ದೆಹಲಿಯಲ್ಲಿ ದಾಖಲಾಯಿತು ಈ ಸೀಸನ್‌ನ ತಣ್ಣನೆಯ ರಾತ್ರಿ, ಸಿಕ್ಕಾಪಟ್ಟೆ ಚಳಿ, ಹಿಮಾಚಲ ಹವಾಮಾನದಲ್ಲಿ 8 ವರ್ಷಗಳ ದಾಖಲೆಯ ಒಣಹವೆ, ತೇವಾಂಶ ಕುಸಿತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ದೆಹಲಿಯಲ್ಲಿ ದಾಖಲಾಯಿತು ಈ ಸೀಸನ್‌ನ ತಣ್ಣನೆಯ ರಾತ್ರಿ, ಸಿಕ್ಕಾಪಟ್ಟೆ ಚಳಿ, ಹಿಮಾಚಲ ಹವಾಮಾನದಲ್ಲಿ 8 ವರ್ಷಗಳ ದಾಖಲೆಯ ಒಣಹವೆ, ತೇವಾಂಶ ಕುಸಿತ

ದೆಹಲಿಯಲ್ಲಿ ದಾಖಲಾಯಿತು ಈ ಸೀಸನ್‌ನ ತಣ್ಣನೆಯ ರಾತ್ರಿ, ಸಿಕ್ಕಾಪಟ್ಟೆ ಚಳಿ, ಹಿಮಾಚಲ ಹವಾಮಾನದಲ್ಲಿ 8 ವರ್ಷಗಳ ದಾಖಲೆಯ ಒಣಹವೆ, ತೇವಾಂಶ ಕುಸಿತ

ಭಾರತದ ಉದ್ದಗಲಕ್ಕೂ ಈ ವರ್ಷ ಹವಾಮಾನ ವೈಪರೀತ್ಯ ಕಾಡಿದೆ. ದೆಹಲಿಯಲ್ಲಿ ಈ ಸೀಸನ್‌ನ ತಣ್ಣನೆಯ ರಾತ್ರಿ ಮತ್ತು ಸಿಕ್ಕಾಪಟ್ಟೆ ಚಳಿ ಅನುಭವ ದಾಖಲಾಯಿತು. ಹಿಮಾಚಲ ಹವಾಮಾನದಲ್ಲಿ 8 ವರ್ಷಗಳ ದಾಖಲೆಯ ಒಣಹವೆ, ತೇವಾಂಶ ಕುಸಿತ ಕಂಡುಬಂದಿದೆ. ಉತ್ತರ ಭಾರತದ ಪ್ರಮುಖ ರಾಜ್ಯಗಳ ಹವಾಮಾನ ವಿವರ ಹೀಗಿದೆ.

ದೆಹಲಿಯಲ್ಲಿ  ಈ ಸೀಸನ್‌ನ ತಣ್ಣನೆಯ ರಾತ್ರಿಯಲ್ಲಿ 10.2 ಉಷ್ಣಾಂಶ ದಾಖಲಾಗಿದ್ದು, ಸಿಕ್ಕಾಪಟ್ಟೆ ಚಳಿ ಜನರ ಅನುಭವಕ್ಕೆ ಬಂದಿದೆ. ನವದೆಹಲಿಯ ದ್ವಾರಕಾ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಚಳಿಗೆ ಜನರು ತತ್ತರಿಸಿದ್ದರು
ದೆಹಲಿಯಲ್ಲಿ ಈ ಸೀಸನ್‌ನ ತಣ್ಣನೆಯ ರಾತ್ರಿಯಲ್ಲಿ 10.2 ಉಷ್ಣಾಂಶ ದಾಖಲಾಗಿದ್ದು, ಸಿಕ್ಕಾಪಟ್ಟೆ ಚಳಿ ಜನರ ಅನುಭವಕ್ಕೆ ಬಂದಿದೆ. ನವದೆಹಲಿಯ ದ್ವಾರಕಾ ರೈಲ್ವೆ ನಿಲ್ದಾಣದಲ್ಲಿ ಗುರುವಾರ ಚಳಿಗೆ ಜನರು ತತ್ತರಿಸಿದ್ದರು (Photo by Vipin Kumar/ Hindustan Times)

ನವದೆಹಲಿ: ಭಾರತದ ರಾಜಧಾನಿ ದೆಹಲಿ ಸುತ್ತಮುತ್ತ ಮಾಲಿನ್ಯ ಸಮಸ್ಯೆ ಒಂದೆಡೆಯಾದರೆ, ಇನ್ನೊಂದೆ ತಾಪಮಾನ ಕುಸಿದು ಸಿಕ್ಕಾಪಟ್ಟೆ ಚಳಿಯೂ ಜನರನ್ನು ಕಂಗಾಲಾಗುವಂತೆ ಮಾಡಿದೆ. ದೆಹಲಿಯು ಉಷ್ಣಾಂಶ ಕುಸಿತವನ್ನು ಅನುಭವಿಸುತ್ತಲೇ ಇದ್ದು, ಗುರುವಾರ (ನವೆಂಬರ್ 21) ಈ ಸೀಸನ್‌ನ ಅತ್ಯಂತ ತಣ್ಣನೆಯ ರಾತ್ರಿಯನ್ನು ಕಂಡಿದೆ. ಈ ಅವಧಿಯಲ್ಲಿ ದೆಹಲಿಯಲ್ಲಿ ಉಷ್ಣಾಂಶ 10.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಸಿಕ್ಕಾಪಟ್ಟೆ ಚಳಿ ಕಂಡುಬಂದಿದ್ದು, ಜನ ತೀವ್ರ ನಡುಕ ಮತ್ತು ಅರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇನ್ನೊಂದೆಡೆ, ಹಿಮಾಚಲ ಪ್ರದೇಶದಲ್ಲಿ 8 ವರ್ಷಗಳಲ್ಲಿ ಇದೇ ಮೊದಲ ಸಲ ದಾಖಲೆಯ ಒಣಹವೆ ಕಂಡುಬಂದಿದ್ದು, ಅಕ್ಟೋಬರ್, ನವೆಂಬರ್‌ನಲ್ಲಿ ಮಳೆ ಇಲ್ಲದ ಕಾರಣ ತೇವಾಂಶ ಕುಸಿತ ದಾಖಲಾಗಿದೆ. ಇನ್ನು ಪಂಜಾಬ್‌ನಲ್ಲಿ ಇನ್ನೂ ಮೂರ್ನಾಲ್ಕು ದಿನ ದಟ್ಟ ಮಂಜು ಮತ್ತು ಸಿಕ್ಕಾಪಟ್ಟೆ ಚಳಿಯ ವಾತಾವರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದೆಹಲಿಯಲ್ಲಿ ದಾಖಲಾಯಿತು ಈ ಸೀಸನ್‌ನ ತಣ್ಣನೆಯ ರಾತ್ರಿ, 10.2 ಡಿಗ್ರಿ ಸೆಲ್ಶಿಯಸ್‌ನಲ್ಲಿ ಸಿಕ್ಕಾಪಟ್ಟೆ ಚಳಿ

ದೆಹಲಿಯಲ್ಲಿ ನಿನ್ನೆ (ನವೆಂಬರ್ 21) ರಾತ್ರಿ 10.2 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಈ ಸೀಸನ್‌ನ ಅತ್ಯಂತ ಕನಿಷ್ಠ ಮಟ್ಟವಾಗಿದೆ. ಹೀಗಾಗಿ ಇದು ಅತ್ಯಂತ ತಣ್ಣನೆಯ ರಾತ್ರಿಯಾಗಿ ದಾಖಲಾಗಿದೆ. ಇದೇ ರೀತಿ, ಬುಧವಾರ (ನವೆಂಬರ್ 20) ರಾತ್ರಿ 11.2 ಡಿಗ್ರಿ ಸೆಲ್ಶಿಯಸ್, ಮಂಗಳವಾರ (ನವೆಂಬರ್ 19) ರಾತ್ರಿ 12.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದ್ದವು. ಕಳೆದ ವರ್ಷ (2023) ಇದೇ ಅವಧಿಯಲ್ಲಿ ಉಷ್ಣಾಂಶವು 10.6 ಡಿಗ್ರಿ ಸೆಲ್ಸಿಯಸ್ ಮತ್ತು 2022 ರಲ್ಲಿ 11.5 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದಾಗಿ ಪಿಟಿಐ ವರದಿ ಮಾಡಿದೆ.

ಮಂಜು ಮುಸುಕಿದ ಮತ್ತು ಚಳಿ ಗಾಳಿಯಿಂದ ತತ್ತರಿಸಿರುವ ನಗರದಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್, ಸಾಮಾನ್ಯಕ್ಕಿಂತ 0.8 ರಷ್ಟು ಕಡಿಮೆಯಾಗಿದೆ. ಹಗಲಿನಲ್ಲಿ ತೇವಾಂಶ ಮಟ್ಟವು ಶೇಕಡ 80 ಮತ್ತು 64 ನಡುವೆ ಏರಿಳಿತದಿಂದ ಕೂಡಿತ್ತು. ಇಂದು (ನವೆಂಬರ್ 22) ಸಾಧಾರಣ ಮಂಜು ಮುಸುಕಿದ ವಾತಾವರಣ ಮತ್ತು ಗರಿಷ್ಠ 27 ಡಿಗ್ರಿ ಸೆಲ್ಶಿಯಸ್, ಕನಿಷ್ಠ 10 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹಿಮಾಚಲದಲ್ಲಿ 8 ವರ್ಷಗಳಲ್ಲೇ ದಾಖಲೆಯ ಒಣಹವೆ, ತೇವಾಂಶ ಕುಸಿತ

ಹಿಮಾಚಲ ಪ್ರದೇಶದಲ್ಲಿ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಮಳೆ ಬಾರದ ಕಾರಣ ತೇವಾಂಶ ಕುಸಿದು ಒಣ ಹವೆ ಕಂಡುಬಂದಿದೆ. ಇದು ಎಂಟು ವರ್ಷಗಳಲ್ಲೇ ದಾಖಲೆಯಾಗಿದ್ದು, ಹೆಚ್ಚಿನ ಮಳೆ ಕೊರತೆಯನ್ನು ರಾಜ್ಯ ಅನುಭವಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದಾಗಿ ಎಎನ್‌ಐ ವರದಿ ಮಾಡಿದೆ. 2016ರ ನವೆಂಬರ್‌ನಲ್ಲಿ ಇಂಥದ್ದೇ ಸನ್ನಿವೇಶ ಇತ್ತು. ಅಂದು ಕೂಡ ಇಡೀ ರಾಜ್ಯದಲ್ಲಿ ಮಳೆಬಿದ್ದಿರಲಿಲ್ಲ ಎಂಬುದನ್ನು ಭಾರತೀಯ ಹವಾಮಾನ ಇಲಾಖೆಯ ಹಿಮಾಚಲ ಪ್ರದೇಶದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ತಿಳಿಸಿದ್ದಾಗಿ ವರದಿ ಹೇಳಿದೆ.

"2016 ರ ನಮ್ಮ ದಾಖಲೆಗಳ ಪ್ರಕಾರ, ನವೆಂಬರ್‌ನಲ್ಲಿ ಯಾವುದೇ ವೀಕ್ಷಣಾಲಯಗಳು ಸಾಮಾನ್ಯ ಮಳೆಯನ್ನು ವರದಿ ಮಾಡಿಲ್ಲ. ಈ ವರ್ಷವು ಅದೇ ರೀತಿ ರೂಪುಗೊಳ್ಳುತ್ತಿದೆ. ರಾಜ್ಯದ ವಾತಾವರಣ ಬಹುತೇಕ ಶುಷ್ಕವಾಗಿದ್ದು ತೇವಾಂಶ ಕುಸಿದ ಕಾರಣ ಒಣಹವೆ ಕಾಡಲಿದೆ. ಮುಂಬರುವ ಮುನ್ಸೂಚನೆಯು ಮುಂದಿನ ಮೂರರಿಂದ ಐದು ದಿನಗಳಲ್ಲಿ ಗಮನಾರ್ಹ ಮಳೆ ಇಲ್ಲ ಎಂಬುದನ್ನು ಸೂಚಿಸುತ್ತದೆ" ಎಂದು ಶ್ರೀವಾಸ್ತವ ಹೇಳಿದರು.

ನವೆಂಬರ್ 23 ರಂದು ಲಾಹೌಲ್-ಸ್ಪಿಟಿ, ಚಂಬಾ ಮತ್ತು ಕಾಂಗ್ರಾದ ಕೆಲವು ಭಾಗಗಳಂತಹ ಎತ್ತರದ ಪ್ರದೇಶಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದ್ದರೂ, ಪ್ರಸ್ತುತ ಪಶ್ಚಿಮದ ಅಡಚಣೆಗಳ ಪ್ರಭಾವವು ಕಡಿಮೆಯಾಗಿದೆ. ಹೀಗಾಗಿ ಹೇಳಿಕೊಳ್ಳುವ ಮಳೆ ಬೀಳದು. ನವೆಂಬರ್‌ನಿಂದ ಏಪ್ರಿಲ್ ತನಕ ಮಳೆಗಾಗಿ ಹಿಮಾಚಲ ಪ್ರದೇಶ ಪಶ್ಚಿಮದ ಅಡ್ಡಿಯನ್ನು ಬಯಸುತ್ತದೆ. ಶಿಮ್ಲಾ ಮತ್ತು ಇತರೆ ಪ್ರದೇಶಗಳಲ್ಲಿ ಉಷ್ಣಾಂಶ 7 ಡಿಗ್ರಿ ಸೆಲ್ಶಿಯಸ್‌ ತನಕವೂ ಕುಸಿದಿದೆ. ವಿಪರೀತ ಚಳಿ ಎಲ್ಲರನ್ನು ಕಾಡುತ್ತಿದೆ. ಭಾಕ್ರ ಅಣೆಕಟ್ಟು ಸುತ್ತಮುತ್ತಲಿನ ಪ್ರದೇಶ ಬಿಲಾಸ್‌ಪುರ, ಹಮೀರ್‌ಪುರಗಳಲ್ಲಿ ದಟ್ಟ ಮಂಜು ಆವರಿಸಲಿದೆ ಎಂದು ಅವರು ವಿವರಿಸಿದ್ದಾರೆ.

ಇದೇ ರೀತಿ ಪಂಜಾಬ್‌ನ ಕೆಲವು ಪ್ರದೇಶಗಳಲ್ಲಿ ಇನ್ನೂ ಮೂರ್ನಾಲ್ಕು ದಿನ ದಟ್ಟ ಮಂಜು ಆವರಿಸಲಿದೆ. ಚಳಿಯೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.