ಕೃಷಿ, ಆರೋಗ್ಯ, ಆಡಳಿತ ಸುಧಾರಣೆ ಎಐ ತಂತ್ರಾಂಶದ ಪರಿಹಾರ ನೀಡಿ, 1 ಕೋಟಿ ರೂ ತನಕ ಪಾರಿತೋಷಕ ಗೆಲ್ಲಿ, ಇದು ಇಂಡಿಯಾಎಐ ಚಾಲೆಂಜ್
ಕೃಷಿ, ಆರೋಗ್ಯ ಮತ್ತು ಆಡಳಿತ ಸೇರಿ ಕೆಲವು ಕ್ಷೇತ್ರಗಳ ಸುಧಾರಣೆಗೆ ಎಐ ತಂತ್ರಾಂಶದ ಪರಿಹಾರವನ್ನು ಒದಗಿಸಬೇಕು. ಇದು ಇಂಡಿಯಾಎಐ ಚಾಲೆಂಜ್ ಆಗಿದ್ದು, ವಿಜೇತರಿಗೆ 1 ಕೋಟಿ ರೂಪಾಯಿ ತನಕ ಪಾರಿತೋಷಕ ಗೆಲ್ಲುವ ಅವಕಾಶವಿದೆ. ವಿವರಕ್ಕೆ ಮುಂದೆ ಓದಿ.
ಬೆಂಗಳೂರು: ಸಾಮಾಜಿಕವಾಗಿ, ಸಾಮುದಾಯಿಕವಾಗಿ ಜನರ ಬದುಕಿನ ಗುಣಮಟ್ಟವನ್ನು ಉನ್ನತೀಕರಿಸಬಲ್ಲ ನವೋನ್ವೇಷಣೆಗೆ ಪ್ರೋತ್ಸಾಹ ಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು, ಇಂಡಿಯಾ ಎಐ ಇನ್ನೋವೇಶನ್ ಚಾಲೆಂಜ್ ಅನ್ನು ಆಯೋಜಿಸಿದೆ.
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಧೀನ ಇರುವ ಡಿಜಿಟಲ್ ಇಂಡಿಯಾ ಕಾರ್ಪೊರೇಷನ್‌ನ ಸ್ವತಂತ್ರ ವ್ಯಾಪಾರ ವಿಭಾಗ ಇಂಡಿಯಾಎಐ ಇಂಡಿಪೆಂಡೆಂಟ್ ಬ್ಯುಸಿನೆಸ್ ಡಿವಿಷನ್ (ಐಬಿಡಿ) ಈ ಚಾಲೆಂಜ್ ಅನ್ನು ಆಯೋಜಿಸಿದ್ದು, ಆಸಕ್ತರು ಅರ್ಜಿ ಸಲ್ಲಿಸುವುದಕ್ಕೆ ಸೆಪ್ಟೆಂಬರ್ 30 ಕೊನೇ ದಿನ ಎಂದು ಪ್ರಕಟಿಸಿದೆ.
ಈ ಚಾಲೆಂಜ್ ಉದ್ಯಮಗಳು, ನವೋದ್ಯಮಗಳು, ಲಾಭೋದ್ದೇಶ ರಹಿತ ಸಂಘ ಸಂಸ್ಥೆ, ಶೈಕ್ಷಣಿಕ ಸಂಸ್ಥೆ, ಸಂಶೋಧನೆ ಮತ್ತು ಅಭಿವೃದ್ಧಿ ಗುಂಪು, ವಿದ್ಯಾರ್ಥಿಗಳು ಮತ್ತು ಭಾರತದ ನವೋನ್ವೇಷಕರನ್ನು ಮುಕ್ತವಾಗಿ ಆಹ್ವಾನಿಸಿದೆ.
ಇಂಡಿಯಾ ಎಐ ಚಾಲೆಂಜ್ - ಏನಿದು, ಯಾರಿಗಾಗಿ
ಇಂಡಿಯಾಎಐ ಮಿಷನ್‌ನೊಳಗಿನ ಅಪ್ಲಿಕೇಶನ್‌ಗಳ ಅಭಿವೃದ್ಧಿ ಉಪಕ್ರಮದ ಭಾಗವಾಗಿದ್ದು, ನಿರ್ಣಾಯಕ ವಲಯಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ಅಪ್ಲಿಕೇಶನ್‌ಗಳ ಅಭಿವೃದ್ಧಿ, ನಿಯೋಜನೆ ಮತ್ತು ಅಳವಡಿಕೆಯನ್ನು ಮುಂದುವರಿಸಲು ಪ್ರಯತ್ನಿಸುತ್ತದೆ. ಇದು ದೊಡ್ಡ ಪ್ರಮಾಣದ ಸಾಮಾಜಿಕ-ಆರ್ಥಿಕ ರೂಪಾಂತರವನ್ನು ಸಕ್ರಿಯಗೊಳಿಸಲು ಪರಿಣಾಮಕಾರಿ ಎಐ ಪರಿಹಾರಗಳ ಸ್ಕೇಲಿಂಗ್ ಮತ್ತು ಅಳವಡಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಇನ್ನೋವೇಶನ್ ಚಾಲೆಂಜ್‌ನಲ್ಲಿ ವಿಜೇತರು 1 ಕೋಟಿ ರೂಪಾಯಿವರೆಗೆ ಬಹುಮಾನ ಗಳಿಸುವ ಅವಕಾಶ ಹೊಂದಿದ್ದಾರೆ. ಅದೇ ರೀತಿ, ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪರಿಹಾರಗಳನ್ನು ನಿಯೋಜಿಸುವ ಅವಕಾಶವನ್ನು ಪಡೆಯುತ್ತಾರೆ.
ಇನ್ನೋವೇಶನ್ ಚಾಲೆಂಜ್‌ನ ಫೋಕಸ್ ಏರಿಯಾ
ಆರೋಗ್ಯ ರಕ್ಷಣೆ: ರೋಗ ನಿರ್ಣಯ ಮತ್ತು ರೋಗಿಗಳ ಆರೈಕೆಯನ್ನು ಹೆಚ್ಚಿಸುವುದು, ಎಐ- ವರ್ಧಿತ ಎಕ್ಸ್- ಕಿರಣಗಳನ್ನು ಬಳಸಿಕೊಂಡು ಆರಂಭಿಕ ರೋಗ ಪತ್ತೆ, ನೇತ್ರ ಶಾಸ್ತ್ರದ ಫಲಿತಾಂಶಗಳನ್ನು ಬಲಪಡಿಸುವುದು ಮತ್ತು ವಾಹಕದಿಂದ ಹರಡುವ ರೋಗ ಕಣ್ಗಾವಲು
ಸುಧಾರಿತ ಆಡಳಿತ: ಉತ್ತಮ ಸಾರ್ವಜನಿಕ ಸೇವೆಯ ಲಭ್ಯತೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ಎಐ ಚಾಲಿತ ಭಾಷಾ ತಂತ್ರಜ್ಞಾನಗಳ ಬಳಕೆ
ಕೃಷಿ: ಎಐ ನೆರವಿನ ಬೆಳೆ ಸಲಹಾ ಸೇವೆಗಳೊಂದಿಗೆ ರೈತರಿಗೆ ಅಧಿಕಾರ ನೀಡುವುದು. ಆಹಾರ ಭದ್ರತೆಯನ್ನು ಸುಧಾರಿಸಲು ಆರ್ಥಿಕ ಸೇರ್ಪಡೆ ಮತ್ತು ಭೂಗೋಳದ ವಿಶ್ಲೇಷಣೆಯ ಬಳಕೆ.
ಕಲಿಕೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸಹಾಯಕ ತಂತ್ರಜ್ಞಾನ: ನಿರ್ದಿಷ್ಟ ಕಲಿಕೆಯ ಸಮಸ್ಯೆಗಳಿಗೆ ಆರಂಭಿಕ ಪತ್ತೆ ಮತ್ತು ಬೆಂಬಲ, ವರ್ಧಿತ ಮಲ್ಟಿಮೀಡಿಯಾ ಪ್ರವೇಶ ಸಾಧನಗಳು ಮತ್ತು ಗ್ಯಾಮಿಫೈಡ್ ಕಲಿಕೆ.
ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆ: ಎಐ-ಚಾಲಿತ ಮುಂಚಿನ ಎಚ್ಚರಿಕೆ ವ್ಯವಸ್ಥೆಗಳು ಮತ್ತು ಬಹು-ಅಪಾಯಕ್ಕೆ ಒಳಗಾಗುವ ಮ್ಯಾಪಿಂಗ್.
ಇಂಡಿಯಾಎಐ ಚಾಲೆಂಜ್ - ಅರ್ಜಿ ಸಲ್ಲಿಸುವುದು ಹೇಗೆ
ಆರೋಗ್ಯ ರಕ್ಷಣೆ, ಸುಧಾರಿತ ಆಡಳಿತ, ಕೃಷಿ, ಕಲಿಕೆಯ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ತಂತ್ರಜ್ಞಾನ, ಹವಾಮಾನ ಬದಲಾವಣೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಎಐ ತಂತ್ರಾಂಶ ಅಭಿವೃದ್ಧಿ ಪಡಿಸುವ ಚಾಲೆಂಜ್ ಇದಾಗಿದ್ದು, ಅರ್ಜಿ ಸಲ್ಲಿಸುವುದಕ್ಕೆ ಸೆಪ್ಟೆಂಬರ್ 30 ಕೊನೇ ದಿನ ಎಂದು ಘೋಷಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ಪೂರ್ಣ ಮಾಹಿತಿಗೆ ಕೆಳಗಿನ ಲಿಂಕ್ ಗಮನಿಸಬಹುದು. https://indiaai.gov.in/article/unlock-the-potential-of-ai-apply-now-for-the-indiaai-innovation-challenge - ಇದರಲ್ಲಿ ಈ ಚಾಲೆಂಜ್‌ಗೆ ಸಂಬಂಧಿಸಿದ ವಿವಿಧ ವಿಚಾರಗಳಿದ್ದು, ಈಗಾಗಲೇ ಕೆಲವು ಸುತ್ತಿನ ಮಾಹಿತಿ ವಿನಿಯೋಗವೂ ಆಗಿದೆ. ಮಾರ್ಗದರ್ಶಿಯ ಪಿಡಿಎಫ್ ಲಿಂಕ್ ಕೆಳಗಿದೆ.
https://indiaai.s3.ap-south-1.amazonaws.com/docs/iadi-master-schema-13082024.pdf
ಇದಲ್ಲದೇ ಅರ್ಜಿ ಸಲ್ಲಿಸುವುದಕ್ಕೆ ಸಂಬಂಧಿಸಿದ ವಿಡಿಯೋ ಕಾನ್ಫರೆನ್ಸ್ ಲಿಂಕ್ ಕೂಡ ಲಭ್ಯವಿದ್ದು, ಅದು ಇಲ್ಲಿದೆ.
ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತಂತ್ರಾಂಶ ಅಭಿವೃದ್ಧಿ ಚಾಲೆಂಜ್ ಕುರಿತ ಹೆಚ್ಚಿನ ಮಾಹಿತಿ ಮತ್ತು ಅನುಮಾನಗಳಿದ್ದರೆ ಈ ಪೋರ್ಟಲ್‌ನಲ್ಲಿ https://indiaai.gov.in/signup ಖಾತೆ ತೆರೆದು ಸಂವಹನ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.