Honda Activa EV: ಮಾರುಕಟ್ಟೆಯಲ್ಲಿ ಅಲ್ಲಾಡಿಸಲು ಬರುತ್ತಿದೆ ಹೋಂಡಾ ಆಕ್ಟಿವಾ ಇವಿ... ಒಂದು ಫುಲ್ ಚಾರ್ಜ್‌ನಲ್ಲಿ 100 ಕಿಮೀ ಮೈಲೇಜ್
Honda Activa EV: ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟಿ ಆಗಮಿಸಲು ಎಲ್ಲರೂ ಕಾಯುತ್ತಿದ್ದಾರೆ. ಈ ಇವಿಯು ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ದೊಡ್ಡಮಟ್ಟದಲ್ಲಿ ಬದಲಾವಣೆ ತರುವ ಸೂಚನೆ ಇದೆ.
Honda Activa EV: ಇದು ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಾಲ. ಪೆಟ್ರೋಲ್ ಸ್ಕೂಟರ್ ಖರೀದಿಸಲು ಹೋಗುವವರಿಗೆ "ಇವಿ ತಗೋ, ಪೆಟ್ರೋಲ್ ಹಾಕಬೇಕಿಲ್ಲ" ಎಂದು ಸಾಕಷ್ಟು ಜನರು ಸಲಹೆ ನೀಡುತ್ತಾರೆ. ಇದೇ ಸಮಯದಲ್ಲಿ ಕೆಲವು ಇವಿ ಸ್ಕೂಟರ್‌ಗಳು ನೀಡುವ ತೊಂದರೆ, ಸರ್ವೀಸ್ ಇತ್ಯಾದಿಗಳನ್ನು ನೆನೆದು ಕೆಲವರು ಇವಿ ಸಹವಾಸ ಬೇಡ ಎಂದು ಕೆಲವರು ಅಂದುಕೊಳ್ಳುತ್ತಾರೆ. ಇದೇ ಸಮಯದಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ನಂಬಿಕೆ ಗಳಿಸಿರುವ ಹೋಂಡಾದಂತಹ ಕಂಪನಿ ಹೊರತರುವ ಸ್ಕೂಟರ್‌ಗಳ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ಇದೇ ಕಾರಣಕ್ಕೆ ಹೋಂಡಾ ಆಕ್ಟಿವಾ ಇವಿ ಸ್ಕೂಟರ್‌ಗೆ ಸಾಕಷ್ಟು ಜನರು ಕಾಯುತ್ತಿದ್ದಾರೆ. ಇದು ದೇಶದ ಇವಿ ಸ್ಕೂಟರ್ ಮಾರುಕಟ್ಟೆಯನ್ನು ಅಲ್ಲಾಡಿಸಿಬಿಡಲಿದೆ ಎಂದು ಹೇಳಲಾಗುತ್ತಿದೆ.
ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆಯು ಹೆಚ್ಚಾಗುತ್ತಿದೆ. ರಸ್ತೆಗಳಲ್ಲಿ ಸದ್ದಿಲ್ಲದೆ ಹಲವು ಇವಿ ಸ್ಕೂಟರ್‌ಗಳು ಸಾಗುತ್ತಿವೆ. ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಿವೆ. ಈ ಇವಿ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಸಾಮಾನ್ಯ ಸ್ಕೂಟರ್‌ಗಳಿಗೂ ಕಠಿಣ ಪೈಪೋಟಿ ನೀಡುತ್ತಿದೆ. ಓಲಾ ಮತ್ತು ಏಥರ್‌ನಂತಹ ದೊಡ್ಡ ಕಂಪನಿಗಳು ಮಾರುಕಟ್ಟೆಯಲ್ಲಿ ಹೆಚ್ಚು ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿವೆ. ಆದರೆ ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾದರೆ ಇವುಗಳ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೋಂಡಾ, ಟಿವಿಎಸ್ ಮತ್ತು ಸುಜುಕಿ ಕಂಪನಿಗಳು ಕೆಲವೇ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಸಿದ್ಧವಾಗುತ್ತಿವೆ.
ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರ ಸಮಯದಲ್ಲಿ ಹಲವಾರು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತೀಯ ರಸ್ತೆಗಳಿಗೆ ಬರುವ ಸಾಧ್ಯತೆಯಿದೆ. 3 ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರಮುಖವಾಗಿ ರಸ್ತೆಗಿಳಿಯುವ ಸೂಚನೆ ದೊರಕಲಿದೆ.
ಹೋಂಡಾ ಆಕ್ಟಿವಾ ಇವಿ
ಹೋಂಡಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನವು ಮಾರ್ಚ್ 2025ರಲ್ಲಿ ಆಗಮಿಸಲಿದೆ ಎಂದು ಹೇಳಲಾಗಿದೆ. ಇದು ಆಕ್ಟಿವಾ ಸ್ಕೂಟಿಯ ಎಲೆಕ್ಟ್ರಿಕ್ ಆವೃತ್ತಿ ಎಂದು ಹೇಳಲಾಗುತ್ತದೆ. ಇದು ಡಿಟ್ಯಾಚೇಬಲ್ ಮತ್ತು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನೊಂದಿಗೆ ಆಗಮಿಸಲಿದೆ. ಜನವರಿಯಲ್ಲಿ ದೆಹಲಿಯಲ್ಲಿ ನಡೆಯುವ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಇದನ್ನು ಪರಿಚಯಿಸುವ ಸೂಚನೆ ಇದೆ. ಹೋಂಡಾ ಆಕ್ಟಿವಾ ಇವಿ ಎಕ್ಸ್ ಶೋ ರೂಂ ದರವು 1 ಲಕ್ಷ ರೂಪಾಯಿಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಒಂದು ಬಾರಿ ಫುಲ್ ಚಾರ್ಜ್ ಮಾಡಿದರೆ 100 ಕಿ.ಮೀ. ರೇಂಜ್ ನೀಡುವ ಸೂಚನೆ ಇದೆ. ಸಂಪೂರ್ಣ ಡಿಜಿಟಲ್ ಟಚ್ ಸ್ಕ್ರೀನ್ ಇನ್ಸ್ಟ್ರುಮೆಂಟ್ ಕನ್ಸೋಲ್, ಕೀಲೆಸ್ ಸ್ಟಾರ್ಟ್/ಸ್ಟಾಪ್ ಮತ್ತು ಇತರ ಹಲವು ಫೀಚರ್‌ಗಳು ಇರುವ ಸಾಧ್ಯತೆಯಿದೆ.
ಸುಜುಕಿ ಬರ್ಗ್‌ಮನ್ ಇವಿ
ಸುಜುಕಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬರ್ಗ್‌ಮ್ಯಾನ್ ಇವಿ ದೇಶಕ್ಕೆ ಆಗಮಿಸಲಿದೆ. ಕಂಪನಿಯು ಈಗಾಗಲೇ ಈ ಸ್ಕೂಟರ್‌ನ ಟೆಸ್ಟ್ ರೈಡ್ ಮಾಡುತ್ತಿದೆ. ಜನವರಿಯಲ್ಲಿ ನಡೆಯಲಿರುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ರಲ್ಲಿ ಇದನ್ನು ಅನಾವರಣಗೊಳಿಸುವ ಸಾಧ್ಯತೆಯಿದೆ. ಸುಜುಕಿ ಕಂಪನಿಯು ವರ್ಷಕ್ಕೆ ಸುಮಾರು 25 ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಯೋಜನೆ ಹಾಕಿಕೊಂಡಿದೆ.
ಟಿವಿಎಸ್ ಜುಪಿಟರ್ ಇವಿ
ಟಿವಿಎಸ್ ಕಂಪನಿಯು ಈಗಾಗಲೇ iCube ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರಾಟ ಮಾಡುತ್ತಿದೆ. ಹೊಸ ಜುಪಿಟರ್ ಎಲೆಕ್ಟ್ರಿಕ್ ಆವೃತ್ತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ಮುಂದಿನ 6 ತಿಂಗಳಲ್ಲಿ ಭಾರತದಲ್ಲಿ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಬಿಡುಗಡೆ ದಿನಾಂಕ ತಿಳಿಯಬೇಕಿದೆ. ಜುಪಿಟರ್ ಇವಿಯು ಮಾರುಕಟ್ಟೆಯಲ್ಲಿ ಆಕ್ಟಿವಾ ಇವಿಗೆ ಸ್ಪರ್ಧೆ ನೀಡುವ ಸೂಚನೆ ಇದೆ. ಇದರ ದರವೂ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರಲಿದೆ.