ಸೈಬರ್ ವಂಚಕನನ್ನೇ ಸತಾಯಿಸಿದ ನಲಸೊಪರದ ಹರ್ಷದಾ ಗೋಯೆಲ್; ಪಾಲಕರನ್ನು 13 ವರ್ಷದ ಬಾಲಕಿ ಬಚಾವ್ ಮಾಡಿದ್ದು ಹೀಗೆ ನೋಡಿ
ಫೋನ್ ಕರೆ ಮಾಡಿ ಹಣ ಲಪಟಾಯಿಸಲು ಪ್ರಯತ್ನಿಸಿದ ಸೈಬರ್ ವಂಚಕನನ್ನೇ ಸತಾಯಿಸಿದ ನಲಸೊಪರದ ಹರ್ಷದಾ ಗೋಯೆಲ್ ಈಗ ದೇಶದ ಗಮನಸೆಳೆದಿದ್ದಾರೆ. ತನ್ನ ಪಾಲಕರನ್ನು 13 ವರ್ಷದ ಬಾಲಕಿ ಸೈಬರ್ ವಂಚಕರ ಬಲೆಗೆ ಬೀಳದಂತೆ ಬಚಾವ್ ಮಾಡಿದ್ದು ಹೀಗೆ ನೋಡಿ.
ಮುಂಬೈ: ಮಹಾರಾಷ್ಟ್ರದ ಪಾಲ್ಗಡ ಜಿಲ್ಲೆಯ ನಲಸೊಪರದ 13 ವರ್ಷದ ಬಾಲಕಿ ಮಂಗಳವಾರ (ಜೂನ್ 11) ತನ್ನ ಜಾಗೃತ ಮನೋಭಾವದ ಕಾರಣ ಪಾಲಕರನ್ನು ಸೈಬರ್ ವಂಚಕರ ಜಾಲದಿಂದ ಪಾರು ಮಾಡಿದ್ದಾಳೆ. ಹಣ ಕಳೆದುಕೊಳ್ಳದೇ ಇದ್ದರೂ, ಸೈಬರ್ ವಂಚಕರ ವಿರುದ್ಧ ವಿರಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. ಎಂಟನೇ ತರಗತಿಯಲ್ಲಿ ಓದುತ್ತಿರುವ ಹರ್ಷದಾ ಗೋಯೆಲ್ ಈ ಬಾಲಕಿ.
ಫೋನ್‌ಗೆ ಕರೆ ಮಾಡಿ ಜೇನಿನಂತಹ ಮಾತನಾಡಿ, ಒಟಿಪಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ಕೊಳ್ಳೆ ಹೊಡೆಯುವುದು ಈಗ ಸೈಬರ್ ವಂಚಕರ ನಿತ್ಯದ ಆಟವಾಗಿ ಹೋಗಿದೆ. ಪ್ರತಿ ನಿಮಿಷಕ್ಕೂ ಈ ರೀತಿ ಪ್ರಯತ್ನ ಒಂದಿಲ್ಲೊಂದು ಕಡೆ ನಡೆಯುತ್ತಲೇ ಇರುತ್ತದೆ. ನಲಸೊಪರದ ಬಾಲಕಿ ಹರ್ಷದಾ ಗೋಯೆಲ್ ಇಂತಹ ವಂಚಕರ ಪ್ರಯತ್ನ ವಿಫಲಗೊಳಿಸಿದ್ದು, ಈಗ ಆ ಪ್ರದೇಶದಲ್ಲಿ ಸೈಬರ್ ವಂಚಕರ ಚಟುವಟಿಕೆ ಕುರಿತ ಜಾಗೃತಿಯನ್ನು ಇನ್ನಷ್ಟು ಹೆಚ್ಚಿಸಿದೆ.
ಸೈಬರ್ ವಂಚಕರ ಪ್ರಯತ್ನ ವಿಫಲಗೊಳಿಸಲು ಹರ್ಷದಾ ಗೋಯಲ್ ಮಾಡಿದ್ದೇನು
ಹರ್ಷದಾ ಗೋಯೆಲ್ ಮಂಗಳವಾರ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭ ಅದು. ತಂದೆ ಕೆಲಸದಲ್ಲಿದ್ದರು. ತಾಯಿ ಮೇಘಾ ಕೂಡ ಮಾರುಕಟ್ಟೆಗೆ ಹೋಗಿದ್ದರು. ಇದೇ ವೇಳೆ, ತಾಯಿಯ ಫೋನ್‌ಗೆ ಕರೆ ಬರುತ್ತದೆ.
ಮನೆಯಲ್ಲಿ ಯಾರೂ ಇಲ್ಲದೇ ಇದ್ದ ಕಾರಣ ಹರ್ಷದಾ ಫೋನ್ ಕರೆ ಸ್ವೀಕರಿಸಿದ್ದರು.
ಆಶೋಕ್ ಶರ್ಮಾ ಎಂದು ಗುರುತು ಹೇಳಿಕೊಂಡ ವ್ಯಕ್ತಿಯೊಬ್ಬ ಮಾತನಾಡುತ್ತ, ಬಾಲಕಿಯ ತಂದೆಗೆ 15,000 ರೂಪಾಯಿ ಕೊಡುವುದಿತ್ತು ಎಂದು ಹೇಳಿದ. ತಂದೆಯೇ ಈ ನಂಬರ್ ಕೊಟ್ಟು ಹಣವನ್ನು ಕಳುಹಿಸುವಂತೆ ಹೇಳಿದ್ದಾಗಿ ತಿಳಿಸಿದ. ಹರ್ಷದಾ ಆತನ ಮಾತು ನಂಬಿದಳು.
ಕೆಲ ನಿಮಿಷಗಳ ಬಳಿಕ ತಾಯಿಯ ಮೊಬೈಲ್‌ಗೆ ಹಣ ವರ್ಗಾವಣೆ ಆಗಿರುವ ಸಂದೇಶ ಬಂತು. ಅದಾದ ಬಳಿಕ ಆತ ಪುನಃ ಕರೆ ಮಾಡಿ, ಹಣ ವರ್ಗಾವಣೆ ಆಗಿರುವ ಮೆಸೇಜ್ ಬಂತಾ ಎಂದು ಕೇಳಿದ. ಹರ್ಷದಾ ಮೆಸೇಜ್ ಚೆಕ್ ಮಾಡಿ ಬಂದಿರುವುದನ್ನು ಖಾತ್ರಿ ಮಾಡಿ 10,000 ರೂಪಾಯಿ ಮಾತ್ರ ಬಂದಿದೆ ಎಂದು ಹೇಳಿದರು. ಕೂಡಲೇ ಆತ, ಉಳಿದ 5000 ರೂಪಾಯಿ ಈಗ ಕಳುಹಿಸುತ್ತೇನೆ ಎಂದರು. ಕೆಲವೇ ನಿಮಿಷದಲ್ಲಿ ಹಣ ವರ್ಗಾವಣೆ ಮೆಸೇಜ್ ಬಂತು. ಆ ಮೆಸೇಜ್ ನೋಡಿದಾಗ ಅದರಲ್ಲಿ 5,000 ರೂಪಾಯಿ ಬದಲು 50,000 ರೂಪಾಯಿ ವರ್ಗಾವಣೆ ಆಗಿರುವ ಸಂದೇಶ ಕಾಣಿಸಿತ್ತು.
ಅದೇ ಹೊತ್ತಿಗೆ ಮತ್ತೆ ಕರೆ ಮಾಡಿದ ಆತ, ತಪ್ಪಿ ಹೋಗಿ 50,000 ರೂಪಾಯಿ ವರ್ಗಾವಣೆ ಆಗಿದೆ. ಒಂದು ಸೊನ್ನೆ ಹೆಚ್ಚು ಒತ್ತಿಹೋಯಿತು ಎಂದ. ಹೆಚ್ಚುವರಿ 45,000 ರೂಪಾಯಿ ಹಣವನ್ನು ಪುನಃ ಅದೇ ನಂಬರ್ ವರ್ಗಾವಣೆ ಮಾಡುವಂತೆ ಬಾಲಕಿಯನ್ನು ಕೇಳಿದ.
ಹರ್ಷದಾಗೆ ಸೈಬರ್ ವಂಚನೆ ಅರಿವಾದುದು ಹೀಗೆ
ಹರ್ಷದಾ ತನ್ನ ತಾಯಿಯ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಅಲ್ಲಿ ಒಂದು ರೂಪಾಯಿ ಕೂಡ ಜಮೆಯಾಗಿರಲಿಲ್ಲ. ವಂಚನೆಯ ಸುಳಿವು ಸಿಕ್ಕ ಆಕೆ, ಆ ವ್ಯಕ್ತಿಗೆ ಕರೆ ಮಾಡಿ ಹಣ ಜಮೆಯಾಗಿಲ್ಲ ಎಂದು ಹೇಳಿದರು. ಅಲ್ಲದೆ, ಅವರ ಗುರುತು ಹಿಡಿಯುವ ಸಲುವಾಗಿ ತಂದೆಯನ್ನು ಕಾನ್ಫರೆನ್ಸ್ ಕರೆಗೆ ಸೇರಿಸುವುದಾಗಿ ಹೇಳಿದರು. ಆತ ಪರಿಪರಿಯಾಗಿ ಬಾಲಕಿಯ ಮನವೊಲಿಸಲು ಪ್ರಯತ್ನಿಸಿದ. ಆದರೆ ಅದು ಫಲ ನೀಡಲಿಲ್ಲ.
ಆತ ಹಣ ವರ್ಗಾವಣೆ ಮಾಡುವ ಮೊದಲು ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿತ್ತು ಎಂದು ಹೇಳುವಂತೆ ಒತ್ತಾಯಿಸಿದ್ದ. ಇದು ಆ ಸೈಬರ್ ವಂಚಕ ನನ್ನ ತಾಯಿಯ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಲು ಪ್ರಯತ್ನಿಸಿದ್ದ. ಅದಕ್ಕಾಗಿಯೇ ಫೋನ್ ಕರೆ ಮಾಡಿದ್ದ ಎಂಬುದು ನನಗೆ ಅರ್ಥವಾಯಿತು. ಕೂಡಲೇ ನೆರೆಮನೆಯವರ ಫೋನ್ ಮೂಲಕ ಪೊಲೀಸರಿಗೆ ಕರೆ ಮಾಡಿದ್ದೆ. ಬಳಿಕ ಅವರ ಮಾರ್ಗದರ್ಶನದಂತೆ ಸೈಬರ್ ವಂಚಕನ ಫೋನ್ ಕರೆಯನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಬಳಿಕ ದೂರು ನೀಡಲಾಗಿದೆ. ಇದಕ್ಕೆ ಕಾರಣ ಹಿಂದೊಮ್ಮೆ ಶಾಲೆಯಲ್ಲಿ ಪೊಲೀಸರು ಸೈಬರ್ ವಂಚನೆ ಕುರಿತು ನೀಡಿದ ಉಪನ್ಯಾಸ. ಅಂದು ಅವರು ಸೈಬರ್ ವಂಚನೆ ಮತ್ತು ವಂಚಕರ ಕಾರ್ಯವೈಖರಿಯನ್ನು ವಿವರಿಸಿದ್ದರು. ಹಾಗಾಗಿ ಇದು ಬೇಗನೆ ಅರ್ಥವಾಯಿತು ಎಂದು ಹರ್ಷದಾ ಗೋಯೆಲ್ ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಈಗ ಸೈಬರ್ ವಂಚಕನ ಪತ್ತೆಗೆ ಶೋಧ ನಡೆಸಿದ್ದಾರೆ ಎಂದು ವರದಿ ಹೇಳಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.