ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ ನೋಡಿ

ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ ನೋಡಿ

Sovereign Gold Bond Price; ಚಿನ್ನದ ಮೇಲಿನ ಹೂಡಿಕೆ ನಷ್ಟ ಉಂಟುಮಾಡಲ್ಲ ಎಂಬ ಮಾತನ್ನು ಪದೇಪದೆ ದೃಢೀಕರಿಸುವಂತೆ ಮಾಡುತ್ತಿದೆ ವಿದ್ಯಮಾನಗಳು. ಅದರಲ್ಲೂ ಈಗ ಚಿನ್ನದ ಗಟ್ಟಿಗಿಂತ ಬಾಂಡ್ ಮೇಲಿನ ಹೂಡಿಕೆ ಜನಪ್ರಿಯವಾಗುತ್ತಿದೆ. ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ? ಹಾಗಾದ್ರೆ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ.

ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ ನೋಡಿ. (ಸಾಂಕೇತಿಕ ಚಿತ್ರ)
ನೀವೇನಾದ್ರೂ 2016ರಲ್ಲಿ ಗೋಲ್ಡ್ ಬಾಂಡ್ ತಗೊಂಡಿದ್ರಾ, ಏಳೇ ವರ್ಷದಲ್ಲಿ ಹೂಡಿಕೆ ಮೌಲ್ಯ ಶೇ 122 ಹೆಚ್ಚಳವಾಗಿದೆ ನೋಡಿ. (ಸಾಂಕೇತಿಕ ಚಿತ್ರ)

ನವದೆಹಲಿ: ಚಿನ್ನ ಏನಿದ್ದರೂ ಆಭರಣಕ್ಕಷ್ಟೇ ಅಲ್ಲ, ಹೂಡಿಕೆಗೂ ಬೆಸ್ಟ್. ಅನೇಕರ ಬದುಕಿನಲ್ಲಿ ಅದು ಆಪದ್ಧನ ಎಂಬುದು ಪದೇಪದೇ ಸಾಬೀತಾಗುತ್ತದೆ. ಅಂದ ಹಾಗೆ, ನೀವೇನಾದರೂ 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತಿರುವ ಸಾವರಿನ್ ಗೋಲ್ಡ್ ಬಾಂಡ್‌ ಅನ್ನು 2016ರಲ್ಲಿ ತಗೊಂಡಿದ್ದೀರಾ? ಹೌದು ಎನ್ನುವುದಾದರೆ ನೀವು ಖುಷಿ ಪಡುವ ಸುದ್ದಿ ಇಲ್ಲಿದೆ. ಇಲ್ಲ ಎಂದಾದರೆ ಉಳಿತಾಯಕ್ಕೆ, ದುಡ್ಡು ದುಡಿಯುವಂತೆ ಮಾಡಲು ಇದು ಕೂಡ ಒಂದು ದಾರಿ ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಈ ಸುದ್ದಿ ನೆರವಾಗಬಹುದು.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೌದು, 2016ರ ಆಗಸ್ಟ್ 5 ರಂದು ಬಿಡುಗಡೆ ಮಾಡಿದ್ದ ಸಾವರಿನ್ ಗೋಲ್ಡ್ ಬಾಂಡ್‌ನ ಅಂತಿಮ ಮಾರಾಟ ಬೆಲೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ನಿನ್ನೆ (ಆಗಸ್ಟ್ 2) ನಿಗದಿ ಮಾಡಿದೆ. ಈ ಬೆಲೆಯು ಖರೀದಿ ಬೆಲೆಗಿಂತ ಅಥವಾ ಹೂಡಿಕೆ ಮಾಡಿದ ಬೆಲೆಗಿಂತ ಶೇಕಡ 122 ಹೆಚ್ಚು. ಅಂದರೆ ನೀವು 1000 ರೂಪಾಯಿ ಹೂಡಿಕೆ ಮಾಡಿದ್ದರೆ ಅದರ ಬೆಲೆ ಈಗ 2220 ರೂಪಾಯಿ!. ಕೇವಲ ಏಳು ವರ್ಷದಲ್ಲಿ ಈ ಲಾಭ!.

2016ರ ಆಗಸ್ಟ್‌ 5ರ ಗೋಲ್ಡ್ ಬಾಂಡ್‌ನ ಈಗಿನ ಮಾರಾಟ ದರ ನಿಗದಿ ಮಾಡಿದ ಆರ್‌ಬಿಐ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಆಗಸ್ಟ್ 5, 2016 ರಂದು ನೀಡಲಾದ ಸಾರ್ವಭೌಮ ಚಿನ್ನದ ಬಾಂಡ್‌ಗಳಿಗೆ (SGBs) ಅಂತಿಮ ವಿಮೋಚನಾ ಬೆಲೆಯಾಗಿ ಪ್ರತಿ ಗ್ರಾಂಗೆ 6,938 ರೂಪಾಯಿ ಎಂದು ಆಗಸ್ಟ್ 2 ರಂದು ಘೋ‍ಷಿಸಿತು. ಇದು ಶೇಕಡಾ 122 ರಷ್ಟು ಲಾಭವನ್ನು ಉಂಟುಮಾಡಿದೆ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ 2016ರ ಆಗಸ್ಟ್‌ನಲ್ಲಿ ಗೋಲ್ಡ್ ಬಾಂಡ್‌ಗಳನ್ನು ಪ್ರತಿ ಗ್ರಾಂಗೆ 3,119 ರೂ ಬೆಲೆಗೆ ಮಾರಾಟ ಮಾಡಿತ್ತು. ಈಗ ಈ ಬಾಂಡ್‌ಗಳನ್ನು ವಾಪಸ್ ನೀಡಿ ಹಣ ನಗದೀಕರಿಸುವುದಕ್ಕೆ ಸೋಮವಾರ (ಆಗಸ್ಟ್ 5) ತನಕ ಕಾಲಾವಕಾಶ ನೀಡಿದೆ.

ಆರ್‌ಬಿಐ ಪ್ರಕಾರ, ಚಂದಾದಾರಿಕೆಯ ಅವಧಿಯ ಹಿಂದಿನ ವಾರಕ್ಕೆ ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​ಲಿಮಿಟೆಡ್ ಪ್ರಕಟಿಸಿದ 999 ಶುದ್ಧತೆಯ ಚಿನ್ನದ ಸರಳ ಸರಾಸರಿಯ ಮುಕ್ತಾಯದ ಬೆಲೆಯ ಆಧಾರದ ಮೇಲೆ ಸಾವರಿನ್ ಗೋಲ್ಡ್ ಬಾಂಡ್‌ಗಳ ಬೆಲೆಯನ್ನು ನಿಗದಿಪಡಿಸಲಾಗಿದೆ. ಬಾಂಡ್ ಹೋಲ್ಡರ್‌ಗಳಿಗೆ ವಾರ್ಷಿಕ ಬಡ್ಡಿ ದರವಾಗಿ ಶೇಕಡ 2.5 ಸಹ ನೀಡಲಾಗುತ್ತಿದ್ದು, ಇದು ಈ ಯೋಜನೆಯನ್ನು ಆಕರ್ಷಕವಾಗಿಸಿದೆ.

ಸಾವರಿನ್ ಗೋಲ್ಡ್‌ ಬಾಂಡ್‌ ಯೋಜನೆ ಮುಂದುವರಿಯಲಿದೆಯೇ?

ಕೇಂದ್ರ ಸರ್ಕಾರದ ಮೂಲ ಒಂದರ ಪ್ರಕಾರ, ಸಾವರಿನ್ ಗೋಲ್ಡ್‌ ಬಾಂಡ್‌ ಯೋಜನೆ ಅತ್ಯಂತ ದುಬಾರಿಯಾದುದು. ಹಣಕಾಸಿನ ಕೊರತೆ ನೀಗಿಸುವ ಈ ಬಾಂಡ್‌ ಅನ್ನು ಮುಂದುವರಿಸಬೇಕಾ ಅಥವಾ ಬೇಡವೇ ಎಂಬುದನ್ನು ಸಮಗ್ರವಾಗಿ ವಿಮರ್ಶಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಒಂದೊಮ್ಮೆ ಈ ಯೋಜನೆಯನ್ನು ಸರ್ಕಾರ ಸ್ಥಗಿತಗೊಳಿಸಿದರೆ, ಪರ್ಯಾಯ ಹೂಡಿಕೆ ಯೋಜನೆಯನ್ನು ಸರ್ಕಾರ ಪರಿಚಯಿಸಲಿದೆ ಎಂದು ಮನಿ ಕಂಟ್ರೋಲ್ ವರದಿ ಆಗಸ್ಟ್ 1 ರಂದು ವರದಿ ಮಾಡಿತ್ತು.

ಸಾವರಿನ್‌ ಚಿನ್ನದ ಬಾಂಡ್‌ಗಳ ಮೂಲಕ ಹಣಕಾಸಿನ ಕೊರತೆಯನ್ನು ನೀಗಿಸುವ ಬಾಂಡ್‌ನ ವೆಚ್ಚವು ಭೌತಿಕ ಚಿನ್ನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯೋಜನಕ್ಕಿಂತ ಹೆಚ್ಚಾಗಿರುತ್ತದೆ. ಇದು ಸಾಮಾಜಿಕ ಅಥವಾ ಸಮಾಜ ಕಲ್ಯಾಣ ಯೋಜನೆಯಲ್ಲ. ಬದಲಾಗಿ ಹೂಡಿಕೆ ಯೋಜನೆಯಾದ ಕಾರಣ ಕಾಲಕಾಲಕ್ಕೆ ಪರಿಶೀಲಿಸಿ ಕ್ರಮ ಜರುಗಿಸಬೇಕಾದ್ದು ಅತೀ ಅಗತ್ಯ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧಿಕಾರಿ ವಿವರಿಸಿದ್ದಾಗಿ ವರದಿ ಹೇಳಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.