ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ, ರೇಟ್‌ ಸ್ವಲ್ಪ ಹೆಚ್ಚಾಗಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ, ರೇಟ್‌ ಸ್ವಲ್ಪ ಹೆಚ್ಚಾಗಲಿದೆ

ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ, ರೇಟ್‌ ಸ್ವಲ್ಪ ಹೆಚ್ಚಾಗಲಿದೆ

ತರಕಾರಿಯಿಂದ ಹಿಡಿದು ಅಕ್ಕಿ ಬೇಳೆವರೆಗೆ ಆಹಾರ ಧಾನ್ಯಗಳ ಬೆಲೆ ಏರಿಕೆ ಕಾರಣ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬಡ ಕೆಳ ಮಧ್ಯಮ ವರ್ಗದವರಿಗೆ ಬಿಸಿ ತಟ್ಟಿದೆ. ಹೀಗಿರುವಾಗಲೇ, ಬೆಲೆ ಏರಿಕೆ ಚಿಂತೆ ಬಿಡಿ; ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದಿದೆ ಕೇಂದ್ರ ಸರ್ಕಾರ. ರೇಟ್ ಸ್ವಲ್ಪ ಹೆಚ್ಚಾಗಲಿದೆ ಎಂಬ ಸುಳಿವೂ ಸಿಕ್ಕಿದ್ದು, ಅದರ ವಿವರ ಇಲ್ಲಿದೆ.

ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. (ಸಾಂಕೇತಿಕ ಚಿತ್ರ)
ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಬೇಗ ಕಳುಹಿಸ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. (ಸಾಂಕೇತಿಕ ಚಿತ್ರ) (HTK)

ನವದೆಹಲಿ: ಆಹಾರದ ಹಣದುಬ್ಬರ ಪ್ರಮಾಣ ನಿಧಾನವಾಗಿ ಏರಿಕೆಯಾಗುತ್ತಿರುವಂತೆ ನಿತ್ಯ ಬಳಕೆಯ ಆಹಾರ ವಸ್ತುಗಳ ಬೆಲೆಯೂ ಏರತೊಡಗಿದೆ. ಇದರಲ್ಲಿ ಅಕ್ಕಿ ಬೇಳೆಗಳೂ ಸೇರಿವೆ. ಕಳೆದ ಚುನಾವಣೆಗೆ ಮೊದಲು ಅಕ್ಕಿ ಬೇಳೆ ಬೆಲೆ ಏರಿಕೆ ತಡೆಯಲು ಕೇಂದ್ರ ಸರ್ಕಾರ ಭಾರತ್‌ ಬ್ರಾಂಡ್‌ನ ಅಕ್ಕಿ ಬೇಳೆಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರ ಬೆಲೆ ಮುಕ್ತ ಮಾರುಕಟ್ಟೆಯ ಅಕ್ಕಿ ಬೇಳೆಗಳ ಬೆಲೆಗಿಂತ ಬಹಳ ಕಡಿಮೆ ಇತ್ತು. ಈಗ ಮತ್ತೆ ಭಾರತ್‌ ಬ್ರಾಂಡ್‌ನ ಅಕ್ಕಿ ಬೇಳೆಗಳನ್ನು ರೀಲಾಂಚ್ ಮಾಡಲು ಕೇಂದ್ರ ಸರ್ಕಾರ ಆಲೋಚಿಸಿದ್ದು, ದರ ಪರಿಷ್ಕರಣೆ ವಿಚಾರ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿದ್ದಾಗಿ ಲೈವ್ ಹಿಂದೂಸ್ತಾನ್ ವರದಿ ಮಾಡಿದೆ. ಹಬ್ಬ ಹರಿದಿನಗಳಲ್ಲಿ ಬಡ ಮತ್ತು ಕೆಳ ಮಧ್ಯಮ ವರ್ಗದ ಜನರಿಗೆ ತೊಂದರೆ ಆಗದಂತೆ ಮೋದಿ ಸರ್ಕಾರ ಇದೇ ತಿಂಗಳು ಅಥವಾ ಮುಂದಿನ ತಿಂಗಳ ಆರಂಭದ ಒಳಗೆ ಭಾರತ್ ಬ್ರಾಂಡ್ ಅಕ್ಕಿ ಬೇಳೆಯನ್ನು ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಆಹಾರ ಹಣದುಬ್ಬರ; ಕಳೆದ ವರ್ಷ ನವೆಂಬರ್‌ನಲ್ಲಿ ಭಾರತ್ ಬ್ರಾಂಡ್‌ ಅಕ್ಕಿ, ಬೇಳೆ ಬಂದಿತ್ತು

ಹಣದುಬ್ಬರದ ಹೊಡೆತದಿಂದ ಜನಸಾಮಾನ್ಯರನ್ನು ಪಾರು ಮಾಡಲು ಸರ್ಕಾರವು ಹಿಟ್ಟು, ಬೇಳೆಕಾಳು ಮತ್ತು ಅಕ್ಕಿಯನ್ನು ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಪ್ರಾರಂಭಿಸಿದೆ. ಭಾರತ್ ಅಟ್ಟಾವನ್ನು ಮೊದಲ ಬಾರಿಗೆ ಕಳೆದ ವರ್ಷ ನವೆಂಬರ್‌ನಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಇದಾದ ನಂತರ ಬೇಳೆಕಾಳು ಮತ್ತು ಅಕ್ಕಿಯ ಮಾರಾಟವೂ ಶುರುವಾಯಿತು.

ಆರಂಭದಲ್ಲಿ ಕೇಂದ್ರೀಯ ಭಂಡಾರ್ ಮತ್ತು ಮೊಬೈಲ್ ವ್ಯಾನ್‌ಗಳ ಮೂಲಕ ಭಾರತ್ ಅಟ್ಟಾ ಮತ್ತು ಭಾರತ್ ರೈಸ್ ಅನ್ನು ಮಾರಾಟ ಮಾಡಲಾಗುತ್ತಿತ್ತು. ಬಳಿಕ, ಸರ್ಕಾರಿ ನ್ಯಾಯ ಬೆಲೆ ಅಂಗಡಿ ಮತ್ತು ಖಾಸಗಿ ಕಿರಾಣಿ ಅಂಗಡಿ, ಮಾಲ್‌ಗಳಲ್ಲೂ ಭಾರತ್ ಬ್ರಾಂಡ್ ಅಕ್ಕಿ ಬೇಳೆ ಲಭ್ಯವಾಗುವಂತೆ ಕೇಂದ್ರ ಸರ್ಕಾರ ನೋಡಿಕೊಂಡಿತು. ಆದರೆ ಜೂನ್ ತಿಂಗಳಿಂದ ಭಾರತ್ ಅಟ್ಟಾ ಮತ್ತು ಅಕ್ಕಿಯ ಪೂರೈಕೆಯನ್ನು ಸರ್ಕಾರ ತಡೆಹಿಡಿದೆ. ಆದರೆ ಬೇಳೆ ಕಾಳುಗಳು ಲಭ್ಯ ಇವೆ.

ಸರ್ಕಾರದ ಅಂಕಿಅಂಶ ಪ್ರಕಾರ, ತರಕಾರಿಗಳು ಮತ್ತು ಹಣ್ಣುಗಳ ಬೆಲೆಗಳ ಏರಿಕೆಯು ಆಗಸ್ಟ್‌ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ದರವನ್ನು ಸ್ವಲ್ಪಮಟ್ಟಿಗೆ 3.7 ಶೇಕಡಾಕ್ಕೆ ಏರಿಸಿತು. ಜುಲೈನಲ್ಲಿ ಈ ದರ ಶೇ 3.6 ರಷ್ಟಿತ್ತು. ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ತರಕಾರಿಗಳ ಹಣದುಬ್ಬರವು ಜುಲೈನಲ್ಲಿ 6.8 ಶೇಕಡಾಕ್ಕೆ ಹೋಲಿಸಿದರೆ ಆಗಸ್ಟ್‌ನಲ್ಲಿ ಶೇಕಡ 10ರ ಗಡಿ ದಾಟಿದೆ. ಹಣ್ಣುಗಳ ಹಣದುಬ್ಬರವು ಈ ಅವಧಿಯಲ್ಲಿ ಶೇಕಡ 3.5 ರಿಂದ ಮೇಲೇರಿ ಶೇಕಡ 6 ಕ್ಕಿಂತ ಹೆಚ್ಚಾಗಿದೆ.

ಭಾರತ್ ಬ್ರಾಂಡ್ ಅಕ್ಕಿ, ಬೇಳೆ ಕಾಳುಗಳ ಸಂಭಾವ್ಯ ಬೆಲೆ ಹೀಗಿರಬಹುದು

ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಮಿತಿ ಭಾರತ್ ಬ್ರಾಂಡ್ ಅಕ್ಕಿ, ಹಿಟ್ಟು, ಬೇಳೆ ಕಾಳುಗಳನ್ನು ಪುನಃ ಮಾರುಕಟ್ಟೆಗೆ ಬಿಡುವ ಕುರಿತು ತೀರ್ಮಾನ ತೆಗೆದುಕೊಂಡಿದ್ದು, ದರ ಪರಿಷ್ಕರಣೆ ವಿಚಾರ ಚರ್ಚೆಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಸ್ತಾವನೆ ಪ್ರಕಾರ, 10 ಕೆಜಿ ಗೋಧಿ ಹಿಟ್ಟು 275 ರಿಂದ 300 ರೂ.ವರೆಗೆ ಮತ್ತು 10 ಕೆಜಿ ಅಕ್ಕಿ ಚೀಲವನ್ನು 295 ರಿಂದ 320 ರೂಪಾಯಿ ಆಗಬಹುದು.ಇದೇ ವೇಳೆ ಬೇಳೆ ಕಾಳು ಕೆಜಿಗೆ 60 ರಿಂದ 70 ರೂಪಾಯಿಗೆ ಏರಬಹುದು ಎನ್ನಲಾಗಿದೆ.

ಹೆಸರು ಬೇಳೆ ಕಿಲೋಗೆ 107 ರೂ ಮತ್ತು ಮಸೂರ್ ದಾಲ್ ಗರಿಷ್ಠ ಚಿಲ್ಲರೆ ಬೆಲೆ ಕೆಜಿಗೆ 89 ರೂಪಾಯಿ ಆಗಬಹುದು. ಕಳೆದ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಭಾರತ್ ರೈಸ್ (ಭಾರತ್ ಅಕ್ಕಿ) ಅನ್ನು 5 ಕೆಜಿ ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಕೆಜಿಗೆ 29 ರೂಪಾಯಿಯಂತೆ ಮಾರಾಟ ಮಾಡಲು ಪ್ರಾರಂಭಿಸಿತು. ಭಾರತ್ ಅಟ್ಟಾ ಮಾರಾಟವು ನವೆಂಬರ್ 2023 ರಲ್ಲಿ 10 ಕೆಜಿ ಚೀಲಕ್ಕೆ 275 ರೂಪಾಯಿ ಮಾರಾಟ ಶುರುಮಾಡಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.