Ayodhya Ram Mandir: ಜ 22ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅರ್ಧ, ಇಡೀ ದಿನ ರಜೆ ಘೋ‍ಷಿಸಿದ 10 ರಾಜ್ಯಗಳ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಜ 22ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅರ್ಧ, ಇಡೀ ದಿನ ರಜೆ ಘೋ‍ಷಿಸಿದ 10 ರಾಜ್ಯಗಳ ವಿವರ

Ayodhya Ram Mandir: ಜ 22ರಂದು ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಅರ್ಧ, ಇಡೀ ದಿನ ರಜೆ ಘೋ‍ಷಿಸಿದ 10 ರಾಜ್ಯಗಳ ವಿವರ

Ayodhya Ram Mandir: ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಬಾಲರಾಮ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳು ಆ ದಿನ ಅರ್ಧ ಮತ್ತು ಇಡೀ ದಿನ ರಜೆ ಘೋಷಿಸಿವೆ. ರಜೆ ಘೋ‍ಷಿಸಿದ ರಾಜ್ಯಗಳ ವಿವರ ಇಲ್ಲಿದೆ.

ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮ ಮಂದಿರ (ಕಡತ ಚಿತ್ರ)
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಾಣ ಹಂತದಲ್ಲಿರುವ ಅಯೋಧ್ಯೆ ರಾಮ ಮಂದಿರ (ಕಡತ ಚಿತ್ರ) (PTI Photo)

ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ (Ayodhya Ram Mandir) ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾ ಸಮಾರಂಭದ ಸಂದರ್ಭದಲ್ಲಿ ಜನವರಿ 22 ರಂದು ಕೇಂದ್ರ ಸರ್ಕಾರದ ಎಲ್ಲ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಗುರುವಾರ ಪ್ರಕಟಿಸಿದೆ.

"ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಜನವರಿ 22ರಂದು ನಡೆಯಲಿದ್ದು, ಭಾರತದಾದ್ಯಂತ ಈ ಸಂಭ್ರಮ ಕಣ್ತುಂಬಿಕೊಳ್ಳಲು ಜನ ಸಿದ್ಧರಾಗುತ್ತಿದ್ದಾರೆ. ಸರ್ಕಾರಿ ನೌಕರರು ಈ ಆಚರಣೆಗಳಲ್ಲಿ ಭಾಗವಹಿಸುವುದಕ್ಕೆ ಅನುವು ಮಾಡಿಕೊಡಲು, ಭಾರತದಾದ್ಯಂತ ಕೇಂದ್ರ ಸರ್ಕಾರಿ ಕಚೇರಿಗಳು, ಕೇಂದ್ರ ಸಂಸ್ಥೆಗಳು ಮತ್ತು ಕೇಂದ್ರ ಕೈಗಾರಿಕಾ ಸಂಸ್ಥೆಗಳ ಕೆಲಸಗಳಿಗೆ ಜನವರಿ 22 ರಂದು ಮಧ್ಯಾಹ್ನ 2.30ರ ತನಕ ಅರ್ಧ ದಿನ ರಜೆ ಘೋ‍ಷಿಸಲಾಗಿದೆ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಜ್ಞಾಪನಾ ಪತ್ರ ತಿಳಿಸಿದೆ.

ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಯಾವೆಲ್ಲ ರಾಜ್ಯದಲ್ಲಿ ರಜೆ

ಅಯೋಧ್ಯೆಯ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಯಾವೆಲ್ಲ ರಾಜ್ಯದಲ್ಲಿ ರಜೆ ಘೋಷಣೆಯಾಗಿದೆ. ಇಲ್ಲಿರುವ ರಾಜ್ಯಗಳ ಪಟ್ಟಿಯನ್ನು ಗಮನಿಸಿ,

1) ತ್ರಿಪುರಾ: ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಜನವರಿ 22 ರಂದು ಮಧ್ಯಾಹ್ನ 2: 30 ರವರೆಗೆ ಮುಚ್ಚಲಾಗುವುದು ಎಂದು ತ್ರಿಪುರಾ ಸರ್ಕಾರದ ಉಪ ಕಾರ್ಯದರ್ಶಿ ಅಸಿಮ್ ಸಹಾಯ್ ಆದೇಶ ಹೊರಡಿಸಿದ್ದಾರೆ.

2) ಛತ್ತೀಸಗಡ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಗಮನದಲ್ಲಿಟ್ಟುಕೊಂಡು ಜನವರಿ 22 ರಂದು ಮಧ್ಯಾಹ್ನ 2:30 ರವರೆಗೆ ಎಲ್ಲಾ ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಎಂದು ಛತ್ತೀಸಗಡ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಗುರುವಾರ ಘೋಷಿಸಿದರು.

3) ಉತ್ತರ ಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನಿರ್ದೇಶನ ನೀಡಿದ್ದಾರೆ. ಅಷ್ಟೇ ಅಲ್ಲ, ಆ ದಿನ ರಾಜ್ಯದ ಮದ್ಯದಂಗಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದ್ದಾರೆ.

4) ಮಧ್ಯಪ್ರದೇಶ: ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಶಾಲೆಗೆ ರಜೆ ಘೋಷಿಸಿದ್ದು, ಈ ದಿನವನ್ನು ಹಬ್ಬದಂತೆ ಆಚರಿಸಲು ಜನರಿಗೆ ಕರೆ ನೀಡಿದ್ದಾರೆ. ಇದಲ್ಲದೇ, ಈ ದಿನವನ್ನು ಡ್ರೈ ಡೇ ಘೋಷಿಸಲಾಗಿದ್ದು, ಮದ್ಯ ಮತ್ತು ಭಾಂಗ್ ಮಳಿಗೆಗಳು ಸೇರಿ ಎಲ್ಲಾ ಅಂಗಡಿಗಳಿಗೆ ರಜೆ ಘೋಷಿಸಲಾಗಿದೆ.

5) ಗೋವಾ: ಅಯೋಧ್ಯೆಯ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ 'ಪ್ರಾಣ ಪ್ರತಿಷ್ಠಾ' ಸಮಾರಂಭದ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಜನವರಿ 22 ರಂದು ಸರ್ಕಾರಿ ನೌಕರರು ಮತ್ತು ಶಾಲೆಗಳಿಗೆ ರಜೆ ಘೋಷಿಸಿದೆ.

6) ಹರಿಯಾಣ: ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಹರಿಯಾಣ ಸರ್ಕಾರ ಜನವರಿ 22 ರಂದು ಶಾಲೆಗಳಿಗೆ ರಜೆ ಘೋಷಿಸಿದೆ. ಪ್ರತಿಷ್ಠಾಪನಾ ಸಮಾರಂಭದ ದಿನದಂದು ರಾಜ್ಯದಲ್ಲಿ ಎಲ್ಲಿಯೂ ಮದ್ಯ ಸೇವನೆಗೆ ಅನುಮತಿ ಇಲ್ಲ ಎಂದು ಘೋಷಿಸಿದೆ.

7) ಒಡಿಶಾ: ಜನವರಿ 22 ರಂದು ಒಡಿಶಾದ ಎಲ್ಲಾ ಸರ್ಕಾರಿ ಕಚೇರಿಗಳು ಅರ್ಧ ದಿನ ಮುಚ್ಚಲ್ಪಡುತ್ತವೆ. "ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ದೃಷ್ಟಿಯಿಂದ, ಒಡಿಶಾ ಸರ್ಕಾರವು ರಾಜ್ಯ ಸರ್ಕಾರಿ ಕಚೇರಿಗಳು, ಕಂದಾಯ ಮತ್ತು ಮ್ಯಾಜಿಸ್ಟೀರಿಯಲ್ ನ್ಯಾಯಾಲಯಗಳು ಜನವರಿ 22 ರಂದು (ಸೋಮವಾರ) ಮಧ್ಯಾಹ್ನ 2.30 ರವರೆಗೆ ಅರ್ಧ ದಿನ ಮುಚ್ಚಲ್ಪಡುತ್ತವೆ ಎಂದು ಘೋಷಿಸಿದೆ.

8) ಅಸ್ಸಾಂ: ಅಸ್ಸಾಂ ಸರ್ಕಾರ ಜನವರಿ 22 ರಂದು ಅರ್ಧ ರಜೆ ಘೋಷಿಸಿದೆ. ಅಂದರೆ, ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳು ಜನವರಿ 22 ರಂದು ಮಧ್ಯಾಹ್ನ 2.30 ರವರೆಗೆ ಮುಚ್ಚಲ್ಪಡುತ್ತವೆ.

9) ರಾಜಸ್ಥಾನ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಸಮಾರಂಭದ ಹಿನ್ನೆಲೆಯಲ್ಲಿ ರಾಜಸ್ಥಾನ ಸರ್ಕಾರ ಜನವರಿ 22 ರಂದು ರಾಜ್ಯದಲ್ಲಿ ಅರ್ಧ ದಿನ ರಜೆ ಘೋಷಿಸಿದೆ.

10) ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯನ್ನು ಆಚರಿಸಲು ಜನವರಿ 22 ರಂದು ಗುಜರಾತ್ನ ಎಲ್ಲಾ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ದೆಹಲಿ ಸರ್ಕಾರದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.