Himachal polls: ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆ; 26 'ಕೈ' ನಾಯಕರು ಬಿಜೆಪಿ ಸೇರ್ಪಡೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Himachal Polls: ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆ; 26 'ಕೈ' ನಾಯಕರು ಬಿಜೆಪಿ ಸೇರ್ಪಡೆ

Himachal polls: ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಹಿನ್ನಡೆ; 26 'ಕೈ' ನಾಯಕರು ಬಿಜೆಪಿ ಸೇರ್ಪಡೆ

ಒಟ್ಟು 26 ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್ ಮತ್ತು ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮಿತ್ ಮೆಹ್ತಾ ಸೇರಿದಂತೆ ಇತರರು ಸೇರಿದ್ದಾರೆ.

ಕೈ ನಾಯಕರ ಪಕ್ಷಾಂತರ
ಕೈ ನಾಯಕರ ಪಕ್ಷಾಂತರ

ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇವೆ. ಚುನಾವಣೆಗೆ ಪ್ರಮುಖ ರಾಷ್ಟ್ರೀಯ ಪಕ್ಷಗಳು ಸಿದ್ಧತೆ ನಡೆಸುತ್ತಿವೆ. ಇದರ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಮೇಲಿಂದ ಮೇಲೆ ಶಾಕಿಂಗ್‌ ಸುದ್ದಿ ಸಿಗುತ್ತಿದೆ. ಅತ್ತ ಕಾಂಗ್ರೆಸ್‌ ಪಕ್ಷದ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸಲು ನ್ಯಾಯಾಲಯ ಆದೇಶ ನೀಡಿದರೆ, ಇತ್ತ ಹಿಮಾಚಲದಲ್ಲಿ ಹಲವು ಕಾಂಗ್ರೆಸ್‌ ನಾಯಕರು ಕೈ ಬಿಟ್ಟು ಕಮಲಕ್ಕೆ ಜೈ ಅಂದಿದ್ದಾರೆ.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಸಮ್ಮುಖದಲ್ಲಿ ಸೋಮವಾರ ಹಲವಾರು ಕಾಂಗ್ರೆಸ್ ನಾಯಕರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರೆ. ನಾಯಕರನ್ನು ಸ್ವಾಗತಿಸಿದ ಸಿಎಂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. “ಆಚಾರಗಳು ಬದಲಾಗುತ್ತಿವೆ. ಇಂದು ಶಿಮ್ಲಾದ ಕಾಂಗ್ರೆಸ್ ಪಕ್ಷದ ಮಾಜಿ ಪದಾಧಿಕಾರಿಗಳು ಸೇರಿದಂತೆ ಹಲವು ಸಹೋದ್ಯೋಗಿಗಳು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿ ಕುಟುಂಬಕ್ಕೆ ನಿಮ್ಮೆಲ್ಲರಿಗೂ ಆತ್ಮೀಯ ಸ್ವಾಗತ. ಬಿಜೆಪಿಯ ಐತಿಹಾಸಿಕ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡೋಣ,” ಎಂದು ಅವರು ಬರೆದುಕೊಂಡಿದ್ದಾರೆ.

ಸುದ್ದಿಸಂಸ್ಥೆ ಎಎನ್‌ಐ ವರದಿ ಪ್ರಕಾರ, ಒಟ್ಟು 26 ಕಾಂಗ್ರೆಸ್ ನಾಯಕರು ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಲ್ಲಿ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಧರಂಪಾಲ್ ಠಾಕೂರ್, ಮಾಜಿ ಕಾರ್ಯದರ್ಶಿ ಆಕಾಶ್ ಸೈನಿ, ಮಾಜಿ ಕೌನ್ಸಿಲರ್ ರಾಜನ್ ಠಾಕೂರ್ ಮತ್ತು ಮಾಜಿ ಜಿಲ್ಲಾ ಉಪಾಧ್ಯಕ್ಷ ಅಮಿತ್ ಮೆಹ್ತಾ ಸೇರಿದಂತೆ ಇತರರು ಸೇರಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ಶನಿವಾರದಂದು ಚುನಾವಣೆ ನಡೆಯಲಿರುವ ರಾಜ್ಯದಲ್ಲಿ 1982ರಿಂದ ಪ್ರತಿ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಗೆಲುವಿನ ಇತಿಹಾಸ ಹೊಂದಿದೆ.

ಮೊನ್ನೆ ಭಾನುವಾರ, ಹಿಮಾಚಲ ಪ್ರದೇಶದವರೇ ಆಗಿರುವ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಇದು ಏಕರೂಪ ನಾಗರಿಕ ಸಂಹಿತೆ, ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ, ಯುವಕರಿಗೆ ಉದ್ಯೋಗಾವಕಾಶ ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ನೀಡುತ್ತದೆ. ಚುನಾವಣೆ ಎದುರಿಸುತ್ತಿರುವ ರಾಜ್ಯದಲ್ಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಆಡಳಿತವನ್ನು ಶ್ಲಾಘಿಸಿದ ಕೇಂದರ ಗೃಹ ಸಚಿವ ಶಾ, ಸಿಎಂ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜನರು ವಿಶ್ವಾಸ ಹೊಂದಿದ್ದಾರೆ ಎಂದು ಹೇಳಿದರು.

ಹಿಮಾಚಲದಲ್ಲಿ ನವೆಂಬರ್ 12ರಂದು ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನೊಂದೆಡೆ ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5ರಂದು ಚುನಾವಣೆ ನಿಗದಿಯಾಗಿದೆ. ಎರಡೂ ರಾಜ್ಯಗಳ ಮತ ಎಣಿಕೆ ಡಿಸೆಂಬರ್ 8ರಂದು ನಡೆಯಲಿದೆ. ಅಕ್ಟೋಬರ್‌ 17ರಂದು ಹಿಮಾಚಲ ಪ್ರದೇಶ ಚುನಾಚಣೆಯ ಗೆಜೆಟ್‌ ಅಧಿಸೂಚನೆ ಹೊರಡಿಸಲಾಗುತ್ತದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್‌ 25 ಕೊನೆಯ ದಿನಾಂಕವಾಗಿದೆ. ಅಕ್ಟೋಬರ್‌ 27ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.

ಸದ್ಯ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಇಲ್ಲಿ ಅಧಿಕಾರ ವಿಸ್ತರಿಸಲು ಕಾಂಗ್ರೆಸ್‌ ಎದುರು ನೋಡುತ್ತಿದೆ. ಮತ್ತೊಂದೆಡೆ ಪಕ್ಷದ ಸ್ಥಾನ ಉಳಿಸಿಕೊಳ್ಳುವುದು ಬಿಜೆಪಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳಿಗೆ 55 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಇವರಲ್ಲಿ 1.86 ಲಕ್ಷ ಚೊಚ್ಚಲ ಮತದಾರರು, 80 ವರ್ಷ ಮೇಲ್ಪಟ್ಟ 1.22 ಲಕ್ಷ ಹಾಗೂ 100 ವರ್ಷ ಮೇಲ್ಪಟ್ಟ 1,184 ಮತದಾರರಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.