ಕನ್ನಡ ಸುದ್ದಿ  /  ಚುನಾವಣೆಗಳು  /  India Exit Poll Live 2024: ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ, ಕಾಂಗ್ರೆಸ್‌ನಿಂದ ಗಮನ ಸೆಳೆಯುವ ಸಾಧನೆ;ಎಕ್ಸಿಟ್ ಪೋಲ್ ಲೈವ್

India Exit Poll Live 2024: ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ, ಕಾಂಗ್ರೆಸ್‌ನಿಂದ ಗಮನ ಸೆಳೆಯುವ ಸಾಧನೆ;ಎಕ್ಸಿಟ್ ಪೋಲ್ ಲೈವ್

Lok Sabha Election 2024 Exit Poll Live Updates: ಭಾರತದಲ್ಲಿ ನರೇಂದ್ರ ಮೋದಿ ಅವರ ಅಧಿಕಾರವು ಸತತ 3ನೇ ಬಾರಿಗೆ ಮುಂದುವರಿಯಬಹುದು ಎನ್ನುವ ಮುನ್ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ನೀಡಿವೆ. ಲೋಕಸಭೆಯಲ್ಲಿ ಪ್ರತಿಪಕ್ಷಗಳ ಬಲ ಹೆಚ್ಚುವುದು ಸ್ಪಷ್ಟವಾಗಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಗಣನೀಯ ಸಾಧನೆ ಮಾಡಬಹುದು ಎಂದು ಸಮೀಕ್ಷೆಗಳು ಹೇಳಿವೆ.

ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ, ಕಾಂಗ್ರೆಸ್‌ನಿಂದ ಗಮನ ಸೆಳೆಯುವ ಸಾಧನೆ;ಎಕ್ಸಿಟ್ ಪೋಲ್ ಲೈವ್
ಕೇಂದ್ರದಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ಸಾಧ್ಯತೆ, ಕಾಂಗ್ರೆಸ್‌ನಿಂದ ಗಮನ ಸೆಳೆಯುವ ಸಾಧನೆ;ಎಕ್ಸಿಟ್ ಪೋಲ್ ಲೈವ್ (PC: Manjunath Kotagunasi)

Exit Poll 2023: ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾಗಿದ್ದು ಬಹುನಿರೀಕ್ಷಿತ ಮತಗಟ್ಟೆ ಸಮೀಕ್ಷೆಗಳು (ಎಕ್ಸಿಟ್ ಪೋಲ್ 2024) ಪ್ರಕಟಗೊಂಡಿವೆ. ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಕ್ಕೆ ಬಹುಮತದ ಮುನ್ಸೂಚನೆ ಕೊಟ್ಟಿವೆ. 543 ಸದಸ್ಯ ಬಲದ ಲೋಕಸಭೆಗೆ 272 ಮ್ಯಾಜಿಕ್ ನಂಬರ್ ಎನಿಸಿದೆ. ಬಹುತೇಕ ಸಮೀಕ್ಷೆಗಳು ಎನ್‌ಡಿಎ ಒಕ್ಕೂಟ 300ಕ್ಕೂ ಹೆಚ್ಚು ಸ್ಥಾನ ಪಡೆಯಬಹುದು ಎಂದು ಹೇಳಿವೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಹಲವು ರಾಜ್ಯಗಳಲ್ಲಿ ಗಣನೀಯ ಸಾಧನೆ ಮಾಡಲಿದ್ದು, ಈ ಬಾರಿ ಲೋಕಸಭೆಯಲ್ಲಿ ಪ್ರತಿಪಕ್ಷದ ಅಸ್ತಿತ್ವ ಎದ್ದು ಕಾಣಿಸುವ ಮುನ್ನೋಟ ನೀಡಿವೆ. ನರೇಂದ್ರ ಮೋದಿ ಅವರ ಅಧಿಕಾರ 3ನೇ ಅವಧಿಗೆ ಮುಂದುವರಿದರೂ 400 ಸ್ಥಾನಗಳಲ್ಲಿ ಜಯ ಗಳಿಸುವ ಸಾಧ್ಯತೆ ಕ್ಷೀಣಿಸಿದೆ.

ಟ್ರೆಂಡಿಂಗ್​ ಸುದ್ದಿ

ಗಮನಿಸಿ: ಚುನಾವಣೆ ಫಲಿತಾಂಶ ಎಕ್ಸಿಟ್‌ ಪೋಲ್ ಸಂಖ್ಯೆಗಳಿಗಿಂತ ಭಿನ್ನವಾಗಿ ಇರಬಹುದು.

8:40 PM

ಆಂಧ್ರದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲಿದ್ದಾರಾ ಚಂದ್ರಬಾಬು ನಾಯ್ಡು?

ಆಂಧ್ರ ಪ್ರದೇಶದಲ್ಲಿ ಈ ಬಾರಿ ಪ್ರಸ್ತುತ ಅಧಿಕಾರದಲ್ಲಿರುವ ಜಗನ್‌ ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಅಧಿಕಾರದಿಂದ ಕೆಳಗಿಳಿಯಲಿದ್ದು, ಟಿಡಿಪಿ 160ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದೆ. ಈ ಬಾರಿ ಚಂದ್ರಬಾಬು ನಾಯ್ಡು ಮತ್ತೆ ಗದ್ದುಗೆ ಏರಲಿದ್ದಾರೆ ಎಂದು ಮತದಾನೋತ್ತ ಸಮೀಕ್ಷೆಗಳು ಹೇಳುತ್ತಿವೆ.

8:20 PM

ಮಹಾರಾಷ್ಟ್ರದಲ್ಲಿ ಮಹಾಯುತಿ ಒಕ್ಕೂಟಕ್ಕೆ 22 ರಿಂದ 26 ಸ್ಥಾನಗಳು - ಸಿ ವೋಟರ್‌ ಸಮೀಕ್ಷೆ ಫಲಿತಾಂಶ

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಮಹಾಯುತಿ ಒಕ್ಕೂಟಕ್ಕೆ 22-26 ಸ್ಥಾನಗಳು ಕಾಂಗ್ರೆಸ್‌, ಶಿವ ಸೇನೆ, ಎನ್‌ಸಿಪಿ ಒಳಗೊಂಡ ಮಹಾ ವಿಕಾಶ್‌ ಅಘಡಿಗೆ 22 ರಿಂದ 24 ಸ್ಥಾನಗಳು ದೊರೆಯಬಹುದು ಎಂದು ಎಬಿಪಿಸಿ ವೋಟರ್‌ ಸಮೀಕ್ಷೆ ವರದಿ ನೀಡಿದೆ.

7:35 PM

ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಹಿನ್ನಡೆ

ಜನ್ ಕಿ ಬಾತ್‌ ಸಮೀಕ್ಷೆ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು 21 ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ ಬಿಜೆಪಿ 18 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. ಇತ್ತ ರಾಜ್ಯದ ಪ್ರಮುಖ ಪಕ್ಷ ತೃಣಮೂಲ ಕಾಂಗ್ರೆಸ್ ಕೇವಲ 16-18 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. ಇಂಡಿಯಾ ನ್ಯೂಸ್-ಡಿ-ಡೈನಾಮಿಕ್ಸ್‌ ಸಮೀಕ್ಷೆ ಪ್ರಕಾರ ಬಿಜೆಪಿ 21 ಸ್ಥಾನ ಗೆದ್ದರೆ, ಟಿಎಂಸಿ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲಿದೆ. ರಿಪಬ್ಲಿಕ್ ಭಾರತ್-ಮ್ಯಾಟ್ರಿಜ್ ಪ್ರಕಾರ ಬಿಜೆಪಿ 21ರಿಂದ 25 ಸ್ಥಾನ ಗೆದ್ದರೆ, ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು 16 ರಿಂದ 20 ಸ್ಥಾನಗಳಿಗೆ ಕುಸಿಯಲಿದೆ ಎಂದು ಹೇಳಿದೆ.

7:05 PM

ಉತ್ತರ ಪ್ರದೇಶದಲ್ಲಿ ಮತ್ತೆ ಎನ್‌ಡಿಎ ಮುನ್ನಡೆ; ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ

ಉತ್ತರ ಪ್ರದೇಶದಲ್ಲಿ ಎನ್‌ಡಿಎ 69 ಸ್ಥಾನಗಳನ್ನು ಗೆಲ್ಲಲಿದೆ ಎಂದು ರಿಪಬ್ಲಿಕ್-ಪಿ ಮಾರ್ಕ್ ಸಮೀಕ್ಷೆ ಭವಿಷ್ಯ ನುಡಿದಿದೆ. ಇಂಡಿಯಾ ಮೈತ್ರಿಕೂಟ 11 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಅದು ಹೇಳಿದೆ. ಇಂಡಿಯಾ ಮೈತ್ರಿಕೂಟವು ಉಳಿದ 11 ಸ್ಥಾನಗಳನ್ನು ಪಡೆಯಲಿದೆ ಎಂದು ರಿಪಬ್ಲಿಕ್-ಪಿಮಾರ್ಕ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ಇದೇ ವೇಳೆ ಆಡಳಿತಾರೂಢ ಎನ್‌ಡಿಎ 50 ಶೇಕಡ ಮತಗಳನ್ನು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.

6:55 PM

ಭಾರತದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ, ಮೋದಿ ಅಧಿಕಾರ; ಭವಿಷ್ಯ ನುಡಿದ ಸಮೀಕ್ಷೆಗಳು

ಬಹುತೇಕ ಮತಗಟ್ಟೆ ಸಮೀಕ್ಷೆಗಳು ಭಾರತದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ಅಧಿಕಾರ ನಡೆಸುವುದನ್ನು ಸಾರಿ ಹೇಳಿವೆ. ನರೇಂದ್ರ ಮೋದಿ ಅವರು 3ನೇ ಅವಧಿಗೆ ಅಬಾಧಿತವಾಗಿ ಮುಂದುವರಿಯುವ ಮುನ್ಸೂಚನೆಯನ್ನೂ ನೀಡಿವೆ. ರಿಪಬ್ಲಿಕ್ ಇಂಡಿಯಾ ಮತಗಟ್ಟೆ ಸಮೀಕ್ಷೆಯು ಎನ್‌ಡಿಎ ಬಹುಮತ ಗಳಿಸಲಿದೆ ಎಂದು ಹೇಳಿದೆ. ಇಂಡಿಯಾ ಟಿವಿ ಮತಗಟ್ಟೆ ಸಮೀಕ್ಷೆಯು ಎನ್‌ಡಿಎ 371 ಸ್ಥಾನ ಪಡೆಯಲಿದೆ ಎಂದು ಹೇಳಿದೆ.

6:50 PM

ಕೇರಳದಲ್ಲಿ ಇಂಡಿಯಾ ಒಕ್ಕೂಟಕ್ಕೆ ಮುನ್ನಡೆ: ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ಕೇರಳದಲ್ಲಿ ಇಂಡಿಯಾ ಒಕ್ಕೂಟ ನಿಚ್ಚಳ ಮೇಲುಗೈ ಸಾಧಿಸಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ. ಕೇರಳದಲ್ಲಿ ಯುಡಿಎಫ್ ಶೇ 41, ಎನ್‌ಎ ಶೇ 27, ಎಲ್‌ಡಿಎಫ್ ಶೇ 29, ಇತರರು ಶೇ 3 ರಷ್ಟು ಮತ ಗಳಿಸಲಿದ್ದಾರೆ. ಯುಡಿಎಫ್- 17-18, ಎಲ್‌ಡಿಎಫ್ 0-1, ಎನ್‌ಡಿಎ 2-3 ಸ್ಥಾನ ಪಡೆಯಬಹುದು ಎಂದು ಅಂದಾಜಿಸಲಾಗಿದೆ. ಇದೇ ಮೊದಲ ಬಾರಿಗೆ ಕೇರಳದಲ್ಲಿ ಬಿಜೆಪಿ ಸ್ಥಾನ ಗಳಿಸಬಹುದು ಎಂದು ನಿರೀಕ್ಷಿಸಲಾಗಿದೆ.

6:35 PM

ತಮಿಳುನಾಡಿನಲ್ಲಿ ಡಿಎಂಕೆ ಮೇಲುಗೈ: ಇಂಡಿಯಾ ಟುಡೇ, ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ

ದಕ್ಷಿಣ ಭಾರತದ ಪ್ರಮುಖ ರಾಜ್ಯವಾಗಿರುವ ತಮಿಳುನಾಡಿನಲ್ಲಿ ಡಿಎಂಕೆ ಮೇಲುಗೈ ಸಾಧಿಸಲಿದೆ ಎಂದು ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಭವಿಷ್ಯ ನುಡಿದಿದೆ. ಡಿಎಂಕೆ 20-22, ಕಾಂಗ್ರೆಸ್ 6-9, ಬಿಜೆಪಿ 1-3, ಇತರರು 0-2 ಸ್ಥಾನಗಳಲ್ಲಿ ಜಯ ಗಳಿಸಬಹುದು ಎಂದು ಸಮೀಕ್ಷೆ ಹೇಳಿದೆ. ಡಿಎಂಕೆ-ಕಾಂಗ್ರೆಸ್ ಮೈತ್ರಿಯ ಇಂಡಿಯಾ ಒಕ್ಕೂಟವು 33-37 ಸ್ಥಾನಗಳಲ್ಲಿ ಜಯ ಗಳಿಸಬಹುದು ಎಂದು ಸಮೀಕ್ಷೆಯು ಮುನ್ಸೂಚನೆ ನೀಡಿದೆ.

6:25 PM

ಬಿಜೆಪಿ 370, ಎನ್‌ಡಿಎ 400: ಫಲಿತಾಂಶದ ಭವಿಷ್ಯ ನುಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ

ದೆಹಲಿ: ಕೊನೆಯ ಹಂತದ ಚುನಾವಣೆ ಮುಕ್ತಾಯವಾದ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫಲಿತಾಂಶದ ಅಂಕಿಅಂಶಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಈ ಬಾರಿ ಬಿಜೆಪಿ ಪಕ್ಷವು 370 ಸ್ಥಾನಗಳಲ್ಲಿ ಜಯ ಗಳಿಸಿದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟವು ಒಟ್ಟು 400 ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

6:22 PM

My Prediction: ಸಾಮಾಜಿಕ ಮಾಧ್ಯಮಗಳಲ್ಲಿ ಎಕ್ಸಿಟ್ ಪೋಲ್ ಹವಾ

ಪ್ರಮುಖ ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟರ್‌) ಮೂಲಕ ಹಲವರು ತಮ್ಮ ಊಹೆಯ ಸಂಖ್ಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. My Prediction (ನನ್ನ ಮುನ್ನೋಟ), Exit Poll (ಮತಗಟ್ಟೆ ಸಮೀಕ್ಷೆ), ಎನ್‌ಡಿಎ 370, ಎನ್‌ಡಿಎ 400, YSRCP Winning Big (ವೈಎಸ್‌ಆರ್‌ಸಿಪಿಗೆ ಬೃಹತ್ ಗೆಲುವು), ಬಿಜೆಪಿ 325 ಸೇರಿದಂತೆ ಮತಗಟ್ಟೆ ಸಮೀಕ್ಷೆಗೆ ಸಂಬಂಧಿಸಿದ ಹಲವು ಹ್ಯಾಷ್‌ ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ.

6:20 PM

295 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಜಯ: ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ

ದೆಹಲಿ: ಮತಗಟ್ಟೆ ಸಮೀಕ್ಷೆ ಕುರಿತು ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸಿದ್ದ ಕಾಂಗ್ರೆಸ್ ಪಕ್ಷವು ಶನಿವಾರ (ಜೂನ್ 1) ಸಂಜೆಯ ವೇಳೆಗೆ ತನ್ನ ನಿರ್ಧಾರ ಬದಲಿಸಿದೆ. 'ಇಂಡಿಯಾ ಒಕ್ಕೂಟವು ಈ ಬಾರಿ ಕನಿಷ್ಠ 295 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಮತಗಟ್ಟೆ ಸಮೀಕ್ಷೆ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತೇವೆ' ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಘೋಷಿಸಿದರು. ಈ ಮೊದಲು ಖರ್ಗೆ ಅವರು 128 ಕ್ಷೇತ್ರಗಳಲ್ಲಿ ಇಂಡಿಯಾ ಒಕ್ಕೂಟ ಜಯ ಗಳಿಸಲಿದೆ ಎಂದಿದ್ದರು. ಇಂಡಿಯಾ ಒಕ್ಕೂಟದ ಸಹವರ್ತಿ ಪಕ್ಷಗಳ ಸಭೆಯ ನಂತರ 295 ಕ್ಷೇತ್ರಗಳಲ್ಲಿ ಜಯಗಳಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

5:45 PM

ಎಕ್ಸಿಟ್‌ ಪೋಲ್‌ ನಡೆಸುವ ಸಂಸ್ಥೆಗಳು

ಎಕ್ಸಿಸ್ ಮೈ ಇಂಡಿಯಾ ಇಂಡಿಯಾ ಟುಡೇ, ಟುಡೇಸ್ ಚಾಣಕ್ಯ, ನ್ಯೂ,ಸ್ 24, , ಇಂಡಿಯಾ ಟಿವಿ, ಸಿಎನ್ಎಕ್ಸ್, ಜನ್‌ ಕಿ ಬಾತ್, ಟೈಮ್ಸ್ ನೌ, ರಿಪಬ್ಲಿಕ್, ಸಿ ವೋಟರ್, ನ್ಯೂಸ್ ನೇಷನ್, ಎಬಿಪಿ ನ್ಯೂಸ್, ನ್ಯೂಸ್ ಎಕ್ಸ್ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮ ಹಾಗೂ ಸಂಸ್ಥೆಗಳು ಎಕ್ಸಿಟ್‌ ಪೋಲ್‌ ಸರ್ವೆ ನಡೆಸುತ್ತವೆ.

4.30 PM

ಎಕ್ಸಿಟ್‌ ಪೋಲ್‌ ಚರ್ಚೆಯಲ್ಲಿ ಭಾಗವಹಿಸುತ್ತಿಲ್ಲ ಕಾಂಗ್ರೆಸ್‌

ಇಂದು 7ನೇ ಹಾಗೂ ಅಂತಿಮ ಹಂತದ ಚುನಾವಣೆಯ ಬಳಿಕ ನಡೆಯಲಿರುವ ಎಕ್ಸಿಟ್‌ ಪೋಲ್‌ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕಾಂಗ್ರೆಸ್‌ ತಿಳಿಸಿದೆ. ಜೂನ್‌ 4 ರ ಫಲಿತಾಂಶ ಹೊರ ಬರುವ ಮುನ್ನ ಯಾವುದೇ ಊಹಾಪೋಹಗಳಿಗೆ ಕಾಂಗ್ರೆಸ್‌ ತಲೆ ಕೊಡುವುದಿಲ್ಲ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ

4.15 PM

ಅಂತಿಮ ಹಂತದಲ್ಲಿ 3 ಗಂಟೆ ಹೊತ್ತಿಗೆ ಶೇ 49.68 ರಷ್ಟು ಮತದಾನ

2024 ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಇಂದು (ಜೂನ್‌ 1) ನಡೆಯುತ್ತಿದ್ದು, ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶೇ 49.68 ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಶೇ 42.95, ಚಂಢೀಗಡದಲ್ಲಿ ಶೇ 52.61, ಹಿಮಾಚಲ ಪ್ರದೇಶದಲ್ಲಿ ಶೇ 58.41, ಜಾರ್ಖಂಡ್‌ನಲ್ಲಿ ಶೇ 60.14, ಒಡಿಶಾದಲ್ಲಿ ಶೇ ಶೇ 49.77, ಪಂಜಾಬ್‌ನಲ್ಲಿ ಶೇ 46.38, ಉತ್ತರ ಪ್ರದೇಶದಲ್ಲಿ ಶೇ 46.83 ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ 58.46 ರಷ್ಟು ಮತದಾನವಾಗಿದೆ.

3.00 PM

2019ರಲ್ಲಿ ಉತ್ತರ ಪ್ರದೇಶ ಎಕ್ಸಿಟ್ ಪೋಲ್‌ ಭವಿಷ್ಯ ಎಷ್ಟು ನಿಜವಾಗಿತ್ತು?

ಕಳೆದ ಬಾರಿಯ ಚುನಾವಣಾ ಫಲಿತಾಂಶದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಬಿಎಸ್‌ಪಿ ಶಾಕ್‌ ಕೊಟ್ಟಿತ್ತು. ಎಕ್ಸಿಟ್‌ ಪೋಲ್‌ ಲೀಡ್‌ ಲೆಕ್ಕಾಚಾರ ಸರಿಯಾಗಿದ್ದರೂ, ಬಿಎಸ್‌ಪಿ 10 ಕ್ಷೇತ್ರಗಳಲ್ಲಿ ಗೆದ್ದಿತ್ತು. ಎಕ್ಸಿಟ್‌ ಪೋಲ್‌ ಭವಿಷ್ಯವಾಣಿಯ ಸರಿ-ತಪ್ಪು ಲೆಕ್ಕಾಚಾರಗಳು ಹೀಗಿದ್ದವು ನೋಡಿ.

2.55 PM

ಎಕ್ಸಿಟ್ ಪೋಲ್ ಫಲಿತಾಂಶವನ್ನು ಹೇಗೆ ಅಂದಾಜಿಸಲಾಗುತ್ತೆ?

ಲೋಕಸಭಾ ಚುನಾವಣೆ 2024ರ ಎಕ್ಸಿಟ್‌ ಪೋಲ್‌ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ನಡುವೆ ಎಕ್ಸಿಟ್‌ ಪೋಲ್‌ ಎಂದರೇನು, ಮತದಾರರ ಮಾಹಿತಿ ಸಂಗ್ರಹಿಸಿ ಹೇಗೆ ಈ ಸಮೀಕ್ಷೆಗಳ ಫಲಿತಾಂಶಗಳನ್ನು ಅಂದಾಜಿಸಲಾಗುತ್ತದೆ ಎಂಬ ಮಾಹಿತಿ ನೀವು ತಿಳಿಯಬಯಸಿದರೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ

12:10 PM

ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳಿವು

ಎಲ್ಲರ ಗಮನವೂ ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆ ಮೇಲೆಯೇ ಇರುವ ಸಂದರ್ಭ ಇದು. ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಕುತೂಹಲದಿಂದ ಕಾಯುತ್ತಿದ್ದರೂ ಮತ್ತು ಅವುಗಳನ್ನು ಪರಿಶೀಲಿಸಲಾಗಿದ್ದರೂ. ಅವು ನಿಖರವಾಗಿರುವುದಿಲ್ಲ. ಮತಗಟ್ಟೆ ಸಮೀಕ್ಷೆಗಳು ದೋಷರಹಿತವಾಗಿಲ್ಲ. ಆ ಊಹೆಗಳ ನಿಖರ ಮಾಹಿತಿ ಮತ್ತು ಹಲವಾರು ಅಂಶಗಳು ದೋಷಗಳಿಗೆ ಕಾರಣವಾಗುವುದು ಸಹಜ. ಅಂಥ 7 ಕಾರಣಗಳ ವಿವರ ಓದಲು ಈ ಕೊಂಡಿ ಕ್ಲಿಕ್ ಮಾಡಿ - ಲೋಕಸಭಾ ಚುನಾವಣೆ ಮತಗಟ್ಟೆ ಸಮೀಕ್ಷೆಗೆ ಎದುರಾಗುವ ಸವಾಲು, ನಿಖರ ಫಲಿತಾಂಶದ ಮೇಲೆ ಪರಿಣಾಮ ಬೀರುವ ಅಂಶಗಳಿವು

11: 55 AM

ಬಿಜೆಪಿ ಉತ್ತಮ ಸಂಖ್ಯೆಗಳ ಜತೆ ಮರಳಲಿದೆ; ಪ್ರಶಾಂತ್‌ ಕಿಶೋರ್

ಎಕ್ಸಿಟ್‌ ಪೋಲ್‌ಗೂ ಮುನ್ನ ರಾಜಕೀಯ ವಿಶ್ಲೇಷಕ ಪ್ರಶಾಂತ್‌ ಕಿಶೋರ್‌, ಲೋಕಸಭೆ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ‌"ನನ್ನ ಅಂದಾಜಿನ ಪ್ರಕಾರ, ಬಿಜೆಪಿ ಮತ್ತೆ ಈ ಸಲವೂ ಉತ್ತಮ ಸಂಖ್ಯೆಗಳೊಂದಿಗೆ ಅಧಿಕಾರಕ್ಕೆ ಮರಳಲಿದೆ. ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ, ಸೀಟುಗಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಕಾಣದು. ಆದರೆ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಸಾಕಷ್ಟು ಬೆಂಬಲ ಸಿಗಲಿದೆ" ಎಂದಿದ್ದಾರೆ.

11: 15 AM

128 ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು: ಮಲ್ಲಿಕಾರ್ಜುನ್‌ ಖರ್ಗೆ

ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೇಳಿದ್ದಾರೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ 128 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ. ಈ ಗೆಲುವಿನ ಮೂಲಕ ಸತತ ಮೂರನೇ ಬಾರಿ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿರುವ ಬಿಜೆಪಿಗೆ ತಡೆಯಾಗಲಿದೆ ಎಂದಿದ್ದಾರೆ.

10.30 AM

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಬೆನ್ನಲ್ಲೇ ರಾಜ್ಯದಲ್ಲಿ ಸದ್ದು ಮಾಡಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡಿದೆ. ಈ ಕೇಸ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎನ್ನಲಾಗುತ್ತಿದೆ.

10.00 AM

ಸಂಜೆ ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗ

ಜೂನ್‌ 4 ರಂದು ಚುನಾವಣೆ ಫಲಿತಾಂಶ ಪ್ರಕಟಗೊಳ್ಳಲಿದ್ದು ಇಂದು 7ನೇ ಹಂತದ ಮತದಾನ ಪೂರ್ಣಗೊಂಡ ಬಳಿಕ ಚುನಾವಣೋತ್ತರ ಸಮೀಕ್ಷೆಗಳ ವರದಿ ಬಹಿರಂಗಗೊಳ್ಳಲಿದೆ.

9.45 AM

ಬೆಳಗ್ಗೆ 7 ರಿಂದ ಏಳು ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ

ಇಂದು ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಉತ್ತರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಚಂಡೀಗಢಗಳಲ್ಲಿ ಮತದಾನ ನಡೆಯಲಿದೆ. 57 ಕ್ಷೇತ್ರಗಳಲ್ಲಿ 907 ಅಭ್ಯರ್ಥಿಗಳ ಭವಿಷ್ಯಕ್ಕೆ ಇಂದು ತೆರೆ ಬೀಳಲಿದೆ. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸಿರುವ ವಾರಾಣಾಸಿ ಕ್ಷೇತ್ರಕ್ಕೂ ಇಂದು ಮತದಾನ ನಡೆಯುತ್ತಿದೆ.