇ-ಸ್ಕೂಟರ್‌ ಕಂಪನಿಗಳು ಪಾತ್ರವಾಗುತ್ತಿವೆ. ವಿಶೇಷವಾಗಿ ಸ್ಕೂಟರ್‌ ಸರ್ವೀಸ್‌ಗೆ ಸಂಬಂಧಪಟ್ಟ ತೊಂದರೆಗಳಿಂದ ಸಾಕಷ್ಟು ಗ್ರಾಹಕರು ಪರಿತಪಿಸಿದ್ದಾರೆ. ಓಲಾ ಸ್ಕೂಟರ್‌ ಇಂತಹ ಆಕ್ರೋಶಗಳನ್ನು ಹಲವು ಬಾರಿ ಎದುರಿಸಿದೆ. ಕರ್ನಾಟಕದಲ್ಲಿ ಗ್ರಾಹಕರೊಬ್ಬರು ಎಲೆಕ್ಟ್ರಿಕ್‌ ಸ್ಕೂಟರ್‌ ಸರ್ವೀಸ್‌ ಸೆಂಟರ್‌ಗೆ ಬೆಂಕಿ ಹಚ್ಚಿದ್ದರು. ಇನ್ನೊಬ್ಬರು ಇ ಸ್ಕೂಟರ್‌ ಓನರ್‌ ತನ್ನ ಸ್ಕೂಟರ್‌ಗೆ "ಇದು ಡಬ್ಬಾ ಗಾಡಿ, ಯಾರೂ ಖರೀದಿಸಬೇಡಿ" ಎಂದು ಬೋರ್ಡ್‌ ಹಾಕಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅಥೆರ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಕುರಿತು ಗ್ರಾಹಕರಿಂದ ಇಂತಹ ಬಹಿರಂಗ ದೂರು, ಆಕ್ರೋಶ ಅಷ್ಟಾಗಿ ಕಾಣಿಸಿರಲಿಲ್ಲ. ಇದು ತುಂಬಾ ಒಳ್ಳೆಯ ಸ್ಕೂಟರ್‌ ಎಂದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ, ಇದೀಗ ಚೆನ್ನೈನ ವೈರಲ್‌ ವಿಡಿಯೋವೊಂದರಲ್ಲಿ ಗ್ರಾಹಕರೊಬ್ಬರು ತನ್ನ ಅಥೆರ್‌ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾರೆ. ಚೆನ್ನೈನ ಅಂಬತ್ತೂರಿನ ಪಾರ್ಥಸಾರಥಿ ಎಂಬವರು ಅಥೆರ್‌ ಶೋರೂಂ ಎದುರು ತನ್ನ ಸ್ಕೂಟರ್‌ಗೆ ಬೆಂಕಿ ಹಚ್ಚಿದ್ದಾರೆ. ತನ್ನ ಅಥೆರ್‌ ಸ್ಕೂಟರ್‌ನಲ್ಲಿ ಪದೇಪದೇ ಕಾಣಿಸಿಕೊಳ್ಳುವ ತೊಂದರೆಗಳು ಮತ್ತು ರಿಪೇರಿ ಖರ್ಚು ಹೆಚ್ಚುತ್ತಿರುವುದರಿಂದ ಬೇಸತ್ತು ಈ ಕೆಲಸ ಮಾಡಿದ್ದಾರೆ. ಅಥೆರ್‌ ಸ್ಕೂಟರ್‌ಗೆ ಇವರು ಬೆಂಕಿ ಹಚ್ಚುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಶೋರೂಂನವರು ತನ್ನ ಸ್ಕೂಟರ್‌ನ ಸಮಸ್ಯೆ ಸರಿಪಡಿಸದೆ ಇರುವುದು ಮತ್ತು ಕೆಟ್ಟ ಸೇವೆಯಿಂದ ಬೇಸರಗೊಂಡು ಪಾರ್ಥಸಾರಥಿ ಈ ಕೃತ್ಯ ಎಸಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಶೋರೂಂ ಸಿಬ್ಬಂದಿಗಳು ಈ ಗ್ರಾಹಕರನ್ನು ಕೂಲ್‌ ಮಾಡಲು ಪ್ರಯತ್ನಿಸಿದ್ದಾರೆ. ತಕ್ಷಣ ಇವರಿಗೆ ಆದ ತೊಂದರೆಯನ್ನು ಸರಿಪಡಿಸುವುದಾಗಿ ಹೇಳಿದ್ದಾರೆ.

ಮೂರು ವರ್ಷಗಳ ಹಿಂದೆ 1.8 ಲಕ್ಷ ರೂಪಾಯಿ ನೀಡಿ ಖರೀದಿಸಿದ ಈ ಸ್ಕೂಟರ್‌ನಲ್ಲಿ ಒಂದೇ ತಿಂಗಳಲ್ಲಿ ಸಮಸ್ಯೆಗಳು ಆರಂಭವಾಗಿವೆ ಎಂದು ಪಾರ್ಥಸಾರಥಿ ವಿವರಿಸಿದ್ದಾರೆ. "ಪ್ರತಿ 5,000 ಕಿಲೋಮೀಟರ್‌ಗಳಿಗೆ ಬೇರಿಂಗ್‌ಗಳನ್ನು ಬದಲಾಯಿಸಲು ಹೇಳುತ್ತಿದ್ದರು. ಬಿಡಿಭಾಗ ಲಭ್ಯವಿಲ್ಲ ಎಂದು ಸಮಸ್ಯೆ ಸರಿಪಡಿಸದೆ ಮುಂದೂಡುತ್ತಲೇ ಇದ್ದರು. ಇತ್ತೀಚೆಗೆ ಬ್ರೇಕ್‌ಪ್ಯಾಡ್‌, ವೀಲ್‌ ಬೇರಿಂಗ್‌, ಡ್ರೈವ್‌ ಬೆಲ್ಟ್‌ ಬದಲಾಯಿಸಲು ತಿಳಿಸಿದ್ದಾರೆ. ಈ ಸ್ಕೂಟರ್‌ಗೆ ಮಾಡಿರುವ ಒಟ್ಟು ವೆಚ್ಚವು ಸ್ಕೂಟರ್‌ನ ಮೂಲ ಬೆಲೆಯನ್ನು ಮೀರಿದೆ. ಪ್ರತಿತಿಂಗಳು 5 ಸಾವಿರ ರೂಪಾಯಿ ಸರ್ವೀಸಿಂಗ್‌ ಮತ್ತು ಬಿಡಿಭಾಗಗಳಿಗೆ ಖರ್ಚು ಮಾಡಿದ್ದೇನೆ" ಎಂದು ಪಾರ್ಥಸಾರಥಿ ಹೇಳಿದ್ದಾರೆ.

ಆದರೆ, ಅಥೆರ್‌ ಸ್ಕೂಟರ್‌ ಕಂಪನಿಯು ಇದು ಸುಳ್ಳು ಎಂದಿದೆ. ಮೂರು ವರ್ಷಗಳ ಅವಧಿಯಲ್ಲಿ ಗ್ರಾಹಕರ ವೆಚ್ಚ ಸುಮಾರು 10 ಸಾವಿರ ರೂಪಾಯಿ ಆಗಿರಬಹುದು ಎಂದು ಹೇಳಿದೆ. ಈ ವಿಚಾರವನ್ನು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಸ್ವತಂತ್ರವಾಗಿ ದೃಡೀಕರಣ ಮಾಡಿಲ್ಲ.

ಬಜಾಜ್ ಆಟೋ, ಟಿವಿಎಸ್ ಮೋಟಾರ್ ಕಂಪನಿ ಮತ್ತು ಅಥೆರ್ ಎನರ್ಜಿ ಸೇರಿದಂತೆ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರ "ಮಾರಾಟ ನಂತರದ ಸೇವೆಗಳ ಕುರಿತು" ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ 12 ಸಾವಿರಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು ವರದಿಯಾಗಿದೆ. ಈ ಹಿಂದೆ ಕೆಲವು ಅಥರ್ ಗ್ರಾಹಕರು ಸ್ಕೂಟರ್‌ ಡೆಲಿವರಿ ವಿಳಂಬ, ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಹಂಚಿಕೊಂಡಿದ್ದರು. ಕಂಪನಿಯು ಇಂತಹ ಸಮಸ್ಯೆಗಳಿಗೆ ಸ್ಪಂದಿಸಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.