Wolf Attack on Children: ತೋಳಗಳು ಯಾವಾಗ ಮನುಷ್ಯರ ಮೇಲೆ ದಾಳಿ ಮಾಡುತ್ತವೆ, ಮಕ್ಕಳನ್ನೇ ಏಕೆ ಕೊಲ್ಲುತ್ತಿವೆ
Forest News ತೋಳಗಳ( Wolfs Attack) ಮನುಷ್ಯನ ಮೇಲೆ ದಾಳಿ ಮಾಡುವ ಪ್ರಕರಣ ಹೆಚ್ಚುತ್ತಿರುವುದು ಒಂದೆಡೆಯಾದರೆ ಮಕ್ಕಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡುವುದು ಏಕೆ. ಇದಕ್ಕೆ ಇಲ್ಲಿದೆ ಉತ್ತರ.
ಮಾಂಸಾಹಾರಿ ಪ್ರಾಣಿಗಳ ಪಟ್ಟಿಯಲ್ಲಿರುವ ತೋಳಗಳು ಮನುಷ್ಯನ ಮೇಲೆಯೂ ದಾಳಿ ಮಾಡುತ್ತವೆಯೇ. ಮಾಡಿದರೆ ಯಾರ ಮೇಲೆ ದಾಳಿ ಮಾಡಬಹುದು ಎನ್ನುವ ಪ್ರಶ್ನೆ ಎದುರಾಗುತ್ತಿದೆ. ಏಕಂದರೆ ಉತ್ತರ ಪ್ರದೇಶದಲ್ಲಿ ಕಡಿಮೆ ಅವಧಿಯಲ್ಲಿಯೇ ಮಕ್ಕಳು ಸೇರಿ ಒಂಬತ್ತು ಮಂದಿ ತೋಳ ದಾಳಿಗೆ ಬಲಿಯಾಗಿರುವುದು ದೇಶಾದ್ಯಂತ ಸುದ್ದಿಯಾಗುತ್ತಿದೆ. ಇದರಿಂದ ತೋಳದ ಇರುವಿಕೆ ಇರುವ ಎಲ್ಲಾ ರಾಜ್ಯಗಳಲ್ಲೂ ಎಚ್ಚರಿಕೆ ವಹಿಸಲಾಗುತ್ತದೆ. ತೋಳಗಳು ಭಾರತದ ಹಲವು ರಾಜ್ಯಗಳಲ್ಲಿ ನೆಲೆಗೊಂಡಿವೆ. ಅದರಲ್ಲೂ ಕರ್ನಾಟಕದಲ್ಲೂ ಕೆಲವು ಜಿಲ್ಲೆಗಳಲ್ಲಿ ತೋಳಗಳ ಇರುವಿಕೆ ಇದೆ. ಮಂಡ್ಯ ಜಿಲ್ಲೆಯ ಮೇಲುಕೋಟೆ, ಕಲಬುರಗಿಯ ಚಿಂಚೋಳಿ, ಕೊಪ್ಪಳ ಜಿಲ್ಲೆಯ ಬಂಕಾಪುರ ಭಾಗದಲ್ಲಿ ತೋಳಗಳಿವೆ. ಕರ್ನಾಟಕದಲ್ಲಿ ಸೀಮಿತ ಸಂಖ್ಯೆಯಲ್ಲಿ ತೋಳಗಳಿದ್ದರೂ ದಾಳಿ ಮಾಡಿದ ಉದಾಹರಣೆ ಕಡಿಮೆ.
ತೋಳಗಳು ಏಕೆ ದಾಳಿ ಮಾಡುತ್ತವೆ
ತೋಳಗಳು ಸೇರಿದಂತೆ ಎಲ್ಲಾ ದೊಡ್ಡ ಪರಭಕ್ಷಕಗಳು ಮನುಷ್ಯರ ಮೇಲೆ ಬೇಟೆಯಾಡುವ ಸಾಮರ್ಥ್ಯವನ್ನು ಹೊಂದಿದ್ದರೂ, ಅಂತಹ ಘಟನೆಗಳು ಅಪರೂಪ ಮತ್ತು ವಿಶಿಷ್ಟ ಸಂದರ್ಭಗಳಲ್ಲಿ ಎದುರಾಗುತ್ತಿವೆ.
ನೈಸರ್ಗಿಕ ಆವಾಸಸ್ಥಾನಗಳ ಮೇಲೆ ಮಾನವ ಅತಿಕ್ರಮಣ, ಅರಣ್ಯನಾಶ ಮತ್ತು ಸಂಪನ್ಮೂಲಗಳ ಬಳಕೆ ಪೈಪೋಟಿಯಿಂದ ವನ್ಯಜೀವಿಗಳು ಮನುಷ್ಯನ ಮೇಲೆ ದಾಳಿ ಮಾಡುವ ಸಂದರ್ಭ ಸೃಷ್ಟಿಸಬಹುದು. ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿನ ಪ್ರಸ್ತುತ ತೋಳಗಳ ದಾಳಿ ಪ್ರಕರಣದ ಹಿಂದೆ ಇರೋದು ಇದೆ ಅಂಶ ಎಂದು ತಜ್ಞರು ವಿಶ್ಲೇಷಿಸುತ್ತಾರೆ.
ಮಕ್ಕಳ ಮೇಲೆ ಅಧಿಕ
ಭಾರತದಲ್ಲಿ ಮಾನವರ ಮೇಲೆ ತೋಳದ ದಾಳಿಗಳು ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಬಂಗಾಳದಂತಹ ಉತ್ತರದ ರಾಜ್ಯಗಳಲ್ಲೇ ಹೆಚ್ಚು ಕೇಂದ್ರೀಕೃತವಾಗಿವೆ. ವ್ಯಾಪಕವಾದ ಬಡತನ ಮತ್ತು ನೈಸರ್ಗಿಕ ಸಂಪನ್ಮೂಲಗಳಿಗಾಗಿ ಉಂಟಾಗುವ ಸ್ಪರ್ಧೆಯು ಸಾಮಾನ್ಯವಾಗಿ ಮಾನವ-ತೋಳ ಸಂಘರ್ಷಗಳನ್ನು ಉಲ್ಬಣಗೊಳಿಸಿದೆ. ಇಂತಹ ಕಾರಣದಿಂದ ತೋಳಗಳು ಜನರ ಮೇಲೆ ಕಡಿಮೆಯಾದ ಭಯದಿಂದಾಗಿ ಮನುಷ್ಯರ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಅಧಿಕ.
ಅದರಲ್ಲೂ ಮಕ್ಕಳ ಮೇಲೆ ದಾಳಿ ಮಾಡುವ ಸನ್ನಿವೇಶ ಅಧಿಕ. ಏಕೆಂದರೆ ಮಕ್ಕಳು ಅವುಗಳಿಗೆ ಸುಲಭದ ತುತ್ತು. ಮರುದಾಳಿ ಮಾಡುವ ಸಾಧ್ಯತೆ ಅತ್ಯಂತ ಕಡಿಮೆ ಇರುವುದರಿಂದ ತೋಳಗಳು ಮಕ್ಕಳನ್ನೇ ಗುರಿಯಾಗಿಟ್ಟುಕೊಳ್ಳುತ್ತವೆ.
ನಾಲ್ಕು ದಶಕದ ಹಿಂದೆ
ಭಾರತದಲ್ಲಿ ತೋಳದ ದಾಳಿಯ ಇತಿಹಾಸವು ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ. 1985-86ರಲ್ಲಿ ಮಧ್ಯಪ್ರದೇಶದ ಆಸ್ತಾದಲ್ಲಿ ತೋಳದ ಹಿಂಡು 17 ಮಕ್ಕಳನ್ನು ಕೊಂದಿತ್ತು. ಆರಂಭದಲ್ಲಿ, ಒಂದೇ ತೋಳದ ಕೃತ್ಯ ಇರಬೇಕು ಎನ್ನುವ ಸಂಶಯವಿತ್ತಾದರೂ ನಂತರ, ನಾಲ್ಕು ತೋಳಗಳನ್ನು ಗುರುತಿಸಿ ಕೊಲ್ಲಲಾಯಿತು. ಅದೇ ರೀತಿ, 1993 ಮತ್ತು 1995 ರ ನಡುವೆ, ಬಿಹಾರದ ಹಜಾರಿಬಾಗ್‌ನಲ್ಲಿ 60 ಮಕ್ಕಳ ಸಾವಿಗೆ ತೋಳದ ಗುಂಪು( Pack) ಕಾರಣವಾದವು.
1996 ರಲ್ಲಿ ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಶೋಧಕರಾದ ವೈವಿ ಝಾಲಾ ಮತ್ತು ಡಿಕೆ ಶರ್ಮಾ ಅವರ ಅಧ್ಯಯನವು ಪೂರ್ವ ಉತ್ತರ ಪ್ರದೇಶದಲ್ಲಿ 76 ಮಕ್ಕಳ ಮೇಲೆ ತೋಳದ ದಾಳಿಯನ್ನು ಪರಿಶೀಲಿಸಿತ್ತು.ತೋಳ ಏಕಾಂಗಿಯಾಗಿರುವುದು ಕಡಿಮೆ. ತಂಡವಾಗಿದ್ದುಕೊಂಡು ಹೀಗೆ ಒಂದೊಂದೇ ದಾಳಿ ಮಾಡುವ ಸಾಧ್ಯತೆ ಅಧಿಕ. ಕ್ಷೀಣಿಸಿದ ಕಾಡು ಬೇಟೆಯ ಪ್ರಮಾಣದಿಂದ ಅವು ಅರಣ್ಯದಂಚಿನ ಗ್ರಾಮಗಳ ಮೇಲೆ ದಾಳಿ ಮಾಡುತ್ತಿರುವುದು ಸಂಶೋಧನೆಯಿಂದ ಬಯಲಾಗಿತ್ತು.
ಏನಾಗಬೇಕಿದೆ
ಫೆಬ್ರವರಿ ಮತ್ತು ಆಗಸ್ಟ್ 2003 ರ ನಡುವೆ ತೋಳಗಳ ದಾಳಿಯಲ್ಲಿ 10 ಮಕ್ಕಳು ಸಾವನ್ನಪ್ಪಿದ ಬಹ್ರೈಚ್‌ನ ಪಕ್ಕದಲ್ಲಿರುವ ಬಲರಾಮ್‌ಪುರ ಜಿಲ್ಲೆಯಲ್ಲಿ ಇದೇ ಮಾದರಿಯನ್ನು ಹೋಲುತ್ತಿದ್ದವು. ಸಾಮಾನ್ಯವಾಗಿ ಮಾರ್ಚ್ ನಲ್ಲಿ ಅವುಗಳ ದಾಳಿ ಶುರುವಾಗಿ ಅದು ಜುಲೈ ಆಗಸ್ಟ್‌ವರೆಗೂ ವಿಸ್ತರಣೆಯಾಗಬಹುದು. ತೋಳಗಳು ತನ್ನ ಮರಿಗಳನ್ನು ಹಾಲು ಕುಡಿಸುವುದರಿಂದ ದೂರ ಮಾಡುವಾಗ ಸುಲಭವಾಗಿ ಸಿಗುವ ಆಹಾರ ಹುಡುಕಿ ಬರುತ್ತವೆ. ಆಗ ಮಕ್ಕಳ ಮೇಲೆ ದಾಳಿಯಾಗುವ ಸಾಧ್ಯತೆ ಅಧಿಕ. ಊರ ಸಮೀಪದ ಗುಹೆ( Den) ಗಳಲ್ಲಿ ಉಳಿಯುವ ಅವುಗಳ ಆವಾಸ ಸ್ಥಾನವನ್ನು ಉಳಿಸಿದರೆ ಮಾತ್ರ ಸಂಘರ್ಷ ತಪ್ಪಿಸಬಹುದು. ಇದು ಮುಂದೆ ಕರ್ನಾಟಕದಂತಹ ತೋಳ ಇರುವ ಸೀಮಿತ ಪ್ರದೇಶಗಳಲ್ಲೂ ಆಗಬಹುದು ಎನ್ನುವ ಅಭಿಪ್ರಾಯಗಳಿವೆ.