Pingali Venkaiah: ರಾಷ್ಟ್ರಧ್ವಜ ವಿನ್ಯಾಸಗೊಂಡಿದ್ದು ಹೀಗೆ; ತ್ರಿವರ್ಣ ಧ್ವಜ ನಿರ್ಮಾಣಕ್ಕೆ ಪಿಂಗಳಿ ವೆಂಕಯ್ಯರಿಗೆ ಆ ಘಟನೆಯೇ ಪ್ರೇರಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pingali Venkaiah: ರಾಷ್ಟ್ರಧ್ವಜ ವಿನ್ಯಾಸಗೊಂಡಿದ್ದು ಹೀಗೆ; ತ್ರಿವರ್ಣ ಧ್ವಜ ನಿರ್ಮಾಣಕ್ಕೆ ಪಿಂಗಳಿ ವೆಂಕಯ್ಯರಿಗೆ ಆ ಘಟನೆಯೇ ಪ್ರೇರಣೆ

Pingali Venkaiah: ರಾಷ್ಟ್ರಧ್ವಜ ವಿನ್ಯಾಸಗೊಂಡಿದ್ದು ಹೀಗೆ; ತ್ರಿವರ್ಣ ಧ್ವಜ ನಿರ್ಮಾಣಕ್ಕೆ ಪಿಂಗಳಿ ವೆಂಕಯ್ಯರಿಗೆ ಆ ಘಟನೆಯೇ ಪ್ರೇರಣೆ

Who is Pingali Venkaiah: ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳ ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ ಶ್ರೇಯ ಪಿಂಗಳಿ ವೆಂಕಯ್ಯ ಅವರಿಗೆ ಸಲ್ಲುತ್ತದೆ. ಈ ಕುರಿತ ಮಾಹಿತಿ ಇಲ್ಲಿದೆ.

ತ್ರಿವರ್ಣ ಧ್ವಜ ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯ
ತ್ರಿವರ್ಣ ಧ್ವಜ ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯ

ಭಾರತ ದೇಶವು 77ನೇ ಸ್ವಾತಂತ್ರ್ಯ ದಿನವನ್ನು (Independence day) ಆಚರಿಸಲು ಸಜ್ಜಾಗಿದೆ. ಭಾರತದ ಪ್ರತಿಯೊಂದು ಮನೆಗಳಲ್ಲಿಯೂ ತ್ರಿವರ್ಣ ಧ್ವಜವನ್ನು (national flag) ಹಾರಿಸುವ ಅಭಿಯಾನ ಕೂಡಾ ಭರದಿಂದ ಸಾಗುತ್ತಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ್ ಘರ್ ತಿರಂಗಾ, ಅಂದರೆ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಎಂಬ ಅಭಿಯಾನಕ್ಕೆ ಕೇಂದ್ರ ಸರ್ಕಾರ ಕರೆ ನೀಡಿದೆ. ಬ್ರಿಟೀಷರ ದಾಸ್ಯತೆಯ ಸಂಕೋಲೆಗಳಿಂದ ಮುಕ್ತವಾದ ದಿನವನ್ನು ಸ್ವಾತಂತ್ರ್ಯ ದಿನಾಚಾರಣೆಯಾಗಿ ದೇಶಾದ್ಯಂತ ಆಚರಿಸಲಾಗುತ್ತಿದ್ದು, ರಾಷ್ಟ್ರಧ್ವಜವಾದ ಕೇಸರಿ, ಬಿಳಿ ಹಾಗೂ ಹಸಿರನ್ನೊಳಗೊಂಡ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡಲಾಗುತ್ತದೆ. ತ್ರಿವರ್ಣವನ್ನು ದೇಶಭಕ್ತಿಯಿಂದ ಗೌರವಿಸುವ ನಾವುಗಳು, ಅದನ್ನು ವಿನ್ಯಾಸಗೊಳಿಸಿದ ವ್ಯಕ್ತಿಯ ಬಗ್ಗೆಯೂ ತಿಳಿದುಕೊಳ್ಳಬೇಕು.

ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ ಕೀರ್ತಿ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ (Pingali Venkaiah) ಅವರಿಗೆ ಸಲ್ಲುತ್ತದೆ. ಅವಿಭಜಿತ ಆಂಧ್ರಪ್ರದೇಶದ ಮಚಲಿಪಟ್ಟಣಂ ಸಮೀಪದ ಭಟ್ಲಪೆನುಮಾರು ಎಂಬ ಗ್ರಾಮದಲ್ಲಿ 1876ರ ಆಗಸ್ಟ್ 2ರಂದು ಪಿಂಗಳಿ ವೆಂಕಯ್ಯ ಜನಿಸಿದರು. ಇವರ ಅಪ್ಪ ಹನುಮಂತರಾಯುಡು ಹಾಗೂ ತಾಯಿ ವೆಂಕಟರತ್ನಮ್ಮ. ದೇಶಕ್ಕೆ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿ ರಚಿಸುವ ಸಲುವಾಗಿ ವೆಂಕಯ್ಯ ಅವರು ಹಲವು ವರ್ಷಗಳನ್ನೇ ಅಧ್ಯಯನಕ್ಕೆಂದು ಮೀಸಲಿಟ್ಟಿದ್ದರು. ಈ ಸಂಬಂಧ 1916ರಲ್ಲಿ ಅವರು ಮೂವತ್ತು ಧ್ವಜ ವಿನ್ಯಾಸದ ಪುಸ್ತಕವನ್ನು ಪ್ರಕಟಿಸಿದರು.

ಗಾಂಧಿವಾದಿ ವೆಂಕಯ್ಯ

ಸ್ವಾತಂತ್ರ್ಯ ಹೋರಾಟದಲ್ಲಿ ಅಪಾರ ಆಸಕ್ತಿ ಹೊಂದಿದ್ದ ವೆಂಕಯ್ಯನವರು, ಭಾಷಾಶಾಸ್ತ್ರಜ್ಞ, ಭೂವಿಜ್ಞಾನಿ ಮತ್ತು ಬರಹಗಾರರೂ ಆಗಿದ್ದರು. ವೆಂಕಯ್ಯ ಅವರು ಗಾಂಧಿವಾದಿಯಾಗಿದ್ದು, ಆಫ್ರಿಕಾದಲ್ಲಿ ಆಂಗ್ಲೋ ಬೋಯರ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಯುವ ಸೈನಿಕನಾಗಿದ್ದ ವೆಂಕಯ್ಯ ಅವರು ಮೊದಲ ಬಾರಿಗೆ ಮಹಾತ್ಮರನ್ನು ಭೇಟಿಯಾದರು. ಆಗ ವೆಂಕಯ್ಯ ಅವರಿಗೆ 19 ವರ್ಷ ವಯಸ್ಸು.

ಆಂಧ್ರಪ್ರದೇಶದ ವಿಜಯವಾಡದಲ್ಲಿ 1921ರ ಏಪ್ರಿಲ್ 1ರಂದು ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಭೆಯಲ್ಲಿ ಮಹಾತ್ಮ ಗಾಂಧಿಯವರು ವೆಂಕಯ್ಯ ಅವರ ಧ್ವಜದ ವಿನ್ಯಾಸವನ್ನು ಅನುಮೋದಿಸಿದರು. ಆ ಬಳಿಕ ಅದರಲ್ಲಿ ಒಂದಿಷ್ಟು ಪರಿಷ್ಕರಣೆ ಮಾಡಿಕೊಂಡು ಬಳಿಕ 1947ರ ಜುಲೈ 22ರಂದು ರಾಷ್ಟ್ರಧ್ವಜವನ್ನಾಗಿ ಅಂಗೀಕರಿಸಲಾಯಿತು.

ಬಾಲ್ಯದಿಂದಲೇ ರಾಷ್ಟ್ರಪ್ರೇಮವನ್ನು ಮೈಗೂಡಿಸಿಕೊಂಡಿದ್ದ ವೆಂಕಯ್ಯ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಚಲ್ಲಪಲ್ಲಿಯಲ್ಲಿ ಮತ್ತು ಮಚಿಲೀಪಟ್ಟಣಂನಲ್ಲಿ ಮುಗಿಸಿದರು. ಆ ಬಳಿಕ ಉನ್ನತ ಶಿಕ್ಷಣಕ್ಕೆ ಕೊಲಂಬೋಗೆ ಹೋದರು. ಅಲ್ಲಿಂದ ಭಾರತಕ್ಕೆ ಹಿಂದಿರುಗಿದ ಬಳಿಕ ರೈಲ್ವೆ ಸಿಬ್ಬಂದಿಯಾಗಿ ನಮ್ಮ ಕರ್ನಾಟಕದ ಬಳ್ಳಾರಿಯಲ್ಲಿ ಕೆಲಸ ಆರಂಭಿಸಿದರು.

ಮೂರು ಬಣ್ಣಗಳಿಗೂ ಇವೆ ಅರ್ಥ

ತ್ರಿವರ್ಣ ಧ್ವಜದಲ್ಲಿರುವ ಕೇಸರಿ ಬಣ್ಣವು ತ್ಯಾಗ ಮತ್ತು ಬಲಿದಾನ, ಬಿಳಿ ಬಣ್ಣವು ಸತ್ಯ, ಶಾಂತಿ ಮತ್ತು ಶುಭ್ರತೆ, ಹಸಿರು ಬಣ್ಣವು ಸಮೃದ್ಧಿ, ಸೌಹಾರ್ದತೆಯನ್ನು ಸೂಚಿಸುತ್ತದೆ. ಮಧ್ಯದಲ್ಲಿರುವ ಅಶೋಕ ಚಕ್ರವು ನ್ಯಾಯ ಹಾಗೂ ಧರ್ಮದ ಸಂಕೇತವಾಗಿ ಪರಿಗಣಿಸಲ್ಪಟ್ಟಿದೆ. 2021ಕ್ಕೆ ನಮ್ಮ ಭಾರತದ ರಾಷ್ಟ್ರಧ್ವಜಕ್ಕೆ 100 ವರ್ಷಗಳು ತುಂಬಿದವು.

ರಾಷ್ಟ್ರ ಧ್ವಜ ರೂಪಿಸುವುದಕ್ಕೆ ಪ್ರೇರಣೆ ಇದು

ಶಿಕ್ಷಣ ಮುಗಿಸಿ ಬಂದ ಪಿಂಗಳಿ ವೆಂಕಯ್ಯನವರು ತಮ್ಮ 19ನೇ ವಯಸ್ಸಿನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಬ್ರಿಟನ್‌ ಸೇನೆ ಪರ ಕೆಲಸ ಮಾಡಲು ತೆರಳಿದ್ದರು. ಆಂಗ್ಲೋ ಬೋಯರ್ ಯುದ್ಧದ ಸಮಯದಲ್ಲಿ ಬ್ರಿಟಿಷ್ ಸೈನ್ಯದಲ್ಲಿ ಯುವ ಸೈನಿಕನಾಗಿದ್ದ ವೆಂಕಯ್ಯ ಅವರನ್ನು ಬ್ರಿಟನ್‌ ಧ್ವಜಕ್ಕೆ ವಂದಿಸುವಂತೆ ಬ್ರಿಟಿಷ್‌ ಸೇನಾಧಿಕಾರಿ ಒತ್ತಡ ಹೇರಿದ್ದ. ಇದನ್ನು ಸಹಿಸದ ವೆಂಕಯ್ಯ ಅವರು, ಭಾರತಕ್ಕೆ ವಾಪಸ್‌ ಬಂದಿದ್ದರು. ನಮ್ಮ ದೇಶಕ್ಕೂ ಒಂದು ಧ್ವಜ ಬೇಕು ಎಂಬ ಮಹದಾಸೆ ಅದಾಗಕೇ ಅವರ ಮನದಲ್ಲಿ ಚಿಗುರಿತ್ತು. ಇದಕ್ಕಾಗಿ ರಾತ್ರಿ ಹಗಲು ಸಂಶೋಧನೆಯಲ್ಲಿ ತೊಡಗಿದರು. ಇದಕ್ಕಾಗಿ ತಮ್ಮ ಬದುಕಿನ ಬಹುಪಾಲು ಸಮಯವನ್ನು ಮೀಸಲಿಟ್ಟು ಕೆಲಸ ಮಾಡಿದರು. ಅವರ ಆಸೆ, ಹಠ ಹಾಗೂ ಪರಿಶ್ರಮದ ಫಲವೇ ಇಂದಿನ ಈ ತ್ರಿವರ್ಣ ಧ್ವಜ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.