ಕಾಶ್ಮೀರಿ ಜನರಿಂದ ಆ ಸ್ಥಳದ ಇತಿಹಾಸ ಕೇಳದೆ ಸತ್ಯ ಮರೆಮಾಚಿದ್ದೇಕೆ; ಅಮರನ್ ನಿರ್ದೇಶಕನಿಗೆ ತಿರುಮುರುಗನ್ ಗಾಂಧಿ ಪ್ರಶ್ನೆ
Amaran Movie row: ಅಮರನ್ ಚಿತ್ರಕ್ಕಾಗಿ ಸೇನೆಯ ಒಪ್ಪಿಗೆ ಪಡೆದ ನೀವು-ಕಾಶ್ಮೀರಿ ಜನರಿಂದ ಆ ಸ್ಥಳದ ಇತಿಹಾಸ ಕೇಳದೆ ಸತ್ಯವನ್ನು ಏಕೆ ಮರೆಮಾಚಿದ್ದೀರಿ? ಕಾಶ್ಮೀರಿಗಳ ದೃಷ್ಟಿಕೋನದಿಂದ ಈ ಸ್ಥಳದ ಕಥೆಯನ್ನು ಹೇಳಲು ನಿಮಗೆ ಮನಸ್ಸಾಗಲಿಲ್ಲವೇ? ಎಂದು ಮೇ 17 ಚಳವಳಿಯ ಕಾರ್ಯಕರ್ತ ಮತ್ತು ಸಂಸ್ಥಾಪಕ ತಿರುಮುರುಗನ್ ಗಾಂಧಿ ಕಿಡಿಕಾರಿದ್ದಾರೆ.
ಶಿವಕಾರ್ತಿಕೇಯನ್-ಸಾಯಿ ಪಲ್ಲವಿ ಅಭಿನಯದ ಅಮರನ್ ಸುತ್ತ ವಿವಾದಗಳು ಮುಂದುವರೆದಿವೆ. ಮೇ 17 ಚಳವಳಿಯ ಕಾರ್ಯಕರ್ತ ಮತ್ತು ಸಂಸ್ಥಾಪಕ ತಿರುಮುರುಗನ್ ಗಾಂಧಿ ಅವರು ಸೇನೆ ಪ್ರಚಾರ ಎಂದು ಕರೆದಿದ್ದಾರೆ. ಚಿತ್ರದ ವಿರುದ್ಧ ಇಸ್ಲಾಮೋಫೋಬಿಯಾ ಟೀಕೆ ಕೇಳಿ ಬಂದ ನಂತರ ನವೆಂಬರ್ 11ರಂದು ಪತ್ರಿಕಾಗೋಷ್ಠಿ ನಡೆಸಿದ ಅಮರನ್ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಪ್ರಶ್ನೆಗಳು ಉತ್ತರಿಸಿದ್ದರು. ನಿರ್ದೇಶಕನ ಹೇಳಿಕೆಗೆ ಪ್ರತಿಕ್ರಿಯಿಸಿದ ತಿರುಮುರುಗನ್, ವಾಗ್ದಾಳಿ ನಡೆಸಿದ್ದಾರೆ. ಸ್ಥಳೀಯ ಜನರಿಂದಲೇ ಯಾವುದೇ ಮಾಹಿತಿ ಹೇಗೆ ಸಿನಿಮಾ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಅಮರನ್ ಚಿತ್ರದ ವಿರುದ್ಧ ಹೆಚ್ಚುತ್ತಿರುವ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ್ದ ರಾಕುಮಾರ್, 'ಇದು ನನ್ನ ರಾಜಕೀಯ ದೃಷ್ಟಿಕೋನದ ಚಿತ್ರವಲ್ಲ. ನಿರ್ದೇಶಕನಾಗಿ ನಾನು ನನ್ನದೇ ಆದ ಅಭಿಪ್ರಾಯ ಹೊಂದಿದ್ದು, ಅದೇ ಪಾತ್ರಗಳನ್ನು ಕಣಕ್ಕಿಳಿಸಿದ್ದೇನೆ. ಒಪ್ಪಿಗೆ ಇಲ್ಲದೆ ಭಾರತೀಯ ಸೇನೆಯ ಮೇಲೆ ಸಿನಿಮಾ ಮಾಡಲು ಸಾಧ್ಯವಿಲ್ಲ. ಒಪ್ಪಿಗೆ ಪಡೆದಿರುವ ಕುರಿತು ನಮ್ಮ ಬಳಿ ಅಗತ್ಯ ದಾಖಲೆಗಳಿವೆ. ಅಮರನ್ ತೆರೆಗೆ ಬರುವುದಕ್ಕೂ ಮುನ್ನ ಇಂಡಿಯನ್ ಆರ್ಮಿಯ ರಕ್ಷಣಾ ಸಚಿವಾಲಯ ಮತ್ತು ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಡೈರೆಕ್ಟರೇಟ್ ಜನರಲ್ಗೆ (ಎಡಿಜಿಪಿಐ) ಪ್ರದರ್ಶಿಸಲಾಗಿತ್ತು. ಅವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು' ಎಂದು ಅವರು ಹೇಳಿದ್ದರು.
ಸತ್ಯ ಮರೆಮಾಚಿದ್ದೇಕೆ ಎಂದ ಗಾಂಧಿ
ಇದಕ್ಕೆ ಪ್ರತಿಕ್ರಿಯಿಸಿದ ತಿರುಮುರಗನ್ ಅವರು ರಾಜ್‌ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಭಾರತೀಯ ಸೇನೆಯ ಪ್ರಚಾರಕ್ಕಾಗಿ ನೀವು ಚಿತ್ರವನ್ನು ನಿರ್ಮಿಸಿದ್ದೀರಿ ಎಂದು ನೀವು ಒಪ್ಪಿಕೊಂಡಿದ್ದೀರಿ. ಇದನ್ನು ಕೇಳಲು ನಮಗೆ ಸಂತೋಷವಾಗಿದೆ. ಆದರೆ ನಮ್ಮ ಪ್ರಶ್ನೆ ಏನೆಂದರೆ ಸೇನೆಯ ಒಪ್ಪಿಗೆ ಪಡೆದ ನೀವು-ಕಾಶ್ಮೀರಿ ಜನರಿಂದಲೇ ಆ ಸ್ಥಳದ ಇತಿಹಾಸ ಕೇಳದೆ ಸತ್ಯವನ್ನು ಏಕೆ ಮರೆಮಾಚಿದ್ದೀರಿ? ಕಾಶ್ಮೀರಿಗಳ ದೃಷ್ಟಿಕೋನದಿಂದ ಈ ಸ್ಥಳದ ಕಥೆಯನ್ನು ಹೇಳಲು ನಿಮಗೆ ಮನಸ್ಸಾಗಲಿಲ್ಲವೇ? ಎಂದು ತಿರುಮುರುಗನ್ ಪ್ರಶ್ನಿಸಿದ್ದಾರೆ. ಸ್ಥಳೀಯರಿಂದಲೂ ಮಾಹಿತಿ ಪಡೆದಿದ್ದರೆ, ಅಲ್ಲಿನ ಚಿತ್ರಣ ಹೇಗಿತ್ತು ಎನ್ನುವುದು ನಿಮಗೆ ಸ್ಪಷ್ಟವಾಗುತ್ತಿತ್ತು. ಆದರೆ ಆ ಕೆಲಸಕ್ಕೆ ನೀವು ಮುಂದಾಗಲಿಲ್ಲ. ಮೂಲವನ್ನೇ ಬಿಟ್ಟು ಸಿನಿಮಾ ಮಾಡಿದರೆ ಜನರಿಗೆ ಅಲ್ಲಿನ ಚಿತ್ರಣದ ಕುರಿತು ಸ್ಪಷ್ಟನೆ ಸಿಗುತ್ತದೆ ಎಂದು ಹೇಳಿದ್ದಾರೆ.
ಅಮರನ್ 2014ರಲ್ಲಿ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಯುದ್ಧದಲ್ಲಿ ಕೊಲ್ಲಲ್ಪಟ್ಟ ಚೆನ್ನೈನ ಮರಣೋತ್ತರ ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಚರಿತ್ರೆಯಾಗಿದೆ. ಈ ತಿಂಗಳ ಆರಂಭದಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಪ್ರತಿಭಟಿಸಿದ್ದವು. ಇದು ಸಂಪೂರ್ಣ ಜೀವನಚರಿತ್ರೆ ಅಲ್ಲ. ಮುಸ್ಲಿಮರ ವಿರುದ್ಧ ದ್ವೇಷವನ್ನು ಬಿತ್ತಲು ಅಮರನ್ ಮಾಡಲಾಗಿದೆ ಎಂದು ಸಂಘಟನೆಗಳು ಆರೋಪಿಸಿದ್ದವು. ಅಮರನ್ ಅನ್ನು ದಿ ಕಾಶ್ಮೀರ್ ಫೈಲ್ಸ್ (2022) ಮತ್ತು ದಿ ಕೇರಳ ಸ್ಟೋರಿ (2023) ಅಂತಹ ವಿವಾದಾತ್ಮಕ ಮುಸ್ಲಿಂ ವಿರೋಧಿ ಚಿತ್ರಗಳಿಗೆ ಹೋಲಿಸಿದ್ದಾರೆ.
ಯಾವ ದೃಷ್ಟಿಕೋನದಿಂದ ಹೇಳುತ್ತೀರಾ ಎಂದು ಪ್ರಶ್ನಿಸಿದ ಗಾಂಧಿ
ನೀವು ತಮಿಳು ಈಳಂ ಕಥೆಯನ್ನು ಈಳಂ ತಮಿಳರ ದೃಷ್ಟಿಕೋನದಿಂದ ಹೇಳುತ್ತೀರಾ ಅಥವಾ ಶ್ರೀಲಂಕಾ ಸೇನೆಯಿಂದ ಹೇಳುತ್ತೀರಾ? ಸ್ಟೆರ್ಲೈಟ್ ಹತ್ಯಾಕಾಂಡದ ಬಗ್ಗೆ ಸಿನಿಮಾ ಮಾಡುತ್ತಿದ್ದರೆ ತೂತುಕುಡಿ ಜನರ ಪರ ಹೇಳುತ್ತೀರಾ ಅಥವಾ ಪೊಲೀಸರ ಪರ ಹೇಳುತ್ತೀರಾ? ಹಿಂದಿ ವಿರೋಧಿ ಆಂದೋಲನದ ಮೇಲೆ ತಮಿಳರ ವಿರುದ್ಧ ಚಿತ್ರ ನಿರ್ಮಿಸಿದಂತೆಯೇ ಈ ಚಿತ್ರವು ಕಾಶ್ಮೀರದ ಜನರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಅದೇ ರೀತಿ ಕಾಶ್ಮೀರ ಜನರ ಮಾಹಿತಿ ಪಡೆಯದೆ ಅಲ್ಲಿನವರ ವಿರುದ್ಧವಾಗಿ ತೋರಿಸಲಾಗಿದೆ. ನಾವು ಯಾವುದರ ಬಗ್ಗೆ ಸಿನಿಮಾ ಮಾಡುತ್ತೇವೆಯೋ, ಅಲ್ಲಿನ ಸ್ಪಷ್ಟವಾದ ಮಾಹಿತಿ ಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.