ಕನ್ನಡ ಸುದ್ದಿ  /  Nation And-world  /  Drugs Mafia In Kerala: Kerala Chief Minister's Message To People After 2 Killed By Drugs Mafia

Drugs Mafia in Kerala: ಡ್ರಗ್‌ ಮಾಫಿಯಾದಿಂದ ಇಬ್ಬರ ಹತ್ಯೆ, ಕೇರಳ ಮುಖ್ಯಮಂತ್ರಿಯಿಂದ ಜನತೆಗೆ ಮಹತ್ವದ ಸಂದೇಶ

ಕಣ್ಣೂರು ಜಿಲ್ಲೆಯ ತಲಶ್ಶೇರಿ ಪ್ರದೇಶದಲ್ಲಿ ಮೀನುಗಾರ ಖಾಲಿದ್ (52) ಮತ್ತು ಅವರ 40 ವರ್ಷದ ಸೋದರ ಮಾವ ಶಮೀರ್ ಅವರನ್ನು ಡ್ರಗ್ಸ್ ಮಾಫಿಯಾ ಗ್ಯಾಂಗ್ ಬುಧವಾರ ಹತ್ಯೆ ಮಾಡಿತ್ತು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌  (ANI)
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (ANI) (HT_PRINT)

ತಿರುವನಂತಪುರ: ಡ್ರಗ್‌ ಮಾಫಿಯಾ ಗ್ಯಾಂಗ್‌ನಿಂದ ಇತ್ತೀಚೆಗೆ ಇಬ್ಬರ ಹತ್ಯೆಯಾಗಿರುವ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಆಘಾತ ವ್ಯಕ್ತಪಡಿಸಿದ್ದಾರೆ. ಡ್ರಗ್‌ ಮಾಫಿಯಾ ವಿರುದ್ಧ ಹೋರಾಡಲು ಸರಕಾರದ ಜತೆ ಕೈಜೋಡಿಸಿರುವ ಕಾರಣದಿಂದ ಇವರಿಬ್ಬರ ಹತ್ಯೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

"ಕೇರಳ ರಾಜ್ಯದಲ್ಲಿ ಮಾದಕ ದ್ರವ್ಯ ಮತ್ತು ಮಾದಕ ವಸ್ತುಗಳ ವಿರುದ್ಧ ಸಾಮೂಹಿಕ ಅಭಿಯಾನ ನಡೆಯುತ್ತಿದೆ. ಈ ಅಭಿಯಾನ ನಡೆಯುತ್ತಿರುವಂತಹ ಸಮಯದಲ್ಲಿಯೇ ಈ ಭೀಕರ ಹತ್ಯೆ ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.

ಕಣ್ಣೂರು ಜಿಲ್ಲೆಯ ತಲಶ್ಶೇರಿ ಪ್ರದೇಶದಲ್ಲಿ ಮೀನುಗಾರ ಖಾಲಿದ್ (52) ಮತ್ತು ಅವರ 40 ವರ್ಷದ ಸೋದರ ಮಾವ ಶಮೀರ್ ಅವರನ್ನು ಡ್ರಗ್ಸ್ ಮಾಫಿಯಾ ಗ್ಯಾಂಗ್ ಬುಧವಾರ ಹತ್ಯೆ ಮಾಡಿತ್ತು.

ಇಬ್ಬರು ವ್ಯಕ್ತಿಗಳು ಮತ್ತು ಈ ಬಲಿಪಶುಗಳ ಸಂಬಂಧಿಯ ಮೇಲೆ ಮಾಫಿಯಾ ಗ್ಯಾಂಗ್‌ ದಾಳಿ ನಡೆಸಿದೆ. ನಿಷೇಧಿತ ವಸ್ತುಗಳ ಮಾರಾಟವನ್ನು ವಿರೋಧಿಸಿರುವ ಕಾರಣಕ್ಕಾಗಿ ಇವರಲ್ಲಿ ಒಬ್ಬರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿದೆ.

"ಮಾದಕ ವಸ್ತುಗಳ ಸೇವನೆ ಮತ್ತು ಮಾದಕ ವಸ್ತುಗಳ ಮಾರಾಟವನ್ನು ಜನರು ಪ್ರಶ್ನಿಸಲು ಆರಂಭಿಸಿದ್ದಾರೆ. ಇದರಿಂದ ಡ್ರಗ್‌ ಮಾಫಿಯಾ ಅಸಮಾಧಾನಗೊಂಡಿದೆ. ಇಂತಹ ಕೃತ್ಯಗಳನ್ನು ಮತ್ತು ಮಾದಕ ವ್ಯಸನವನ್ನು ಜನರು ಇನ್ನಷ್ಟು ಉಗ್ರವಾಗಿ ವಿರೋಧಿಸಲು ಇದು ಸೂಕ್ತ ಸಮಯʼʼ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.

"ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಇಡೀ ಸಮಾಜ ಎಚ್ಚೆತ್ತುಕೊಂಡು ಪಾಲ್ಗೊಳ್ಳಬೇಕುʼʼ ಎಂದು ಮುಖ್ಯಮಂತ್ರಿ ಪಿಣರಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂತಹ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಕುರಿತು ಸಮಗ್ರ ತನಿಖೆ ನಡೆಯಲಿದೆ. ಪೊಲೀಸ್‌ ಮತ್ತುಅಬಕಾರಿ ಇಲಾಖೆಗೆ ಸಮನ್ವಯತೆಯೊಂದಿಗೆ ಇಂತಹ ಮಾಫಿಯಾ ಗ್ಯಾಂಗ್‌ಗಳನ್ನು ನಾಶಪಡಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಮಾದಕ ವಸ್ತುಗಳ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿರುವವರ ಮೇಲೆ ಈ ರೀತಿ ದಾಳಿ ಮಾಡಲಾಗಿದೆ. ಇದು ಸಮಾಜವನ್ನು ಜಾಗೃತಿಗೊಳಿಸಬೇಕಾದ ಸಮಯ. ಈ ಸಂದರ್ಭದಲ್ಲಿ ಕುಟುಂಬದವರು ಅಸಹಾಯಕರಾಗಬಾರದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದ್ದಾರೆ.

"ನಮ್ಮ ಭೂಮಿ ಮತ್ತು ಭವಿಷ್ಯದ ಪೀಳಿಗೆಯನ್ನು ದುರಂತದಿಂದ ರಕ್ಷಿಸಲು ಒಟ್ಟಾಗಿ ಹೋರಾಡೋಣ" ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.

ದಾಳಿಯಲ್ಲಿ ಶಮೀರ್ ಅವರ ಸೋದರಸಂಬಂಧಿ ಶಾನಿದ್ (38) ಗಾಯಗೊಂಡಿದ್ದು, ಪ್ರಸ್ತುತ ತಲಶ್ಶೇರಿ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

IPL_Entry_Point