INS Vikrant: ಐಎನ್‌ಎಸ್ ವಿಕ್ರಾಂತ್‌ಗೆ ಮರಳಿತು ಐತಿಹಾಸಿಕ ಹಳೆ ಘಂಟೆ, ತುರ್ತು ಸಂದರ್ಭದಲ್ಲಿ ಢಣ್.. ಢಣ್ ಎಚ್ಚರಿಸುವ ಬೆಲ್
ಯುದ್ಧ ಹಡಗುಗಳಲ್ಲಿ ಇಂತಹ ಬೆಲ್ ಅತ್ಯಂತ ಪ್ರಮುಖವಾದ ತುರ್ತು ಅಲಾರಂ ಸಾಧನ. ಎಲ್ಲಾದರೂ ಬೆಂಕಿ ಆಕಸ್ಮಿಕವಾದರೆ ಐದು ಸೆಕೆಂಡ್‌ಗಳ ಕಾಲ ಈ ಘಂಟೆ ಬಾರಿಸಲಾಗುತ್ತದೆ. ಒಂದು ಬೆಲ್, ಎರಡು ಬೆಲ್, ಮೂರು ಬೆಲ್ ಸದ್ದಿಗೆ ಅದರದ್ದೇ ಆದ ಅರ್ಥವಿದೆ.
ನವದೆಹಲಿ: ಭಾರತದ ನೌಕಾಪಡೆಯ ಹೆಮ್ಮೆಯ ಸ್ವದೇಶಿ ವಿಮಾನವಾಹಕ ಯುದ್ಧ ನೌಕೆ ಐಎನ್‌ಎಸ್ ವಿಕ್ರಾಂತ್‌ಗೆ (INS Vikrant) ಹಳೆಯ ಐಎನ್‌ಎಸ್ ವಿಕ್ರಾಂತ್‌ನಲ್ಲಿದ್ದ ಘಂಟೆಯನ್ನು ನೌಕಾಪಡೆಯ ಮಾಜಿ ಮುಖ್ಯಸ್ಥರು ಹಿಂತುರುಗಿಸಿದ್ದಾರೆ. ಹಳೆಯ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಅಳವಡಿಸಲಾಗಿದ್ದ ಈ ಘಂಟೆ ಇದೀಗ ಅದೇ ಹೆಸರಿನ ಯುದ್ಧನೌಕೆಗೆ 36 ವರ್ಷಗಳ ಬಳಿಕ ಮರಳಿದೆ. 1961ರಲ್ಲಿ ಐಎನ್‌ಎಸ್ ವಿಕ್ರಾಂತ್ ಹೆಸರಿನ ನೌಕಾಪಡೆಗೆ ನಿಯೋಜಿಸಲಾದ ಯುದ್ಧನೌಕೆಯಲ್ಲಿ ಘಂಟೆ ಇತ್ತು.
ಬ್ರಿಟಿಷ್ ಮೂಲದ ಎಚ್‌ಎಂಎಸ್ ಹರ್ಕ್ಯುಲಸ್ ಎಂಬ ವಿಮಾನವಾಹಕ ಯುದ್ಧನೌಕೆಯನ್ನು ಐಎನ್‌ಎಸ್ ವಿಕ್ರಾಂತ್ ಆಗಿ ಮರುನಾಮಕರಣ ಮಾಡಲಾಗಿತ್ತು. ಹಳೆಯ ಐಎನ್‌ಎಸ್ ವಿಕ್ರಾಂತ್ ಬದಲಿಗೆ ಭಾರತವು ಸಂಪೂರ್ಣ ಸ್ವದೇಶಿ ಐಎನ್‌ಎಸ್ ವಿಕ್ರಾಂತ್ ಅನ್ನು ನೌಕಾಪಡೆಗೆ ನಿಯೋಜಿಸಿದೆ. ಇದೀಗ ಹೊಸ ಘಂಟೆಯನ್ನು ಹೊಸ ಐಎನ್‌ಎಸ್ ವಿಕ್ರಾಂತ್‌ಗೆ ಅಳವಡಿಸಲಾಗಿದೆ.
ನಿವೃತ್ತ ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಾಡೆ ಅವರು ತಮ್ಮ ಹಡಗು ಮತ್ತು ಭಾರತೀಯ ನೌಕಾಪಡೆಯ ಶ್ರೀಮಂತ ಇತಿಹಾಸದ ಬಗ್ಗೆ ಭಾರತದ ಯುವಕರನ್ನು ಪ್ರೇರೇಪಿಸುವ ಉದ್ದೇಶದಿಂದ ಮಾರ್ಚ್ 22 ರಂದು ಈ ಘಂಟೆಯನ್ನು ಹಿಂದಿರುಗಿಸಲು ನಿರ್ಧರಿಸಿದರು. ಮೊದಲ ಐಎನ್‌ಎಸ್ ವಿಕ್ರಾಂತ್ ಯುದ್ಧವಿಮಾನ ವಾಹಕನನ್ನು 1997 ರಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಅದರಲ್ಲಿದ್ದ ಘಂಟೆಯನ್ನು ತೆಗೆಯಲಾಗಿತ್ತು. ಆ ಘಂಟೆಯನ್ನು ಭಾರತೀಯ ನೌಕಾಪಡೆಯ ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಾಡೆ ಅವರ ದೆಹಲಿಯ ಮೋತಿಲಾಲ್ ನೆಹರು ಮಾರ್ಗ್‌ನಲ್ಲಿರುವ ನಿವಾಸದಲ್ಲಿ ಇರಿಸಲಾಗಿತ್ತು.
ಯುದ್ಧನೌಕೆಯಲ್ಲಿ ಇಂತಹ ಘಂಟೆಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ನೌಕಾಪಡೆಯ ಅಧಿಕಾರಿಗಳು ನಂಬುತ್ತಾರೆ. ಯುದ್ಧ ಹಡಗುಗಳಲ್ಲಿ ಇಂತಹ ಬೆಲ್ ಅತ್ಯಂತ ಪ್ರಮುಖವಾದ ತುರ್ತು ಅಲಾರಂ ಸಾಧನ. ಎಲ್ಲಾದರೂ ಬೆಂಕಿ ಆಕಸ್ಮಿಕವಾದರೆ ಐದು ಸೆಕೆಂಡ್‌ಗಳ ಕಾಲ ಈ ಘಂಟೆ ಬಾರಿಸಲಾಗುತ್ತದೆ. ಒಂದು ಬೆಲ್, ಎರಡು ಬೆಲ್, ಮೂರು ಬೆಲ್ ಸದ್ದಿಗೆ ಅದರದ್ದೇ ಆದ ಅರ್ಥವಿದೆ. ಒಂದು ಬಾರಿ ಘಂಟೆ ಬಾರಿಸಿದರೆ ಬೆಂಕಿ ಆಕಸ್ಮಿಕ ಮುಂದೆ ಆಗಿದೆ, ಎರಡು ಘಂಟೆ ಬಾರಿಸಿದರೆ ಶಿಪ್‌ನ ಮಧ್ಯೆ ಮತ್ತು ಮೂರು ಬಾರಿ ಬೆಲ್ ಬಾರಿಸಿದರೆ ಶಿಪ್‌ನ ಹಿಂಭಾಗದಲ್ಲಿ ಬೆಂಕಿ ಆಕಸ್ಮಿಕವಾಗಿದೆ ಎಂದು ಸೂಚಿಸಲಾಗುತ್ತದೆ.
1971ರಲ್ಲಿ ಇಂಡೋ ಪಾಕ್ ಯುದ್ಧದ ಸಮಯದಲ್ಲಿ ಈ ಯುದ್ಧನೌಕೆಯು ಪ್ರಮುಖ ಪಾತ್ರವಹಿಸಿತ್ತು. ಈ ಯುದ್ಧನೌಕೆಯು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಯುದ್ಧಗಳ ಸಮಯದಲ್ಲಿ ಸಕ್ರಿಯವಾಗಿತ್ತು ಮತ್ತು ರಾಷ್ಟ್ರದ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲು ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿತ್ತು.
ಹೊಸ ಸ್ವದೇಶಿ ಐಎನ್‌ಎಸ್ ವಿಕ್ರಾಂತ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 2, 2022 ರಂದು ಕೊಚ್ಚಿಯಲ್ಲಿ ನಿಯೋಜಿಸಿದರು. ನೂತನ ಐಎನ್‌ಎಸ್ ವಿಕ್ರಾಂತ್ ಭಾರತದ ಸಾಗರ ಇತಿಹಾಸದಲ್ಲಿಯೇ ಇಲ್ಲಿಯವರೆಗೆ ನಿರ್ಮಿಸಿರುವ ಅತ್ಯಂತ ದೊಡ್ಡ ಯುದ್ಧವಾಹನ ಹಡಗಾಗಿದೆ. ಇದನ್ನು ಕೊಚ್ಚಿನ್ ಶಿಪ್‌ಯಾರ್ಡ್ ನಿರ್ಮಿಸಿದೆ.
ಸುಮಾರು 2,500 ಕಿಮೀ ಉದ್ದದ ಐಎನ್‌ಎಸ್ ವಿಕ್ರಾಂತ್‌ನ ಕೇಬಲ್‌ಗಳನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಭಾರತೀಯ ನೌಕಾಪಡೆ, ಡಿಆರ್‌ಡಿಓ SAIL ಸಹಾಯದಿಂದ ಭಾರತದಲ್ಲಿ ಯುದ್ಧನೌಕೆ ನಿರ್ಮಾಣ ಮಾಡಲು ಬೇಕಾದ ಉನ್ನತ ದರ್ಜೆಯ ಉಕ್ಕನ್ನು ಸಹ ತಯಾರಿಸುತ್ತದೆ.
ಭಾರತದಲ್ಲಿ ನಿರ್ಮಾಣವಾದ ಅತ್ಯಂತ ದೊಡ್ಡ ಯುದ್ಧನೌಕೆ ವಿಕ್ರಾಂತ್ ಆಗಿದೆ. ಇದು ಭಾರತೀಯ ನೌಕಾಪಡೆಯ ಮೊದಲ ಸ್ವದೇಶಿ ವಿನ್ಯಾಸದ ಮತ್ತು ನಿರ್ಮಾಣದ ಯುದ್ಧನೌಕೆ ವಾಹಕವಾಗಿದೆ. ಇಷ್ಟು ಬೃಹತ್ತಾದ ಮತ್ತು ಶಕ್ತಿಶಾಲಿ ಯುದ್ಧ ನೌಕೆಗಳನ್ನು ವಿನ್ಯಾಸಗೊಳಿಸುವ ಮತ್ತು ನಿರ್ಮಿಸುವ ಸಾಮರ್ಥ್ಯವುಳ್ಳ ಗಣ್ಯ ದೇಶಗಳ ಕ್ಲಬ್‌ಗೆ ಭಾರತವೂ ಸೇರಿದೆ.
ಭಾರತದ ಮೊದಲ ಯುದ್ಧ ವಿಮಾನ ವಾಹಕವಾದ ಐಎನ್‌ಎಸ್ ವಿಕ್ರಾಂತ್ ಅನ್ನು 1961ರಲ್ಲಿ ಬ್ರಿಟನ್‌ನಿಂದ ಖರೀದಿಸಲಾಗಿತ್ತು. 19,500 ಟನ್ ತೂಕದ ಈ ನೌಕೆಯನ್ನು 1997ರಲ್ಲಿ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು. ಪಾಕಿಸ್ತಾನದ ಜತೆಗಿನ 1971ರ ಯುದ್ಧದಲ್ಲಿ ಬಂಗಾಳ ಕೊಲ್ಲಿಯಲ್ಲಿ ಐಎನ್‌ಎಸ್ ವಿಕ್ರಾಂತ್ ನೌಕೆಯನ್ನು ಭಾರತ ನಿಯೋಜಿಸಿತ್ತು. ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿ 50 ವರ್ಷ ತುಂಬಿದ ಸಂದರ್ಭದಲ್ಲಿ ಹೊಸ ನೌಕೆ ತನ್ನ ಮೊದಲ ಪ್ರಯೋಗ ನಡೆಸಿದ್ದರಿಂದ, ಅದರ ಸ್ಮರಣಾರ್ಥ ಐಎನ್‌ಎಸ್ ವಿಕ್ರಾಂತ್ ಎಂಬ ಹೆಸರನ್ನೇ ನೂತನ ನೌಕೆಗೆ ಇಡಲಾಗಿದೆ.