Ramesh Jigajinagi: ರಾಜಕಾರಣದ ಅನುಭವದ ಗಣಿ ರಮೇಶ್‌ ಜಿಗಜಿಣಗಿಗೆ ಬಿಜೆಪಿ ಟಿಕೆಟ್‌; ಇನ್ಸ್‌ಪೆಕ್ಟರ್‌ ಆಗಬೇಕಾದವರು ಮಿನಿಸ್ಟರ್‌ ಆದ್ರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ramesh Jigajinagi: ರಾಜಕಾರಣದ ಅನುಭವದ ಗಣಿ ರಮೇಶ್‌ ಜಿಗಜಿಣಗಿಗೆ ಬಿಜೆಪಿ ಟಿಕೆಟ್‌; ಇನ್ಸ್‌ಪೆಕ್ಟರ್‌ ಆಗಬೇಕಾದವರು ಮಿನಿಸ್ಟರ್‌ ಆದ್ರು

Ramesh Jigajinagi: ರಾಜಕಾರಣದ ಅನುಭವದ ಗಣಿ ರಮೇಶ್‌ ಜಿಗಜಿಣಗಿಗೆ ಬಿಜೆಪಿ ಟಿಕೆಟ್‌; ಇನ್ಸ್‌ಪೆಕ್ಟರ್‌ ಆಗಬೇಕಾದವರು ಮಿನಿಸ್ಟರ್‌ ಆದ್ರು

ಹಾಲಿ ಸಂಸದರಾಗಿರುವ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಜಿಗಜಿಣಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. (ವರದಿ: ಸಮೀವುಲ್ಲಾ ಉಸ್ತಾದ)

ರಾಜಕಾರಣದ ಅನುಭವದ ಗಣಿ ರಮೇಶ್‌ ಜಿಗಜಿಣಗಿಗೆ ಬಿಜೆಪಿ ಟಿಕೆಟ್‌
ರಾಜಕಾರಣದ ಅನುಭವದ ಗಣಿ ರಮೇಶ್‌ ಜಿಗಜಿಣಗಿಗೆ ಬಿಜೆಪಿ ಟಿಕೆಟ್‌

ವಿಜಯಪುರ: ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಅಕಾಂಕ್ಷಿಯಾಗಿದ್ದ ರಮೇಶ ಜಿಗಜಿಣಗಿ ಅವರಿಗೆ ಮತ್ತೊಮ್ಮೆ ಅವಕಾಶ ಒಲಿದು ಬಂದಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಸಂಸದ ರಮೇಶ ಜಿಗಜಿಣಗಿ ಟಿಕೆಟ್ ಕೈ ತಪ್ಪಲಿದೆ ಎಂಬ ವದಂತಿಗಳು ಸದ್ದು ಮಾಡಿದ ಬೆನ್ನಲ್ಲೇ ನಿನ್ನೆಯಷ್ಟೇ (ಮಾರ್ಚ್‌ 12) ಸಂಸದ ಜಿಗಜಿಣಗಿ ತಮಗೆ ಟಿಕೆಟ್ ಪಕ್ಕಾ ಎಂದು ಭರವಸೆಯ ಮಾತುಗಳನ್ನಾಡುವ ಮೂಲಕ ಟಿಕೆಟ್ ತಪ್ಪುವುದಿಲ್ಲ ಎಂದು ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದರು.

ರಾಜ್ಯದ 9 ಜನ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ್ದರೂ ಸಹ ಹೈಕಮಾಂಡ್ ಮಟ್ಟದಲ್ಲಿ ಪ್ರಬಲವಾಗಿರುವ ರಮೇಶ ಜಿಗಜಿಣಗಿ ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿಕೊಂಡು ಸ್ಪರ್ಧೆಗೆ ಉತ್ಸಾಹದಿಂದ ಅಣಿಯಾಗಿದ್ದಾರೆ.

ಹಾಲಿ ಸಂಸದರಾಗಿರುವ ರಮೇಶ ಜಿಗಜಿಣಗಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದಾರೆ. 1957 ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರ ರಚನೆಯಾದಾಗಿನಿಂದ ಇಲ್ಲಿಯವರೆಗೂ ರಮೇಶ ಜಿಗಜಿಣಗಿ ಹೊರತುಪಡಿಸಿ ಯಾರೊಬ್ಬರು ಹ್ಯಾಟ್ರಿಕ್ ಗೆಲುವು ದಾಖಲಿಸಿಲ್ಲ. ಈಗ ನಾಲ್ಕನೇಯ ಬಾರಿಗೆ ಮತ್ತೊಮ್ಮೆ ಜಿಗಜಿಣಗಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.

ಮಾತು ಖಡಕ್ ಆದರೂ ಹೃದಯ ಮಾತ್ರ ಮೃದು, ಎಲ್ಲರಿಗೂ ಕಾಕಾ, ಬಾಬಾ ಎಂದು ಆತ್ಮೀಯತೆಯಿಂದ ಮಾತನಾಡುವ ವ್ಯಕ್ತಿತ್ವ, ಎಲ್ಲರಲ್ಲೂ ಆಪ್ತವಾಗಿ ಬೆರೆಯುವ ಜಿಗಜಿಣಗಿ ಈ ಹಿಂದಿನ ಅವಧಿಯಲ್ಲಿ ಕೇಂದ್ರ ನೀರು ಸರಬರಾಜು ಹಾಗೂ ಒಳಚರಂಡಿ ಖಾತೆಯ ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.

ಇನ್ಸಪೆಕ್ಟರ್ ಆಗುವ ಬದಲು ಮಿನಿಸ್ಟರ್ ಆದರು....

ಪೊಲೀಸ್ ಇನ್ಸಪೆಕ್ಟರ್ ಆಗುವ ಗುರಿ ಹೊಂದಿದ್ದ ರಮೇಶ ಜಿಗಜಿಣಗಿ ಇನ್ಸಪೆಕ್ಟರ್ ಆಗಲಿಲ್ಲ, ಆದರೆ ಆ ಇಲಾಖೆಯ ಸಂಪೂರ್ಣ ಸಾರಥ್ಯದ ಹೋಂ ಮಿನಿಸ್ಟರ್ ಆಗಿ ಹೊರಹೊಮ್ಮಿದರು. ದಿವಂಗತ ಜೆ.ಎಚ್. ಪಟೇಲ್, ದಿ. ರಾಮಕೃಷ್ಣ ಹೆಗಡೆ ಅವರನ್ನು ತಮ್ಮ ಎರಡು ಕಣ್ಣುಗಳು ಎಂದು ಪರಿಭಾವಿಸುವ ರಮೇಶ ಜಿಗಜಿಣಗಿ ರಾಜಕಾರಣದಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಗಿಟ್ಟಿಸಿಕೊಂಡವರು.

1978 ರಲ್ಲಿ ಇಂಡಿ ತಾಲ್ಲೂಕು ಅಭಿವೃದ್ಧಿ ಮಂಡಳಿ ಸದಸ್ಯರಾಗಿ, 1980ರಲ್ಲಿ ಇಂಡಿ ಭೂ-ನ್ಯಾಯ ಮಂಡಳಿ ಸದಸ್ಯರಾಗಿ ಸಾರ್ವಜನಿಕ ಸೇವೆ ಆರಂಭಿಸಿದ ಅವರು 1983, 1985 ಹಾಗೂ 1994 ರಲ್ಲಿ ಆಗಿನ ಬಳ್ಳೋಳ್ಳಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1984-85 ರಲ್ಲಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಲ್ಲಿ ಗೃಹ ಖಾತೆ, 1984-85 ರಲ್ಲಿ ಅಬಕಾರಿ ಖಾತೆ, 1996-98 ದಿವಂಗತ ಜೆ.ಎಚ್. ಪಟೇಲರ ಸಚಿವ ಸಂಪುಟದಲ್ಲಿ ಸಮಾಜ ಕಲ್ಯಾಣ, ಕಂದಾಯ ಸಚಿವರಾಗಿದ್ದರು. ಈಗ ರಾಜ್ಯದಾದ್ಯಂತ ಜನಪ್ರಿಯತೆ ಪಡೆದುಕೊಂಡಿರುವ ಗಂಗಾ ಕಲ್ಯಾಣ ಯೋಜನೆಯನ್ನು ರೂಪಿಸಿದ ಶ್ರೇಯಸ್ಸು ಜಿಗಜಿಣಗಿ ಅವರಿಗೆ ಸಲ್ಲುತ್ತದೆ.

ನಂತರ ಬೆಳಗಾವಿಯ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ 1998, 1999, 2004 ಹೀಗೆ ಮೂರು ಬಾರಿ ಸಂಸದರಾಗಿ ಆಯ್ಕೆಯಾದರು. ನಂತರ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಮರಳಿದ ಜಿಗಜಿಣಗಿ, 2009, 2014 ಹಾಗೂ 2019 ರಲ್ಲಿ ಸತತ ಮೂರು ಬಾರಿ ಗೆಲುವಿನ ನಗೆ ಬೀರಿದ್ದು, 2016 ರಲ್ಲಿ ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯೀಕರಣ ಖಾತೆಯ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಚಿಕ್ಕೋಡಿ, ವಿಜಯಪುರ ಸೇರಿದಂತೆ ಒಟ್ಟು ಆರು ಬಾರಿ ಸಂಸದರಾದ ಕೀರ್ತಿ ರಮೇಶ ಜಿಗಜಿಣಗಿ ಅವರಿಗೆ ಸಲ್ಲುತ್ತದೆ.

ವರದಿ: ಸಮೀವುಲ್ಲಾ ಉಸ್ತಾದ

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.