ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ ಅಂಗೀಕರಿಸಿದ ಲೋಕಸಭೆ; ಪರವಾಗಿ 269 ಮತ, ವಿರುದ್ಧ 198 ಮತ ಚಲಾವಣೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ ಅಂಗೀಕರಿಸಿದ ಲೋಕಸಭೆ; ಪರವಾಗಿ 269 ಮತ, ವಿರುದ್ಧ 198 ಮತ ಚಲಾವಣೆ

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆ ಅಂಗೀಕರಿಸಿದ ಲೋಕಸಭೆ; ಪರವಾಗಿ 269 ಮತ, ವಿರುದ್ಧ 198 ಮತ ಚಲಾವಣೆ

One Nation One Election: ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯನ್ನು ಲೋಕಸಭೆ ಅಂಗೀಕರಿಸಿದೆ. ಮಸೂದೆ ಲೋಕಸಭೆಯಲ್ಲಿ ಮಂಡನೆಯಾಗದಂತೆ ತಡೆಯುವ ವಿಪಕ್ಷಗಳ ಪ್ರಯತ್ನ ವಿಫಲವಾಗಿದೆ. ರಾಜ್ಯಸಭೆಯಲ್ಲಿ ಅಂಗೀಕಾರವಾದರೆ ಏಕಕಾಲದ ಚುನಾವಣೆಗೆ ದೇಶ ಸಜ್ಜುಗೊಳ್ಳಲಿದೆ.

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯನ್ನು ಲೋಕಸಭೆ ಅಂಗೀಕರಿಸಿತು. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.
ಒಂದು ದೇಶ ಒಂದು ಚುನಾವಣೆ ಮಸೂದೆ ಮಂಡನೆಯನ್ನು ಲೋಕಸಭೆ ಅಂಗೀಕರಿಸಿತು. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದರು.

One Nation One Election: ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಂಗಳವಾರ (ಡಿಸೆಂಬರ್ 17) ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆಗಳನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಕೇಂದ್ರ ಸರ್ಕಾರ ಸಿದ್ಧವಿರುವುದಾಗಿ ಹೇಳಿದರು. ಅವರು ಸಂಸತ್ತಿನ ಕೆಳಮನೆಯಲ್ಲಿ ಸಂವಿಧಾನ (ಒಂದು ನೂರಾ 29ನೇ ತಿದ್ದುಪಡಿ) ಮಸೂದೆ 2024 ಮತ್ತು ಕೇಂದ್ರಾಡಳಿತ ಕಾನೂನು (ತಿದ್ದುಪಡಿ) ಮಸೂದೆ 2024 ಎಂಬ ಎರಡು, ಮಹತ್ವದ ಮಸೂದೆಗಳನ್ನು ಮಂಡಿಸಿದರು. ಈ ಮಸೂದೆ ಮಂಡಿಸುವುದನ್ನು ತಡೆಯುವ ವಿಪಕ್ಷಗಳ ಪ್ರಯತ್ನ ವಿಫಲವಾಗಿದ್ದು, ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ. ಮಸೂದೆಗಳನ್ನು ಮತಕ್ಕೆ ಹಾಕಿದಾಗ 543 ಸದಸ್ಯ ಬಲದ ಲೋಕಸಭೆಯಲ್ಲಿ ಮಸೂದೆಗಳ ಪರವಾಗಿ 269 ಮತಗಳು ಮತ್ತು ವಿರುದ್ಧವಾಗಿ 198 ಮತಗಳು ವಿರುದ್ಧವಾಗಿ ಬಿದ್ದವು. ಹೀಗಾಗಿ ಮಸೂದೆ ಮಂಡನೆ ತಡೆಯುವ ವಿಪಕ್ಷಗಳ ಪ್ರಯತ್ನವನ್ನು ಕೇಂದ್ರ ಸರ್ಕಾರ ವಿಫಲಗೊಳಿಸಿದೆ. ಎನ್‌ಡಿಎ ಸದಸ್ಯರಿಂದ 298 ಮತ್ತು ವಿರುದ್ಧವಾಗಿ ಇಂಡಿಯಾ ಬ್ಲಾಕ್‌ನ 233 ಮತಗಳಿದ್ದು, 11 ಇತರೆ ಸದಸ್ಯರಿದ್ದಾರೆ.

ಜಂಟಿ ಸಂಸದೀಯ ಸಮಿತಿ ಪರಿಶೀಲನೆಗೆ ಒಂದು ದೇಶ ಒಂದು ಚುನಾವಣೆ ಮಸೂದೆ

ಲೋಕಸಭೆಯಲ್ಲಿ ಮಂಡನೆಯಾಗಿರುವ ಒಂದು ದೇಶ ಒಂದು ಚುನಾವಣೆ ಮಸೂದೆಗಳನ್ನು ವಿಸ್ತೃತ ಸಮಾಲೋಚನೆಗಾಗಿ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ಸರ್ಕಾರ ಸಿದ್ದವಾಗಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿಯವರೇ ತಿಳಿಸಿದ್ದಾರೆ ಎಂದು ಗೃಹ ಸಚಿವ ಅಮಿತ್ ಷಾ ಕೂಡ ಲೋಕಸಭೆಗೆ ತಿಳಿಸಿದರು.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನ (ನೂರಾ ಇಪ್ಪತ್ತೊಂಬತ್ತನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2024 ಅನ್ನು ಮಂಡಿಸುತ್ತಿದ್ದಂತೆ ಲೋಕಸಭೆಯಲ್ಲಿ ಗದ್ದಲದ ನಡುವೆಯೇ ಶಾ ಅವರು ಈ ಹೇಳಿಕೆ ನೀಡಿದರು. ಅಂತಿಮವಾಗಿ ಮಸೂದೆಗಳನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಮಸೂದೆ ಮಂಡನೆಗೆ ವಿಪಕ್ಷ ನಾಯಕರ ವಿರೋಧ; ಯಾರು ಏನು ಹೇಳಿದರು

ಲೋಕಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಮಸೂದೆಯ ಮಂಡನೆಯು ಪ್ರತಿಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಯಿತು. ಎನ್‌ಸಿಪಿ (ಶರದ್ ಪವಾರ್ ಬಣ), ಕಾಂಗ್ರೆಸ್‌ನ ಮನೀಶ್ ತಿವಾರಿ, ತೃಣಮೂಲದ ಕಲ್ಯಾಣ್ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಮತ್ತು ಡಿಎಂಕೆಯ ಟಿಆರ್ ಬಾಲು ಅವರಂತಹ ನಾಯಕರು ಈ ಮಸೂದೆ ಮಂಡಿಸಬಾರದು ಎಂದು ತೀವ್ರ ವಿರೋಧ ವ್ಯಕ್ತಪಡಿಸಿರು.

ಒಂದು ದೇಶ ಒಂದು ಚುನಾಔಣೆ ಮಸೂದೆಯು ದೇಶದ ಸಂವಿಧಾನದ ಮೂಲ ರಚನೆಗೆ ಸವಾಲು ಒಡ್ಡುವಂಥದ್ದಾಗಿದೆ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರತಿಪಾದಿಸಿದರು.

ಸರ್ವಾಧಿಕಾರದ ಧೋರಣೆಯನ್ನು ಬಿಜೆಪಿ ಸರ್ಕಾರ ತೋರುತ್ತಿದೆ. ಮಸೂದೆಯು ಭಾರತದ ವೈವಿಧ್ಯತೆ ಮತ್ತು ಅದರ ಒಕ್ಕೂಟ ರಚನೆಯನ್ನು ಕೊನೆಗೊಳಿಸುತ್ತದೆ ಎಂದು ಆರೋಪಿಸಿ ಆರೋಪಿಸಿ ಅಖಿಲೇಶ್ ಯಾದವ್ ಪರವಾಗಿ ಸಮಾಜವಾದಿ ಸಂಸದ ಧರ್ಮೇಂದ್ರ ಯಾದವ್ ಅವರು ಈ ಮಸೂದೆಯನ್ನು ವಿರೋಧಿಸಿದರು.

ಪ್ರತಿಪಕ್ಷ ನಾಯಕರು ಒಂದು ದೇಶ ಒಂದು ಚುನಾವಣೆ ಮಸೂದೆಗಳಿಗೆ ಸಂಬಂಧಿಸಿ ವ್ಯಕ್ತಪಡಿಸುತ್ತಿರುವ ಆಕ್ಷೇಪಣೆಗಳು ರಾಜಕೀಯ ಸ್ವರೂಪದಲ್ಲಿವೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಕ್ಷೇಪಣೆ, ಸಲಹೆಗಳು ವ್ಯಕ್ತವಾದರೆ ಉತ್ತಮ ಎಂದು ಕಾನೂನು ಸಚಿವ ಅರ್ಜುನ್ ಮೇಘ್ವಾಲ್ ಹೇಳಿದರು.

ಒಂದು ದೇಶ ಒಂದು ಚುನಾವಣೆ ಮಸೂದೆ ಮಂಗಳವಾರ ಲೋಕಸಭೆಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮತ್ತು ಇಂಡಿಯಾ ಬ್ಲಾಕ್ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸಿದರೆ, ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಶಿವಸೇನೆ (ಯುಬಿಟಿ) ಸೇರಿದಂತೆ ಹಲವು ವಿರೋಧ ಪಕ್ಷಗಳು ಅದನ್ನು ವಿರೋಧಿಸಿವೆ. ಒಟ್ಟು 32 ಪಕ್ಷಗಳು ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಬೆಂಬಲ ನೀಡಿದರೆ, 15 ಪಕ್ಷಗಳು ವಿರೋಧಿಸುತ್ತಿವೆ. ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿಯಂತಹ ಸ್ವತಂತ್ರ ಚಿಂತನೆಯ ಪಕ್ಷಗಳು ಕೂಡ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಸಕ್ರಿಯಗೊಳಿಸುವ ಶಾಸನವನ್ನು ಬೆಂಬಲಿಸಿರುವುದು ಗಮನಸೆಳೆದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.