ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ: ಭಾರತ-ಕೆನಡಾ ಸಂಬಂಧಗಳ ಅಂಕಿನೋಟ
ಉಗ್ರ ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಈ ವಿದ್ಯಮಾನ ಗಂಭೀರವಾಗಿದೆ. ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧಗಳ ಅಂಕಿನೋಟದ ಕಡೆಗೊಂದು ನೋಟ ಬೀರಲು ಈ ಸನ್ನಿವೇಶ ಒಂದು ನಿಮಿತ್ತ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್‌ನಲ್ಲಿ ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಸಂಭಾವ್ಯ ಒಳಗೊಳ್ಳುವಿಕೆಯ ಕುರಿತಾದ "ವಿಶ್ವಾಸಾರ್ಹ ಆರೋಪ"ಗಳ ತನಿಖೆಯನ್ನು ಒಟ್ಟಾವಾ ನಡೆಸುತ್ತಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ ಹೇಳಿದರು. ಇದಾದ ಬಳಿಕ ಭಾರತ ಮತ್ತು ಕೆನಡಾ ನಡುವಿನ ಸಂಬಂಧವು ದಶಕಗಳ ಕೆಳಮಟ್ಟಕ್ಕೆ ಕುಸಿದಿದೆ.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಸರ್ಕಾರಿ ಏಜೆಂಟರ ಪಾಲ್ಗೊಳ್ಳುವಿಕೆ ಇದೆ ಎಂಬ ಆರೋಪವನ್ನು ಭಾರತ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದೆ.
ನಿಜ್ಜಾರ್ ಪ್ರಕರಣಕ್ಕೆ ಸಂಬಂಧಿಸಿದ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಕಾರಣ ರಾಜತಾಂತ್ರಿಕರನ್ನು ಎರಡೂ ರಾಷ್ಟ್ರಗಳು ಪರಸ್ಪರ ಹೊರಹಾಕಿದ್ದವು. ಇದರಿಂದಾಗಿ ಸಂಬಂಧಗಳು ಹದಗೆಟ್ಟಿವೆ. ಆದ್ದರಿಂದ ಜಾಗರೂಕತೆಯಿಂದ ಇರುವಂತೆ ಭಾರತವು ಕೆನಡಾದಲ್ಲಿರುವ ತನ್ನ ಪ್ರಜೆಗಳಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬುಧವಾರ ಸೂಚನೆ ನೀಡಿದೆ.
ಕೆನಡಾ ಅಪಾಯಕಾರಿ ದೇಶ ಎಂದು ಪ್ರಜೆಗಳನ್ನು ಎಚ್ಚರಿಸಿದ ಭಾರತ
ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ-ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಿಸಲ್ಪಟ್ಟ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲ ಭಾರತೀಯರು ಮತ್ತು ಕೆನಡಾಕ್ಕೆ ಪ್ರಯಾಣವನ್ನು ಆಲೋಚಿಸುತ್ತಿರುವವರು ಅತ್ಯಂತ ಜಾಗರೂಕರಾಗಿರುವಂತೆ ಎಚ್ಚರಿಸಲಾಗಿದೆ" ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತದ ಪ್ರಯಾಣ ಸಲಹೆಯ ಕೆಲವೇ ಗಂಟೆಗಳ ನಂತರ, ಕೆನಡಾದ ಸಾರ್ವಜನಿಕ ಸುರಕ್ಷತಾ ಸಚಿವ ಡೊಮಿನಿಕ್ ಲೆಬ್ಲಾಂಕ್ ಸುದ್ದಿಗಾರರಿಗೆ ಕೆನಡಾ ಸುರಕ್ಷಿತ ದೇಶ ಎಂದು ಹೇಳಿದರು.
ಕೆನಡಾದಲ್ಲಿ ಭಾರತದ ವೀಸಾ ಪ್ರಕ್ರಿಯೆ ಕೇಂದ್ರವು ಸೇವೆಗಳನ್ನು ಗುರುವಾರ ಸ್ಥಗಿತಗೊಳಿಸಿತು. "ಭಾರತೀಯ ಮಿಷನ್‌ನಿಂದ ಪ್ರಮುಖ ಸೂಚನೆ: ಕಾರ್ಯಾಚರಣೆಯ ಕಾರಣಗಳಿಂದಾಗಿ, ಸೆಪ್ಟೆಂಬರ್ 21 ರಿಂದ ಜಾರಿಗೆ ಬರುವಂತೆ ಭಾರತೀಯ ವೀಸಾ ಸೇವೆಗಳನ್ನು ಮುಂದಿನ ಸೂಚನೆ ಬರುವವರೆಗೆ ಅಮಾನತುಗೊಳಿಸಲಾಗಿದೆ" ಎಂದು ಕೆನಡಾದ ಬಿಎಲ್‌ಎಸ್ ಭಾರತೀಯ ವೀಸಾ ಅರ್ಜಿ ಕೇಂದ್ರ ತಿಳಿಸಿದೆ. ಅದು ಹೆಚ್ಚಿನ ವಿವರಗಳನ್ನು ನೀಡಿಲ್ಲ.
ನವದೆಹಲಿಯಲ್ಲಿರುವ ಕೆನಡಾದ ಹೈಕಮಿಷನ್ ಭಾರತದಲ್ಲಿನ ತನ್ನ ಎಲ್ಲಾ ಕಾನ್ಸುಲೇಟ್‌ಗಳು ತೆರೆದಿವೆ ಮತ್ತು ಸೇವೆಗಳನ್ನು ಒದಗಿಸುವುದನ್ನು ಮುಂದುವರೆಸಿದೆ, ಆದರೆ ಸಿಬ್ಬಂದಿ ಸುರಕ್ಷತೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ ಎಂದು ಹೇಳಿಕೊಂಡಿದೆ.
ಇತ್ತೀಚೆಗೆ, ಕೆನಡಾ ಕೂಡ ಭಾರತದೊಂದಿಗೆ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಸ್ಥಗಿತಗೊಳಿಸಿದೆ. ಆದಾಗ್ಯೂ, ಎರಡು ರಾಷ್ಟ್ರಗಳು ದೀರ್ಘಕಾಲದ ಸಂಬಂಧವನ್ನು ಹೊಂದಿವೆ.
ಭಾರತ -ಕೆನಡಾ ದ್ವಿಪಕ್ಷೀಯ ಸಂಬಂಧಗಳ ಅಂಕಿನೋಟ
1. ಭಾರತೀಯ ವಿದ್ಯಾರ್ಥಿಗಳು
ಕೆನಡಾ ಭಾರತೀಯರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆಕರ್ಷಕ ತಾಣವಾಗಿದೆ. 2022 ರಲ್ಲಿ, ಸುಮಾರು 300,000 ಭಾರತೀಯರು ಕೆನಡಾದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದರು ಎಂದು ಭಾರತದ ಬ್ಯೂರೋ ಆಫ್ ಇಮಿಗ್ರೇಷನ್ ತಿಳಿಸಿದೆ.
ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ ಪ್ರಕಾರ, ಕೆನಡಾದಲ್ಲಿ 2022 ರಲ್ಲಿ ಅಧ್ಯಯನ ಪರವಾನಗಿ ಹೊಂದಿರುವ ಟಾಪ್ 10 ಮೂಲದ ದೇಶಗಳಲ್ಲಿ ಭಾರತ ಮೊದಲನೆಯದು. ಒಟ್ಟಾರೆ ಅಂತಾರಾಷ್ಟ್ರೀಯ ದಾಖಲಾತಿಯಲ್ಲಿ ಭಾರತೀಯ ವಿದ್ಯಾರ್ಥಿಗಳು 40 ಪ್ರತಿಶತವನ್ನು ಹೊಂದಿದ್ದಾರೆ.
ಕೆನಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್ ಪ್ರಕಾರ, ಭಾರತೀಯ ವಿದ್ಯಾರ್ಥಿಗಳು 2021 ರಲ್ಲಿ ಕೆನಡಾದ ಆರ್ಥಿಕತೆಗೆ 4.9 ಶತಕೋಟಿ ಅಮೆರಿಕನ್ ಡಾಲರ್ ಕೊಡುಗೆ ನೀಡಿದ್ದಾರೆ. ಭಾರತ ಮತ್ತು ಕೆನಡಾ ಬಲವಾದ ಶಿಕ್ಷಣ ಪಾಲುದಾರಿಕೆಯನ್ನು ಹೊಂದಿವೆ. ಭಾರತೀಯ ಮತ್ತು ಕೆನಡಾದ ಸಂಸ್ಥೆಗಳ ನಡುವೆ 200 ಕ್ಕೂ ಹೆಚ್ಚು ಶೈಕ್ಷಣಿಕ ಪಾಲುದಾರಿಕೆಗಳಿವೆ.
2. ಭಾರತದಲ್ಲಿ ಕೆನಡಾದ ಪ್ರವಾಸಿಗರು
ಭಾರತಕ್ಕೆ 2021 ರಲ್ಲಿ, 80,000 ಕೆನಡಾದ ಪ್ರವಾಸಿಗರು ಭೇಟಿ ನೀಡಿದ್ದರು. ಸಂಖ್ಯೆಯನ್ನು ಗಮನಿಸಿದರೆ ಕೆನಡಾ ಪ್ರವಾಸಿಗರು ನಾಲ್ಕನೇ ಸ್ಥಾನದಲ್ಲಿದ್ದಾರೆ ಎಂದು ಭಾರತದ ಬ್ಯೂರೋ ಆಫ್ ಇಮಿಗ್ರೇಷನ್ ದತ್ತಾಂಶ ವಿವರಿಸಿದೆ.
3. ವ್ಯಾಪಾರ ಸಂಬಂಧಗಳು
ಕೆನಡಾಕ್ಕೆ ಆದ್ಯತೆಯ ಮಾರುಕಟ್ಟೆ ಭಾರತ. 2022 ರಲ್ಲಿ, ಭಾರತವು ಕೆನಡಾದ 10 ನೇ ಅತಿದೊಡ್ಡ ವ್ಯಾಪಾರ ಪಾಲುದಾರ ಆಗಿತ್ತು. ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. 2022-23 ರಲ್ಲಿ 8.16 ಬಿಲಿಯನ್ ಅಮೆರಿಕನ್ ಡಾಲರ್ ತಲುಪಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆನಡಾಕ್ಕೆ ಭಾರತದ ರಫ್ತುಗಳ ಪೈಕಿ (4.1 ಶತಕೋಟಿ ಡಾಲರ್) ಔಷಧಗಳು, ರತ್ನಗಳು ಮತ್ತು ಆಭರಣಗಳು, ಜವಳಿ ಮತ್ತು ಯಂತ್ರೋಪಕರಣಗಳನ್ನು ಒಳಗೊಂಡಿವೆ, ಆದರೆ ಭಾರತಕ್ಕೆ ಕೆನಡಾದ ರಫ್ತುಗಳ ಪೈಕಿ (4.06 ಬಿಲಿಯನ್ ಡಾಲರ್) ಬೇಳೆಕಾಳುಗಳು, ಮರ, ತಿರುಳು ಮತ್ತು ಕಾಗದ ಮತ್ತು ಗಣಿಗಾರಿಕೆ ಉತ್ಪನ್ನಗಳನ್ನು ಒಳಗೊಂಡಿವೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕೆನಡಾಕ್ಕೆ ಭಾರತದ ರಫ್ತು ಪ್ರಮಾಣ ಸುಮಾರು 911 ಮಿಲಿಯನ್ ಡಾಲರ್ ಆಗಿದ್ದರೆ, ಕೆನಡಾದಿಂದ ಆಮದು ಪ್ರಮಾಣ 990 ಮಿಲಿಯನ್ ಡಾಲರ್ ಆಗಿತ್ತು.