Ayodhya Ram Mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆ; 7000ಕ್ಕೂ ಅಧಿಕ ಗಣ್ಯರ ಪ್ರವೇಶ ಪತ್ರ ಹೀಗಿದೆ ನೋಡಿ
Ayodhya Ram Mandir: ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆ (Pran Pratishtha) ಕಾರ್ಯಕ್ರಮಕ್ಕೆ ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ 3,000 ವಿವಿಐಪಿಗಳು ಸೇರಿ 7,000 ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಆಮಂತ್ರಣ ಪತ್ರಿಕೆ ಮತ್ತು ಪ್ರವೇಶ ಪತ್ರಗಳನ್ನು ಕಳುಹಿಸಿದ್ದು, ಅದು ಇದ್ದವರಿಗಷ್ಟೆ ಪ್ರವೇಶ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಅಯೋಧ್ಯೆ ರಾಮ ಜನ್ಮಭೂಮಿಯ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಶುಕ್ರವಾರ (ಜ.19) ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆಹ್ವಾನಿತ ಗಣ್ಯರಿಗಾಗಿ ಪ್ರವೇಶ ಪತ್ರದ ಮಾದರಿಯನ್ನು ಬಿಡುಗಡೆ ಮಾಡಿದೆ.
ಗಣ್ಯರಿಗೆ ನೀಡಿದ ಆಹ್ವಾನ ಪತ್ರಿಕೆ ಮಾತ್ರ ತಂದರೆ ಕಾರ್ಯಕ್ರಮಕ್ಕೆ ಪ್ರವೇಶ ಸಿಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ದೇವಾಲಯಕ್ಕೆ ಪ್ರವೇಶ ಸಿಗಲಿದೆ ಎಂದು ಹೇಳಿದೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಎಕ್ಸ್‌ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವುದು ಇಷ್ಟು, “ಪ್ರಾಣ ಪ್ರತಿಷ್ಠಾ ಉತ್ಸವದಲ್ಲಿ ಆಹ್ವಾನಿಸಲಾದ ಗಣ್ಯರಿಗೆ ಮಾಹಿತಿ: ಭಗವಾನ್ ಶ್ರೀ ರಾಮಲಲಾ ಸರ್ಕಾರ್ ಅವರ ಪ್ರಾಣ ಪ್ರತಿಷ್ಠಾ ಉತ್ಸವಕ್ಕೆ ಪ್ರವೇಶ ಪಡೆಯಬೇಕಾದರೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ನೀಡಿದ ಪ್ರವೇಶ ಪತ್ರದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಆಮಂತ್ರಣ ಪತ್ರಿಕೆ ಮಾತ್ರ ಹಿಡಿದು ಬಂದರೆ ಉತ್ಸವಕ್ಕೆ ಪ್ರವೇಶ ಖಾತರಿಪಡಿಸುವುದು ಸಾಧ್ಯವಿಲ್ಲ. ಪ್ರವೇಶ ಪತ್ರದ ಪ್ರತಿಯನ್ನು ಇಲ್ಲಿ ಲಗತ್ತಿಸಲಾಗಿದೆ”.
ಪುರೋಹಿತರು, ದಾನಿಗಳು ಮತ್ತು ಹಲವಾರು ರಾಜಕಾರಣಿಗಳನ್ನು ಒಳಗೊಂಡು 3,000 ವಿವಿಐಪಿಗಳು ಸೇರಿ 7,000 ಕ್ಕೂ ಹೆಚ್ಚು ಗಣ್ಯ ಅತಿಥಿಗಳಿಗೆ ಪ್ರತಿಷ್ಠಾಪನಾ ಸಮಾರಂಭದ ಆಮಂತ್ರಣ ಪತ್ರಿಕೆಗಳನ್ನು ಶ್ರೀ ರಾಮ ಜನ್ಮಭೂಮಿ ಟ್ರಸ್ಟ್ ಕಳುಹಿಸಿದೆ. .
ಏತನ್ಮಧ್ಯೆ, ರಾಮ ಜನ್ಮಭೂಮಿ ದೇವಾಲಯದಲ್ಲಿ ಬಾಲರಾಮನ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನಾ ಸಮಾರಂಭ) ಕ್ಕಾಗಿ ಒಂದು ವಾರದ ವೈದಿಕ ಆಚರಣೆಗಳ ಪೈಕಿ ನಾಲ್ಕನೇ ದಿನದ ಆಚರಣೆಗಳು ಶುಕ್ರವಾರ (ಜ.19) ಬೆಳಿಗ್ಗೆ 9 ಗಂಟೆಗೆ ಪವಿತ್ರ ದೀಪ ಬೆಳಗುವ ಮೂಲಕ ಶುರುವಾಗಿವೆ.
ಖ್ಯಾತ ಶಿಲ್ಪಿ ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ 51 ಇಂಚಿನ ರಾಮನ ವಿಗ್ರಹವನ್ನು ಗುರುವಾರ ಮಧ್ಯಾಹ್ನ 12.30 ರ ನಂತರ ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಇರಿಸಲಾಯಿತು. ಮಧ್ಯಾಹ್ನ 1.20 ಕ್ಕೆ ಆತಿಥೇಯರು ಬಾಲರಾಮನ ಪ್ರತಿಷ್ಠಾಪನೆ ಮಾಡಿದರು 'ಜಲಧಿವಾಸ್' ಆಚರಣೆಯ ಭಾಗವಾಗಿ ವಿಗ್ರಹವನ್ನು ನೀರಿನಿಂದ ಸ್ವಚ್ಛಗೊಳಿಸಲಾಯಿತು ಮತ್ತು ಗುರುವಾರ 'ಗಣೇಶ ಪೂಜೆ' ಮತ್ತು 'ವರುಣ ಪೂಜೆ' ನಡೆಯಿತು.
ಪರದೆಯಿಂದ ಮುಚ್ಚಲ್ಪಟ್ಟಿರುವ ಈ ವಿಗ್ರಹವು ಭಗವಾನ್ ರಾಮನನ್ನು ಕೃಷ್ಣ ಶಿಲೆಯಲ್ಲಿ ಕೆತ್ತಲಾದ ಕಮಲದ ಮೇಲೆ ನಿಂತಿರುವ ಐದು ವರ್ಷದ ಮಗುವಿನಂತೆ ಬಿಂಬಿಸಿದೆ.
ಈ ನಡುವೆ, ರಾಮ ಜನ್ಮಭೂಮಿಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದಲ್ಲಿ ಬಾಲರಾಮನ ಬೃಹತ್ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕಾಗಿ ಅಯೋಧ್ಯೆಯಲ್ಲಿ ಸಿದ್ಧತೆಗಳು ಪ್ರಗತಿಯಲ್ಲಿವೆ. ಪ್ರಾಣ-ಪ್ರತಿಷ್ಠಾ ಸಮಾರಂಭದ ಒಂದು ವಾರದ ಆಚರಣೆಗಳು ಮಂಗಳವಾರ ಪ್ರಾರಂಭವಾಗಿದ್ದು, ಜನವರಿ 22 ರಂದು ಪ್ರಾಣ-ಪ್ರತಿಷ್ಠಾ ಸಮಾರಂಭದೊಂದಿಗೆ ಕೊನೆಗೊಳ್ಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು ಬಾಲರಾಮ ವಿಗ್ರಹದ ಸಾಂಪ್ರದಾಯಿಕ ಸ್ಥಾಪನೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜನವರಿ 23 ರಿಂದ ಸಾರ್ವಜನಿಕರು ರಾಮಮಂದಿರಕ್ಕೆ ಭೇಟಿ ನೀಡಿ ಬಾಲರಾಮನ ದರ್ಶನ ಪಡೆಯಬಹುದು.
ಪ್ರತಿಷ್ಠಾಪನಾ ಸಮಾರಂಭದ ದೃಷ್ಟಿಯಿಂದ, ಜನವರಿ 22 ರಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ಕೇಂದ್ರ ಸರ್ಕಾರ ಗುರುವಾರ ಪ್ರಕಟಿಸಿದೆ.
-------------------------------
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇತರರೂ ಬರೆಯುವಂತೆ ಪ್ರೇರೇಪಿಸಿ.. ನಮ್ಮ ಇಮೇಲ್: ht.kannada@htdigital.in