ದೆಹಲಿ ಅಬಕಾರಿ ನೀತಿ ಅಕ್ರಮ; ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೆ ಮೊದಲು ಏನಾಯಿತು, 10 ಮುಖ್ಯ ಅಂಶಗಳು-india news delhi excise policy scam what happened before delhi cm arvind kejriwal s arrest in 10 points ls polls uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿ ಅಬಕಾರಿ ನೀತಿ ಅಕ್ರಮ; ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೆ ಮೊದಲು ಏನಾಯಿತು, 10 ಮುಖ್ಯ ಅಂಶಗಳು

ದೆಹಲಿ ಅಬಕಾರಿ ನೀತಿ ಅಕ್ರಮ; ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೆ ಮೊದಲು ಏನಾಯಿತು, 10 ಮುಖ್ಯ ಅಂಶಗಳು

ಲೋಕಸಭಾ ಚುನಾವಣಾ ಸಂದರ್ಭದಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಸತತ 9 ಸಮನ್ಸ್‌ಗಳನ್ನು ಸ್ವೀಕರಿಸದೇ ತಪ್ಪಿಸಿಕೊಂಡಿದ್ದ ಕೇಜ್ರಿವಾಲ್‌ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿ ಅಬಕಾರಿ ನೀತಿ ಅಕ್ರಮಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಂಧನಕ್ಕೆ ಮೊದಲು ಏನಾಯಿತೆಂಬ 10 ಮುಖ್ಯ ಅಂಶಗಳು.

ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಆರ್‌ಎಎಫ್ ಭದ್ರತೆ (ಎಡ ಚಿತ್ರ); ದೆಹಲಿ ಅಬಕಾರಿ ನೀತಿ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (ಬಲ ಚಿತ್ರ)
ದೆಹಲಿ ಮುಖ್ಯಮಂತ್ರಿ ನಿವಾಸದ ಎದುರು ಆರ್‌ಎಎಫ್ ಭದ್ರತೆ (ಎಡ ಚಿತ್ರ); ದೆಹಲಿ ಅಬಕಾರಿ ನೀತಿ ಅಕ್ರಮ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಶದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ (ಬಲ ಚಿತ್ರ)

ನವದೆಹಲಿ: ಅಬಕಾರಿ ನೀತಿ ಹಗರಣ ಸಂಬಂಧ ಬಂಧನ ಅಥವಾ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರಿಗೆ ದೆಹಲಿ ಹೈಕೋರ್ಟ್ ಗುರುವಾರ (ಮಾರ್ಚ್ 21) ನಿರಾಕರಿಸಿತು. ಇದಾಗಿ ಕೆಲವೇ ಗಂಟೆಗಳಲ್ಲಿ ಕೇಜ್ರಿವಾಲ್ ಅವರ ಸಿವಿಲ್‌ ಲೈನ್ಸ್‌ ನಿವಾಸಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ ಹೋಗಿದ್ದು, ವಿಚಾರಣೆಗೆಂದು ಅವರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಂಧನ ದಾಖಲಿಸಿದೆ.

ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಎಎಪಿ ನಾಯಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರಿಂದ, ಜಾರಿ ನಿರ್ದೇಶನಾಲಯದ ಕ್ರಮವು ದೊಡ್ಡ ರಾಜಕೀಯ ಕೋಲಾಹಲಕ್ಕೆ ಕಾರಣವಾಯಿತು. ಕೇಜ್ರಿವಾಲ್ ಅವರ ನಿವಾಸದ ಸುತ್ತಲೂ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಎಎಪಿ ಬೆಂಬಲಿಗರು ರಸ್ತೆಯುದ್ದಕ್ಕೂ ಸೇರಿದ್ದು ಪ್ರತಿರೋಧ, ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕೇಜ್ರಿವಾಲ್ ನಿವಾಸದಲ್ಲಿ ಇಡಿ ತಂಡದ ಶೋಧ ಹೀಗಿತ್ತು- ಇಲ್ಲಿದೆ ಮುಖ್ಯ 10 ಅಂಶಗಳು

1) ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳ ತಂಡ ಗುರುವಾರ (ಮಾರ್ಚ್‌ 21) ಸಂಜೆ ಆಗಮಿಸಿದಾಗ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ತಮ್ಮ ನಿವಾಸದಲ್ಲಿದ್ದರು. ಕೇಜ್ರಿವಾಲ್ ಅವರ ಪಾಲಕರು, ಪತ್ನಿ ಮತ್ತು ಮಕ್ಕಳು ಸಹ ಅಲ್ಲಿದ್ದರು ಎಂದು ವರದಿಯಾಗಿದೆ.

2) ಇಡಿಯ ಆರು ಸದಸ್ಯರ ತಂಡ, ದೆಹಲಿ ಪೊಲೀಸರ ಬೆಂಗಾವಲು ಪಡೆಯೊಂದಿಗೆ ಮೊದಲು ದೆಹಲಿ ಮುಖ್ಯಮಂತ್ರಿಯವರ ನಿವಾಸವನ್ನು ತಲುಪಿತು.

3) ಆರಂಭದಲ್ಲಿ, ಇಡಿ ಮತ್ತೊಂದು ಸಮನ್ಸ್ ನೀಡಲು ಕೇಜ್ರಿವಾಲ್ ಅವರ ನಿವಾಸಕ್ಕೆ ಹೋಗಿತ್ತು ಎಂದು ಹೇಳಲಾಗಿತ್ತು. ಕೇಜ್ರಿವಾಲ್ ಅವರು ಇಲ್ಲಿಯವರೆಗೆ ಜಾರಿ ನಿರ್ದೇಶನಾಲಯದ ಒಂಬತ್ತು ಸಮನ್ಸ್ ಗಳನ್ನು ತಪ್ಪಿಸಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಸಮನ್ಸ್‌ಗಳು ಅಸಂವಿಧಾನಿಕ ಎಂದು ಕೇಜ್ರಿವಾಲ್ ಟೀಕಿಸುತ್ತ ಬಂದಿದ್ದರು.

4) ಇಡಿ ತಂಡವು ಸರ್ಚ್ ವಾರಂಟ್ ಅನ್ನು ಸಹ ಹೊಂದಿತ್ತು ಮತ್ತು ಅವರು ಆರಂಭದಲ್ಲಿ ಸಮನ್ಸ್ ಹಸ್ತಾಂತರಿಸಲು ಹೋದರು ಎಂದು ಹೇಳಿದ್ದರು. ಆದರೂ, ಇಡಿ ತಂಡ ದಾಳಿ ಮತ್ತು ಶೋಧ ಪ್ರಾರಂಭಿಸಿತು.

5) ಮದ್ಯದ ನೀತಿ ಅಕ್ರಮದ ತನಿಖೆಗೆ ಸಂಬಂಧಿಸಿ ಅರವಿಂದ್ ಕೇಜ್ರಿವಾಲ್ ಅವರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅಲ್ಲಿ ಇಡಿ ಅಧಿಕಾರಿಗಳ ತಂಡ ತಿಳಿಸಿತು.

6) ದೆಹಲಿ ಪೊಲೀಸರು ಕೇಜ್ರಿವಾಲ್ ನಿವಾಸದ ಸುತ್ತಲೂ ಭದ್ರತೆಯನ್ನು ಬಲಪಡಿಸಿದ್ದಾರೆ. ಇಡಿ ದಾಳಿ ಪ್ರಾರಂಭವಾದಾಗಿನಿಂದ ಹೆಚ್ಚಿನ ಪೊಲೀಸ್ ಪಡೆಗಳು ಬಂದಿವೆ ಎಂದು ಆಮ್ ಆದ್ಮಿ ಪಾರ್ಟಿ ನಾಯಕ ಸೌರಭ್ ಭಾರದ್ವಾಜ್ ಹೇಳಿದರು.

7) ಭಾರದ್ವಾಜ್ ಅವರಿಗೆ ಕೇಜ್ರಿವಾಲ್ ಅವರ ನಿವಾಸಕ್ಕೆ ಪ್ರವೇಶಿಸಲು ಅವಕಾಶ ನೀಡಲಿಲ್ಲ ಮತ್ತು ಅವರು ಕೇಜ್ರಿವಾಲ್ ಅವರ ಮನೆಯ ಮುಂದೆ ಇದ್ದುಕೊಂಡು ಎಕ್ಸ್ ಖಾತೆಯ ಮೂಲಕ ಟ್ವೀಟ್ ಅಪ್ಡೇಟ್ ಮಾಡಲಾರಂಭಿಸಿದರು

8) ಕೇಜ್ರಿವಾಲ್ ಅವರ ಫೋನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಸಿಎಂ ಮನೆಯಲ್ಲಿ ಯಾರಿಗೂ ಫೋನ್ ಪ್ರವೇಶವಿಲ್ಲ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾಗಿ ಭಾರದ್ವಾಜ್ ಟ್ವೀಟ್ ಮಾಡಿದ್ದರು.

9) ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಅವರು ಕೇಜ್ರಿವಾಲ್ ಅವರ ನಿವಾಸದ ಹೊರಗೆ ಬಂದು ತಮ್ಮ ಪಕ್ಷವು ಅಂತಹ ದಾಳಿಗೆ ಒಳಗಾಗಿರುವಾಗ ನೀರೋನಂತೆ ಕೊಳಲು ನುಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಂಧನದ ನಂತರವೂ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್‌ ಕೇಜ್ರಿವಾಲ್ ರಾಜೀನಾಮೆ ನೀಡುವುದಿಲ್ಲ ಎಂದು ಪಕ್ಷ ಮತ್ತು ಎಲ್ಲಾ ಶಾಸಕರು ನಿರ್ಧರಿಸಿದ್ದಾರೆ. ಅವರು ಜೈಲಿನಿಂದಲೇ ಸರ್ಕಾರವನ್ನು ನಡೆಸಲಿದ್ದಾರೆ" ಎಂದು ಗೋಯಲ್ ಹೇಳಿದರು.

10) ಕೇಜ್ರಿವಾಲ್ ವಿರುದ್ಧದ ಇಡಿ ಕ್ರಮಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ನಾಯಕಿ ಮಹುವಾ ಮೊಯಿತ್ರಾ, ಚುನಾವಣಾ ಆಯೋಗವು ಚುನಾವಣಾ ಬಾಂಡ್‌ಗಳ ಡೇಟಾವನ್ನು ಅಪ್ಲೋಡ್ ಮಾಡಿದ್ದರಿಂದ, ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಬಿಜೆಪಿಯು ಈ ಮೂಲಕ ಜನರ ದಿಕ್ಕುತಪ್ಪಿಸುವ ತಂತ್ರವನ್ನು ಅನುಸರಿಸತೊಡಗಿದೆ ಎಂದು ಟೀಕಿಸಿದರು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.