ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್

ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್

ಭೂಸೇನೆ ಮತ್ತು ವಾಯುಸೇನೆಯ ಅಗತ್ಯತೆಗಳನ್ನು ಪರಿಗಣಿಸಿ, ಒಟ್ಟು 156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ರಕ್ಷಣಾ ಇಲಾಖೆಯು ಮನವಿ ಪತ್ರ ಬಿಡುಗಡೆ ಮಾಡಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಿಳಿಸಿದೆ. (ಬರಹ: ಗಿರೀಶ್ ಲಿಂಗಣ್ಣ)

ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್
ಸಶಸ್ತ್ರ ಪಡೆ ಸೇರಲಿವೆ 156 'ಪ್ರಚಂಡ' ಹೆಲಿಕಾಪ್ಟರ್; ರಕ್ಷಣಾ ಜಾಲ ವಿಸ್ತರಣೆಗೆ ಎಚ್ಎಎಲ್ ಸಾಥ್

Prachand Helicopters: ದೇಶದ ರಕ್ಷಣಾ ಕ್ಷೇತ್ರದ ಬಲವರ್ಧನೆ ಕೇಂದ್ರ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಬಲಾಢ್ಯ ಉಪಕರಣಗಳನ್ನು ಒದಗಿಸುವ ಮೂಲಕ ರಕ್ಷಣಾ ಇಲಾಖೆಯ ಮೂರೂ ವಿಭಾಗಗಳನ್ನು ಆಧುನೀಕರಣಗೊಳಿಸುವುದು ಮೋದಿ ಸರ್ಕಾರದ ಗುರಿಯಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಭಾರತದ ರಕ್ಷಣಾ ಸಚಿವಾಲಯವು 156 ಲಘು ಯುದ್ಧ ಹೆಲಿಕಾಪ್ಟರ್‌(ಎಲ್‌ಸಿಎಚ್)ಗಳ ನಿರ್ಮಾಣಕ್ಕಾಗಿ ಪ್ರಸ್ತಾವನೆ ಸಲ್ಲಿಸಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಘೋಷಣೆ ಮಾಡಿದೆ.

ಭೂಸೇನೆ ಮತ್ತು ವಾಯುಸೇನೆಯ ಅಗತ್ಯತೆಗಳನ್ನು ಪರಿಗಣಿಸಿ, ಒಟ್ಟು 156 ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ರಕ್ಷಣಾ ಇಲಾಖೆಯು ಮನವಿ ಪತ್ರ ಬಿಡುಗಡೆ ಮಾಡಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ತಿಳಿಸಿದೆ. ಈ ಪೈಕಿ 90 ಹೆಲಿಕಾಪ್ಟರ್‌ಗಳು ಭಾರತೀಯ ಭೂಸೇನೆಗೆ ಮತ್ತು 66 ಹೆಲಿಕಾಪ್ಟರ್‌ಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ. ಈ ಪ್ರಸ್ತಾವನೆಯು ರಕ್ಷಣಾ ವಲಯದಲ್ಲಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವ ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿದೆ.

156 ಹೆಲಿಕಾಪ್ಟರ್‌ಗಳ ನಿರ್ಮಾಣ ಒಪ್ಪಂದ

ಎಚ್‌ಎಎಲ್ ಸಂಸ್ಥೆ ಇದುವರೆಗೂ 15 'ಪ್ರಚಂಡ' ಹೆಲಿಕಾಪ್ಟರ್‌ಗಳನ್ನು ಸೀಮಿತ ಸರಣಿಯಲ್ಲಿ ಉತ್ಪಾದಿಸಿದೆ. ಈ ಪೈಕಿ 10 ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯುಪಡೆಗೆ ಮತ್ತು 5 ಹೆಲಿಕಾಪ್ಟರ್‌ಗಳನ್ನು ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡಿವೆ. ಇದೀಗ ಸಂಸ್ಥೆಯು ಪೂರ್ಣ ಪ್ರಮಾಣದ ಉತ್ಪಾದನೆಗೆ ಮುಂದಡಿ ಇಟ್ಟಿದ್ದು, ಒಟ್ಟು 156 ಹೆಲಿಕಾಪ್ಟರ್‌ಗಳ ನಿರ್ಮಾಣ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಮುಂದಿನ ಸುಮಾರು ಐದರಿಂದ ಆರು ವರ್ಷಗಳಲ್ಲಿ ಪ್ರಚಂಡ ಹೆಲಿಕಾಪ್ಟರ್‌ಗಳನ್ನು ವಾಯುಸೇನೆ ಮತ್ತು ಭೂಸೇನೆಗೆ ಒದಗಿಸುವ ಗುರಿಯನ್ನು ಎಚ್‌ಎಎಲ್ ಹೊಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಪ್ರಚಂಡನ ಪರಾಕ್ರಮ ಹೇಗಿರಲಿದೆ… 

ಪ್ರಸ್ತುತ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳ ನಿರ್ಮಾಣ ಕಾರ್ಯದಲ್ಲಿ ಶೇ.45 ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಸಲಾಗುತ್ತಿದೆ. ಆದರೆ ಪೂರ್ಣ ಪ್ರಮಾಣದ ಉತ್ಪಾದನಾ ಆವೃತ್ತಿಯಲ್ಲಿ ಶೇ.55 ರಷ್ಟು ಸ್ಥಳೀಯ ಬಿಡಿಭಾಗಗಳನ್ನು ಬಳಸಲು ನಿರ್ಧರಿಸಲಾಗಿದೆ. ಬಹುಮುಖ ಕಾರ್ಯಾಚರಣೆಗೆ ಹೆಸರುವಾಸಿಯಾಗಿರುವ ಈ ಲಘು ಯುದ್ಧ ಹೆಲಿಕಾಪ್ಟರ್‌ಗಳು, ಶತ್ರುಪಡೆಯ ವಾಯುಬಲವನ್ನು ಸಂಪೂರ್ಣವಾಗಿ ನಾಶಪಡಿಸುವ ಸಾಮರ್ಥ್ಯ ಹೊಂದಿವೆ. ಶತ್ರುಪಡೆಯ ಯುದ್ಧ ವಿಮಾನಗಳು ಮತ್ತು ಎತ್ತರದ ಪ್ರದೇಶದಲ್ಲಿ ನಿರ್ಮಿಸಲಾದ ಯುದ್ಧ ಬಂಕರ್‌ಗಳನ್ನು ನಾಶಪಡಿಸುವುದು, ಕಾಡು ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯ ಈ ಹೆಲಿಕಾಪ್ಟರ್‌ಗಳಿಗೆ ಇದೆ.

ಎಲ್‌ಸಿಎಚ್ ಪ್ರಚಂಡ ಹೆಲಿಕಾಪ್ಟರ್‌ಗಳು ಭಾರತೀಯ ರಕ್ಷಣಾ ಪಡೆಗಳ ಗುಪ್ತಚರ ಮಾಹಿತಿ ಸಂಗ್ರಹಣೆ, ಕಣ್ಗಾವಲು ಮತ್ತು ವಿಚಕ್ಷಣ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ವಿಶೇಷವಾಗಿ ಉತ್ತರದ ಹಿಮಾಲಯದ ದುರ್ಗಮ ಪ್ರದೇಶದಲ್ಲಿ ಈ ಹೆಲಿಕಾಪ್ಟರ್‌ಗಳು ಪರಿಣಾಮಕಾರಿ ಕರ್ತ್ಯವ್ಯ ನಿಭಾಯಿಸಬಲ್ಲವು.

ರಷ್ಯಾದ 'ಔಟ್ಲೆಟ್ ಸ್ಪುಟ್ನಿಕ್' ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ, ಎಲ್‌ಸಿಎಚ್ ಪ್ರಚಂಡ ಹೆಲಿಕಾಪ್ಟರ್‌ಗಳು ಭಾರತದ ಮಿಲಿಟರಿ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ ಎಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಜೆಎಸ್ ಸೋಧಿ ಹೇಳಿದ್ದಾರೆ. ಯುದ್ಧಕಾಲದಲ್ಲಿ ಈ ಹೆಲಿಕಾಪ್ಟರ್‌ಗಳು ಭೂಸೇನೆಗೆ ಅನುಕೂಲಕರ ವಾಯು ಬೆಂಬಲವನ್ನು ನೀಡುತ್ತವೆ. ಅಲ್ಲದೇ ಶತ್ರುಗಳ ರಣತಂತ್ರವನ್ನು ಭೇದಿಸುವಲ್ಲಿ ನೆರವಾಗುತ್ತವೆ ಎಂದು ಜೆಎಸ್ ಸೋಧಿ ಅಭಿಪ್ರಾಯಪಟ್ಟಿದ್ದಾರೆ.

ಈ ಹೆಲಿಕಾಪ್ಟರ್‌ಗಳು ಸಾರಿಗೆ ಹೆಲಿಕಾಪ್ಟರ್‌ಗಳಿಗೆ ಸಶಸ್ತ್ರ ಬೆಂಗಾವಲುಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದಿರುವ ಮಾಜಿ ಸೈನ್ಯಾಧಿಕಾರಿ ಜೆಎಸ್ ಸೋಧಿ, ಯುದ್ಧ ಕಾರ್ಯಾಚರಣೆಗಳಲ್ಲಿ ಈ ಹೆಲಿಕಾಪ್ಟರ್‌ಗಳು ವಿಚಕ್ಷಣ ಮತ್ತು ಕಣ್ಗಾವಲು ಕಾರ್ಯಾಚರಣೆಗಳ ಸಾಮರ್ಥ್ಯ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ ಎಂದು ಹೇಳಿದ್ದಾರೆ.

5 ಸಾವಿರ ಮೀಟರ್ ಎತ್ತರದಲ್ಲಿ ಪ್ರಚಂಡ ಹಾರಾಟ

ಪ್ರಚಂಡ ಹೆಲಿಕಾಪ್ಟರ್‌ಗಳು ಸುಮಾರು 5,000 ಮೀಟರ್ (16,400 ಅಡಿ) ಎತ್ತರದಲ್ಲಿ ಹಾರಬಲ್ಲ ವಿಶ್ವದ ಏಕೈಕ ಲಘು ಯುದ್ಧ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿವೆ. ಈ ಸಾಮರ್ಥ್ಯವು ಭೂಮಿಯ ಮೇಲಿನ ಅತಿ ಎತ್ತರದ ಯುದ್ಧಭೂಮಿ ಎಂದು ಕರೆಯಲ್ಪಡುವ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ನೆಲೆಸಿರುವ ಪಡೆಗಳಿಗೆ ಪ್ರಮುಖ ಸರಬರಾಜುಗಳನ್ನು ತಲುಪಿಸಲು ಭಾರತೀಯ ಮಿಲಿಟರಿಗೆ ಅನುವು ಮಾಡಿಕೊಡುತ್ತದೆ. ಅಲ್ಲದೇ ಪ್ರಚಂಡ ಹೆಲಿಕಾಪ್ಟರ್‌ಗಳು ಲಡಾಖ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೀಸುವ ಬಲವಾದ ಗಾಳಿಯನ್ನು ನಿಭಾಯಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿವೆ.

  • 500 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ವ್ಯವಸ್ಥೆಯನ್ನು ಹೊಂದಿರುವ ಪ್ರಚಂಡ ಹೆಲಿಕಾಪ್ಟರ್‌ಗಳು, ಭಾರತೀಯ ವಾಯುಪಡೆಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ. ವಿಶೇಷವಾಗಿ ನಿಕಟ ಯುದ್ಧದ ಸಂದರ್ಭಗಳಲ್ಲಿ ಶತ್ರುಪಡೆಯನ್ನು ಸದೆಬಡಿಯುವಲ್ಲಿ ಪ್ರಚಂಡ ಹೆಲಿಕಾಪ್ಟರ್‌ಗಳು ಪ್ರಮುಖ ಪಾತ್ರ ನಿಭಾಯಿಸಬಲ್ಲವು.
  • ಎಚ್‌ಎಎಲ್‌ನ 'ರುದ್ರ' ಧ್ರುವ್ ಹೆಲಿಕಾಪ್ಟರ್‌ನ ಶಸ್ತ್ರಸಜ್ಜಿತ ಆವೃತ್ತಿಯನ್ನು ಆಧರಿಸಿರುವ ಪ್ರಚಂಡ ಎಲ್‌ಸಿಎಚ್, ಗಂಟೆಗೆ 275 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. ಪ್ರಚಂಡ ಎಂದರೆ ಸಂಸ್ಕೃತದಲ್ಲಿ 'ಉಗ್ರ' ಎಂದರ್ಥ. ರುದ್ರ' ಧ್ರುವ್ ಹೆಲಿಕಾಪ್ಟರ್‌ಗಳು ಈಗಾಗಲೇ ಭಾರತೀಯ ಭೂಸೇನೆ ಮತ್ತು ವಾಯುಪಡೆಯ ಬಳಕೆಯಲ್ಲಿದ್ದು, ಇದು ಪ್ರಾಥಮಿಕವಾಗಿ ಸಶಸ್ತ್ರ ಹೆಲಿಕಾಪ್ಟರ್ ಆಗಿ ಕಾರ್ಯನಿರ್ವಹಿಸುತ್ತಿದೆ.
  • ಪ್ರಚಂಡ ಹೆಲಿಕಾಪ್ಟರ್‌ನ್ನು ನಿರ್ದಿಷ್ಟವಾಗಿ ತ್ವರಿತ ದಾಳಿಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಗರಿಷ್ಠ 5.8 ಟನ್ ತೂಕದ ಈ ಹೆಲಿಕಾಪ್ಟರ್‌ಗಳು 6,500 ಮೀಟರ್ (21,300 ಅಡಿ) ಎತ್ತರದಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ.
  • 156 ಪ್ರಚಂಡ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಭಾರತೀಯ ರಕ್ಷಣಾ ಸಚಿವಾಲಯವು ಸುಮಾರು 5.4 ಶತಕೋಟಿ ಅಮೇರಿಕನ್ ಡಾಲರ್ (ಸುಮಾರು 45,000 ಕೋಟಿ ರೂ.) ಟೆಂಡರ್ ಕರೆದಿದೆ. ಭಾರತೀಯ ಸಶಸ್ತ್ರ ಪಡೆಗಳು ಪ್ರಸ್ತುತ ಉತ್ತರ ಪರ್ವತ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು, ಅಮೇರಿಕಾ ನಿರ್ಮಿತ ಹೆಲಿಕಾಪ್ಟರ್‌ಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಪ್ರಚಂಡ ಹೆಲಿಕಾಪ್ಟರ್‌ಗಳು ಹಂತ ಹಂತವಾಗಿ 'ಅಪಾಚೆ' ಮತ್ತು 'ಚಿನೂಕ್‌'ನಂತಹ ಅಮೇರಿಕನ್ ಹೆಲಿಕಾಪ್ಟರ್‌ಗಳ ಸ್ಥಾನವನ್ನು ಆಕ್ರಮಿಸಿಕೊಳ್ಳಲಿವೆ.

ಎಲ್‌ಸಿಎಚ್ ಪ್ರಚಂಡ ಉತ್ಪಾದನೆಯು ಹೆಚ್ಚಾದಂತೆ, ಪ್ರಸ್ತುತ ಭಾರತೀಯ ಸೇನೆಯು ಬಳಸುತ್ತಿರುವ ವಿದೇಶಿ ನಿರ್ಮಿತ ದಾಳಿ ಹೆಲಿಕಾಪ್ಟರ್‌ಗಳ ಸಂಖ್ಯೆ ಕಡಿಮೆಯಾಗಲಿದೆ. ಈ ಬದಲಾವಣೆಯು ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ ಇಂಡಿಯಾ ಉಪಕ್ರಮಗಳಿಗೆ ಮತ್ತಷ್ಟು ಶಕ್ತಿ ತುಂಬಲಿದೆ. ರಕ್ಷಣಾ ವಲಯದಲ್ಲಿ ಸ್ವಾವಲಂಬನೆಯ ಗುರಿಯನ್ನು ತಲುಪುವಲ್ಲಿ, ಎಲ್‌ಸಿಎಚ್ ಪ್ರಚಂಡ ಹೆಲಿಕಾಪ್ಟರ್‌ಗಳ ಉತ್ಪಾದನೆ ಒಂದು ಪ್ರಮುಖ ಮೈಲಿಗಲ್ಲಾಗಲಿದೆ.

(ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.