ಆಯ್ದ ಸಾಲಗಳ ಬಡ್ಡಿದರ ಇಳಿಸಿದೆ ಎಸ್‌ಬಿಐ, ಈ ಬ್ಯಾಂಕ್‌ನಲ್ಲಿ ಸಾಲ ಇದ್ರೆ ನಿಮ್ಮ ಇಎಂಐ ಹೊರೆಯೂ ಇಳಿದಿರಬಹುದು ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಯ್ದ ಸಾಲಗಳ ಬಡ್ಡಿದರ ಇಳಿಸಿದೆ ಎಸ್‌ಬಿಐ, ಈ ಬ್ಯಾಂಕ್‌ನಲ್ಲಿ ಸಾಲ ಇದ್ರೆ ನಿಮ್ಮ ಇಎಂಐ ಹೊರೆಯೂ ಇಳಿದಿರಬಹುದು ನೋಡಿ

ಆಯ್ದ ಸಾಲಗಳ ಬಡ್ಡಿದರ ಇಳಿಸಿದೆ ಎಸ್‌ಬಿಐ, ಈ ಬ್ಯಾಂಕ್‌ನಲ್ಲಿ ಸಾಲ ಇದ್ರೆ ನಿಮ್ಮ ಇಎಂಐ ಹೊರೆಯೂ ಇಳಿದಿರಬಹುದು ನೋಡಿ

ನೀವು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದೀರಾ, ನಿಮಗೊಂದು ಖುಷಿ ಸುದ್ದಿ ಇದೆ. ಎಸ್‌ಬಿಐ ತನ್ನ ಆಯ್ದ ಸಾಲಗಳ ಬಡ್ಡಿದರವನ್ನು ಇಳಿಕೆ ಮಾಡಿದೆ. ಇದು ಎಂಸಿಎಲ್ಆರ್‌ ಆಧಾರಿತ ಬಡ್ಡಿದರ ಕೆಲವು ಸಾಲಗಳಿಗೆ ಅನ್ವಯವಾಗುತ್ತಿದ್ದು, ಅವುಗಳು ಯಾವುವು ಎಂಬುದರ ವಿವರ ಈ ವರದಿಯಲ್ಲಿದೆ.

ಆಯ್ದ ಸಾಲಗಳ ಬಡ್ಡಿದರವನ್ನು ಎಸ್‌ಬಿಐ  ಇಳಿಸಿದೆ. (ಸಾಂಕೇತಿಕ ಚಿತ್ರ)
ಆಯ್ದ ಸಾಲಗಳ ಬಡ್ಡಿದರವನ್ನು ಎಸ್‌ಬಿಐ ಇಳಿಸಿದೆ. (ಸಾಂಕೇತಿಕ ಚಿತ್ರ) (HT News)

ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರಿಗೆ ವಿಶೇಷವಾಗಿ ಸಾಲಗಾರರಿಗೆ ಒಂದು ಖುಷಿ ಸುದ್ದಿ. ಎಸ್‌ಬಿಐ ತನ್ನ ಆಯ್ದ ಸಾಲಗಳ ಬಡ್ಡಿದರವನ್ನು 25 ಮೂಲಾಂಶಗಳಷ್ಟು ಇಳಿಸಿದೆ. ಅಂದರೆ ಅದು ತನ್ನ ನಿಧಿ ಆಧಾರಿತ ಸಾಲ ದರದ ಕನಿಷ್ಠ ವೆಚ್ಚ (ಎಂಸಿಎಲ್‌ಆರ್‌) ಅನ್ನು ಒಂದು ಅವಧಿಗೆ ಶೇಕಡ 0.25 ಅಥವಾ 25 ಮೂಲಾಂಶ ಕಡಿತಗೊಳಿಸಿರುವುದಾಗಿ ಪ್ರಕಟಿಸಿದೆ. ಹೊಸ ಬಡ್ಡಿದರ ನಿನ್ನೆ (ಅಕ್ಟೋಬರ್ 15)ಯಿಂದ ಚಾಲ್ತಿಗೆ ಬಂದಿದೆ. ಇದರ ಪರಿಣಾಮ ಎಂಸಿಎಲ್‌ಆರ್‌ಗೆ ಹೊಂದಿಕೊಂಡಿರುವ ಸಾಲ ಪಡೆದುಕೊಂಡ ಕೆಲವರಿಗೆ ಇಎಂಐ ಹೊರೆ ಕಡಿಮೆಯಾಗಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ, ಒಂದು ತಿಂಗಳ ಎಂಸಿಎಲ್‌ಆರ್‌ ಈಗ ಇರುವ ಶೇಕಡ 8.45 ರಿಂದ ಶೇಕಡ 8.2ಕ್ಕೆ ಇಳಿಕೆಯಾಗಿದೆ. ಎಂಸಿಎಲ್‌ಆರ್ ಎಂಬುದು ಕನಿಷ್ಠ ಬಡ್ಡಿ ದರವನ್ನು ಪ್ರತಿನಿಧಿಸುತ್ತದೆ. ಅದಕ್ಕಿಂತ ಕಡಿಮೆ ಬಡ್ಡಿದರದಲ್ಲಿ ಸಾಲಗಾರರಿಗೆ ಸಾಲ ನೀಡಲು ಬ್ಯಾಂಕುಗಳಿಗೆ ಅನುಮತಿ ಇಲ್ಲ. ಎಂಸಿಎಲ್‌ಆರ್ ಎಂಬುದು ಬ್ಯಾಂಕುಗಳ ಎರವಲು ವೆಚ್ಚದ ಪ್ರಮಾಣವನ್ನು ಬಿಂಬಿಸುತ್ತದೆ.

ಎಸ್‌ಬಿಐನ ಆಯ್ದ ಸಾಲಗಳ ಪರಿಷ್ಕೃತ ಎಂಸಿಎಲ್‌ಆರ್‌ ಆಧಾರಿತ ಬಡ್ಡಿದರ

ಎಂಸಿಎಲ್‌ಆರ್ ಆಧಾರಿತ ಬಡ್ಡಿದರ ವಿಧಿಸುವ ಪ್ರವೃತ್ತಿಯನ್ನು ಬ್ಯಾಂಕುಗಳು 2016ರಲ್ಲಿ ಶುರುಮಾಡಿಕೊಂಡವು. ಇದು ನಿಧಿಗಳ ವೆಚ್ಚವನ್ನು ಆಧರಿಸಿ ನಿರ್ಧರಿಸುವ ಬಡ್ಡಿದರವಾಗಿದ್ದು, ಪಾರದರ್ಶಕ ರೀತಿಯಲ್ಲಿ ಬಡ್ಡಿದರ ವಿಧಿಸುವ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ.

ಎಸ್‌ಬಿಐ ಪ್ರಕಟಿಸಿರುವ ಆಯ್ದ ಸಾಲಗಳ ಪರಿಷ್ಕೃತ ಎಂಸಿಎಲ್‌ಆರ್‌ ಆಧಾರಿತ ಬಡ್ಡಿದರ ವಿವರ ಹೀಗಿದೆ

ಭಾರತೀಯ ಸ್ಟೇಟ್ ಬ್ಯಾಂಕ್‌ನ ಪರಿಷ್ಕೃತ ಎಂಸಿಎಲ್‌ಆರ್ ಬಡ್ಡಿದರ

ಸಾಲದ ಅವಧಿಪರಿಷ್ಕೃತ ಎಂಸಿಎಲ್‌ಆರ್‌ ದರ (%)
ಓವರ್‌ ನೈಟ್‌8.2
ಒಂದು ತಿಂಗಳು 8.2
ಮೂರು ತಿಂಗಳು8.5
ಆರು ತಿಂಗಳು 8.85
ಒಂದು ವರ್ಷ8.95
ಎರಡು ವರ್ಷ9.05
ಮೂರು ವರ್ಷ9.10

ಬಹುತೇಕ ಸಾಲಗಳು ಈಗ ಎಂಸಿಎಲ್‌ಆರ್‌ ಆಧಾರಿತ

ಮನೆ ಮತ್ತು ವಾಹನ ಸಾಲಗಳು ಸೇರಿ ಹೆಚ್ಚಿನ ಚಿಲ್ಲರೆ ಸಾಲಗಳು ಎಂಸಿಎಲ್‌ಆರ್‌ ದರಕ್ಕೆ ಹೊಂದಿಕೊಂಡಿವೆ. ಅಂದರೆ ಸಾಲಗಾರರು ಈ ದರವನ್ನು ಸರಿಹೊಂದಿಸಿದಂತೆ ಅವರ ಇಎಂಐಗಳಲ್ಲಿ ಇಳಿಕೆಯನ್ನು ಕಾಣುತ್ತಾರೆ. ಅದಕ್ಕಾಗಿ ಎಂಸಿಎಲ್ಆರ್ ದರಕ್ಕೆ ಹೊಂದಿಕೊಂಡ ಸಾಲವನ್ನೇ ಬಯಸುತ್ತಾರೆ.

ಎಂಸಿಎಲ್‌ಆರ್‌-ಸಂಯೋಜಿತ ಸಾಲಗಳನ್ನು ಹೊಂದಿರುವ ಸಾಲಗಾರರು ತಮ್ಮ ಲೋನ್ ರೀಸೆಟ್ ಅವಧಿಯನ್ನು ಆಧರಿಸಿ ಈ ಬದಲಾವಣೆಗಳ ಪ್ರಯೋಜನವನ್ನು ಪಡೆಯಬಹುದು. ಅಂದರೆ ಸಾಲದ ಅವಧಿಯನ್ನು ಮರುಹೊಂದಿಸಿದರೆ ಅಂತಹ ಸಂದರ್ಭದಲ್ಲಿ ಪರಿಷ್ಕೃತ ಬಡ್ಡಿ ದರವು ಅನ್ವಯವಾಗುತ್ತದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್ ನೇತೃತ್ವದ ವಿತ್ತೀಯ ನೀತಿ ಸಮಿತಿ (ಎಂಸಿಸಿ) ಸತತ 10ನೇ ಸಲ ರೆಪೋ ದರವನ್ನು ಸ್ಥಿರವಾಗಿ ಶೇಕಡ 6.5ರಲ್ಲೇ ಉಳಿಸಿಕೊಂಡಿರುವುದಾಗಿ ಘೋ‍ಷಿಸಿದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ ಕ್ರಮವನ್ನು ಪ್ರಕಟಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.