Bengaluru Salary: ಅತ್ಯಧಿಕ ವಾರ್ಷಿಕ ವೇತನ ಪಡೆಯುವ ವಿಷಯದಲ್ಲಿ ಬೆಂಗಳೂರಿಗೆ ಅಗ್ರ 3ನೇ ಸ್ಥಾನ, ಮಹಿಳೆಯರಿಗಿಂತ ಪುರುಷರಿಗೆ ಸ್ಯಾಲರಿ ಹೆಚ್ಚು
Bengaluru Jobs and Salary: ಭಾರತದ ನಗರಗಳಲ್ಲಿ ಅತ್ಯಧಿಕ ವೇತನ ಪಡೆಯುವ ನಗರಗಳಲ್ಲಿ ಅಗ್ರ ಮೂರನೇ ಸ್ಥಾನವನ್ನು ಬೆಂಗಳೂರು ಪಡೆದಿದೆ. ಮೊದಲ ಎರಡು ಸ್ಥಾನಗಳನ್ನು ಸೊಲಾಪುರ್ ಮತ್ತು ಮುಂಬೈ ಪಡೆದಿವೆ. ಭಾರತದಲ್ಲಿ ಮಹಿಳೆಯರಿಗಿಂತ ಪುರುಷರು ಅಧಿಕ ವೇತನ ಪಡೆಯುತ್ತಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಬೆಂಗಳೂರು: ವೇತನದ ವಿಷಯದಲ್ಲಿ ಯಾರಿಗೂ ಖುಷಿ ಎನ್ನುವುದೂ ಇಲ್ಲ. ಹತ್ತು ಸಾವಿರ ರೂ ಇರುವವರಿಗೆ ಇಪ್ಪತ್ತು ಸಾವಿರ ರೂ. ವೇತನ ಇರಬೇಕಿತ್ತು ಎಂದೆನಿಸುತ್ತದೆ. ಐವತ್ತು ಸಾವಿರ ರೂ ವೇತನ ಇರುವವರಿಗೆ ಒಂದು ಲಕ್ಷ ರೂ ವೇತನ ಇರಬೇಕಿತ್ತು ಎಂದೆನಿಸುತ್ತದೆ. ಐದು ಲಕ್ಷ ರೂ ವೇತನ ಇರುವವರಿಗೆ ಇಪ್ಪತ್ತು ಲಕ್ಷ ರೂ ವೇತನ ಇರಬೇಕಿತ್ತು ಎಂದೆನಿಸುತ್ತದೆ. ಊರಿನ ಕಡಿಮೆ ವೇತನದ ಕೆಲಸ ಬಿಟ್ಟು ನಗರಕ್ಕೆ ಹೋಗಿ ಒಳ್ಳೆಯ ವೇತನ ಪಡೆಯಲು ಬಯಸುತ್ತಾರೆ. ಮೈಸೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿಯಂತಹ ನಗರಗಳ ವೇತನ ಸಾಕಾಗುತ್ತಿಲ್ಲ ಎಂದೆನಿಸಿದರೆ ಮಹಾನಗರ ಬೆಂಗಳೂರಿಗೆ ಕಾಲಿಡುತ್ತಾರೆ. ಬೆಂಗಳೂರಿಗಿಂತ ಮುಂಬೈನಲ್ಲಿ ಒಳ್ಳೆ ವೇತನ ಸಿಗುತ್ತೆ ಎಂದಾದರೆ ಕೆಲವರು ಮುಂಬೈಗೂ ಹೋಗಲು ಸಿದ್ಧರಾಗುತ್ತಾರೆ. ಅವಕಾಶ ಸಿಕ್ಕರೆ ಒಳ್ಳೆಯ ವೇತನ ನೀಡುವ ವಿದೇಶದ ಉದ್ಯೋಗವನ್ನೂ ಪಡೆಯುತ್ತಾರೆ.
ವೇತನದಲ್ಲಿ ಭಾರತದ ಟಾಪ್ ನಗರಗಳು ಯಾವುವು?
ಇದೀಗ ಬಂದ ಸುದ್ದಿಯ ಪ್ರಕಾರ ಕರ್ನಾಟಕದ ಬಹುತೇಕ ಉದ್ಯೋಗಿಗಳ ನೆಚ್ಚಿನ ತಾಣ ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ ವೇತನ ಉತ್ತಮವಾಗಿದೆ. ಅಂದರೆ, ಭಾರತದ ನಗರಗಳಲ್ಲಿ ಸರಾಸರಿ ವೇತನ ಉತ್ತಮ ಇರುವಂತಹ ನಗರಗಳಲ್ಲಿ ಬೆಂಗಳೂರಿಗೆ ಅಗ್ರ ಮೂರನೇ ಸ್ಥಾನ ದೊರಕಿದೆ. ಹಾಗಾದರೆ, ಅತ್ಯುತ್ತಮ ವೇತನ ನೀಡುವ ಇನ್ನೆರಡು ಪ್ರಮುಖ ನಗರಗಳು ಯಾವುವು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅವರೇಜ್ ಸಾಲರಿ ಸರ್ವೇ ಪ್ರಕಾರ ಮೊದಲ ಎರಡು ಸ್ಥಾನಗಳನ್ನು ಸೊಲಾಪುರ್ ಮತ್ತು ಮುಂಬೈ ಪಡೆದಿವೆ. ಮೂರನೇ ಸ್ಥಾನವನ್ನು ಬೆಂಗಳೂರು ಪಡೆದಿದೆ.
ವರ್ಷಕ್ಕೆ ವೇತನ ಎಷ್ಟು?
ಈ ಸಮೀಕ್ಷೆಯು ಭಾರತದ ಸುಮಾರು 11,570 ವೇತನಗಳನ್ನು ಅಧ್ಯಯನ ನಡೆಸಿದೆ. ಈ ಮೂಲಕ ಭಾರತದ ಸರಾಸರಿ ವಾರ್ಷಿಕ ವೇತನ ಸಮೀಕ್ಷೆ ನಡೆಸಿದೆ. ಈ ಸಮೀಕ್ಷೆ ಪ್ರಕಾರ ಭಾರತದ ಸರಾಸರಿ ವಾರ್ಷಿಕ ವೇತನ 18.9 ಲಕ್ಷ ರೂಪಾಯಿ. ಆದರೆ, ಭಾರತದಲ್ಲಿ ಬಹುತೇಕ ಉದ್ಯೋಗಿಗಳ ವಾರ್ಷಿಕ ವೇತನ 5.77 ಲಕ್ಷ ರೂಪಾಯಿ ಎಂದು ಸಮೀಕ್ಷೆ ಕಂಡುಕೊಂಡಿದೆ.
ನಗರವಾರು ಸಮೀಕ್ಷೆಯಲ್ಲಿ ಮಹಾರಾಷ್ಟ್ರದ ಸೊಲಾಪುರ್ ಮತ್ತು ಮುಂಬೈ ನಗರಗಳು ಅಗ್ರ ಸ್ಥಾನ ಪಡೆದಿವೆ. ಇಲ್ಲಿನ ಉದ್ಯೋಗಿಗಳು ಕ್ರಮವಾಗಿ ಸರಾಸರಿ 28.1 ಲಕ್ಷ ರೂಪಾಯಿ ಮತ್ತು 21.2 ಲಕ್ಷ ರೂಪಾಯಿ ವಾರ್ಷಿಕ ವೇತನ ಪಡೆಯುತ್ತಾರೆ. ಮೂರನೇ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ ಸರಾಸರಿ ವಾರ್ಷಿಕ ವೇತನ 21 ಲಕ್ಷ ರೂಪಾಯಿ ಇದೆ. ಆದರೆ, ಸೊಲಾಪುರದಲ್ಲಿ ಕಡಿಮೆ ಸಂಖ್ಯೆಯ ಜನರನ್ನು ಸಮೀಕ್ಷೆ ನಡೆಸಲಾಗಿದೆ. ಮುಂಬೈ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ 1,748 ಮತ್ತು 2,799 ಜನರನ್ನು ಸಮೀಕ್ಷೆ ನಡೆಸಲಾಗಿದೆ. ಈ ಸಮೀಕ್ಷೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚು ವೇತನ (ಸಮೀಕ್ಷೆಯಲ್ಲಿ ಭಾಗವಹಿಸಿದವರ) ಎಂದರೆ 9.88 ಲಕ್ಷ ರೂಪಾಯಿ. ಸರಾಸರಿ ವಾರ್ಷಿಕ ವೇತನ 21 ಲಕ್ಷ ರೂಪಾಯಿ. ಮುಂಬೈ, ಬೆಂಗಳೂರು ಬಿಟ್ಟರೆ ಬೇರೆ ನಗರಗಳಲ್ಲಿ ವೇತನ ಎಷ್ಟಿದೆ ಎಂಬ ಪ್ರಶ್ನೆಯೂ ನಿಮ್ಮಲ್ಲಿರಬಹುದು.
ದೆಹಲಿಯಲ್ಲಿ ಸರಾಸರಿ ವೇತನ ಎಷ್ಟು?
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾರ್ಷಿಕ ಸರಾಸರಿ ವೇತನ 20.4 ಲಕ್ಷ ರೂಪಾಯಿ ಇದೆ. ಇದೇ ರೀತಿ ಭುವನೇಶ್ವರದಲ್ಲಿ ವಾರ್ಷಿಕ ಸರಾಸರಿ ವೇತನವು 19.9 ಲಕ್ಷ ರೂಪಾಯಿ ಇದೆ. ಉಳಿದಂತೆ, ಪುಣೆ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಅಹಮಾದಬಾದ್ ನಗರಗಳಲ್ಲಿ ವಾರ್ಷಿಕ ಸರಾಸರಿ ವೇತನ ಕ್ರಮವಾಗಿ 8ನೇ, 10ನೇ, 19ನೇ, 20ನೇ ಮತ್ತು 26ನೇ ಸ್ಥಾನ ಪಡೆದಿವೆ. 54 ನಗರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಸಮೀಕ್ಷೆಯಲ್ಲಿ ಲಿಂಗ, ವಯಸ್ಸು, ಶಿಕ್ಷಣ, ಕೆಲಸದ ಅನುಭವ, ಹುದ್ದೆ, ವೃತ್ತಿ ಇತ್ಯಾದಿ ಹಲವು ವಿಚಾರಗಳ ಕುರಿತೂ ಸಮೀಕ್ಷೆ ನಡೆಸಲಾಗಿದೆ.
ವೇತನ ಪುರುಷರಿಗೆ ಹೆಚ್ಚಾ? ಮಹಿಳೆಯರಿಗೆ ಹೆಚ್ಚಾ?
ಈ ಸಮೀಕ್ಷೆಯು ಇನ್ನೊಂದು ಆಸಕ್ತಿದಾಯಕ ಅಂಶವನ್ನೂ ಕಂಡುಹಿಡಿದಿದೆ. ವಾರ್ಷಿಕ ಸರಾಸರಿ ವೇತನದಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚು ವೇತನ ಪಡೆಯುತ್ತಿರುವುದು ಕಂಡುಬಂದಿದೆ. ಪುರುಷರ ಸರಾಸರಿ ವೇತನ 19.5 ಲಕ್ಷ ರೂಪಾಯಿ ಇದ್ದರೆ, ಮಹಿಳಾ ಉದ್ಯೋಗಿಗಳ ಸರಾಸರಿ ವೇತನವು 15.1 ಲಕ್ಷ ರೂಪಾಯಿ ಇದೆ.
ಯಾವ ಕೆಲಸಕ್ಕೆ ಹೆಚ್ಚು ವೇತನ?
ಇದೇ ಸಂದರ್ಭದಲ್ಲಿ ಮ್ಯಾನೇಜ್‌ಮೆಂಟ್ ಮತ್ತು ಬಿಸಿನೆಸ್ ವಿಭಾಗದ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಿರುವ ಅಂಶವನ್ನೂ ಅಧ್ಯಯನ ಕಂಡುಕೊಂಡಿದೆ. ನಂತರದ ಸ್ಥಾನಗಳನ್ನು ಕಾನೂನು, ವೈಮಾನಿಕ ಮತ್ತು ಶಿಪ್ಪಿಂಗ್, ಹೆಲ್ತ್‌ಕೇರ್, ಮೆಡಿಕಲ್, ಫೈನಾನ್ಸ್ ಮತ್ತು ಬ್ಯಾಂಕಿಂಗ್ ವಲಯಗಳು ಪಡೆಯುತ್ತಿವೆ. ಹೆಚ್ಚು ಕೆಲಸದ ಅನುಭವ ಇರುವ ಉದ್ಯೋಗಿಗಳು ಹೆಚ್ಚು ವೇತನ ಪಡೆಯುತ್ತಾರೆ. ಇದೇ ಸಂದರ್ಭದಲ್ಲಿ ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿರುವವರು ಅತ್ಯಧಿಕ ವೇತನ ಪಡೆಯುತ್ತಿರುವ ಅಂಶವೂ ಸಮೀಕ್ಷೆಯಿಂದ ತಿಳಿದುಬಂದಿದೆ.