ಬೆಂಗಳೂರಿನಲ್ಲಿ ಮನೆಯನ್ನು ಲೀಸ್‌ಗೆ ಪಡೆಯುವ ಮುನ್ನ ಎಚ್ಚರವಿರಲಿ! ಇಂತಹ ವಂಚನೆ ನಿಮಗೆ ಆಗದಿರಲಿ- ರಾಜೀವ ಹೆಗಡೆ ಬರಹ
Lease a house in bangalore precautions: ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು? ಮನೆ ಲೀಸ್ ಪಡೆದವರಿಗೆ ವಂಚನೆಯಾದರೆ ಪಾರಾಗಲು ದಾರಿ ಇರುವುದೇ? ಉದ್ಯಾನನಗರಿಯಲ್ಲಿ ಮನೆ ಲೀಸ್‌ಗೆ ಪಡೆದವರ ಕಹಿ ಅನುಭವಗಳ ಜತೆಗೆ ಮನೆ ಲೀಸ್ ಪಡೆಯುವವರು ಗಮನಿಸಬೇಕಾದ ಅಂಶಗಳ ಕುರಿತು ರಾಜೀವ್ ಹೆಗಡೆ ಉಪಯುಕ್ತ ಲೇಖನ ಬರೆದಿದ್ದಾರೆ.
ಬೆಂಗಳೂರಿನಲ್ಲಿ ಸಾಕಷ್ಟು ಜನರು ಬಾಡಿಗೆ ಮನೆಯಲ್ಲಿ ವಾಸಿಸುತ್ತಾರೆ. ಪ್ರತಿತಿಂಗಳು ಕಟ್ಟುವ ಬಾಡಿಗೆ ಹಣ ಉಳಿಸುವ ಸಲುವಾಗಿ ಇನ್ನಷ್ಟು ಜನರು ಮನೆಯನ್ನು ಲೀಸ್‌ಗೆ ಪಡೆಯುತ್ತಾರೆ. ಲೀಸ್‌ಗೆ ಪಡೆದ ಮನೆಯಿಂದ ಹೊರಹೋಗುವ ಸಮಯದಲ್ಲಿ ಭೋಗ್ಯಕ್ಕಾಗಿ ನೀಡಿರುವ ಮೊತ್ತವನ್ನು ವಾಪಸ್ ಪಡೆಯಲಾಗದೆ ಸಾಕಷ್ಟು ಜನರು ತೊಂದರೆ ಅನುಭವಿಸುವ ಸಂಗತಿ ನಿಮಗೆ ಗೊತ್ತಿರಬಹುದು. ಮನೆ ಲೀಸ್‌ಗೆ ಪಡೆಯುವಾಗ ಈ ತೊಂದರೆ ಮಾತ್ರ ಇರುವುದಲ್ಲ. ಬೆಂಗಳೂರಿನಲ್ಲಿ ಮನೆ ಲೀಸ್‌ಗೆ ಪಡೆಯುವವರಿಗೆ ಯಾವೆಲ್ಲ ಅನ್ಯಾಯಗಳು, ವಂಚನೆಯಾಗಬಹುದು ಎನ್ನುವ ಕುರಿತು ಫೇಸ್‌ಬುಕ್‌ನಲ್ಲಿ ರಾಜೀವ್ ಹೆಗಡೆ ಉಪಯುಕ್ತ ಲೇಖನ ಬರೆದಿದ್ದಾರೆ. ಮನೆ ಭೋಗ್ಯಕ್ಕೆ ಪಡೆಯುವವರು ತಪ್ಪದೇ ಈ ಲೇಖನ ಓದಿ.
ಮನೆಯನ್ನು ಲೀಸ್‌ಗೆ ಪಡೆಯುವ ಮುನ್ನ ಎಚ್ಚರವಿರಲಿ
ನನ್ನ ಸ್ನೇಹಿತನೊಬ್ಬ ರಾಜರಾಜೇಶ್ವರಿ ನಗರದಲ್ಲಿ ಮನೆಯನ್ನು ಲೀಸ್‌ಗೆ ಪಡೆದಿದ್ದ. ಮನೆಗೆ ಹೋದ ಕೆಲವೇ ತಿಂಗಳಿನ ಬಳಿಕ ಮನೆಯ ಮಾಲೀಕನು ಗೃಹಸಾಲದ ಕಂತು ತುಂಬದಿರುವುದು ಗಮನಕ್ಕೆ ಬಂತು. ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಗಲಾಟೆ ಮಾಡುವ ಪ್ರಸಂಗಗಳು ನಡೆದವು. ಕೂಡಲೇ ಎಚ್ಚೆತ್ತುಕೊಂಡು, ಹರಸಾಹಸದೊಂದಿಗೆ ನನ್ನ ಸ್ನೇಹಿತನು ಎಲ್ಲ ಹಣ ಪಡೆದು ಮನೆಯಿಂದ ಹೊರಬಂದ. ಆತನ ಕೈಗೆ ಲೀಸ್ ಹಣ ಸಿಕ್ಕಿದ್ದು ಪವಾಡವೇ ಆಗಿತ್ತು. ಅದಾದ ಬಳಿಕ ಆ ಮನೆಗೆ ಇನ್ನೊಂದು ಕುಟುಂಬ ಬಂದಿತ್ತು. ಆ ಕುಟುಂಬದ ಸದಸ್ಯರು ವರ್ಷಾಂತ್ಯದ ಪ್ರವಾಸಕ್ಕೆ ಹೋಗಿರುವ ವೇಳೆಯಲ್ಲಿ ಬ್ಯಾಂಕ್ ಅಧಿಕಾರಿಗಳು ಬಂದು ಮನೆಯನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ನಾನು ಆ ಮನೆಯ ಮಾಲೀಕನನ್ನು ಅರಿತುಕೊಂಡಂತೆ, ಲೀಸ್ ದುಡ್ಡಿಗೆ ದೊಡ್ಡ ನಾಮವೇ ಗತಿ. ಏಕೆಂದರೆ ನನ್ನ ಸ್ನೇಹಿತನು ಹಣ ಪಡೆಯಲು ಮಾಡಿದ ಸಾಹಸದ ಸಂಪೂರ್ಣ ಅರಿವು ಇರುವುದರಿಂದ, ಲೀಸ್ ಹಣಕ್ಕೆ ನೀರು ಬಿಡುವ ಪ್ರಸಂಗವೇ ಬರಬಹುದು.
ಆ ಸಂದರ್ಭದಲ್ಲಿ ನಾವು ಕೆಲವು ವಕೀಲರನ್ನು ಕೂಡ ಭೇಟಿ ಮಾಡಿ ಚರ್ಚಿಸಿದ್ದೆವು. ಲೀಸ್ ಸಂದರ್ಭದಲ್ಲಿ ನಾವು ಮಾಡಿಕೊಳ್ಳುವ ಸಾಮಾನ್ಯ ಬಾಂಡ್ ಪೇಪರ್ ಮೇಲಿನ ಒಪ್ಪಂದದ ಪತ್ರದಿಂದ ಯಾವುದೇ ಕಾನೂನು ಹೋರಾಟದಲ್ಲಿ ಬಾಡಿಗೆಗೆ ಬಂದವರಿಗೆ ರಕ್ಷಣೆ ದೊರೆಯುವುದಿಲ್ಲ. ಬ್ಯಾಂಕ್ ವಿರುದ್ಧ ಜಪ್ತಿಗೆ ಸಂಬಂಧಿಸಿ ಒಂದಿಷ್ಟು ಹೋರಾಟ ನಡೆಸಬಹುದೇ ಹೊರತು, ಆರ್ಥಿಕವಾಗಿ ಯಾವುದೇ ಲಾಭವಾಗುವುದಿಲ್ಲ. ಹಾಗೆಯೇ ಲೀಸ್‌ಗೆ ಕೊಟ್ಟಿರುವ ಹಣವನ್ನು ಪಡೆಯಲು ಯಾವುದೇ ಕಾನೂನು ಮಾರ್ಗಗಳು ಇರುವುದಿಲ್ಲ.
ಕಳೆದ ವರ್ಷವೂ ಇಂತಹದ್ದೇ ಘಟನೆಯೊಂದು ಕೆಂಗೇರಿಯಲ್ಲಿ ನಡೆದಿತ್ತು. ಬಾಡಿಗೆದಾರನ ಮನೆಯೊಳಗಿರುವಾಗಲೇ ಬ್ಯಾಂಕ್ ಅಧಿಕಾರಿಗಳು ಕಟ್ಟಡವನ್ನು ಸೀಜ್ ಮಾಡಿದ್ದರು. ಕೆಲವೇ ದಿನಗಳ ಹಿಂದೆ ಇದೇ ರೀತಿಯ ಒಂದೇ ಕಟ್ಟಡವನ್ನು ಹತ್ತಾರು ಜನರಿಗೆ ಲೀಸ್‌ಗೆ ಕೊಟ್ಟು ಕೋಟಿ ಕೋಟಿ ಹಣ ಪಡೆದು ಪರಾರಿಯಾದ ಮಾಲೀಕನ ಸುದ್ದಿಯನ್ನು ಎಲ್ಲೋ ಓದಿದ್ದೆ. ಹೀಗಾಗಿ ಬೆಂಗಳೂರಿನಲ್ಲಿ ಮನೆ ಲೀಸ್ ಹೆಸರಲ್ಲಿ ಸಾಕಷ್ಟು ವಂಚನೆಗಳು ನಡೆಯುತ್ತಿರುವುದು ಗಮನಕ್ಕೆ ಬರುತ್ತಿದೆ.
ಇಂತಹ ಹೆಚ್ಚಿನ ಸಂದರ್ಭದಲ್ಲಿ ಮನೆಯ ಮಾಲೀಕರು ಬೆಂಗಳೂರಿಗರು ಅಥವಾ ಸ್ಥಳೀಯರೇ ಆಗಿರುವುದರಿಂದ ಒಂದಿಷ್ಟು ಪ್ರಭಾವಗಳಿರುತ್ತವೆ. ಕೆಲವರಿಗೆ ಸಮಾಜ ಘಾತುಕ ಶಕ್ತಿಗಳೊಂದಿಗೆ ಸಂಪರ್ಕವೂ ಇರುತ್ತದೆ. ಕಳೆದ ವರ್ಷ ನನ್ನ ಸ್ನೇಹಿತನಿಗೆ ಮನೆಯ ಮಾಲೀಕ ಕೂಡ ಅವಾಜ್ ಹಾಕಿದ್ದ. ʼನಾನು ಬೆಂಗಳೂರಿನಲ್ಲೇ ಹುಟ್ಟಿ ಇಲ್ಲಿಯ ನೀರು ಕುಡಿದಿದ್ದೇನೆ. ನೀನು ಹೊರಗಿನಿಂದ ಬಂದು ಅದ್ಹೇಗೆ ಹಣ ಪಡೆಯುತ್ತೀಯಾ ನೋಡ್ತೀನಿʼ ಎಂದು ಹಾರಾಡಿದ್ದ. ನಿಮಗೆ ಒಂದಿಷ್ಟು ಸೊಕ್ಕಿರದಿದ್ದರೆ ಇಂತಹ ಮಾಲೀಕರಿಂದ ಹಣ ಪಡೆಯುವುದು ಅಸಾಧ್ಯ ಎನ್ನಬಹುದು.
ಹೀಗಾಗಿ ಬೆಂಗಳೂರಿಗರೇ, ಮನೆಯನ್ನು ಲೀಸ್‌ಗೆ ಪಡೆಯುವ ಮುನ್ನ ಹತ್ತಾರು ಬಾರಿ ಆಲೋಚಿಸಿ. ವಿಶೇಷವಾಗಿ ಮನೆಯ ಮಾಲೀಕರ ಹಿನ್ನೆಲೆ, ಮನೆಯ ಕುರಿತ ಸಾಲ ಹಾಗೂ ಇಎಂಐ ಪಾವತಿ ವಿವರ ಸೇರಿ ಇತರ ವಿಚಾರಗಳ ಬಗ್ಗೆ ವಿವರವಾಗಿ ಪರಿಶೀಲನೆ ಮಾಡಿಸಿಕೊಳ್ಳಿ. ಇಂದು ಇದಕ್ಕಾಗಿಯೇ ಸಾಕಷ್ಟು ಏಜೆನ್ಸಿ ಅಥವಾ ಏಜೆಂಟ್‌ಗಳು ಕೂಡ ಇದ್ದಾರೆ. ಬಾಡಿಗೆಯಾದರೆ ಮುಂಗಡ ಹಣವು ಒಂದೆರಡು ಲಕ್ಷದಲ್ಲಿ ಮುಗಿಯುತ್ತದೆ. ಆದರೆ ಲೀಸ್ ಹಣವು 20 ಲಕ್ಷ ರೂಪಾಯಿ ಆಸುಪಾಸಿನಲ್ಲಿರುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಕೈ ಬಿಡಲೂ ಸಾಧ್ಯವಿಲ್ಲ. ಹಾಗೆಯೇ ಮಾಲೀಕರಿಂದ ವಸೂಲಿ ಮಾಡುವುದು ಕೂಡ ಸುಲಭವಲ್ಲ.
ಅಂದ್ಹಾಗೆ ನಿಮಗೆ ಕಾನೂನಿನಲ್ಲಿ ನಿರ್ದಿಷ್ಟವಾದ ಯಾವುದೇ ಸುರಕ್ಷತಾ ಕ್ರಮಗಳು ಕೂಡ ಲಭ್ಯ ಇರುವುದಿಲ್ಲ. ಇಲ್ಲವಾದಲ್ಲಿ ಇನ್ನೊಂದು ಪ್ರತ್ಯೇಕವಾದ ರಿಜಿಸ್ಟರ್ಡ್ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ. ಅದರ ಮುದ್ರಾಂಕ ಶುಲ್ಕವು ದೊಡ್ಡ ಮೊತ್ತದಲ್ಲಿಯೇ ಇರುತ್ತದೆ. ಆ ಮೊತ್ತವನ್ನು ನೀಡಿ ಮನೆಯನ್ನು ಲೀಸ್‌ಗೆ ಪಡೆಯುವುದರಲ್ಲಿ ಯಾವುದೇ ವ್ಯವಹಾರಿಕ ಲಾಭವೂ ಇರುವುದಿಲ್ಲ.
ಹೀಗಾಗಿ ಬೆಂಗಳೂರಿನಲ್ಲಿ ಮನೆಯನ್ನು ಲೀಸ್‌ಗೆ ಪಡೆಯುವ ಮುನ್ನ ಸಾವಿರ ಬಾರಿ ಆಲೋಚಿಸಿ. ಮನೆಯನ್ನು ಲೀಸ್‌ಗೆ ಪಡೆಯುವವರಲ್ಲಿ ಬಹುತೇಕರು ಮಧ್ಯಮ ವರ್ಗದವರಾಗಿರುತ್ತಾರೆ. ಕೂಡಿಟ್ಟ ಆ ಹಣದಿಂದ ಭವಿಷ್ಯದಲ್ಲಿ ಮನೆ ಅಥವಾ ಫ್ಲ್ಯಾಟ್ ಕೊಂಡುಕೊಳ್ಳಲು ಮುಂಗಡ ಹಣವನ್ನಾಗಿ ನೀಡುವ ಆಲೋಚನೆ ಉಳ್ಳವರಾಗಿರುತ್ತಾರೆ. ಲೀಸ್‌ನಲ್ಲಿ ಆಗುವ ಒಂದು ಎಡವಟ್ಟಿನಿಂದ ಮನೆ ಕಟ್ಟುವ ಅಥವಾ ಫ್ಲ್ಯಾಟ್ ಖರೀದಿಸುವ ಜೀವನದ ಪ್ರಮುಖ ಕನಸೇ ಸಾಕಾರವಾಗದಂತಹ ಸ್ಥಿತಿ ನಿರ್ಮಾಣವಾಗಬಹುದು.
ಕೊನೆಯದಾಗಿ: ಇಂತಹ ವಂಚನೆಗಳಿರುವುದು ನಮ್ಮ ವ್ಯವಸ್ಥೆಯಲ್ಲಿನ ಪ್ರತಿಯೊಬ್ಬರಿಗೂ ತಿಳಿದಿದೆ. ಬ್ಯಾಂಕ್ ಮ್ಯಾನೇಜರ್, ಪೊಲೀಸ್ ಸೇರಿ ಎಲ್ಲರಿಗೂ ಇದರ ಮಾಹಿತಿಯಿದೆ. ಒಂದೊಮ್ಮೆ ನೀವು ಹಠಕ್ಕೆ ಬಿದ್ದು ಹಣ ಹಿಂಪಡೆಯುವ ಹೋರಾಟ ಮಾಡಿದರೆ, ಒಂದಿಷ್ಟು ಕಮೀಷನ್ ದಂಧೆಯಲ್ಲಿ ನಿಮ್ಮ ಜೇಬಿಗೆ ಹೊಸ ಕತ್ತರಿ ಬೀಳುವುದರಲ್ಲಿ ಸಂಶಯವೇ ಇಲ್ಲ. ನನಗೆ ತಿಳಿದಂತೆ ಇಂತಹ ವಂಚಕರ ಜಾಲದ ನಿರ್ವಹಣೆಯಲ್ಲಿ ಹಣ ಮಾಡಿಕೊಳ್ಳುವ ದಂಧೆಯು ಬ್ಯಾಂಕ್ ಸುತ್ತಮುತ್ತಲೂ ಇದೆಯಂತೆ. ಅದೃಷ್ಟವಶಾತ್ ನನ್ನ ಸ್ನೇಹಿತನು ಇದ್ಯಾವುದೇ ಗೋಜಿಲ್ಲದೇ ಸಂಪೂರ್ಣ ಹಣ ಪಡೆದಿದ್ದ. ಹಣ ಬಂದ ಕೆಲವೇ ನಿಮಿಷಕ್ಕೆ ಲಕ್ಷ್ಮಿಯಂತೆ ಮನೆಗೆ ಮುದ್ದಾದ ಮಗಳು ಕೂಡ ಬಂದಿದ್ದಳು. ಎಲ್ಲರಿಗೂ ಅದೃಷ್ಟವು ಈ ಮಟ್ಟಿಗೆ ಕೈ ಹಿಡಿಯುವುದಿಲ್ಲ, ಎಚ್ಚರವಿರಲಿ.
- ಲೇಖನ: ರಾಜೀವ ಹೆಗಡೆ