ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿದ್ದೀರಾ; ಹಾಗಿದ್ದರೆ ಅನುಕೂಲ ಮತ್ತು ಅನಾನುಕೂಲ ತಿಳಿಯುವುದು ಒಳ್ಳೆಯದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿದ್ದೀರಾ; ಹಾಗಿದ್ದರೆ ಅನುಕೂಲ ಮತ್ತು ಅನಾನುಕೂಲ ತಿಳಿಯುವುದು ಒಳ್ಳೆಯದು

ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿದ್ದೀರಾ; ಹಾಗಿದ್ದರೆ ಅನುಕೂಲ ಮತ್ತು ಅನಾನುಕೂಲ ತಿಳಿಯುವುದು ಒಳ್ಳೆಯದು

Business News: ನೀವು ಕೂಡ ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡಿದ್ದೀರಾ? ಹಾಗಿದ್ದರೆ, ಅನುಕೂಲ ಮತ್ತು ಅನಾನುಕೂಲಗಳನ್ನು ತಿಳಿಯುವುದು ಉತ್ತಮ.

ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಲಿಂಕ್
ಯುಪಿಐಗೆ ರುಪೆ ಕ್ರೆಡಿಟ್ ಕಾರ್ಡ್ ಲಿಂಕ್

ಭಾರತದ ನಗದು ರಹಿತ ಆರ್ಥಿಕ ವ್ಯವಸ್ಥೆಯಲ್ಲಿ ಯುಪಿಐ (ಯೂನಿಫೈಡ್ ಪೇಮೆಂಟ್ಸ್​ ಇಂಟರ್ಫೇಸ್) ಮತ್ತು ದೇಶೀಯ ಕಾರ್ಡ್ ನೆಟ್‌ವರ್ಕ್ ರುಪೆ (RuPay) ಅತ್ಯಂತ ಮಹತ್ವದ ಪಾತ್ರ ವಹಿಸುತ್ತಿವೆ. ಡಿಜಿಟಲ್​ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡುತ್ತಿರುವ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್​​ಪಿಸಿಐ) ಈ ಎರಡನ್ನೂ ನಿರ್ವಹಣೆ ಮಾಡುತ್ತಿದೆ. ಇದೊಂದು ಲಾಭ ರಹಿತ ಸಂಸ್ಥೆಯಾಗಿದ್ದು, ಹಲವಾರು ಬ್ಯಾಂಕ್​​​ಗಳ ಒಡೆತನದಲ್ಲಿದೆ. 2022ರ ಜೂನ್​ನಲ್ಲಿ ಆರ್​ಬಿಐ, ಕ್ರೆಡಿಟ್​​ ಕಾರ್ಡ್​​ಗಳನ್ನು ಯುಪಿಐಗೆ ಲಿಂಕ್ ಮಾಡಲು ಅವಕಾಶ ಕಲ್ಪಿಸಿತ್ತು. ಆ ಮೂಲಕ ಸ್ಕ್ಯಾನ್ ಮಾಡಿ, ಮೂಲಕ ಪಾವತಿ ಮಾಡಬಹುದು.

ರುಪೆ ಕ್ರೆಡಿಟ್ ಕಾರ್ಡ್​​ಗಳನ್ನು ಯುಪಿಐಗೆ ಲಿಂಕ್ ಮಾಡಲು ಅವಕಾಶ ನೀಡಿದ ಕಾರಣ ಡಿಜಿಟಲ್ ಪಾವತಿ ಮತ್ತು ನಿಧಿ ವರ್ಗಾವಣೆಯ (ಫಂಡ್ ಟ್ರಾನ್ಸ್​ಫರ್​) ಪ್ರಕ್ರಿಯೆ ಸರಳಗೊಳಿಸಿದೆ. ಆದಾಗ್ಯೂ, ಇದು ಸಾಧಕ-ಬಾಧಕಗಳನ್ನು ಹೊಂದಿದೆ. ಫಿನ್‌ಟೆಕ್ ಸಂಸ್ಥೆಯ ಸಹ-ಸಂಸ್ಥಾಪಕ ಮೋಹಿತ್ ಬೇಡಿ ಅವರ ಪ್ರಕಾರ, ಯುಪಿಐಗೆ ಕ್ರೆಡಿಟ್ ಕಾರ್ಡ್‌ಗಳನ್ನು ಲಿಂಕ್ ಮಾಡುವುದು ಕ್ರಾಂತಿಕಾರಿ ಕ್ರಮ ಎಂದು ಹೇಳಿದ್ದಾರೆ. ಆದರೆ ಆರ್ಥಿಕ ಶಿಸ್ತಿನ ಕೊರತೆಯಿದ್ದರೆ ಅದು ಹಾನಿಕಾರಕವಾಗಿದೆ ಎಂದು ಹೇಳಿದ್ದಾರೆ. ಕ್ರೆಡಿಟ್ ಕಾರ್ಡ್‌ಗೆ ಲಿಂಕ್ ಮಾಡಲಾದ ಯುಪಿಐಯಿಂದ ಅನುಕೂಲಗಳು ಹಾಗೂ ಅನಾನುಕೂಲಗಳು ಯಾವುವು ಇಲ್ಲಿವೆ.

ಅನುಕೂಲಗಳು

ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಯುಪಿಐ ಲಿಂಕ್ ಮಾಡಿರುವುದು ಪಾವತಿ ಪ್ರಕ್ರಿಯೆ ಸರಳಗೊಳಿಸಿದೆ. ಒಂದೇ ವೇದಿಕೆಯಲ್ಲಿ ವಿವಿಧ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ. ಯುಪಿಐನೊಂದಿಗೆ ಬಳಕೆದಾರರು ಎಲ್ಲಿಂದಲಾದರೂ ದಿನದ 24 ಗಂಟೆಯೂ ವಹಿವಾಟು ನಡೆಸಬಹುದು. ಬ್ಯಾಂಕ್‌ಗಳಿಗೆ ಭೇಟಿ ನೀಡುವ ಮತ್ತು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇರದು. ಫಿರ್​​ ಟು ಫಿರ್​ ಕಲೆಕ್ಷನ್ (ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಇಲ್ಲದೆ ಇಬ್ಬರು ವ್ಯಕ್ತಿಗಳು ನೇರವಾಗಿ ಸಂವಹನ ನಡೆಸುವ ವೇದಿಕೆ), ವ್ಯಾಪಾರಿಗೆ ಪಾವತಿಸುವುದು, ಯುಟಿಲಿಟಿ ಬಿಲ್ ಪಾವತಿ ಸೇರಿದಂತೆ ವಿವಿಧ ರೀತಿಯ ವಹಿವಾಟುಗಳನ್ನು ಯುಪಿಐ ಮೂಲಕ ನಡೆಸಬಹುದು. ಇದಕ್ಕೆ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್ ಅನ್ನು ಬಳಸಿಕೊಂಡು ಸುಲಭವಾಗಿ ಮಾಡಬಹುದು. ಹೀಗಂತ ಮೋಹಿತ್ ಬೇಡಿ ಹೇಳಿದ್ದಾರೆ.

ಯುಪಿಐ ಬಯೋಮೆಟ್ರಿಕ್ಸ್ ಮತ್ತು ಎಂಪಿನ್​ಗಳ ಬಳಕೆಯಿಂದಾಗಿ ಕ್ರೆಡಿಟ್ ಕಾರ್ಡ್‌ಗಳ ವಂಚನೆ ಮತ್ತು ಅನಧಿಕೃತ ಪ್ರವೇಶದ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಬಳಕೆದಾರರು ವಿವಿಧ ರಿವಾರ್ಡ್ ಪಾಯಿಂಟ್‌ಗಳಿಂದ ಪ್ರಯೋಜನ ಪಡೆಯುತ್ತಾರೆ. ವ್ಯಾಪಾರಿಗಳು ವರ್ಷವಿಡೀ ಒದಗಿಸುವ ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಕ್ರೆಡಿಟ್ ಕಾರ್ಡ್-ಲಿಂಕ್ ಮಾಡಿದ ಯುಪಿಐ ವಹಿವಾಟುಗಳನ್ನು ಲಾಭದಾಯಕ ಆಯ್ಕೆಯನ್ನಾಗಿ ಮಾಡುತ್ತದೆ. ವಹಿವಾಟು ಹೆಚ್ಚಾಗುವ ಕಾರಣ ಬ್ಯಾಂಕ್​​ಗಳಿಂದ ಕಡಿಮೆ ಬಡ್ಡಿದರಕ್ಕೆ ಸಾಲದ ಅವಕಾಶಗಳು ಒದಗಿಬರುತ್ತವೆ. ಕ್ರೆಡಿಟ್ ಕಾರ್ಡ್ ಅನ್ನು ಯುಪಿಐಗೆ ಲಿಂಕ್ ಮಾಡಿದರೆ, ಗ್ರಾಹಕರನ್ನು ಸೆಳೆಯುವ ಮತ್ತು ಉತ್ತೇಜಿಸುವ ಸಲುವಾಗಿ ಲಾಭದಾಯಕ ಪ್ರತಿಫಲ ಕೊಡುಗೆಗಳನ್ನು ನೀಡುತ್ತವೆ.

ಅನಾನುಕೂಲಗಳು

ಆದಾಗ್ಯೂ, ಯುಪಿಐ ಜತೆಗೆ ನಿಮ್ಮ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಿದ್ದರೆ, ಕೆಲವು ಅನಾನುಕೂಲಗಳನ್ನೂ ಬಳಕೆದಾರರು ಎದುರಿಸಬೇಕಾಗುತ್ತದೆ. ಅತಿಯಾದ ಖರ್ಚು ಮಾಡುವ ಅಪಾಯ ಹೆಚ್ಚಿಸುತ್ತದೆ. ಸುಲಭವಾಗಿ ಪಾವತಿ ಮಾಡುವ ಕಾರಣ ಉದ್ವೇಗ ಮತ್ತು ಹಠಾತ್ ಖರೀದಿ ಮತ್ತು ಅನಗತ್ಯ ಖರ್ಚುಗಳಿಗೆ ಕಾರಣವಾಗಬಹುದು. ಇದು ಹಣಕಾಸಿನ ಶಿಸ್ತಿನ ಕೊರತೆ ಅಥವಾ ಲೋಪಕ್ಕೆ ಹಾನಿಕಾರಕವಾಗಬಹುದು. ಅನಗತ್ಯ ಖರ್ಚುಗಳಿಂದ ಕ್ರೆಡಿಟ್ ಕಾರ್ಡ್​​ಗಳಿಗೆ ಸಮಯಕ್ಕೆ ಸರಿಯಾಗಿ ಬಿಲ್ ಪಾವತಿಸದಿದ್ದರೆ, ಸಾಲ ಸಿಗದಿರಬಹುದು. ಹೀಗಾಗಿ, ಮಾಸಿಕ ವಹಿವಾಟುಗಳಿಗೆ ಯುಪಿಐ ಬಳಸುವುದಕ್ಕೂ ಮುನ್ನ ನಿಮ್ಮ ಬಜೆಟ್​ ಸಿದ್ಧಪಡಿಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಖರ್ಚು ಮಾಡಬೇಕು. ಸಾಲವಾಗದಂತೆ ಯೋಜನೆ ರೂಪಿಸಿಕೊಳ್ಳಬೇಕು. ನಿಮ್ಮ ಬಾಕಿ ಇರುವ ಬ್ಯಾಲೆನ್ಸ್‌ಗಳನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ನಿಮ್ಮ ಖರ್ಚುಗಳನ್ನು ಸಮನ್ವಯಗೊಳಿಸಿ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.