Mann Ki Baat:ಬೆಂಗಳೂರಿನ ಧನಪಾಲ್ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ, ಇಸ್ರೋ ಮಹಿಳಾ ವಿಜ್ಞಾನಿಗಳಿಗೆ ಶ್ಲಾಘನೆ; ಮನ್ ಕಿ ಬಾತ್‌ನ 7 ಅಂಶಗಳು
ಇಂದಿನ ಮನ್ ಕಿ ಬಾತ್ನಲ್ಲಿ ಬೆಂಗಳೂರಿನ ಧನಪಾಲ್ ಎಂಬವರ ಹೆಸರು ಪ್ರಸ್ತಾಪಿಸಿದ ಮೋದಿ, "ಪುರಾತನ ವಸ್ತುಗಳ ಶೋಧನೆಯಲ್ಲಿ ತೊಡಗಿಕೊಂಡಿರುವ ಧನಪಾಲ್ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ಪರಿಶ್ರಮದಿಂದ ಅನೇಕ ಪುರಾತನ ವಸ್ತುಗಳು ನಮಗೆ ನೋಡಲು ಸಿಗುತ್ತಿವೆ" ಎಂದು ಹೇಳಿದರು.
ನವದೆಹಲಿ: "ಭಾರತೀಯ ಹೆಣ್ಣುಮಕ್ಕಳು ಈಗ ಬಾಹ್ಯಾಕಾಶದ ಅನಂತ ವಿಸ್ತಾರಕ್ಕೂ ಸವಾಲು ಹಾಕುತ್ತಿದ್ದಾರೆ. ಒಂದು ದೇಶದ ಹೆಣ್ಣುಮಕ್ಕಳು ಮಹತ್ವಾಕಾಂಕ್ಷೆಯಿಂದಿರುವಾಗ, ಆ ರಾಷ್ಟ್ರವು ಅಭಿವೃದ್ಧಿಯಾಗುವುದನ್ನು ತಡೆಯಲು ಯಾರಿದಂಲೂ ಸಾಧ್ಯವಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್‌ನ 104 ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ-3ರ ಯಶಸ್ಸನ್ನು ಕೊಂಡಾಡಿದರು. "ಚಂದ್ರಯಾನ-3ರ ಯಶಸ್ಸು ಸಂಭ್ರಮಕ್ಕೆ ಎಲ್ಲೆ ಇಲ್ಲ. ಈ ಯಶಸ್ಸು ತುಂಬಾ ದೊಡ್ಡದಾಗಿದ್ದು, ಅದರ ಬಗ್ಗೆ ಎಷ್ಟು ಚರ್ಚಿಸಿದರೂ ಕಡಿಮೆನೇ. ಚಂದ್ರಯಾನ 3 ಮಿಷನ್ ನವ ಭಾರತದ ಚೈತನ್ಯದ ಸಂಕೇತವಾಗಿದೆ, ಅದು ಯಾವುದೇ ಪರಿಸ್ಥಿತಿಯಲ್ಲಿ ಹೇಗೆ ಗೆಲ್ಲಬೇಕೆಂಬುದನ್ನು ತೋರಿಸುತ್ತದೆ" ಎಂದು ಹೇಳಿದರು.
1) ಇಸ್ರೋ ಮಹಿಳಾ ವಿಜ್ಞಾನಿಗಳಿಗೆ ಶ್ಲಾಘನೆ
ಇಸ್ರೋ ಮಹಿಳಾ ವಿಜ್ಞಾನಿಗಳನ್ನು ಶ್ಲಾಘಿಸಿದ ಪಿಎಂ ಮೋದಿ, "ಚಂದ್ರಯಾನ-3 ಮಿಷನ್ ಮಹಿಳಾ ಶಕ್ತಿಯ ಜೀವಂತ ಉದಾಹರಣೆಯಾಗಿದೆ. ಹೆಣ್ಣುಮಕ್ಕಳು ಈಗ ಬಾಹ್ಯಾಕಾಶದ ಅನಂತ ವಿಸ್ತಾರಕ್ಕೂ ಸವಾಲು ಹಾಕುತ್ತಿದ್ದಾರೆ" ಎಂದರು. ನಿನ್ನೆಯಷ್ಟೇ (ಆಗಸ್ಟ್ 26, ಶನಿವಾರ) ಬೆಂಗಳೂರಿನ ಇಸ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದ ಮೋದಿ, ಚಂದ್ರಯಾನ 3 ಯಶಸ್ಸಿನ ಹಿಂದಿರುವ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದಿಸಿದ್ದರು.
2) ಬೆಂಗಳೂರಿನ ಧನಪಾಲ್ ಪರಿಶ್ರಮಕ್ಕೆ ಮೋದಿ ಮೆಚ್ಚುಗೆ
ಇಂದಿನ ಮನ್ ಕಿ ಬಾತ್ನಲ್ಲಿ ಬೆಂಗಳೂರಿನ ಧನಪಾಲ್ ಎಂಬವರ ಹೆಸರು ಪ್ರಸ್ತಾಪಿಸಿದ ಮೋದಿ, "ಪುರಾತನ ವಸ್ತುಗಳ ಶೋಧನೆಯಲ್ಲಿ ತೊಡಗಿಕೊಂಡಿರುವ ಧನಪಾಲ್ ಅವರ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ಪರಿಶ್ರಮದಿಂದ ಅನೇಕ ಪುರಾತನ ವಸ್ತುಗಳು ನಮಗೆ ನೋಡಲು ಸಿಗುತ್ತಿವೆ" ಎಂದು ಹೇಳಿದರು.
3) ಜಿ-20 ಶೃಂಗಸಭೆ
"ಈ ಬಾರಿ ಭಾರತದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಜಿ-20 ಶೃಂಗಸಭೆಗೆ ಭಾರತ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, 40 ರಾಷ್ಟ್ರಗಳ ಅಧ್ಯಕ್ಷರು ಭಾಗಿಯಾಗಲಿದ್ದಾರೆ" ಎಂದು ಮೋದಿ ತಿಳಿಸಿದರು.
4) ಹರ್ ಘರ್ ತಿರಂಗಾ
"ಸ್ವಾತಂತ್ರ್ಯ ದಿನದ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದಡಿ 10 ಕೋಟಿಗೂ ಹೆಚ್ಚು ಜನರು ತ್ರಿವರ್ಣ ಧ್ವಜದೊಂದಿಗೆ ಸೆಲ್ಫಿ ಕಳುಹಿಸಿದ್ದಾರೆ ಮತ್ತು ಈ ಬಾರಿ ಅತಿಹೆಚ್ಚು ಜನರು ಧ್ವಜವನ್ನು ಖರೀದಿಸಿದ್ದಾರೆ. ಭಾರತದ ವಿವಿಧ ಪ್ರದೇಶಗಳಿಂದ ಮಣ್ಣು ಸಂಗ್ರಹಿಸಲಾಗಿದ್ದು, ಇದರಿಂದ ಅಮೃತ ವಾಟಿಕಾ ನಿರ್ಮಿಸಲಾಗುತ್ತದೆ" ಎಂದು ಮೋದಿ ಹೇಳಿದರು.
5) ವರ್ಲ್ಡ್ ಯುನಿವರ್ಸಿಟಿ ಗೇಮ್ಸ್
ಮನ್ ಕಿ ಬಾತ್ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದಲ್ಲಿ ನಡೆದ ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದಲ್ಲಿ (World University Games) ಪದಕ ಗೆದ್ದ ಭಾರತದ ಕ್ರೀಡಾಪಟುಗಳನ್ನು ಅಭಿನಂದಿಸಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು. "ಕ್ರೀಡೆಯು ನಮ್ಮ ಯುವಜನತೆ ನಿರಂತರವಾಗಿ ಹೊಸ ಯಶಸ್ಸನ್ನು ಸಾಧಿಸುತ್ತಿರುವ ಒಂದು ಕ್ಷೇತ್ರವಾಗಿದೆ. ಚೀನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾರತವು ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ" ಎಂದರು.
6) ವಿಶ್ವ ಸಂಸ್ಕೃತ ದಿನ
ಆಗಸ್ಟ್ 31 ರಂದು ಆಚರಿಸಲಾಗುವ ‘ವಿಶ್ವ ಸಂಸ್ಕೃತ ದಿನ’ಕ್ಕೆ ಶುಭಾಶಯಗಳನ್ನು ಕೋರಿದ ಮೋದಿ, ಇತ್ತೀಚಿನ ದಿನಗಳಲ್ಲಿ ಸಂಸ್ಕೃತವನ್ನು ಉತ್ತೇಜಿಸಲು ಕೈಗೊಂಡ ಪ್ರಯತ್ನಗಳನ್ನು ಶ್ಲಾಘಿಸಿದರು. "ಸಂಸ್ಕೃತವು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಅನೇಕ ಆಧುನಿಕ ಭಾಷೆಗಳ ತಾಯಿ ಎಂದೂ ಕರೆಯುತ್ತಾರೆ. ಸಂಸ್ಕೃತವು ಅದರ ಪ್ರಾಚೀನತೆ ಮತ್ತು ಅದರ ವೈಜ್ಞಾನಿಕತೆ ಮತ್ತು ವ್ಯಾಕರಣಕ್ಕೆ ಹೆಸರುವಾಸಿಯಾಗಿದೆ "ಎಂದು ಹೇಳಿದರು.
7) ರಕ್ಷಾಬಂಧನ 2023:
ಹಾಗೆಯೇ ಆಗಸ್ಟ್ 30 ರಂದು ಆಚರಿಸಲಾಗುತ್ತಿರುವ ರಕ್ಷಾಬಂಧನಕ್ಕೆ ಪ್ರಧಾನಿ ಮೋದಿ ಶುಭಕೋರಿದರು.