Harley Davidson X440: ಅತ್ಯಂತ ಕಡಿಮೆ ದರದ ಹಾರ್ಲೆ ಡೇವಿಡ್‌ಸನ್ ಇಂದು ಲಾಂಚ್, ಹೀರೋ ಮೊಟೊಕಾರ್ಪ್ ಜತೆ ಸೇರಿ ಅಭಿವೃದ್ಧಿಪಡಿಸಿದ ಬೈಕ್
Harley-Davidson X440 India launch: ಹಾರ್ಲೆ ಡೇವಿಡ್‌ಸನ್ ಬೈಕ್‌ಗಳೆಂದರೆ ದುಬಾರಿ ಬೈಕ್‌ಗಳು. ಹಾರ್ಲೆ ಡೇವಿಡ್‌ಸನ್ ಬೈಕ್‌ಗಳಲ್ಲಿಯೇ ಅತ್ಯಂತ ಕಡಿಮೆ ದರದ ಬೈಕೊಂದು ಭಾರತದ ರಸ್ತೆಗೆ ಇಂದು ಆಗಮಿಸಲಿದೆ. ರಾಯಲ್ ಎನ್‌ಫೀಲ್ಡ್ ಜತೆ ಪೈಪೋಟಿ ನಡೆಸುವಂತಹ ಈ ಬೈಕ್‌ನ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಈ ವರ್ಷದ ಬಹುನಿರೀಕ್ಷಿತ ಬೈಕ್‌ಗಳಲ್ಲಿ ಒಂದಾದ ಹಾರ್ಲೆ ಡೇವಿಡ್‌ಸನ್ ಎಕ್ಸ್ 440 ಬೈಕ್ ಇಂದು ಅಂದರೆ ಜೂನ್ 3, 2023ರಂದು ಭಾರತದ ರಸ್ತೆಗೆ ಆಗಮಿಸಲಿದೆ. ಈ ಬಹುನಿರೀಕ್ಷಿತ ಮತ್ತು ಹಾರ್ಲೆ ಡೇವಿಡ್‌ಸನ್ ಬೈಕ್‌ನಲ್ಲಿಯೇ ಕಡಿಮೆದರದ್ದು ಎಂದು ಹೇಳಲಾದ Harley-Davidson X440 ಬೈಕನ್ನು ಹೀರೋ ಮೋಟೊಕಾರ್ಪ್ ಜತೆಗೂಡಿ ಕಂಪನಿಯು ಅಭಿವೃದ್ಧಿಪಡಿಸಿದೆ. ಈ ಮೂಲಕ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ನ ಮಧ್ಯಮ ತೂಕದ ಬೈಕ್‌ಗಳಿಗೆ ಪೈಪೋಟಿಯಾಗಿ ಅಮೆರಿಕದ ಬೈಕ್ ತಯಾರಿಕಾ ಕಂಪನಿಯು ನೂತನ ಬೈಕನ್ನು ಪರಿಚಯಿಸಲಿದೆ. ಹಾರ್ಲಿ ಡೇವಿಡ್‌ಸನ್ ಕಂಪನಿಯ ಸ್ಟ್ರೀಟ್ 500 ಮತ್ತು ಸ್ಟ್ರೀಟ್ 750 ಬೈಕ್‌ಗಳಿಗೆ ಹೋಲಿಸಿದರೆ ನೂತನ ಬೈಕ್ ಕಡಿಮೆ ವೆಚ್ಚದಾಯಕವಾಗಿರಲಿದೆ.
ಈಗಾಗಲೇ ಕಂಪನಿಯು ನೂತನ ಬೈಕ್ ಹೇಗಿರಲಿದೆ ಎಂಬ ವಿವರಗಳನ್ನು ಹಂಚಿಕೊಂಡಿದೆ. ವೃತ್ತಾಕಾರದ ಹೆಡ್‌ಲ್ಯಾಂಪ್, ಸಿಂಗ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಕಣ್ಣಿನ ಹನಿಯ ಗಾತ್ರದ ಇಂಧನ ಟ್ಯಾಂಕ್, ವೃತ್ತಾಕಾರದ ಇಂಡಿಗೇಟರ್, ಸ್ಲೈಡ್ ಸ್ಲಂಗ್ ಎಗ್ಸಾಸ್ಟ್, ರೆಟ್ರೊ ವಿನ್ಯಾಸ ಇತ್ಯಾದಿ ನೂತನ ಬೈಕ್‌ನ ಪ್ರಮುಖ ಆಕರ್ಷಣೆಗಳಾಗಿವೆ. ಮೆಷಿನ್ಡ್ ಅಲಾಯ್ ವೀಲ್, ಎಲ್‌ಸಿಡಿ ಪ್ಯಾನೆಲ್, ಎಲ್‌ಇಡಿ ಲೈಟ್ ಇತ್ಯಾದಿಗಳಿಂದ ಇದು ಆಧುನಿಕ ಲುಕ್ ಹೊಂದಿದೆ.
ನೂತನ ಹಾರ್ಲೆ ಡೇವಿಡ್‌ಸನ್ ಎಕ್ಸ್ 440 ಬೈಕ್‌ನ ಎಂಜಿನ್ ಕುರಿತು ನಿಮಗೆ ಕುತೂಹಲ ಇರಬಹುದು. ಇದರಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಿದ 440 ಸಿಸಿಯ ಸಿಂಗಲ್ ಸಿಲಿಂಡರ್, ಆಯಿಲ್ ಮತ್ತು ಏರ್ ಕೂಲ್ಡ್ ಎಂಜಿನ್ ಇರಲಿದೆ. ಇದು 8000 ಆವರ್ತನದವರೆಗೂ ಕಾರ್ಯನಿರ್ವಹಿಸಲಿದೆ. ಇದರ ಪವರ್ ಎಷ್ಟಿರಲಿದೆ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಒಂದು ಅಂದಾಜಿನ ಪ್ರಕಾರ 30 ಬಿಎಚ್‌ಪಿ ಮತ್ತು 35 ಎನ್‌ಎಂ ಪೀಕ್ ಟಾರ್ಕ್ ಇರಲಿದೆ. ರಾಯಲ್ ಎನ್‌ಫೀಲ್ಡ್ 350ಸಿಸಿ ಬೈಕ್‌ಗಳಿಗಿಂತ ಹೆಚ್ಚು ದೊಡ್ಡ ಗಾತ್ರದ ಎಂಜಿನ್ ಇರುವುದು ನೂತನ ಬೈಕ್‌ಗೆ ನೆರವಾಗಲಿದೆ. ಇದರಲ್ಲಿ ಯುಎಸ್‌ಡಿ ಫ್ರಂಟ್ ಫೋರ್ಕ್ಸ್, ಹಿಂಬದಿಗೆ ಟ್ವಿನ್ ಶಾಕ್ಸ್ , ಡಿಸ್ಕ್ ಬರೇಕ್, ಡ್ಯೂಯೆಲ್ ಚಾನೆಲ್ ಎಬಿಎಸ್ ಇತ್ಯಾದಿಗಳು ಇರಲಿವೆ.
ನೂತನ ಹಾರ್ಲೆ ಡೇವಿಡ್ ಸನ್ ಬೈಕ್‌ನ ದರ ಎಷ್ಟಿರಲಿದೆ ಎಂದು ಇಂದು ತಿಳಿಯಲಿದೆ. ಒಂದು ಮೂಲದ ಪ್ರಕಾರ ಆರಂಭಿಕ ಎಕ್ಸ್‌ಶೋರೂಂ ದರ 2.5 ಲಕ್ಷ ರೂ.ಗಿಂತ ಮೇಲೆ ಇರಲಿದೆ. ಇದು ವಿವಿಧ ಆವೃತ್ತಿಗಳಲ್ಲಿ ಮತ್ತು ಟ್ರಿಮ್‌ಗಳಲ್ಲಿ ಲಭ್ಯವಿರಲಿದ್ದು, ಅದಕ್ಕೆ ತಕ್ಕಂತೆ ದರವೂ ಇರಲಿದೆ. ಭಾರತದ ರಸ್ತೆಯಲ್ಲಿ ಟ್ರಯಂಪ್ ಸ್ಪೀಡ್ 400, ಹೋಂಡಾ ಹಾನೆಸ್ 350, ಬೆನೆಲಿ ಇಂಪೆರಿಯಲ್ 400ನಂತಹ ಬೈಕ್‌ಗಳಿಗೆ ಪೈಪೋಟಿ ನೀಡುವ ನಿರೀಕ್ಷೆಯಿದೆ.