ರಾಜೀವ್ ಹೆಗಡೆ ಲೇಖನ: ವೊಲ್ವೋಗೆ ಬೈಯ್ಯುವುದಲ್ಲ, ತುಮಕೂರು ಹೆದ್ದಾರಿಯ ಅಸಲಿ ಕೊಲೆಗಾರರನ್ನು ಶಿಕ್ಷಿಸಿ !
ಹೊಸದಾಗಿ ಕೊಂಡ ಕಾರಿನಲ್ಲಿ ಹೊರಟಿದ್ದ ಕುಟುಂಬ ಅಪಘಾತಕ್ಕೆ ಕಳೆದ ವಾರ ಬಲಿಯಾಯಿತು. ಅಪಘಾತದ ಹಿಂದಿರುವ ಬೆಂಗಳೂರು ತುಮಕೂರು ಹೆದ್ದಾರಿಯ ಸ್ಥಿತಿಗತಿಯ ಚಿತ್ರಣವನ್ನು ಪತ್ರಕರ್ತ, ಲೇಖಕ ರಾಜೀವ್ ಹೆಗಡೆ ಬಿಡಿಸಿಟ್ಟಿದ್ದಾರೆ.
ಮೊನ್ನೆಯಷ್ಟೆ ತುಮಕೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತವಾಗಿ, ಒಂದೇ ಕುಟುಂಬದ ಆರು ಜನರು ಅಗಲಿದ ಸುದ್ದಿಯು ಸಾಕಷ್ಟು ಜನರನ್ನು ವಿಚಲಿತಗೊಳಿಸಿದೆ. ಇದರ ಬೆನ್ನಲ್ಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೋಲ್ವೋ ಕಂಪೆನಿಯ ಕಾರಿನ ಸುರಕ್ಷತೆ ಹಾಗೂ ಜಾಹೀರಾತಿನ ಬಗ್ಗೆ ಚರ್ಚೆ ಆರಂಭವಾಗಿದೆ. ಕೆಲವರಂತೂ ಮನಸ್ಸಿಗೆ ಬಂದಂತೆ ವೋಲ್ವೋ ಕಾರಿನ ಹೋಲಿಕೆ ಆರಂಭಿಸಿದ್ದಾರೆ. ಇವೆಲ್ಲದರ ಮಧ್ಯೆ ಮೂಲಭೂತ ವಿಚಾರವನ್ನು ತುಂಬಾ ಚೆಂದದಿಂದ ಮರೆಮಾಚಲಾಗುತ್ತಿದೆ. ಅದನ್ನು ನೋಡಿ ಆಡಳಿತ ವ್ಯವಸ್ಥೆ ಮನಸ್ಸಿನೊಳಗೆ ನಗುತ್ತಿದೆ.
ಮೊದಲಿಗೆ ಕಾರಿನ ಸುರಕ್ಷತೆ ಬಗ್ಗೆ ಒಂದಿಷ್ಟು ಅಸಲಿ ಚರ್ಚೆ ಮಾಡೋಣ. ಜಾಗತಿಕ ಸೇಫ್ಟಿ ರೇಟಿಂಗ್‌ನಲ್ಲಿ ವೋಲ್ವೋ ಎಕ್ಸ್‌ಸಿ90 ಕಾರು 5 ಸ್ಟಾರ್‌ನ್ನು ಹೊಂದಿದೆ. ಅಂದರೆ ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದು ಎನ್ನುವ ಅರ್ಥವನ್ನು ಸೂಚಿಸುತ್ತದೆ. ಅಂದ್ಹಾಗೆ ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾರಿನ ಮೇಲೆ ಕಲ್ಲಿನ ಲಾರಿಯು ವಾಲಿದಾಗ ಅದರಿಂದ ಕಲ್ಲು ಬಿದ್ದರೂ ಕಾರಿನೊಳಗಿರುವರಿಗೆ ಯಾವುದೇ ಸಮಸ್ಯೆಯಾಗದು. ಕಾರು ಅಷ್ಟು ಸುರಕ್ಷಿತವಾಗಿದೆ ಎನ್ನುವುದನ್ನು ವೋಲ್ವೋ ಕಂಪೆನಿಯು ಸಾರುವ ಪ್ರಯತ್ನ ಮಾಡಿದೆ. ಅಂದ್ಹಾಗೆ ಜಾಹೀರಾತಿನಲ್ಲಿ ಒಂದಷ್ಟು ಅತಿಯಾಗಿರುವುದು ಹೊಸತೇನಲ್ಲ. ಆದರೆ ನಾವಿಲ್ಲಿ ಒಂದಿಷ್ಟು ವಾಸ್ತವ ವಿಚಾರಗಳನ್ನು ಗಮನಿಸಬೇಕು.
ವೋಲ್ವೋ ಎಕ್ಸ್‌ಸಿ90 ಕಾರಿನ ಒಟ್ಟಾರೆ ತೂಕವು ಸುಮಾರು 2 ಟನ್ ಆಗಿದೆ. ಈ ಕಾರಿನ ಮೇಲೆ ಮೊನ್ನೆ ಬಿದ್ದ ಕಂಟೇನರ್ ಲಾರಿಯ ತೂಕ ಬರೋಬ್ಬರಿ 26 ಟನ್ ಆಗಿತ್ತು. ಅಂದರೆ ಕಾರಿಗಿಂತ ಬರೋಬ್ಬರಿ 13 ಪಟ್ಟು ತೂಕವನ್ನು ಆ ಲಾರಿ ಹೊಂದಿತ್ತು. ಅಕ್ಷರಶಃ ಚಪಾತಿಯನ್ನು ಒರೆದ ರೀತಿಯಲ್ಲಿ ಆ ದುರ್ಘಟನೆ ನಡೆದಿದೆ. ವಿಶ್ವದ ಯಾವುದೇ ಸುರಕ್ಷಿತ ಕಾರು ಕೂಡ ಇಷ್ಟೊಂದು ತೂಕವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನೊಂದು ಲಾರಿ ಕೂಡ ಇದನ್ನು ಏದುರಿಸುವಷ್ಟು ಶಕ್ತವಾಗುತ್ತಿರಲಿಲ್ಲ. ನನಗೆ ತಿಳಿದಂತೆ ಕಾರು ಅಥವಾ ವಾಹನಗಳ ಬಹುತೇಕ ಸುರಕ್ಷತಾ ಮಾರ್ಗಸೂಚಿಗಳು ಮುಂದೆ-ಹಿಂದೆ ಅಥವಾ ಅಕ್ಕ-ಪಕ್ಕದಲ್ಲಿ ಆಗುವ ಅಪಘಾತಗಳಿಗೆ ಸಂಬಂಧಿಸಿರುತ್ತದೆ. ಮೇಲಿನಿಂದ ಒಂದು ಹಂತದವರೆಗಿನ ತೂಕವನ್ನು ವಾಹನಗಳು ತಡೆದುಕೊಳ್ಳಬಹುದು. ಉದಾಹರಣೆಗೆ ಕಾರು ಪಲ್ಟಿಯಾದಾಗ ಆ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಅದು ಹೊಂದಿದೆಯೋ, ಇಲ್ಲವೋ ಎನ್ನುವುದು ಮುಖ್ಯವಾಗುತ್ತದೆ. ನಾನು ಅಂತಹದ್ದೇ ಒದು ಅಪಘಾತದಲ್ಲಿ ಸುರಕ್ಷಿತವಾಗಿರಲು ಸಾಧ್ಯವಾಗಿದ್ದು, ಟಾಟಾ ಕಂಪೆನಿಯ ಬಿಲ್ಟ್ ಕ್ವಾಲಿಟಿಯಾಗಿತ್ತು ಎನ್ನುವುದು ಕೂಡ ಸತ್ಯ. ಆದರೆ ಮೊನ್ನೆಯ ದುರ್ಘಟನೆ ಸಂಪೂರ್ಣ ಭಿನ್ನವಾಗಿದೆ. ಹೀಗಾಗಿ ಮೊನ್ನೆಯ ದುರ್ಘಟನೆಯನ್ನು ನೋಡಿದಾಗ ವೋಲ್ವೋ ಕಂಪೆನಿ ಬಗ್ಗೆ ದೂರುವವರು, ಆನೆಯ ಕಾಲ್ತುಳಿತಕ್ಕೆ ನಾಶವಾದ ಹುಲ್ಲನ್ನು ತೆಗಳಿದಂತಾಗುತ್ತದೆ.
ಅಸಲಿ ಕಾರಣ ಯಾರು?
ನಾನು ಕಳೆದ ಏಳು ವರ್ಷಗಳಿಂದ ಕಾರು ಓಡಿಸುತ್ತಿದ್ದೇನೆ. ಈ ಅವಧಿಯಲ್ಲಿ ಒಂದೇ ಒಂದು ದಿನ ಕೂಡ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಸುರಕ್ಷಿತ ಎಂದು ಎನಿಸಿಯೇ ಇಲ್ಲ. ಕಳೆದೊಂದು ದಶಕದಲ್ಲಿ ಕಾಮಗಾರಿಗಳು ನಡೆಯದ ದಿನಗಳು ಕೂಡ ಅಪರೂಪ ಎನ್ನಬಹುದು. ಈಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರು-ತುಮಕೂರು ರಸ್ತೆಯ ಅಗಲೀಕರಣವು ಆಮೆಯೇ ನಾಚುವ ವೇಗದಲ್ಲಿ ಸಾಗುತ್ತಿದೆ. ಆದರೆ ಈ ಭಾಗದ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ನಿಗಮ ಹಾಗೂ ಸರ್ಕಾರಕ್ಕೆ ಮಾತ್ರ ಯಾವುದೇ ನಾಚಿಕೆಯಿಲ್ಲ.
ಹಲವೆಡೆ ರಸ್ತೆಗಳನ್ನು ಅಗೆದು ಹಾಕಿ ವರ್ಷಗಳೇ ಕಳೆದಿವೆ. ಇದರಿಂದ ಸ್ಥಳೀಯರಿಗೆ ಓಡಾಡುವುದು ಕೂಡ ಕಷ್ಟವಾಗಿದೆ. ಇದರಿಂದ ಕಂಡಕಂಡಲ್ಲಿ ಗಾಡಿ ನುಗ್ಗಿಸಿಕೊಂಡು ಹೋಗುವುದು ಅಲ್ಲಿ ಸಾಮಾನ್ಯ. ಇದರಿಂದ ಆ ಹೆದ್ದಾರಿಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಅಘಾತವಾಗುತ್ತಿದೆ. ಇವತ್ತಿನವರೆಗೆ ಅದೆಷ್ಟೋ ಅಮಾಯಕ ಜೀವಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆಹುತಿ ಪಡೆದುಕೊಂಡಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಪ್ರಾಯೋಜಕತ್ವ ಪಡೆದುಕೊಂಡಿದ್ದಾರೆ.
ಏಷ್ಯಾದ ಸಿಲಿಕಾನ್ ಸಿಟಿ, ಜಾಗತಿಕ ಸ್ಟಾರ್ಟಪ್ ರಾಜಧಾನಿ, ಈ ರಾಜ್ಯದ ಅರ್ಧಕ್ಕೂ ಅಧಿಕ ಆದಾಯ ಮೂಲವನ್ನು ಹೊಂದಿರುವ ಮೆಟ್ರೋ ಸಿಟಿ ಹೀಗೆ ಹಲವು ಹೊಗಳಿಕೆಯನ್ನು ಹೊಂದಿರುವ ನಮ್ಮ ಬೆಂಗಳೂರಿನ ಅತ್ಯಂತ ಪ್ರಮುಖ ರಸ್ತೆಯ ಕೇವಲ 40 ಕಿ.ಮೀ ಮಾರ್ಗವನ್ನು 4 ವರ್ಷದಲ್ಲಿ ಮುಗಿಸಲು ಸಾಧ್ಯವಿಲ್ಲ ಎಂದಾದರೆ ಹೊಗಳಿಕೆ ಹಾಗೂ ಬೊಗಳಿಕೆಗೆ ಯಾವುದೇ ವ್ಯತ್ಯಾಸ ಉಳಿಯುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ದಾಖಲೆ ಪ್ರಕಾರ 2023-24ರಲ್ಲಿ ಪ್ರತಿ ದಿನ 21 ಕಿ.ಮೀ ಹೆದ್ದಾರಿ ನಿರ್ಮಾಣವಾಗುತ್ತಿದೆ. ಅಂದರೆ ಈ ರಸ್ತೆಯನ್ನು ಎರಡು ದಿನದಲ್ಲಿ ನಿರ್ಮಾಣ ಮಾಡಬಹುದು. ಆದರೆ ರಾಷ್ಟ್ರೀಯ ಜವಾಬ್ದಾರಿಗಳನ್ನು ತಲೆಯಲ್ಲಿ ಇರಿಸಿಕೊಂಡು ಒಂದು ವರ್ಷದಲ್ಲಾದರೂ ಪೂರೈಸಬೇಕಲ್ಲವೇ? ಆದರೆ ನಾಲ್ಕು ವರ್ಷಗಳಲ್ಲಿ 40 ಕಿ.ಮೀ ಮಾರ್ಗವನ್ನು ಅಗೆದಿಲ್ಲ ಅಥವಾ ಮಣ್ಣು ತೆಗೆದು ಅಗಲೀಕರಣ ಕೆಲಸವನ್ನೂ ಮಾಡಿಲ್ಲ. ಇಬ್ಬರು ಸಂಸದರು, ಹತ್ತಾರು ಸಚಿವರು ಸಚಿವರನ್ನು ಹೊಂದಿರುವ ಈ ಭಾಗದಲ್ಲಿ ಇಷ್ಟೊಂದು ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆಯೆಂದರೆ, ಮೊನ್ನೆ ರಸ್ತೆಯಲ್ಲಿ ನಡೆದ ಕೊಲೆಗೆ ಇವರೇ ಕಾರಣವೆಂದು ಆಗುವುದಿಲ್ಲವೇ?
ಏಕೆಂದರೆ ರಸ್ತೆ ಅಗಲೀಕರಣದ ಸಮಸ್ಯೆ ಇರುವುದರಿಂದಲೇ ಆ ಮಾರ್ಗದಲ್ಲಿ ಯಾರೇ ಒಬ್ಬ ವಾಹನ ಚಾಲಕ ಸಣ್ಣ ಎಡವಟ್ಟು ಮಾಡಿದರೂ ಅಪಘಾತವಾಗುವುದರಲ್ಲಿ ಸಣ್ಣ ಸಂಶಯವೂ ಇಲ್ಲ. ಏಕೆಂದರೆ ಅಪಘಾತ ತಪ್ಪಿಸಲು ಇನ್ನೊಂದು ವಾಹನಕ್ಕೆ ಕುಟ್ಟಬೇಕು ಅಥವಾ ಡಿವೈಡರ್ ಮೇಲೆ ಹಾರಿಸುವ ಬದಲು ಪರ್ಯಾಯ ಮಾರ್ಗವೇ ಚಾಲಕರಿಗೆ ಇರುವುದಿಲ್ಲ.
ಈಗ ಹೈದರಾಬಾದ್ ಚಿತ್ರಮಂದಿರದಲ್ಲಿ ನಡೆದ ಘಟನೆಗೆ ಅಲ್ಲು ಅರ್ಜುನ್ ವಿರುದ್ಧ ಎಫ್‌ಐಆರ್ ಹಾಕಿರುವುದು ನಮಗೆಲ್ಲ ತಿಳಿದ ವಿಚಾರವಾಗಿದೆ. ಈಗ ಮೊನ್ನೆ ನಡೆದ ದುರ್ಘಟನೆಯಲ್ಲಿ ಕಾಲು ಕಳೆದುಕೊಂಡ ಲಾರಿ ಚಾಲಕನ ವಿರುದ್ಧ ಎಫ್‌ಐಆರ್ ಮಾಡಲಾಗಿದೆ ಎಂದು ಮಾಧ್ಯಮದಲ್ಲಿ ಓದಿದೆ. ವಾಸ್ತವದಲ್ಲಿ ಎಫ್‌ಐಆರ್ ಹಾಕಬೇಕಿರುವುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಂಬಂಧಪಟ್ಟ ಅಧಿಕಾರಿ, ಗುತ್ತಿಗೆದಾರ, ಆ ಭಾಗದ ಜನಪ್ರತಿನಿಧಿ ಹಾಗೂ ಸಂಬಂಧಪಟ್ಟ ಸಚಿವರ ವಿರುದ್ಧವೇ ಹೊರತು, ಚಾಲಕರ ವಿರುದ್ಧವಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ಪ್ರತಿಪಾದಿಸುವವರು ಏಕರೂಪ ಕಾನೂನು ಪಾಲನೆ ಮಾಡಲು ಸಿದ್ಧರಿದ್ದಾರೆಯೇ? ಕಾಲಮಿತಿಯಲ್ಲಿ ಯೋಜನೆಯನ್ನು ಪೂರೈಸದೇ ಪ್ರತಿದಿನ ಅಪಘಾತಕ್ಕೆ ಕಾರಣವಾಗುತ್ತಿರುವುದನ್ನು ನೋಡಿ ಇವರೆಲ್ಲ ಸುಮ್ಮನೇ ಕೂತಿರುವುದು ಕೊಲೆ ಅಪರಾಧದ ಸಂಚಿನಲ್ಲಿ ಬರುವುದಿಲ್ಲವೇ? ವಿರೋಧಿಗಳು ಹಾಗೂ ಜನ ಸಾಮಾನ್ಯರಿಗೆ ಮಾತ್ರ ಕಾನೂನಿನ ಕಠಿಣ ನಿಯಮಗಳು ಅನ್ವಯವಾಗುವುದಾದರೆ ಏಕರಪ ನಾಗರಿಕ ಸಂಹಿತೆಯ ನಾಟಕವನ್ನು ದಯವಿಟ್ಟು ಆಡಬೇಡಿ.
ಮಾನ್ಯ ಸಚಿವರೇ....?
ಮಾನ್ಯ ರೈಲ್ವೆ ರಾಜ್ಯ ಸಚಿವರಾದ ಸೋಮಣ್ಣನವರೇ, ನೀವು ಜನರ ನೋವಿಗೆ ಮರಗುವ ಜನಪ್ರತಿನಿಧಿ ಎಂದು ನಮ್ಮ ಕರ್ನಾಟಕದ ಸಾಕಷ್ಟು ಮಾಧ್ಯಮದವರು ಆಗಾಗ ಹೊಗಳುತ್ತಿರುತ್ತವೆ. ರಾಜ್ಯ ರಾಜಧಾನಿಯ ಈ ರಸ್ತೆಯಲ್ಲಿ ಓಡಾಡುವ ಜನರಿಗೆ ಸುರಕ್ಷತೆಯ ಭರವಸೆ ನೀಡುವುದರ ಜತೆಗೆ ಕೊಲೆಗಾರ ಎನ್ನುವ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಈ ಕಾಮಗಾರಿಗೆ ಒಂದು ಕಾಲಮಿತಿ ನಿಗದಿ ಮಾಡುತ್ತೀರಾ? ಬೆಂಬಲಿಗರು ಹಾಗೂ ಮಾಧ್ಯಮಗಳ ಈ ಹೊಗಳಿಕೆಯನ್ನು ಸತ್ಯ ಮಾಡುವ ಪ್ರಯತ್ನ ಮಾಡುತ್ತೀರಾ? ತುಮಕೂರು-ಬೆಂಗಳೂರು ರಸ್ತೆಯಲ್ಲಿ ನಡೆಯುತ್ತಿರುವ ಸಾಮೂಹಿಕ ನರಬಲಿಗೆ ತೆರೆ ಎಳೆಯುವ ಸೌಜನ್ಯ ತೋರುತ್ತೀರಾ? ಇದಕ್ಕೆ ಕಾರಣವಾಗಿರುವರನ್ನು ನಿರ್ದಯವಾಗಿ ಶಿಕ್ಷಿಸುತ್ತೀರಾ?
ಕೊನೆಯದಾಗಿ: ಈ ದೇಶದಲ್ಲಿ ಅಪಘಾತವಾದಾಗ ವಾಹನ ಚಾಲಕರ ಅಜಾಗರೂಕತೆ ಹಾಗೂ ವೇಗದ ಬಗ್ಗೆ ಚರ್ಚೆ ನಡೆಯುತ್ತದೆ. ಆದರೆ ಅದೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬೆಂಗಳೂರು-ಚೆನ್ನೈ ನಡುವಿನ 262 ಕಿ.ಮೀ ದೂರವನ್ನು 2.15 ಗಂಟೆಯಲ್ಲಿ ಕ್ರಮಿಸಬಹುದು ಎಂದಾಗ ತಾರ್ಕಿಕವಾದ ಚರ್ಚೆ ನಡೆಯುವುದಿಲ್ಲ. ಈ 262 ಕಿ.ಮೀ ದೂರವನ್ನು 2.15 ಗಂಟೆಯಲ್ಲಿ ಪ್ರಯಾಣಿಸಲು ಕನಿಷ್ಠ ವೇಗ 150 ಕಿ.ಮೀ ಆಗಿರಬೇಕು. ಅದರರ್ಥ ನಾವು ಆ ಅತಿಯಾದ ವೇಗದಲ್ಲಿ ಚಲಿಸಬೇಕು ಎನ್ನುವುದಲ್ಲ ಎನ್ನುವ ಸಾಮಾನ್ಯ ಜ್ಞಾನ ನನಗಿದೆ. ಆದರೆ ಆ ವೇಗದಲ್ಲಿ ಹೋಗಲು ರಸ್ತೆಯನ್ನು ಅಷ್ಟು ಸುರಕ್ಷಿತವಾಗಿ ನಿರ್ಮಾಣ ಮಾಡಲಾಗಿದೆಯೇ ಎನ್ನುವುದು ಗಂಭೀರ ವಿಷಯವಾಗಿದೆ. ಕರ್ನಾಟಕದ ಮಟ್ಟಿಗೆ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬಿಟ್ಟು ಒಂದೇ ಒಂದು 100 ಕಿ.ಮೀ ಉದ್ದದ ಮಾರ್ಗವು ಸುರಕ್ಷಿತವಾಗಿದೆಯೇ ಎನ್ನುವುದನ್ನು ಇದೇ ಸಚಿವರು ಬಹಿರಂಗಪಡಿಸಲಿ. ಇಲ್ಲವಾದಲ್ಲಿ ಗಡ್ಕರಿ ಉಲ್ಲೇಖಿಸಿರುವ ರಸ್ತೆಯೇ ನಿಜವಾಗಿಯೂ ಅಷ್ಟೊಂದು ಸುರಕ್ಷಿತವಾಗಿ ನಿರ್ಮಾಣವಾಗಿದೆಯೇ ಎನ್ನುವ ಸತ್ಯ ಶೋಧನೆಯಾಗಲಿ. ಅಪಘಾತವಾದಾಗ ಚಾಲಕರು ಹಾಗೂ ವಾಹನ ಕಂಪೆನಿಗಳನ್ನು ಟೀಕಿಸುವುದು ಅತ್ಯಂತ ಸುಲಭ. ಹಾಗೆಯೇ ಸರ್ಕಾರಿ ವ್ಯವಸ್ಥೆ ಕೂಡ ಇದನ್ನೇ ಬಯಸುತ್ತದೆ. ಆದರೆ ರಸ್ತೆ ತೆರಿಗೆ, ವಾಹನ ಖರೀದಿ ತೆರಿಗೆಯ ಜತೆಗೆ ಟೋಲ್ ಪಡೆಯುವ ವ್ಯವಸ್ಥೆಯು ಅದೇ ಅಂತಾರಾಷ್ಟ್ರೀಯ ರಸ್ತೆ ಸುರಕ್ಷತಾ ಮಾರ್ಗಸೂಚಿ ಪಾಲನೆ ಮಾಡುತ್ತಿದೆಯೇ ಎನ್ನುವ ಪ್ರಾಮಾಣಿಕ ಅವಲೋಕನ ಮಾಡಬೇಕಿದೆ. ಕೊನೆಯ ಪಕ್ಷ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ರಸ್ತೆ ಸುರಕ್ಷತಾ ನೀತಿಯನ್ನು ಪಾಲಿಸುತ್ತಿದೆಯೇ ಎನ್ನುವುದನ್ನು ಬಹಿರಂಗಪಡಿಸಲಿ.
-ರಾಜೀವ್ ಹೆಗಡೆ, ಬೆಂಗಳೂರು