ಕೇಂದ್ರ ಬಜೆಟ್ 2024: ನೇರ ಪ್ರಸಾರ ಎಲ್ಲಿ, ಎಷ್ಟು ಹೊತ್ತಿಗೆ ನೋಡಬಹುದು? ಬಜೆಟ್ ಪ್ರತಿಯ ಪಿಡಿಎಫ್ ಡೌನ್‌ಲೋಡ್ ಮಾಡುವುದು ಹೇಗೆ? -Budget
Union Budget 2024: ಲೋಕಸಭೆಯಲ್ಲಿ ಇಂದುಳೆ (ಫೆ.1) ಬೆಳಿಗ್ಗೆ 11 ಗಂಟೆಗೆ ಕೇಂದ್ರ ಬಜೆಟ್ ಮಂಡನೆ ನಡೆಯಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡಿಸಲು ಸಿದ್ಧರಾಗಿದ್ದು, ಇಂದಿನಿಂದ ಅಧಿವೇಶನ ಶುರುವಾಗಿದೆ. ಬಜೆಟ್ ಮಂಡನೆಯ ನೇರ ಪ್ರಸಾರ ಮತ್ತು ಇತರೆ ವಿವರ ಇಲ್ಲಿದೆ.
ಸಂಸತ್ತಿನ ಉಭಯ ಸದನಗಳಲ್ಲಿ ಜ 31ರಿಂದ ಫೆ 9ರ ತನಕ ಬಜೆಟ್ ಅಧಿವೇಶನ ನಡೆಯಲಿದೆ. ನರೇಂದ್ರ ಮೋದಿ ಸರ್ಕಾರ ತನ್ನ ಈ ಅವಧಿಯ ಕೊನೆಯ ಬಜೆಟ್, ಮಧ್ಯಂತರ ಬಜೆಟ್ ಅನ್ನು ಇಂದು (ಫೆ 1) ಲೋಕಸಭೆಯಲ್ಲಿ ಮಂಡಿಸಲು ಸಜ್ಜಾಗಿದೆ. ಶೀಘ್ರದಲ್ಲೇ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ, ಈ ಸಲದ ಬಜೆಟ್ ಕೇವಲ ವೋಟ್ ಆನ್ ಅಕೌಂಟ್ ಆಗಿರುತ್ತದೆ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ಪಕ್ಷ ಹೊಸ ಸರ್ಕಾರ ರಚನೆ ಮಾಡಿ, ಜುಲೈನಲ್ಲಿ ಹೊಸ ಹಣಕಾಸು ವರ್ಷ (2024-25)ಕ್ಕೆ ಬೇಕಾದ ಪೂರ್ಣ ಬಜೆಟ್ ಮಂಡಿಸಲಿದೆ. ವೋಟ್ ಆನ್ ಅಕೌಂಟ್‌ನಲ್ಲಿ ಅಥವಾ ಮಧ್ಯಂತರ ಬಜೆಟ್‌ನಲ್ಲಿ ಜೂನ್ ಕೊನೆ ತನಕ ಸರ್ಕಾರದ ಖರ್ಚುವೆಚ್ಚ ನಿಭಾಯಿಸುವುದಕ್ಕೆ ಬೇಕಾದ ಹಣಕಾಸಿನ ಅನುಕೂಲಗಳನ್ನು ಮಾಡಿಕೊಡಲಾಗುತ್ತದೆ.
ಮಧ್ಯಂತರ ಬಜೆಟ್ ಎಂಬುದು ಮೂರ್ನಾಲ್ಕು ತಿಂಗಳ ಮಟ್ಟಿಗೆ ಸರ್ಕಾರದ ನಿತ್ಯದ ಖರ್ಚುವೆಚ್ಚಗಳನ್ನು ನಿಭಾಯಿಸುವುದಕ್ಕೆ ಬೇಕಾದ ಅನುದಾನಗಳಿಗೆ ಸಂಸತ್ತಿನಿಂದ ಒಪ್ಪಿಗೆ ಪಡೆಯುವ ಹಣಕಾಸು ಹೇಳಿಕೆ. ಇದರಲ್ಲಿ ಹೊಸ ನೀತಿಗಳು, ಯೋಜನೆಗಳನ್ನು ಸರ್ಕಾರ ಘೋಷಿಸುವುದಿಲ್ಲ. ಆರ್ಥಿಕ ಸಮೀಕ್ಷೆಯೂ ಈ ಬಜೆಟ್‌ಗೆ ಮೊದಲು ಪ್ರಕಟವಾಗುವುದಿಲ್ಲ.
ಸಾಮಾನ್ಯವಾಗಿ ಅಥವಾ ವಾಡಿಕೆಯಂತೆ ಕೇಂದ್ರ ಬಜೆಟ್ ಮಂಡನೆಗೆ ಮೊದಲು ಅಂದರೆ ಜನವರಿ 31ರಂದು ಕೇಂದ್ರ ಸರ್ಕಾರ ಆರ್ಥಿಕ ಸಮೀಕ್ಷೆಯನ್ನು ಮಂಡಿಸುತ್ತದೆ. ಕೇಂದ್ರ ವಿತ್ತ ಸಚಿವರು ಈ ಸಮೀಕ್ಷೆಯನ್ನು ಲೋಕಸಭೆಯಲ್ಲಿ ಮಂಡನೆ ಮಾಡುತ್ತಾರೆ.
ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವ ಆರ್ಥಿಕ ಸಮೀಕ್ಷೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ಅರ್ಥ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸಂಕ್ಷಿಪ್ತಗೊಳಿಸಿ ಪ್ರಸ್ತುತ ಪಡಿಸುವ ಪ್ರಮುಖ ದಾಖಲೆಯಾಗಿದೆ. ಇದು ಮುಂಬರುವ ಹಣಕಾಸು ವರ್ಷದ ಬಜೆಟ್ ಮಂಡನೆಗೆ ಮುನ್ನುಡಿಯಾಗಿ ಕಂಡುಬರುತ್ತದೆ.
ಕೇಂದ್ರ ಬಜೆಟ್ 2024 ಮಂಡನೆ ನೇರ ಪ್ರಸಾರ ವೀಕ್ಷಣೆ, ದಿನಾಂಕ, ಸಮಯ,
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ 2024 ರ ಬಜೆಟ್ ಮಂಡಿಸಲಿದ್ದಾರೆ. ಈ ಹಿಂದೆ ಫೆಬ್ರವರಿ ಕೊನೆಯ ದಿನಾಂಕದಂದು ಮಂಡನೆಯಾಗುತ್ತಿದ್ದ ಬಜೆಟ್ ದಿನಾಂಕವನ್ನು ನರೇಂದ್ರ ಮೋದಿ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲಿ ಫೆ.1ಕ್ಕೆ ಬದಲಾಯಿಸಲಾಗಿತ್ತು. ಅರುಣ್ ಜೇಟ್ಲಿ ಫೆ.1ರಂದು ಬಜೆಟ್ ಮಂಡಿಸಿದ ಮೊದಲ ಹಣಕಾಸು ಸಚಿವರು.
ಫೆಬ್ರವರಿ 1 ರಂದು ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಡಿಡಿ ನ್ಯೂಸ್‌ನಲ್ಲಿ ನೋಡಬಹುದು. ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (ಪಿಐಬಿ) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ವೆಬ್ಸೈಟ್ ಮೂಲಕ ಆನ್‌ಲೈನಲ್ಲಿ ಬಜೆಟ್ ಮಂಡನೆಯನ್ನು ಪ್ರಸಾರ ಮಾಡಲಿದೆ.
ಕೇಂದ್ರ ಬಜೆಟ್ 2024 ಪಿಡಿಎಫ್ ಎಲ್ಲಿ ಸಿಗುತ್ತೆ, ಬಜೆಟ್‌ನಿಂದ ಏನನ್ನು ನಿರೀಕ್ಷಿಸಬಹುದು
ಲೋಕಸಭೆಯಲ್ಲಿ ಬಜೆಟ್ ಪ್ರಸ್ತುತಿ ಮುಗಿದ ನಂತರ, ಬಜೆಟ್ ದಾಖಲೆಗಳು ಅಧಿಕೃತ ವೆಬ್‌ಸೈಟ್ (indiabudget.gov.in) ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇನಿಂದ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದು ಮತ್ತು ಐಒಎಸ್ ಬಳಕೆದಾರರು ಅದನ್ನು ಆಪ್ ಸ್ಟೋರ್‌ನಲ್ಲಿ ಕಾಣಬಹುದು.
ಇನ್ನು, ಬಜೆಟ್ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್ ಅವರು ಯಾವುದೇ ದೊಡ್ಡ ಘೋಷಣೆಗಳು ಇರುವುದಿಲ್ಲ ಎಂದು ಹೇಳಿದ್ದರು. ಹಾಗಾಗಿ ದೊಡ್ಡ ನಿರೀಕ್ಷೆಗಳೇನೂ ಇಟ್ಟುಕೊಳ್ಳಬೇಕಾದ್ದಿಲ್ಲ.
ನಿರ್ಮಲಾ ಸೀತಾರಾಮನ್ ದಾಖಲೆ
ಈ ನಡುವೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರನೇ ಬಾರಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ. ಈ ದಾಖಲೆ ಬರೆಯಲು ಹೊರಟಿರುವ ನಿರ್ಮಲಾ ಸೀತಾರಾಮನ್ ಅವರು ಸೇಲ್ಸ್‌ವುಮನ್ ಆಗಿ ವೃತ್ತಿಬದುಕು ಶುರುಮಾಡಿದವರು.
ಅವರು 2004ರಲ್ಲಿ ಬಿಜೆಪಿಗೆ ಸೇರಿ ರಾಜಕೀಯ ರಂಗದಲ್ಲಿ ವಿವಿಧ ಹೊಣೆಗಾರಿಕೆ ನಿಭಾಯಿಸಿದ್ದು, ಬಿಜೆಪಿಯ ವಕ್ತಾರರಾಗಿ ಮುಖ್ಯವಾಹಿನಿಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಿದರು. ಬಿಜೆಪಿ ಸರ್ಕಾರ ರಚನೆಯಾದ ಬಳಿಕ, ಇಂದಿರಾಗಾಂಧಿ ಬಳಿಕ ರಕ್ಷಣಾ ಖಾತೆ ಹೊಂದಿದ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.
ನರೇಂದ್ರ ಮೋದಿ ಸರ್ಕಾರದ ಈ ಅವಧಿಯಲ್ಲಿ ವಿತ್ತ ಸಚಿವರಾಗಿ ಸತತ ಆರನೇ ಬಜೆಟ್ ಮಂಡಿಸಲಿದ್ದಾರೆ. ಅವರು ಈ ಮೂಲಕ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.
ವಿಭಾಗ