Kannada News  /  Nation And-world  /  Automobile News Mclaren Artura Supercar Launched In India, Has A Top Speed Of 330 Kmph Super Car News In Kannada Pcp
McLaren Artura: ಭಾರತದ ರಸ್ತೆಗಿಳಿದ ಮೆಕ್‌ಲಾರೆನ್‌ ಅರ್ಟುರಾ ಸೂಪರ್‌ ಕಾರು
McLaren Artura: ಭಾರತದ ರಸ್ತೆಗಿಳಿದ ಮೆಕ್‌ಲಾರೆನ್‌ ಅರ್ಟುರಾ ಸೂಪರ್‌ ಕಾರು

McLaren Artura: ಭಾರತದ ರಸ್ತೆಗಿಳಿದ ಮೆಕ್‌ಲಾರೆನ್‌ ಅರ್ಟುರಾ ಸೂಪರ್‌ ಕಾರು, ಗಂಟೆಗೆ 330 ಕಿಮೀ ವೇಗ, ದರ 5.1 ಕೋಟಿ ರೂ | ಇಲ್ಲಿದೆ ವಿವರ

26 May 2023, 16:47 ISTPraveen Chandra B
26 May 2023, 16:47 IST

McLaren Artura supercar launched: ವೇಗದ ಆವೇಗಕ್ಕೆ ಸೆಡ್ಡು ಹೊಡೆದು ಸಾಗಲು ಬಯಸುವವರಿಗೆ ಮೆಕ್‌ಲಾರೆನ್‌ ಕಂಪನಿಯು ಅರ್ಟುರಾ ಹೆಸರಿನ ಸೂಪರ್‌ ಕಾರೊಂದನ್ನು ಪರಿಚಯಿಸಿದೆ. ಭಾರತದಲ್ಲಿ ಈ ಕಾರಿನ ಎಕ್ಸ್‌ಶೋರೂಂ ದರ 5.1 ಕೋಟಿ ರೂಪಾಯಿ.

ಭಾರತದ ರಸ್ತೆಗೆ ಅರ್ಟುರಾ ಹೆಸರಿನ ಸೂಪರ್‌ಕಾರೊಂದನ್ನು ಮೆಕ್‌ಲಾರೆನ್‌ ಆಟೋಮೋಟಿವ್‌ ಕಂಪನಿಯು ಪರಿಚಯಿಸಿದೆ. ಇದರ ಎಕ್ಸ್‌ಶೋರೂಂ ದರ 5.1 ಕೋಟಿ ರೂಪಾಯಿ. ರಸ್ತೆ ತೆರಿಗೆ ಇತ್ಯಾದಿಗಳೆಲ್ಲ ಸೇರಿ ಆನ್‌ರೋಡ್‌ ದರ ಆರು ಕೋಟಿ ರೂಪಾಯಿ ದಾಟಿದರೂ ಅಚ್ಚರಿಯಿಲ್ಲ. ಆರ್ಟ್‌ ಮತ್ತು ಫ್ಯೂಚರ್‌ (ಕಲೆ ಮತ್ತು ಭವಿಷ್ಯ) ಎಂಬೆರಡು ಪದಗಳ ಯುಗಳಗೀತೆಯಾಗಿ ಅರ್ಟುರಾ ಎಂಬ ಹೆಸರನ್ನು ಈ ಸೂಪರ್‌ಕಾರಿಗೆ ಇಡಲಾಗಿದೆ ಎಂದು ಮೆಕ್‌ಲಾರೆನ್‌ ತಿಳಿಸಿದೆ.

ಮೆಕ್‌ಲಾರೆನ್‌ ಕಂಪನಿಯು ಅರ್ಟುರಾ ಕಾರನ್ನು ಭಾರತಕ್ಕೆ ಪರಿಚಯಿಸುವ ಕುರಿತು ನವೆಂಬರ್‌ 2022ರಲ್ಲಿಯೇ ಘೋಷಿಸಿತ್ತು. ಇದರ ಮೊದಲ ಡೀಲರ್‌ಷಿಪ್‌ ಮಳಿಗೆ ಮುಂಬೈನಲ್ಲಿ ತೆರೆಯಲಾಗಿತ್ತು. ಈಗಾಗಲೇ ಭಾರತದಲ್ಲಿ ಸೂಪರ್‌ಕಾರ್‌ನ ಈ ಸೆಗ್ಮೆಂಟ್‌ನಲ್ಲಿ ಶೇಕಡ 25ರಷ್ಟು ಪಾಲು ಪಡೆದಿರುವುದಾಗಿ ಕಂಪನಿ ಹೇಳಿದೆ. ದೇಶದಲ್ಲಿ ಈಗಾಗಲೇ 20ಕ್ಕೂ ಹೆಚ್ಚು ಕಾರುಗಳನ್ನು ಒಂದು ವರ್ಷದಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿದದೆ.

ನೂತನ ಮೆಕ್‌ಲಾರೆನ್‌ ಅರ್ಟುರಾ ಸೂಪರ್‌ಕಾರಿನಲ್ಲಿ ನೂತನ 3.0 ಲೀಟರ್‌ನ ವಿ6 ಪೆಟ್ರೋಲ್‌ ಎಂಜಿನ್‌ ಇದೆ. ಇದು ಟ್ವಿನ್‌ ಅರ್ಬೊಚಾರ್ಜ್ಡ್‌ ಎಂಜಿನ್‌ ಆಗಿದ್ದು, ಹೈಬ್ರಿಡ್‌ ತಂತ್ರಜ್ಞಾನವೂ ಇದರಲ್ಲಿದೆ. ಈ ಎಂಜಿನ್‌ 671 ಬಿಎಚ್‌ಪಿ ಮತ್ತು 720 ಎನ್‌ಎಂ ಟಾರ್ಕ್‌ ಬಿಡುಗಡೆ ಮಾಡುತ್ತದೆ. ಎಂಟು ಸ್ಪೀಟ್‌ನ ಆಟೋಮ್ಯಾಟಿಕ್‌ ಗಿಯರ್‌ ಬಾಕ್ಸ್‌ ಇದೆ. ಈ ಕಾರಿನಲ್ಲಿ ಗಂಟೆಗೆ 330 ಕಿ.ಮೀ.ಗಿಂತ ಹೆಚ್ಚು ವೇಗದಲ್ಲಿ ಹೋಗದಂತೆ ಮಿತಿ ಹಾಕಲಾಗಿದೆ. ಕೇವಲ 3 ಸೆಕೆಂಡಿನಲ್ಲಿ 0-100 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. 8.3 ಸೆಕೆಂಡಿನಲ್ಲಿ 0-200 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ.

ಈ ಕಾರು ನಾಲ್ಕು ಡ್ರೈವಿಂಗ್‌ ಮೋಡ್‌ಗಳಲ್ಲಿ ಲಭ್ಯ. ಇ-ಮೋಡ್‌, ಕಂಫರ್ಟ್‌, ಸ್ಪೋರ್ಟ್‌ ಮತ್ತು ಟ್ರ್ಯಾಕ್‌ ಮೋಡ್‌ಗಳಲ್ಲಿ ಚಲಾಯಿಸಬಹುದು. ಇ-ಮೋಡ್‌ ಹೆಸರಿನಂತೆ ಎಲೆಕ್ಟ್ರಿಕ್‌ ಮೋಡ್‌. ಇದು ಸದ್ದಿಲ್ಲದೆ ಸಾಗುತ್ತದೆ. ಕೇವಲ ವಿದ್ಯುತ್‌ ಪವರ್‌ನಿಂದ ಕಾರ್ಯನಿರ್ವಹಿಸುತ್ತದೆ. ಕಂಫರ್ಟ್‌ ಮೋಡ್‌ನಲ್ಲಿ ವಿ6 ಪೆಟ್ರೋಲ್‌ ಎಂಜಿನ್‌ ಮತ್ತು ಎಲೆಕ್ಟ್ರಿಕ್‌ ಮೋಟಾರ್‌ ಜತೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಸಾಕಷ್ಟು ಇಂಧನ ಉಳಿತಾಯವಾಗುತ್ತದೆ. ಸ್ಪೋರ್ಟ್‌ ಮೋಡ್‌ನಲ್ಲಿ ಎಲೆಕ್ಟ್ರಿಕ್‌ ಮೋಟಾರ್‌ ಟಾರ್ಕ್‌ಗೆ ಶಕ್ತಿ ನೀಡುತ್ತದೆ. ಅತ್ಯುತ್ತಮ ಕಾರ್ಯಕ್ಷಮತೆ ದೊರಕುತ್ತದೆ. ಅಂತಿಮವಾಗಿ, ಹೆಸರೇ ಹೇಳುವಂತೆ ಟ್ರ್ಯಾಕ್‌ ಮೋಡ್‌ ಟ್ರಾಕ್‌ನಲ್ಲಿ ವ್ರೂಂ ವ್ರೋಂ ಎಂದು ವೇಗದ ಆವೇಗಕ್ಕೆ ಸೆಡ್ಡು ಹೊಡೆದು ಸಾಗಲು ಇರುವ ಮೋಡ್‌ ಆಗಿದೆ.

ಆನ್‌ ನ್ಯೂ ಮೆಕ್‌ಲಾರೆನ್‌ ಕಾರ್ಬನ್‌ ಲೈಟ್‌ವೇಟ್‌ ಆರ್ಕಿಟೆಕ್ಷರ್‌ (ಎಂಸಿಎಲ್‌ಎ) ಬಳಸಿ ನಿರ್ಮಿಸಿದ ಮೊದಲ ಕಾರು ಅರ್ಟುರಾ. ಭವಿಷ್ಯದ ಹೈಫರ್ಪಾಮೆನ್ಸ್‌ ಹೈಬ್ರಿಡ್‌ ಎಂಜಿನ್‌ಗಳಿಗಾಗಿ ಈ ತಂತ್ರಜ್ಞಾನವನ್ನು ಕಂಪನಿ ಅಭಿವೃದ್ಧಿಪಡಿಸಿದೆ. ಈ ಕಾರಿನಲ್ಲಿರುವ 7.4 ಕಿಲೋವ್ಯಾಟ್‌ನ ಎಲೆಕ್ಟ್ರಿಕ್‌ ಮೋಟಾರ್‌ ಸುಮಾರು 31 ಕಿ.ಮೀ. ಸಾಗಲು ಬೇಕಾದಷ್ಟು ಪವರ್‌ ಹೊಂದಿರುತ್ತದೆ.