Indian Railway: ರೈಲ್ವೆ ನೌಕರರಿಗೆ ಶುಭ ಸುದ್ದಿ; ದೀಪಾವಳಿ ಹಬ್ಬಕ್ಕೆ ಸಿಗಲಿದೆ ಭರ್ಜರಿ ಬೋನಸ್?
Railways Employees Bonus: 7ನೇ ವೇತನ ಆಯೋಗದಡಿಯಲ್ಲಿ ದೀಪಾವಳಿಯಂದು ನೀಡುವ ಬೋನಸ್ ಅನ್ನು ಲೆಕ್ಕ ಹಾಕುವಂತೆ ರೈಲ್ವೆ ನೌಕರರ ಒಕ್ಕೂಟವು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದೆ.
ನವದೆಹಲಿ: ನೀವೇ ರೈಲ್ವೇಯಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ನಿಮಗಿಲ್ಲಿದೆ ಗುಡ್ನ್ಯೂಸ್. 6ನೇ ವೇತನ ಆಯೋಗದ ಬದಲಿಗೆ 7ನೇ ವೇತನ ಆಯೋಗದ ಆಧಾರದ ಮೇಲೆ ಬೋನಸ್ (Productivity-Linked Bonus -PLB) ಲೆಕ್ಕ ಹಾಕುವಂತೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ಗೆ ರೈಲ್ವೆ ನೌಕರರ ಒಕ್ಕೂಟ ಮನವಿ ಮಾಡಿದೆ.
ಭಾರತೀಯ ರೈಲ್ವೆ ನೌಕರರ ಒಕ್ಕೂಟದ (IREF) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸರ್ವ್‌ಜಿತ್ ಸಿಂಗ್ ಮಾತನಾಡಿ, 6ನೇ ವೇತನ ಆಯೋಗದ ಪ್ರಕಾರ ಕನಿಷ್ಠ ಬೋನಸ್ ತಿಂಗಳಿಗೆ 7,000 ರೂಪಾಯಿ ಆಗಿದೆ. ಆದರೆ 7ನೇ ವೇತನ ಆಯೋಗದ ಅಡಿಯಲ್ಲಿ ಬೋನಸ್ 18,000 ರೂಪಾಯಿ ಆಗಿದೆ. ಇದನ್ನು ರೈಲ್ವೆ ನೌಕರರು 2016ರ ಜನವರಿ 1 ರಿಂದಲೇ ಪಡೆಯುತ್ತಿದ್ದಾರೆ ಎಂದು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದಾರೆ ಸರ್ವ್‌ಜಿತ್ ಸಿಂಗ್.
ಆದರೆ, ಕನಿಷ್ಠ ವೇತನ 7000 ರೂಪಾಯಿ ಆಧಾರದ ಮೇಲೆ ಬೋನಸ್ ಲೆಕ್ಕ ಹಾಕುತ್ತಿದ್ದಾರೆ. ಇದರಿಂದ ನೌಕರರಿಗೆ ತೀವ್ರ ಅನ್ಯಾಯವಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ದೇಶಾದ್ಯಂತ ಲಾಕ್‌ಡೌನ್ ವೇಳೆ ಜನರು ಮನೆಯಿಂದಲೇ ಹೊರ ಬರದಿದ್ದಾಗ ರೈಲ್ವೆ ನೌಕರರು ರೈಲುಗಳ ನಿರಂತರ ಓಡಾಟಕ್ಕೆ ನೆರವಾಗಿದ್ದರು. ಇದಾದ ಬಳಿಕ ರೈಲ್ವೇ ಆದಾಯ ಭಾರೀ ಏರಿಕೆ ಕಂಡಿರುವುದು ತ್ರೈಮಾಸಿಕ ವರದಿಯಿಂದ ಮಾಹಿತಿ ಹೊರ ಬಿದ್ದಿದೆ. ಕೋವಿಡ್ ವೇಳೆ ಹಿರಿಯ ನಾಗರಿಕರಿಗೆ ನೀಡಲಾಗುವ ರಿಯಾಯಿತಿಯನ್ನು ನಿಲ್ಲಿಸುವ ರೈಲ್ವೆಯ ನಿರ್ಧಾರವು ರೈಲ್ವೆಯ ಲಾಭದ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ರೈಲ್ವೆ ನೌಕರರಿಗೆ 78 ದಿನಗಳ ಬೋನಸ್
ರೈಲ್ವೆ ಸರ್ಕಾರದ ಸೂಚನೆಗಳ ಪ್ರಕಾರ, ರೈಲ್ವೇ ನೌಕರರು 78 ದಿನಗಳ ಮೂಲ ವೇತನಕ್ಕೆ ಸಮಾನವಾದ ಪಿಎಲ್ಬಿ ಬೋನಸ್ ಪಡೆಯಬೇಕು ಎಂದು ಹೇಳಿದ್ದಾರೆ. ಆದರೆ, ಪ್ರಸ್ತುತ 7,000 ರೂಪಾಯಿ ಆಧಾರದ ಮೇಲೆ 17,951 ರೂಪಾಯಿಯನ್ನು ಪಡೆಯುತ್ತಿದ್ದಾರೆ. 7ನೇ ವೇತನ ಆಯೋಗದಡಿಯಲ್ಲಿ ರೈಲ್ವೆಯಲ್ಲಿ ಕನಿಷ್ಠ ಮೂಲ ವೇತನ 18,000 ರೂಪಾಯಿ. ಇದರಿಂದ 78 ದಿನಗಳವರೆಗೆ 17,951 ರೂ., ಬೋನಸ್ ತುಂಬಾ ಕಡಿಮೆಯಾಗಿದೆ. ಹಣದುಬ್ಬರ ಏರಿಕೆಯ ನಡುವೆ ಇದು ಸಾಕಷ್ಟು ಆತಂಕ ಹೆಚ್ಚಿಸಿದೆ. 18,000 ಮೂಲ ವೇತನದ ಪ್ರಕಾರ 78 ದಿನಗಳ ಬೋನಸ್ 46,159 ರೂಪಾಯಿ ಆಗುತ್ತದೆ ಎಂದಿದ್ದಾರೆ.
28,200 ರೂಪಾಯಿ ಲಾಭ ಹೇಗೆ?
7ನೇ ವೇತನ ಆಯೋಗದ ಪ್ರಕಾರ 78 ದಿನಗಳ ಬೋನಸ್ ನೀಡಲು ಸರ್ಕಾರ ನಿರ್ಧರಿಸಿದರೆ, ಪ್ರತಿ ಉದ್ಯೋಗಿಗೆ ಕನಿಷ್ಠ (46,159-17,951) = 28,208 ರೂಪಾಯಿ ಹೆಚ್ಚುವರಿ ವೇತನ ಸಿಗಲಿದೆ. ರೈಲ್ವೇ ನೌಕರರ ಒಕ್ಕೂಟದ ಪತ್ರದ ಮೂಲಕ ಮಾಡಿದ ಮನವಿಯಲ್ಲಿ 7ನೇ ವೇತನ ಆಯೋಗದ ವೇತನದ ಪ್ರಕಾರ ಎಲ್ಲಾ ರೈಲ್ವೆ ಉದ್ಯೋಗಿಗಳಿಗೆ ಉತ್ಪಾದಕತೆ ಸಂಬಂಧಿತ ಬೋನಸ್ ಅನ್ನು ಲೆಕ್ಕಹಾಕಲು ಭಾರತೀಯ ರೈಲ್ವೆ ನೌಕರರ ಒಕ್ಕೂಟ ಮನವಿ ಮಾಡಿದೆ. ದೀಪಾವಳಿ ಹಬ್ಬಕ್ಕೆ ರೈಲ್ವೆ ನೌಕರರು ಈ ಬೋನಸ್ ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.