India's First Gold ATM: ಈ ಎಟಿಎಂನಲ್ಲಿ ಹಣದ ಬದಲು ಚಿನ್ನ ಬರುತ್ತೆ! ದೇಶದ ಮೊಟ್ಟಮೊದಲ ಚಿನ್ನದ ಎಟಿಎಂ ಇಲ್ಲಿದೆ ನೋಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  India's First Gold Atm: ಈ ಎಟಿಎಂನಲ್ಲಿ ಹಣದ ಬದಲು ಚಿನ್ನ ಬರುತ್ತೆ! ದೇಶದ ಮೊಟ್ಟಮೊದಲ ಚಿನ್ನದ ಎಟಿಎಂ ಇಲ್ಲಿದೆ ನೋಡಿ

India's First Gold ATM: ಈ ಎಟಿಎಂನಲ್ಲಿ ಹಣದ ಬದಲು ಚಿನ್ನ ಬರುತ್ತೆ! ದೇಶದ ಮೊಟ್ಟಮೊದಲ ಚಿನ್ನದ ಎಟಿಎಂ ಇಲ್ಲಿದೆ ನೋಡಿ

ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಮ್ಮ ನೆರೆಯ ರಾಜ್ಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಚಿನ್ನದ ATM ಸ್ಥಾಪನೆಯಾಗಿದೆ. ಇದಲ್ಲದೆ, ಶೀಘ್ರದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇಂತಹದೇ ಯಂತ್ರ ಸ್ಥಾಪಿಸಲಾಗುತ್ತದೆ ಎಂದು ಹೇಳಲಾಗಿದೆ.

ಚಿನ್ನದ ಎಟಿಎಂ
ಚಿನ್ನದ ಎಟಿಎಂ (facebook)

ಎಟಿಎಂ (automated teller machine) ಅಂದ್ರೆ, ಹಣವನ್ನು ಡ್ರಾ ಮಾಡಲು ನೆರವಾಗುವ ಯಂತ್ರ. ಬ್ಯಾಂಕ್‌ನಲ್ಲಿ ಕ್ಯೂ ನಿಂತು, ಸಿಬ್ಬಂದಿಯ ನೆರವಿಂದ ಹಣ ಹಿಂಪಡೆಯುವ ಗೋಜಲು ಬೇಡವೆಂದು, ಸುಲಭವಾಗಿ ನಮ್ಮ ಹಣವನ್ನು ಡ್ರಾ ಮಾಡಿಕೊಳ್ಳಲು ಇರುವ ಸಾಧನವಿದು. ಇದರಲ್ಲಿ ಹಣ ಬಿಟ್ಟು ಬೇರೇನೂ ಸಿಗುವುದಿಲ್ಲ. ಕೆಲವೊಮ್ಮೆ ಈ ಯಂತ್ರಕ್ಕೆ ಹಣ ತುಂಬುವವರ ಎಡವಟ್ಟಿನಿಂದ ನೋಟುಗಳು ಬದಲಾಗಿ ಸುದ್ದಿಯಾಗಿರಬಹುದು. ಆದರೆ, ಹಣದ ಹೊರತಾಗಿ ಎಟಿಎಂನಿಂದ ಬೇರೆನೂ ಬರಲ್ಲ. ಆದರೆ, ಈಗ ಎಟಿಎಂನಿಂದ ಚಿನ್ನವನ್ನು ಕೂಡಾ ಡ್ರಾ ಮಾಡಿಕೊಳ್ಳಬಹುದು. ಇಂತಹ ವಿಶಿಷ್ಟ ಎಟಿಎಂ ಅನ್ನು ಈ ನಗರದಲ್ಲಿ ಸ್ಥಾಪಿಸಲಾಗಿದೆ.

ಹೌದು, ದೇಶದಲ್ಲೇ ಮೊಟ್ಟಮೊದಲ ಬಾರಿಗೆ ನಮ್ಮ ನೆರೆಯ ರಾಜ್ಯ ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ಚಿನ್ನದ ATM ಸ್ಥಾಪನೆಯಾಗಿದೆ. ಇದಲ್ಲದೆ, ಶೀಘ್ರದಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಇಂತಹದೇ ಯಂತ್ರ ಸ್ಥಾಪಿಸಲಾಗುತ್ತದೆ ಎಂದು ಹೇಳಲಾಗಿದೆ.

ಈ ಎಟಿಎಂ ಮೂಲಕ ನಿಮಗೆ ಹಣವನ್ನು ಡ್ರಾ ಮಾಡಲು ಆಗುವುದಿಲ್ಲ. ಕೇವಲ ಚಿನ್ನಕ್ಕಾಗಿ ಮಾತ್ರ ಈ ಎಟಿಎಂ ಮೊರೆ ಹೋಗಬಹುದು. ಇದರ ಮೂಲಕವೇ ಚಿನ್ನವನ್ನು ನೇರವಾಗಿ ಖರೀದಿಸಬಹುದು. ಅಂತಹ ಅತ್ಯುತ್ತಮ ಸೇವೆಗೆ ಮುತ್ತಿನ ನಗರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ದೇಶದ ಮೊದಲ ಚಿನ್ನದ ಎಟಿಎಂ ಎಂಬ ಹೆಗ್ಗಳಿಕೆಗೆ ಈಗ ಹೈಟೆಕ್‌ ಸಿಟಿಯ ಎಟಿಎಂ ಪಾತ್ರವಾಗಿದೆ.

ನಗರದ ಬೇಗಂಪೇಟೆಯ ಅಶೋಕ ರಘುಪತಿ ಚೇಂಬರ್‌ನಲ್ಲಿರುವ ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯಲ್ಲಿ ಈ ಎಟಿಎಂ ಅನ್ನು ಶನಿವಾರ ಉದ್ಘಾಟಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಭಾಗವಹಿಸಿದ್ದರು. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಸಹಾಯದಿಂದ ಈ ಎಟಿಎಂ ಮೂಲಕ ಚಿನ್ನವನ್ನು ಡ್ರಾ ಮಾಡಬಹುದು.

ಈ ಚಿನ್ನದ ಎಟಿಎಂ ಮೂಲಕ ಶೇ.99.99 ಗುಣಮಟ್ಟದ 0.5, 1, 2, 5, 10, 20, 50 ಮತ್ತು 100 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ಹಿಂಪಡೆಯಬಹುದು ಎಂದು ಗೋಲ್ಡ್ ಸಿಕ್ಕಾ ಸಿಇಒ ಸೈಯದ್ ತರುಜ್ ತಿಳಿಸಿದ್ದಾರೆ. ನಾಣ್ಯಗಳ ಗುಣಮಟ್ಟ ಮತ್ತು ಖಾತರಿಯನ್ನು ತಿಳಿಸುವ ದಾಖಲೆಗಳನ್ನು ಸಹ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ. ನಗರದ ಇನ್ನಷ್ಟು ಭಾಗಗಳ ಜೊತೆಗೆ ವಾರಂಗಲ್, ಕರೀಂನಗರ ಮತ್ತು ಪೆದ್ದಪಲ್ಲಿ ಜಿಲ್ಲಾ ಕೇಂದ್ರಗಳಲ್ಲಿಯೂ ಶೀಘ್ರದಲ್ಲೇ ಇಂತಹದೇ ಎಟಿಎಂ ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮರೆಡ್ಡಿ ಮಾತನಾಡಿದರು. ತಂತ್ರಜ್ಞಾನ ಅಭಿವೃದ್ಧಿ ಪಡಿಸುತ್ತಿರುವುದಕ್ಕೆ ಈ ಚಿನ್ನದ ಎಟಿಎಂ ಸಾಕ್ಷಿಯಾಗಿದೆ. ಹೈದರಾಬಾದ್ ನಗರದಲ್ಲಿ ದೇಶದ ಮೊದಲ ಚಿನ್ನದ ಎಟಿಎಂ ಆರಂಭಿಸಿರುವುದು ಶ್ಲಾಘನೀಯ ಎಂದರು. ಹೆಚ್ಚಿನ ವ್ಯವಸ್ಥೆ ಮಾಡಿದರೆ ಇನ್ನೂ ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.