ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅಕಾಲಿಕ ಮರಣಕ್ಕೆ ಕಾರಣವೇನು? ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂಬ ಶ್ವಾಸಕೋಶದ ಕಾಯಿಲೆ ಬಗ್ಗೆ ತಿಳಿಯಿರಿ
Zakir Hussain death reason: ತಬಲಾ ಮಾಂತ್ರಿಕ ಜಾಕೀರ್ ಹುಸೇನ್ ಅಕಾಲಿಕ ಮರಣ ಅವರ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಜಾಕೀರ್ ಹುಸೇನ್‌ಗೆ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂಬ ಅಪರೂಪದ ಶ್ವಾಸಕೋಶದ ಕಾಯಿಲೆ ಇರುವುದು ಪತ್ತೆಯಾಗಿತ್ತು. ಈ ಕಾಯಿಲೆ ಬಗ್ಗೆ ತಿಳಿದುಕೊಳ್ಳೋಣ.
Zakir Hussain death reason: ಜಗತ್ತು ಕಂಡ ಅಪರೂಪದ ತಬಲಾ ವಾದಕ ಉಸ್ತಾದ್ ಜಾಕೀರ್ ಹುಸೇನ್ ಸೋಮವಾರ ತನ್ನ 73ನೇ ವಯಸ್ಸಿನಲ್ಲಿ ನಿಧನರಾದರು. ಅವರಿಗೆ ಕಳೆದ ಮೂರು ವಾರಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಕೊನೆಗೆ ಐಸಿಯುಗೆ ವರ್ಗಾಯಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ತನ್ನ 73ನೇ ವಯಸ್ಸಿನಲ್ಲಿ ಮೃತಪಟ್ಟಿದ್ದರು. ಪ್ರಾಥಮಿಕ ವರದಿಗಳಲ್ಲಿ ಇವರು ಹೃದಯ ಸಂಬಂಧಿ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಯಿತು. ಆದರೆ, ಜಾಕೀರ್ ಹುಸೇನ್ ಕುಟುಂಬದ ಪ್ರಕಾರ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂಬ ಅಪರೂಪದ ಶ್ವಾಸಕೋಶದ ಕಾಯಿಲೆ ಇದೆ. ಇದು ಇವರ ಅಕಾಲಿಕ ಮರಣಕ್ಕೆ ಕಾರಣ ಎಂದು ಹೇಳಿದ್ದಾರೆ. ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಕಾಯಿಲೆಗೆ ಸರಿಯಾದ ಚಿಕಿತ್ಸೆ ಲಭ್ಯವಿಲ್ಲ.
ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಎಂದರೇನು?
ಜಾಕೀರ್ ಹುಸೇನ್ ಅವರು ಅಪರೂಪದ ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಶ್ವಾಸಕೋಶದ ಕಾಯಿಲೆ ಹೊಂದಿದ್ದರು. ಇದು ಶಾಶ್ವಕೋಶದ ಅಂಗಾಂಶಗಳಿಗೆ ಹಾನಿ ಮಾಡುತ್ತದೆ. ಉಸಿರಾಟದ ತೊಂದರೆ ಉಂಟು ಮಾಡುತ್ತದೆ. ಕಾಲಾನಂತರದಲ್ಲಿ ದೇಹದ ಉಳಿದ ಭಾಗಗಳಿಗೆ ಆಮ್ಲಜನಕ ಪೂರೈಸುವ ಶ್ವಾಸಕೋಶದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಐಪಿಎಫ್ ಎಂದು ಕರೆಯುವ ಈ ಶ್ವಾಸಕೋಶದ ಮುಂದುವರೆದ ಹಂತವು ಪ್ರತಿಭಾನ್ವಿತ ತಬಲಾ ಮಾಂತ್ರಿಕನ ಬಲಿ ಪಡೆಯಿತು.
'ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್' ಒಂದು ಶ್ವಾಸಕೋಶದ ಕಾಯಿಲೆ. ಶ್ವಾಸಕೋಶದ ಅಂಗಾಂಶದ ಫೈಬ್ರೋಸಿಸ್ ಅಥವಾ ಗಾಯಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ ಶ್ವಾಸಕೋಶದ ಅಲ್ವಿಯೋಲಾರ್ ಗೋಡೆಯು ದಪ್ಪವಾಗುತ್ತದೆ. ಆಮ್ಲಜನಕ ಪೂರೈಕೆ ಕಾರ್ಯಕ್ಕೆ ತಡೆಯಾಗುತ್ತದೆ. ಕ್ರಮೇಣ ಆಮ್ಲಜನಕವನ್ನು ಹೀರಿಕೊಳ್ಳುವ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗುತ್ತದೆ. ವೈದ್ಯರು ಮತ್ತು ಸಂಶೋಧಕರು ಈ ಕಾಯಿಲೆಗೆ ಇನ್ನೂ ಯಾವುದೇ ಚಿಕಿತ್ಸೆಯನ್ನು ಕಂಡುಕೊಂಡಿಲ್ಲ. ಈ ಕಾಯಿಲೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮತ್ತು ಅದರಿಂದ ದೂರವಿರಲು ಕೆಲವು ಔಷಧಿಗಳನ್ನು ನೀಡಲಾಗುತ್ತದೆ.
ಈ ಶ್ವಾಸಕೋಶ ಕಾಯಿಲೆ ಯಾರಿಗೆ ಬರುತ್ತದೆ?
ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್ ಮುಖ್ಯವಾಗಿ 50 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರಿಗೆ ಬರುತ್ತದೆ. ಆರಂಭದಲ್ಲಿ ಒಣ ಕೆಮ್ಮಿನಂತಹ ರೋಗ ಲಕ್ಷಣ ಹೊಂದಿರುತ್ತಾರೆ. ಬಳಿಕ ಸುಸ್ತು ಹೆಚ್ಚುತ್ತದೆ. ವ್ಯಾಯಾಮ ಅಥವಾ ಕ್ಲೈಂಬಿಂಗ್‌ನಂತಹ ಕಾರ್ಯಚಟುವಟಿಕೆಗಳ ಸಮಯದಲ್ಲಿ ಉಸಿರಾಡಲು ಕಷ್ಟವಾಗುತ್ತದೆ. ಉಗುರುಗಳು ದಪ್ಪಗಾಗುತ್ತದೆ. ಇದನ್ನು ನೇಲ್ ಕ್ಲಬ್ಬಿಂಗ್ ಎಂದು ಕರೆಯುತ್ತಾರೆ. ಆಯಾಸ ಹೆಚ್ಚಿರುತ್ತದೆ.
ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್: ಲಕ್ಷಣಗಳು
- ಉಸಿರಾಟದ ತೊಂದರೆ
- ನಿರಂತರ ಒಣ ಕೆಮ್ಮು, ಇದು ಚಿಕಿತ್ಸೆಯ ನಂತರವೂ ಸುಧಾರಿಸುವುದಿಲ್ಲ.
- ಸಾಮಾನ್ಯ ಚಟುವಟಿಕೆಗಳನ್ನು ಮಾಡುವಾಗಲೂ ದಣಿದ ಭಾವನೆ.
- ಕೆಲವು ರೋಗಿಗಳು ಎದೆಯಲ್ಲಿ ಭಾರ ಅಥವಾ ಬಿಗಿತವನ್ನು ಅನುಭವಿಸುತ್ತಾರೆ.
- ತೂಕ ನಷ್ಟ.
- ದೈಹಿಕ ಚಟುವಟಿಕೆಯ ಸಮಯದಲ್ಲಿ ಉಸಿರಾಟದ ತೊಂದರೆ.
- ರಾತ್ರಿ ಜ್ವರ ಮತ್ತು ಬೆವರುವಿಕೆ
ಇದನ್ನೂ ಓದಿ: World COPD Day: ಜೀವಕ್ಕೆ ಮಾರಕವಾಗಬಹುದು ದೀರ್ಘಕಾಲದ ಶ್ವಾಸಕೋಶದ ಸಮಸ್ಯೆ; ವಿಶ್ವ ಸಿಒಪಿಡಿ ದಿನದ ಇತಿಹಾಸ, ಮಹತ್ವ ತಿಳಿಯಿರಿ
ಅಪಾಯಕಾರಿ ಅಂಶಗಳು
- ಧೂಮಪಾನ
- ಕುಟುಂಬದ ಇತಿಹಾಸ
- ವೈರಲ್ ಸೋಂಕು
- ವಯಸ್ಸು 60 ರಿಂದ 70 ವರ್ಷಗಳಲ್ಲಿ ಈ ಅಪಾಯ ಹೆಚ್ಚು.
- ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?
- ವರ್ಷಕ್ಕೊಮ್ಮೆ ಜ್ವರ ಮತ್ತು ನ್ಯುಮೋನಿಯಾ ಲಸಿಕೆ ಪಡೆಯಿರಿ.
- ಪ್ರತಿದಿನ ವ್ಯಾಯಾಮ ಮಾಡಿ.
- ಧೂಮಪಾನವನ್ನು ನಿಲ್ಲಿಸಿ
- ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ.
ಡಿಸ್‌ಕ್ಲೈಮರ್/ ಹಕ್ಕು ನಿರಾಕರಣೆ: ಲಭ್ಯವಿರುವ ಮಾಹಿತಿ ಆಧರಿಸಿದ ಬರಹ ಇದಾಗಿದೆ. ಈ ಮಾಹಿತಿಯ ಕುರಿತು ನಾವು ದೃಢೀಕರಿಸುವುದಿಲ್ಲ. ನಿಮ್ಮ ಆರೋಗ್ಯ ಸ್ಥಿತಿಗೆ ಸಂಬಂಧಪಟ್ಟಂತೆ ಚಿಕಿತ್ಸೆ ಅಥವಾ ಸಲಹೆಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.