UP Exit poll: 2019ರಲ್ಲಿ ಉತ್ತರ ಪ್ರದೇಶ ಎಕ್ಸಿಟ್ ಪೋಲ್ ಭವಿಷ್ಯ ಎಷ್ಟು ನಿಜವಾಗಿತ್ತು; ಮತ್ತೆ ಅಚ್ಚರಿ ಮೂಡಿಸುತ್ತಾ BSP?
ಕಳೆದ ಬಾರಿಯ ಚುನಾವಣಾ ಫಲಿತಾಂಶದ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಪ್ರಬಲ ರಾಷ್ಟ್ರೀಯ ಪಕ್ಷಗಳಿಗೆ ಬಿಎಸ್‌ಪಿ ಶಾಕ್ ಕೊಟ್ಟಿತ್ತು. ಎಕ್ಸಿಟ್ ಪೋಲ್ ಲೀಡ್ ಲೆಕ್ಕಾಚಾರ ಸರಿಯಾಗಿದ್ದರೂ, ಬಿಎಸ್‌ಪಿ 10 ಕ್ಷೇತ್ರಗಳಲ್ಲಿ ಗೆದ್ದಿತ್ತು. ಎಕ್ಸಿಟ್ ಪೋಲ್ ಭವಿಷ್ಯವಾಣಿಯ ಸರಿ-ತಪ್ಪು ಲೆಕ್ಕಾಚಾರಗಳು ಹೀಗಿದ್ದವು ನೋಡಿ.
ಜನಸಂಖ್ಯಾ ದೃಷ್ಟಿಯಿಂದ ಭಾರತದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಈ ಬಾರಿ ಚುನಾವಣಾ ಫಲಿತಾಂಶ ಏನಾಗಲಿದೆ ಎಂಬುದು ಸದ್ಯದ ಕುತೂಹಲ. ಇದರ ನಡುವೆ ಕೊನೆಯ ಹಂತದ ಮತದಾನ ಮುಗಿದ ಬೆನ್ನಲ್ಲೇ ಜೂನ್ 1ರ ಶನಿವಾರ ಪ್ರಕಟವಾಗಲಿರುವ ಎಕ್ಸಿಟ್ ಪೋಲ್ ಫಲಿತಾಂಶದ ಮೇಲೆ ದೇಶದ ಜನರ ಚಿತ್ತ ಹರಿದಿದೆ. ಹಾಗಿದ್ದರೆ, ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಎಕ್ಸಿಟ್ ಪೋಲ್ ಭವಿಷ್ಯ ಏನಾಗಿತ್ತು ಎಂಬುದನ್ನು ನೋಡೋಣ. ಅಂತಿಮ ಫಲಿತಾಂಶದಲ್ಲಿ ಒಟ್ಟು 80 ಸ್ಥಾನಗಳ ಪೈಕಿ 64ರಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.
ಇದೀಗ 2024ರ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದ ನಂತರ ಎಕ್ಸಿಟ್ ಪೋಲ್ ಭವಿಷ್ಯವಾಣಿ ಇಂದು ಪ್ರಕಟವಾಗಲಿವೆ. ಈ ಹಿಂದೆ ನಡೆದ ಎಲ್ಲ ಸಮೀಕ್ಷೆಗಳ ಟ್ರೆಂಡ್ ಪ್ರಕಾರ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. 2019ರ ಚುನಾವಣೆಯಲ್ಲೂ, ಉತ್ತರ ಪ್ರದೇಶದ ಹೆಚ್ಚಿನ ಎಲ್ಲಾ ಎಕ್ಸಿಟ್ ಪೋಲ್‌ಗಳು ಬಿಜೆಪಿಯ ಮುನ್ನಡೆಯನ್ನು ಸೂಚಿಸಿದ್ದವು. ಅದರಂತೆಯೇ ಈ ಬಾರಿಯ ಎಕ್ಸಿಟ್ ಪೋಲ್ ಕೂಡಾ ಎನ್‌ಡಿಯೆ ಮುನ್ನಡೆ ಸೂಚಿಸುವ ಸಾಧ್ಯತೆ ಇದೆ. ಆದರೆ, ಇಂಡಿಯಾ ಮೈತ್ರಿಕೂಟದ ಬಲ ಹೆಚ್ಚಿದ್ದು, ಕಾಂಗ್ರೆಸ್‌ಗೆ ಲಾಭದಾಯಕವಾಗಿದೆ.
ಉತ್ತರ ಪ್ರದೇಶದಲ್ಲಿ ನಡೆಸಿದ ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ಇಂಡಿಯಾ ಟುಡೆ-ಆಕ್ಸಿಸ್ ಎನ್‌ಡಿಎಗೆ 62-68 ಸ್ಥಾನಗಳನ್ನು ಅಂದಾಜು ಮಾಡಿತ್ತು. ಯುಪಿಎಗೆ 1-2 ಸ್ಥಾನಗಳು ಮಾತ್ರ ಬರಲಿವೆ ಎಂದು ಹೇಳಿತ್ತು. ಎಸ್‌ಪಿ, ಬಿಎಸ್‌ಪಿ ಪಕ್ಷಗಳ ಮಹಾಮೈತ್ರಿಕೂಟಕ್ಕೆ 10-16 ಸ್ಥಾನಗಳನ್ನು ನೀಡಲಾಗಿತ್ತು. ಸುದ್ದಿ-24 ಮತ್ತು ಟುಡೇಸ್ ಚಾಣಕ್ಯ ಕೂಡ ಹೆಚ್ಚು ಕಡಿಮೆ ಇದೇ ಭವಿಷ್ಯ ನುಡಿದಿತ್ತು. ಎನ್‌ಡಿಎಗೆ 60 (± 5) ಸ್ಥಾನಗಳನ್ನು, ಯುಪಿಎಗೆ 1 (± 2) ಮತ್ತು ಮಹಾಮೈತ್ರಿಕೂಟಕ್ಕೆ 19 (± 6) ಸ್ಥಾನಗಳನ್ನು ನೀಡಿತ್ತು.
ಫಲಿತಾಂಶ ಏನಾಗಿತ್ತು?
2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 9 ಸ್ಥಾನಗಳನ್ನು ಕಳೆದುಕೊಂಡಿತು. ಒಟ್ಟು 80 ಸ್ಥಾನಗಳ ಪೈಕಿ 64ರಲ್ಲಿ ಎನ್‌ಡಿಎ ಗೆದ್ದಿತು. ಇದರಲ್ಲಿ ಬಿಜೆಪಿ 62 ಸ್ಥಾನ ಗಳಿಸಿದರೆ, ಅಪ್ನಾ ದಳ 2 ಸ್ಥಾನಗಳನ್ನು ಗೆದ್ದಿತ್ತು. ಮಹಾಮೈತ್ರಿಕೂಟವು ಹತ್ತು ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮಾತ್ರ ಹೆಸರು ಉಳಿಸಿಕೊಂಡಿತು. ಎಲ್ಲಕ್ಕಿಂತ ಮಿಗಿಲಾಗಿ ಬಿಎಸ್‌ಪಿ 10 ಕ್ಷೇಥ್ರಗಳಲ್ಲಿ ಗೆದ್ದು ಅಚ್ಚರಿ ಮೂಡಿಸಿತ್ತು. ಇದನ್ನು ಎಕ್ಸಿಟ್ ಪೋಲ್ ಸೂಚಿಸಿರಲಿಲ್ಲ.
ಈ ಬಾರಿಯ ಚುನಾವಣಾ ಕಣ ಸಂಪೂರ್ಣ ಭಿನ್ನ
2014ರ ಲೋಕಸಭೆ ಚುನಾವಣೆಯಲ್ಲಿ ಖಾತೆ ತೆರೆಯಲಾಗದ ಬಿಎಸ್‌ಪಿ 10 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಿತು. 2019ರ ಚುನಾವಣೆಯಲ್ಲಿ ಬಿಎಸ್‌ಪಿಯೊಂದಿಗೆ ಮಹಾಮೈತ್ರಿಕೂಟದಲ್ಲಿ ಸ್ಪರ್ಧಿಸಿದ್ದ ಸಮಾಜವಾದಿ ಪಕ್ಷ 5 ಸ್ಥಾನಗಳನ್ನು ಗೆದ್ದಿತ್ತು. ಅದೇ ಸಮಯದಲ್ಲಿ, ಆರ್‌ಎಲ್‌ಡಿ ಮೂರು ಸ್ಥಾನಗಳನ್ನು ಗೆದ್ದಿತು. ಕಳೆದ ಬಾರಿಗಿಂತ ಈ ಬಾರಿ ಭಿನ್ನ ವಾತಾವರಣವಿದೆ. ಈ ಚುನಾವಣೆಯಲ್ಲಿ ಆರ್‌ಎಲ್‌ಡಿ ಪಕ್ಷವು ಎನ್‌ಡಿಎ ಜೊತೆಯಾಗಿದೆ. ಬಿಎಸ್‌ಪಿ ಸ್ವತಂತ್ರವಾಗಿ ಕಣಕ್ಕಿಳಿದು ಪಕ್ಷ ವಿಸ್ತರಿಸುವ ಯೋಚನೆಯಲ್ಲಿದ್ದರೆ, ಸಮಾಜವಾದಿ ಪಕ್ಷವು ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.
2019ರಲ್ಲೂ ಕಾಂಗ್ರೆಸ್ ನಿರಾಶೆ ಅನುಭವಿಸಿತ್ತು. ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ, ಅಮೇಥಿ ಕ್ಷೇತ್ರದಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಎದುರು ಸೋಲನುಭವಿಸಬೇಕಾಯಿತು. ಅವರ ತಾಯಿ ಸೋನಿಯಾ ಗಾಂಧಿ ರಾಯ್‌ಬರೇಲಿಯಿಂದ ಗೆದ್ದರು. ಈ ಬಾರಿ ತಾಯಿಯ ಕ್ಷೇತ್ರದಿಂದ ಮಗ ಕಣಕ್ಕಿಳಿದಿದ್ದಾರೆ. ಕಳೆದ ಚುನಾವಣೆಯಲ್ಲಿ ಏಕಾಂಗಿಯಾಗಿ ಕಣಕ್ಕಿಳಿದು ಒಂದು ಸ್ಥಾನ ಮಾತ್ರ ಪಡೆದಿದ್ದ ಕೈ ಪಕ್ಷವು, ಈ ಬಾರಿ ತನಗಿಂತ ಬಲಿಷ್ಠ ಎಸ್‌ಪಿ ಹಾಗೂ ಎಐಟಿಎಂಸಿ ಜೊತೆಗೆ ಮೈತ್ರಿಕೂಟದಲ್ಲಿ ಅದೃಷ್ಠ ಪರೀಕ್ಷೆಗಿಳಿದಿದೆ.
ಲೋಕಸಭಾ ಚುನಾವಣೆ ಕುರಿತ ಇನ್ನಿತರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಸಂಸತ್ ಪ್ರವೇಶಕ್ಕೆ ರಹದಾರಿಯಂತಿರುವ ಉತ್ತರ ಪ್ರದೇಶದಲ್ಲಿ ತ್ರಿಕೋನ ಪೈಪೋಟಿ; ಯುಪಿ ಚುನಾವಣಾ ಕಣದಲ್ಲಿ ಗೆಲ್ಲೋರ್ಯಾರು