Modi BBC documentary: ಮೋದಿ ಕುರಿತು ಬಿಬಿಸಿ ಸಾಕ್ಷ್ಯಚಿತ್ರ, ಮಾನನಷ್ಟ ಪ್ರಕರಣದ ವಿಚಾರಣೆ, ಬಿಬಿಸಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಜಸ್ಟಿಸ್ ಆನ್ ಟ್ರಯಲ್ ಎಂಬ ಗುಜರಾತ್ ಮೂಲದ ಎನ್‌ಜಿಒ ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಸಮನ್ಸ್ ಅವರು ಸಮನ್ಸ್ ಜಾರಿಗೊಳಿಸಿ ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಿದ್ದಾರೆ
ನವದೆಹಲಿ: 2002ರ ಗುಜರಾತ್ ದಂಗೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಪ್ರಶ್ನಿಸಿ ಬಿಬಿಸಿ ಸಿದ್ಧಪಡಿಸಿದ ಸಾಕ್ಷ್ಯಚಿತ್ರಕ್ಕೆ ಸಂಬಂಧಪಟ್ಟಂತೆ ದೆಹಲಿ ಹೈಕೋರ್ಟ್‌ನಲ್ಲಿ ಮಾನನಷ್ಟ ಪ್ರಕರಣ ದಾಖಲಿಸಲಾಗಿತ್ತು. ಇದೀಗ ದೆಹಲಿ ಹೈಕೋರ್ಟ್ ಬ್ರಿಟನ್‌ನ ಬಿಬಿಸಿ ಸಂಸ್ಥೆಗೆ ಸಮನ್ಸ್ ಜಾರಿ ಮಾಡಿದೆ ಎಂದು ವರದಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಜಸ್ಟಿಸ್ ಆನ್ ಟ್ರಯಲ್ ಎಂಬ ಗುಜರಾತ್ ಮೂಲದ ಎನ್‌ಜಿಒ ಸಲ್ಲಿಸಿದ ಮೊಕದ್ದಮೆಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತಾ ಸಮನ್ಸ್ ಅವರು ಸಮನ್ಸ್ ಜಾರಿಗೊಳಿಸಿ ಸೆಪ್ಟೆಂಬರ್‌ನಲ್ಲಿ ವಿಚಾರಣೆಗೆ ಪಟ್ಟಿ ಮಾಡಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಕುರಿತಾದ ಈ ಸಾಕ್ಷ್ಯಚಿತ್ರವು ಮಾನಹಾನಿಕರವಾದ ಆರೋಪವನ್ನು ಮಾಡುತ್ತದೆ. ದೇಶ ಮತ್ತು ನ್ಯಾಯಾಂಗದ ಪ್ರತಿಷ್ಠೆಯ ಮೇಲೆ ಮತ್ತು ಪ್ರಧಾನ ಮಂತ್ರಿಯ ವಿರುದ್ಧ ನಿಂದನೆಗಳನ್ನು ಮಾಡುತ್ತದೆ ಎಂದು ವಾದಿಸಲಾಗಿದೆ. ಹೀಗಾಗಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಕೋರ್ಟ್ ತಿಳಿಸಿದೆ.
ಎನ್‌ಜಿಒ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಎರಡು ಭಾಗಗಳಲ್ಲಿರುವ ಸಾಕ್ಷ್ಯಚಿತ್ರವು ನ್ಯಾಯಾಂಗ ಸೇರಿದಂತೆ ದೇಶವನ್ನು ದೂಷಿಸಿದೆ ಎಂದು ಅವರು ಪ್ರತಿಪಾದಿಸಿದರು.
ಇತ್ತೀಚೆಗೆ ಇಲ್ಲಿನ ವಿಚಾರಣಾ ನ್ಯಾಯಾಲಯವು ಬಿಬಿಸಿ, ವಿಕಿಮೀಡಿಯಾ ಫೌಂಡೇಶನ್ ಮತ್ತು ಇಂಟರ್ನೆಟ್ ಆರ್ಕೈವ್‌ಗೆ ಸಮನ್ಸ್ ನೀಡಿತ್ತು. ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್‌ಗೆ ಸಂಬಂಧಪಟ್ಟಂತೆ ಯಾವುದೇ ಸಾಕ್ಷ್ಯಚಿತ್ರ ಪ್ರಕಟಿಸದಂತೆ ತಡೆಯಬೇಕೆಂದು ಬಿಜೆಪಿ ನಾಯಕ ಬಿನಯ್ ಕುಮಾರ್ ಸಿಂಗ್ ಅವರು ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಪ್ರಕರಣ ವಿಚಾರಣೆ ಮಾಡಿದ ಬಳಿಕ ವಿಚಾರಣಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಆಗ ಗಲಭೆಯನ್ನು ಹತ್ತಿಕ್ಕುವಲ್ಲಿ ಮೋದಿ ನಿರ್ವಹಿಸಿದ್ದ ಪಾತ್ರ ಅನುಮಾನಾಸ್ಪದವಾಗಿದೆ ಎಂದು ಬಿಬಿಸಿಯ ಸಾಕ್ಷ್ಯಚಿತ್ರದಲ್ಲಿ ಆರೋಪಿಸಲಾಗಿತ್ತು. ಬಿಬಿಸಿಯ ಎರಡು ಭಾಗಗಳ ಈ ಸರಣಿಗೆ ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಯುನೈಟಡ್ ಕಿಂಗ್ಡಮ್ನ ರಾಷ್ಟ್ರೀಯ ಪ್ರಸಾರ ಮಾಧ್ಯಮವಾದ ಬಿಬಿಸಿ (ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್) ಪ್ರಧಾನಿ ನರೇಂದ್ರ ಮೋದಿ ಕುರಿತು 'ಇಂಡಿಯಾ: ದಿ ಮೋದಿ ಕ್ವಶ್ಚನ್' (India: The Modi Question) ಹೆಸರಿನ ಸಾಕ್ಷ್ಯಚಿತ್ರವೊಂದನ್ನು ತಯಾರಿಸಿದೆ. ಎರಡು ಭಾಗಗಳಲ್ಲಿ ಮೂಡಿ ಬಂದಿರುವ ಈ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ಲಿಂಕ್ಗಳನ್ನು, ಯೂಟ್ಯೂಬ್ ವಿಡಿಯೋಗಳನ್ನು ಹಾಗೂ ಟ್ವೀಟ್ಗಳನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರಾಂಗ ಸಚಿವಾಲಯವು ಐಟಿ ನಿಯಮ 2021ರ ಅಡಿಯಲ್ಲಿ ಯೂಟ್ಯೂಬ್ ಮತ್ತು ಟ್ವಿಟರ್ಗೆ ನಿರ್ದೇಶನ ನೀಡಿದ್ದು, ಇವೆರಡೂ ಆದೇಶವನ್ನು ಪಾಲಿಸಿ, ಸಂಬಂಧಿತ ವಿಡಿಯೋ ಹಾಗೂ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದವು. ವಿರೋಧ ಪಕ್ಷದ ನಾಯಕರು ಈ ಕ್ರಮವನ್ನು "ಸೆನ್ಸಾರ್ಶಿಪ್" ಎಂದು ಕರೆದಿದ್ದಾರೆ.