Hyundai IPO: ಹ್ಯುಂಡೈಮೋಟಾರ್ಸ್ ಇಂಡಿಯಾ ಐಪಿಒಗೆ 2ಪಟ್ಟು ಹೆಚ್ಚು ಬೇಡಿಕೆ; 18ಕ್ಕೆ ಹಂಚಿಕೆ; ಗ್ರೇ ಮಾರ್ಕೆಟ್ ಹೇಳುವುದೇನು, ಇಲ್ಲಿದೆ ವಿವರ
ಹ್ಯುಂಡೈ ಮೋಟಾರ್ಸ್ ಇಂಡಿಯಾ ಐಪಿಒ ಪೂರ್ಣ ಪ್ರಮಾಣದಲ್ಲಿ ಬುಕ್ ಆಗಿದ್ದು, ಎರಡು ಪಟ್ಟು ಹೆಚ್ಚು ಬಿಡ್ಡಿಂಗ್ ಪಡೆದುಕೊಂಡಿದೆ. ಈ ಐಪಿಒ ಎನ್‌ಎಸ್‌ಇ ಮತ್ತು ಬಿಎಸ್‌ಇನಲ್ಲಿ ಮಂಗಳವಾರ (ಅಕ್ಟೋಬರ್ 22) ಲಿಸ್ಟಿಂಗ್ ಅಗಲಿದ್ದು, ಗ್ರೇ ಮಾರ್ಕೆಟ್ ಪ್ರೀಮಿಯಂ ನೀಡಿರುವ ಸುಳಿವು ಮತ್ತು ಇತರೆ ವಿವರ ಇಲ್ಲಿದೆ.
ಮುಂಬಯಿ: ಹ್ಯುಂಡೈ ಮೋಟಾರ್ಸ್ ಇಂಡಿಯಾದ ಇನಿಷಿಯಲ್ ಪಬ್ಲಿಕ್ ಆಫರಿಂಗ್ (ಐಪಿಒ) ಅಕ್ಟೋಬರ್ 15 ರಂದು ಓಪನ್ ಆಗಿದ್ದು, ಚಂದಾದಾರಿಕೆಗೆ ಬಿಡ್ ಮಾಡುವ ಅವಧಿ ಇಂದು (ಅಕ್ಟೋಬರ್ 17) ಕೊನೆಗೊಳ್ಳುತ್ತಿದೆ. ಮೂರು ದಿನಗಳ ಅವಧಿಯಲ್ಲಿ ಹ್ಯುಂಡೈ ಮೋಟಾರ್ಸ್ ಇಂಡಿಯಾ ಐಪಿಒ ಸಂಪೂರ್ಣವಾಗಿ ಮಾರಾಟವಾಗಿದ್ದು, ನಾಳೆ (ಅಕ್ಟೋಬರ್ 18) ಹಂಚಿಕೆಯಾಗಲಿದೆ. ಅಕ್ಟೋಬರ್ 22ರಂದು ಈ ಐಪಿಒ ಲಿಸ್ಟಿಂಗ್ ಆಗಲಿದೆ. ಈ ಐಪಿಒ ಷೇರುಪೇಟೆ ಮೂಲಕ 27,856 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದು, ಇದು ಭಾರತದ ಐಪಿಒ ಮಾರುಕಟ್ಟೆಯಲ್ಲಿ ಇದುವರೆಗಿನ ಅತಿ ಹೆಚ್ಚು ಮೊತ್ತದ ಐಪಿಒ ಆಗಿ ದಾಖಲೆ ಬರೆಯಲಿದೆ. ಹ್ಯುಂಡೈ ಐಪಿಒ ಚಂದಾದಾರಿಕೆ ಆರಂಭ ನಿಧಾನಗತಿಯಲ್ಲಿತ್ತು. ಅದಾಗಿ ಎರಡು ದಿನಗಳ ಅವಧಿಯಲ್ಲಿ ಚುರುಕುಗೊಂಡ ಬಿಡ್ಡಿಂಗ್, ಚಂದಾದಾರಿಕೆ ಅವಧಿ ಮುಗಿಯುವುದಕ್ಕೂ ಮೊದಲೇ ಪೂರ್ಣ ಪ್ರಮಾಣದಲ್ಲಿ ಮಾರಾಟವಾಗಿದೆ.
2.09 ಪಟ್ಟು ಹೆಚ್ಚು ಚಂದಾದಾರಿಕೆ ಬಿಡ್ ಪಡೆದುಕೊಂಡ ಹ್ಯುಂಡೈ ಮೋಟಾರ್ ಐಪಿಒ
ಐಪಿಒ ಮಾರುಕಟ್ಟೆಯಲ್ಲಿ ಹ್ಯುಂಡೈ ಮೋಟಾರ್ ಐಪಿಒ 2,09 ಪಟ್ಟು ಹೆಚ್ಚು ಚಂದಾದಾರಿಕೆ ಬಿಡ್ ಸಂಗ್ರಹಿಸಿಕೊಂಡಿದೆ. ಈ ದಿನದ (ಅಕ್ಟೋಬರ್ 17) ಮಾಹಿತಿ ಪ್ರಕಾರ, ಇದರಲ್ಲಿ ರಿಟೇಲ್ ವಿಭಾಗದಲ್ಲಿ 0.45 ಪಟ್ಟು ಹೆಚ್ಚು ಮತ್ತು ಅರ್ಹ ಸಾಂಸ್ಥಿಕ ಖರೀದಿದಾರ ವಿಭಾಗದಲ್ಲಿ 6.23 ಪಟ್ಟು, ಸಾಂಸ್ಥಿಕವಲ್ಲದ ಹೂಡಿಕೆದಾರರ ವಿಭಾಗದಲ್ಲಿ 0.43 ಪಟ್ಟು ಹೆಚ್ಚು ಚಂದಾದಾರಿಕೆ ಬಿಡ್ ದಾಖಲಾಗಿದೆ.
ಐಪಿಒಗೆ ಹೂಡಿಕೆ ಮಾಡಿರುವ ಚಂದಾದಾರರು ತಮಗೆ ಐಪಿಒ ಅಲಾಟ್ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರಿಶೀಲಿಸಲು ಕೆಫಿನ್ ಟೆಕ್ನಾಲಜಿ ಪ್ಲಾಟ್‌ಫಾರಂ ಚೆಕ್ ಮಾಡಬಹುದು. ಇದಲ್ಲದೆ, ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ವೆಬ್‌ಸೈಟ್‌ನಲ್ಲೂ ಪರಿಶೀಲಿಸಬಹುದು. ಅಕ್ಟೋಬರ್ 18 ರಂದು ಅಂದರೆ ನಾಳೆ ಹ್ಯುಂಡೈ ಮೋಟಾರ್ ಇಂಡಿಯಾದ ಐಪಿಒ ಹಂಚಿಕೆ ಅಂತಿಮವಾಗಲಿದೆ. ಅಕ್ಟೋಬರ್ 22ರಂದು ಈ ಐಪಿಒ ಷೇರುಪೇಟೆಯ ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ಲಿಸ್ಟಿಂಗ್ ಆಗಲಿದೆ.
ಗ್ರೇ ಮಾರ್ಕೆಟ್ ಪ್ರೀಮಿಯಂ ಏರಿಳಿತ
ಹ್ಯುಂಡೈ ಮೋಟಾರ್ ಇಂಡಿಯಾ ಐಪಿಒದ ಗ್ರೇ ಮಾರ್ಕೆಟ್ ಪ್ರೀಮಿಯಂ (ಜಿಎಂಪಿ) ಇಂದು ಕೊನೆಯದಾಗಿ 14 ರೂಪಾಯಿಗೆ ತಲುಪಿತ್ತು. ಐಪಿಒದ ದರ ಮಟ್ಟ ಪ್ರತಿ ಷೇರಿಗೆ 1960 ರೂಪಾಯಿ ಇದ್ದು ಜಿಪಿಎಂ ಆಧಾರದಲ್ಲಿ ಹೇಳುವುದಾದರೆ ಲಿಸ್ಟಿಂಗ್ ಆಗುವಾಗ ಇದರ ಶೇಕಡ 0.71 ಹೆಚ್ಚಳವಾಗಿ 1,974 ರೂಪಾಯಿ ಆಗಬಹುದು ಎಂದು ಅಂದಾಜಿಸಲಾಗಿದೆ.
ಬಹುತೇಕ ಬ್ರೋಕರೇಜ್ ಸಂಸ್ಥೆಗಳು ಹುಂಡೈ ಐಪಿಒ ಒಳನೋಟ ಒದಗಿಸಿವೆ. ಈ ಪೈಕಿ ಚಾಯ್ಸ್ ಈಕ್ವಿಟಿ ಬ್ರೋಕಿಂಗ್ ಸಲ್ಯೂಷನ್ಸ್ ದೀರ್ಘಾವಧಿ ಹೂಡಿಕೆಗೆ ಪರಿಗಣಿಸಬಹುದು ಎಂದು ಸಲಹೆ ನೀಡಿದೆ. ಹ್ಯುಂಡೈ ಮೋಟಾರ್ಸ್ ಸ್ಥಿರವಾದ ಬೆಳವಣಿಗೆ ಮತ್ತು ನಿಯತ ಲಾಭಾಂಶಗಳ ಬಲವಾದ ದಾಖಲೆಯನ್ನು ಹೊಂದಿರುವ ಕಾರಣ ಸ್ಥಿರವಾದ ದೀರ್ಘಾವಧಿಯ ಆದಾಯವನ್ನು ಬಯಸುವವರಿಗೆ ಸೂಕ್ತ ಎಂದು ಹೇಳಲಾಗುತ್ತಿದೆ.
ಹುಂಡೈ ಮೋಟಾರ್ ಇಂಡಿಯಾ ದೇಶದ ಪ್ರಮುಖ ಆಟೋಮೊಬೈಲ್ ತಯಾರಕ ಕಂಪನಿಗಳ ಪೈಕಿ ಒಂದು. ಇದು ತನ್ನ ವ್ಯವಹಾರ ಸಾಮರ್ಥ್ಯವನ್ನು ವಿಸ್ತರಿಸಲು, ಹೊಸ ಉತ್ಪನ್ನಗಳನ್ನು ಪ್ರಾರಂಭಿಸಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪ್ರೀಮಿಯಂ ವಿಭಾಗಗಳನ್ನು ಗುರಿಯಾಗಿ ಕೆಲಸ ಮಾಡುವ ಕಡೆಗೆ ಗಮನ ಕೇಂದ್ರೀಕರಿಸಿದೆ. ಹೊಸ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸುವ ಮತ್ತು ಅದರ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುವ ಯೋಜನೆಗಳು ಭಾರತದಲ್ಲಿ ದೀರ್ಘಾವಧಿಯ ಬೆಳವಣಿಗೆಗೆ ಹುಂಡೈನ ಬದ್ಧತೆಯನ್ನು ಸೂಚಿಸುತ್ತಿರುವುದಾಗಿ ಕಂಪನಿ ಮೂಲಗಳು ಹೇಳುತ್ತವೆ.
ಗಮನಿಸಿ: ಮೇಲಿರುವ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳ ವೈಯಕ್ತಿಕವಾಗಿದ್ದು, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್ ತಾಣದ್ದಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ಮಾಡುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಬೇಕು ಎಂದು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.