Closing Bell: ಚೇತರಿಸಿಕೊಂಡ ಭಾರತದ ಷೇರುಪೇಟೆ; ಐಟಿ ಷೇರಿನ ಬೆಂಬಲದಿಂದ ಲಾಭ ಗಳಿಸಿದ ಸೆನ್ಸೆಕ್ಸ್, ನಿಫ್ಟಿ
ಭಾರತದ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಇಂದು (ಫೆ.27) ಲಾಭ ಗಳಿಸಿವೆ. ನಿನ್ನೆ ಮಾರುಕಟ್ಟೆ ಮುಕ್ತಾಯದ ವೇಳೆಗೆ ನಷ್ಟ ಕಂಡಿದ್ದ ಭಾರತದ ಷೇರುಪೇಟೆಯ ವಲಯವಾರು ಷೇರುಗಳು ಇಂದು ಹಸಿರು ಬಣ್ಣದಲ್ಲಿ ವಹಿವಾಟು ಮುಗಿಸಿವೆ. ಲಾಭ ಹಾಗೂ ನಷ್ಟ ಗಳಿಸಿದ ಇಂದಿನ ಷೇರುಗಳ ವಿವರ ಇಲ್ಲಿದೆ.
ಬೆಂಗಳೂರು: ಭಾರತದ ಷೇರು ಮಾರುಕಟ್ಟೆಯಲ್ಲಿ ಹಾವು-ಏಣಿ ಆಟ ಮುಂದುವರಿದಿದೆ. ಫೆಬ್ರುವರಿ ತಿಂಗಳು ಪೂರ್ತಿ ಲಾಭ-ನಷ್ಟ ಎರಡೂ ಇದ್ದರೂ ಲಾಭಕ್ಕಿಂತ ನಷ್ಟ ಕಂಡಿದ್ದೇ ಹೆಚ್ಚು ಎನ್ನಬಹುದು. ಬಹುತೇಕ ದಿನ ಮುಕ್ತಾಯದ ವೇಳೆಗೆ ಮಾರುಕಟ್ಟೆಯು ಮಂದ ವಹಿವಾಟಿನ ಮೂಲಕ ದಿನ ಮುಗಿಸಿತ್ತು. ನಿನ್ನೆ (ಫೆ.26) ಮಾರುಕಟ್ಟೆ ಇಳಿಕೆ ಕಂಡಿದ್ದರೂ ಕೂಡ ಇಂದು (ಫೆ. 25) ಮಾಹಿತಿ ತಂತ್ರಜ್ಞಾನ ಷೇರುಗಳ ಬಲದೊಂದಿಗೆ ಭಾರತದ ಷೇರುಪೇಟೆಯು ಪುಟಿದೆದ್ದಿದೆ. ಭಾರತದ ಷೇರು ಷೇಟೆಯ ಸಂವೇದಿ ಸೂಚ್ಯಂಕಗಳಲ್ಲಿ ಒಂದಾದ ನಿಫ್ಟಿಯು ಗಳಿಕೆ ಕಾಣುವ ಮೂಲಕ ಇಂದಿನ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್ ಕೂಡ ಏರಿಕೆಯಾಗಿದೆ.
ಮುಕ್ತಾಯದ ವೇಳೆಗೆ ಸೆನ್ಸೆಕ್ಸ್ 305.09 ಅಂಕ ಅಥವಾ ಶೇ 0.42ರಷ್ಟು ಏರಿಕೆಯಾಗಿ, 73,095.22 ಕ್ಕೆ ತಲುಪಿದೆ. ನಿಫ್ಟಿ 76.30 ಅಂಕ ಅಥವಾ ಶೇ 0.34ರಷ್ಟು ಏರಿಕೆಯಾಗಿ 22,198.30ಕ್ಕೆ ತಲುಪಿದೆ. ಇಂದು ಸುಮಾರು 1340 ಷೇರುಗಳು ಲಾಭ ಗಳಿಸಿದರೆ, 1968 ಷೇರುಗಳು ನಷ್ಟ ಕಂಡವು. 72 ಷೇರುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಲಾಭ-ನಷ್ಟ ಗಳಿಸಿದ ಕಂಪನಿಗಳು
ಟಾಟಾ ಮೋಟಾರ್ಸ್, ಟಿಸಿಎಸ್, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್ ಕಾರ್ಪ್ ಮತ್ತು ಸನ್ ಫಾರ್ಮಾ ನಿಫ್ಟಿಯಲ್ಲಿ ಅತ್ಯಧಿಕ ಲಾಭ ಗಳಿಸಿದ ಷೇರುಗಳಾದರೆ, ಹೀರೋ ಮೋಟೊಕಾರ್ಪ್, ಬಜಾಜ್ ಫೈನಾನ್ಸ್, ಎಸ್‌ಬಿಐ, ಡಿವಿಸ್ ಲ್ಯಾಬ್ಸ್ ಮತ್ತು ಯುಪಿಎಲ್ ಇಂದು ನಷ್ಟ ಕಂಡವು.
ವಲಯಗಳ ಪೈಕಿ, ಆಟೊ, ಕ್ಯಾಪಿಟಲ್ ಗೂಡ್ಸ್, ಮಾಹಿತಿ ತಂತ್ರಜ್ಞಾನ, ಫಾರ್ಮಾ, ರಿಯಾಲ್ಟಿ ತಲಾ 0.5-1 ಪ್ರತಿಶತದಷ್ಟು ಏರಿಕೆ ಕಂಡರೆ, ತೈಲ ಮತ್ತು ಅನಿಲ ಸೂಚ್ಯಂಕವು ತಲಾ 1 ಪ್ರತಿಶತದಷ್ಟು ನಷ್ಟ ಕಂಡಿದೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸ್ವಲ್ಪಮಟ್ಟಿಗೆ ಇಳಿಕೆಯಾಗಿವೆ. ಇಂದು ಡಾಲರ್ ಎದುರು ರೂಪಾಯಿ ಮೌಲ್ಯವು 82.90ಕ್ಕೆ ತಲುಪಿದೆ.
ಇಂದು ದಿನದ ಆರಂಭದಲ್ಲಿ ನಿಫ್ಟಿಯು ಮಂದ ವಹಿವಾಟು ನಡೆಸಿದ್ದರೂ, ನಂತರ ಚೇತರಿಸಿಕೊಂಡಿತು. ಬ್ಯಾಂಕಿಂಗ್ ಷೇರುಗಳಲ್ಲಿ ನಷ್ಟವಾದರೂ ಕೂಡ ಐಟಿ ಷೇರುಗಳ ಬೆಂಬಲವು ನಿಫ್ಟಿಯ ಗಳಿಕೆಗೆ ಕಾರಣವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣವಿದ್ದರೂ ಕೂಡ ಇಂದು ನಿನ್ನೆಯ ನಷ್ಟವನ್ನು ಭಾರತದ ಮಾರುಕಟ್ಟೆಯು ಇಂದು ಸರಿದೂಗಿಸಿಕೊಂಡಿದೆ. ಇಸ್ರೇಲ್-ಹಮಾಸ್ ನಡುವಿನ ಕದನ ವಿರಾಮದ ಭರವಸೆ, ಕಚ್ಚಾ ತೈಲಗಳ ಬೆಲೆ ಇಳಿಕೆ ಸಾಧ್ಯತೆ ಈ ಎಲ್ಲವೂ ಭಾರತದ ಮಾರುಕಟ್ಟೆಗೆ ಧನಾತ್ಮಕ ಬೆಂಬಲ ಸೂಚಿಸಿವೆ. ಈ ನಡುವೆ ಅಮೆರಿಕ ಕೇಂದ್ರಿಯ ಬ್ಯಾಂಕ್ ಬಡ್ಡಿ ಕಡಿತದ ಸೂಚನೆಯನ್ನೂ ನೀಡಿದೆ.