ಇಡ್ಲಿ, ದೋಸೆ, ಕ್ರಿಕೆಟ್, ಕೆಜಿಎಫ್: ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವ ಭಾರತ ಮೂಲದ ಯೋಧರಿಗೆ ಇವು ಪ್ರಾಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಇಡ್ಲಿ, ದೋಸೆ, ಕ್ರಿಕೆಟ್, ಕೆಜಿಎಫ್: ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವ ಭಾರತ ಮೂಲದ ಯೋಧರಿಗೆ ಇವು ಪ್ರಾಣ

ಇಡ್ಲಿ, ದೋಸೆ, ಕ್ರಿಕೆಟ್, ಕೆಜಿಎಫ್: ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವ ಭಾರತ ಮೂಲದ ಯೋಧರಿಗೆ ಇವು ಪ್ರಾಣ

Russia Ukraine Conflict: ಇದು ಉಕ್ರೇನ್-ರಷ್ಯಾ ಸಂಘರ್ಷದ ಪ್ರತ್ಯಕ್ಷ ವರದಿ. ಬೆಂಗಳೂರು ಮೂಲದ ಫೋಟೊ ಜರ್ನಲಿಸ್ಟ್ ಭಾನು ಪ್ರಕಾಶ್ ಚಂದ್ರ ಅವರ ಅನುಭವ ಕಥನದಲ್ಲಿ ಯುದ್ಧಭೂಮಿಯ ವಿವರಗಳೊಂದಿಗೆ ಅಲ್ಲಿ ಹೋರಾಡುತ್ತಿರುವ ಭಾರತೀಯರ ಮನೋಭೂಮಿಕೆಯ ವಿವರಗಳೂ ಇವೆ. ಅಪರೂಪದ ವರದಿ ನಿಮ್ಮ ಓದಿಗೆ. (Courtesy: The Week, Issue Date: August 13, 2023)

ಉಕ್ರೇನ್ ಪರ ಹೋರಾಡುತ್ತಿರುವ ಭಾರತ ಮೂಲದ ಯೋಧರಾದ ಆಂಡ್ರೀ ಮತ್ತು ನವೀನ್, ಚಿತ್ರ: ಭಾನುಪ್ರಕಾಶ್ ಚಂದ್ರ
ಉಕ್ರೇನ್ ಪರ ಹೋರಾಡುತ್ತಿರುವ ಭಾರತ ಮೂಲದ ಯೋಧರಾದ ಆಂಡ್ರೀ ಮತ್ತು ನವೀನ್, ಚಿತ್ರ: ಭಾನುಪ್ರಕಾಶ್ ಚಂದ್ರ ( Courtesy: The Week | Photo by: Bhanu Prakash Chandra)

'ದಕ್ಷಿಣ ಭಾರತದ ಆಹಾರ, ಅದರಲ್ಲಿಯೂ ಇಡ್ಲಿ, ದೋಸೆ ನನಗೆ ತುಂಬಾ ಇಷ್ಟ. ಸಿನಿಮಾಗಳಂದ್ರೂ ಅಷ್ಟೇ, ಸೌತ್ ಇಂಡಿಯನ್ ಮೂವಿಗಳೇ ನನಗೆ ಫೇವರೀಟ್. ಕೆಜಿಎಫ್-1, ಕೆಜಿಎಫ್-2 ನೋಡಿದ್ದೇನೆ. ಜ್ಯೂನಿಯರ್ ಎನ್‌ಟಿಆರ್ ನನ್ನ ಇಷ್ಟದ ನಟ' ಎಂದು ಉಕ್ರೇನ್‌ನಲ್ಲಿ ರಷ್ಯಾ ವಿರುದ್ಧ ಹೋರಾಡುತ್ತಿರುವ ಭಾರತ ಮೂಲದ ಯೋಧ ಆಂಡ್ರೀ ಹೇಳಿದರು. ಮಾತಿಗೆ ಕುಳಿತಿದ್ದ ಮತ್ತೋರ್ವ ಯೋಧ ನವೀನ್, 'ನನಗೆ ಕ್ರಿಕೆಟ್ ಅಂದ್ರೆ ಇಷ್ಟ. ಸಿನಿಮಾ ನಾನು ಹೆಚ್ಚಾಗಿ ನೋಡಲ್ಲ' ಎಂದರು.

ಬೆಂಗಳೂರು ಮೂಲದ ಫೋಟೊ ಜರ್ನಲಿಸ್ಟ್ ಭಾನು ಪ್ರಕಾಶ್ ಚಂದ್ರ ಇತ್ತೀಚೆಗಷ್ಟೇ ಉಕ್ರೇನ್‌ನಿಂದ ಹಿಂದಿರುಗಿದ್ದಾರೆ. 'ದಿ ವೀಕ್' ವಾರಪತ್ರಿಕೆ ಮತ್ತು ಜಾಲತಾಣದಲ್ಲಿ ಉಕ್ರೇನ್ ಸಂಘರ್ಷದ ಬಗ್ಗೆ ಅವರು ತೆಗೆದಿರುವ ಫೋಟೊಗಳ ಸಹಿತ ಸುದೀರ್ಘ ಲೇಖನ ಪ್ರಕಟವಾಗಿದೆ. ಸುಮಾರು 50 ಪುಟಗಳಷ್ಟಿರುವ ಲೇಖನದಲ್ಲಿ ಭಾರತ ಮೂಲದ ಯೋಧರ ಸಂದರ್ಶನ ಎಲ್ಲರ ಗಮನ ಸೆಳೆಯುತ್ತಿದೆ. ಭಾರತದಿಂದ ತೆರಳಿ ಉಕ್ರೇನ್‌ನಲ್ಲಿ ವಾಸವಿದ್ದ ಮೂವರನ್ನು ಸಂದರ್ಶಿಸಲು ಪತ್ರಕರ್ತ ಭಾನು ಪ್ರಕಾಶ್ ಚಂದ್ರ ಪ್ರಯತ್ನಿಸಿದ್ದಾರೆ. ಈ ಪೈಕಿ ಇಬ್ಬರನ್ನು ಮಾತ್ರವೇ ಮಾತನಾಡಿಸಲು ಅವರಿಗೆ ಸಾಧ್ಯವಾಗಿದೆ. ಈ ಮಾತುಕತೆಯನ್ನು 'ದಿ ವೀಕ್' ಆಕರ್ಷಕವಾಗಿ ಕಟ್ಟಿಕೊಟ್ಟಿದೆ.

ಭಾನು ಪ್ರಕಾಶ್ ಚಂದ್ರ ಅವರ ಬರಹದ ಸಂಗ್ರಹಾನುವಾದ ಇಲ್ಲಿದೆ.

ಉಕ್ರೇನ್ ಪರವಾಗಿ ಹೋರಾಡುತ್ತಿರುವ ಭಾರತೀಯರನ್ನು ಭೇಟಿ ಮಾಡುವುದು ನಾನು ಅಂದುಕೊಂಡಿದ್ದಕ್ಕಿಂತಲೂ ಕಷ್ಟವಾಗಿತ್ತು. ಸತತ ಪ್ರಯತ್ನದ ನಂತರ ಉಕ್ರೇನ್‌ನಲ್ಲಿ ಭಾರತ ಮೂಲದ ಮೂವರು ರಷ್ಯಾ ವಿರುದ್ಧ ಹೋರಾಡುತ್ತಿರುವುದು ತಿಳಿದು ಬಂತು. ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಇಂತಲ್ಲಿ ನಮ್ಮ ಭೇಟಿ ಎಂದು ಸ್ಥಳ ನಿಗದಿಯಾದರೂ ಕೊನೆಯ ಕ್ಷಣದವರೆಗೆ ಭೇಟಿಯ ಬಗ್ಗೆ ಗೊಂದಲಗಳು ಮುಂದುವರಿದೇ ಇತ್ತು.

ಯುದ್ಧಭೂಮಿಯ ಸನಿಹದಲ್ಲಿರುವ ಪುಟ್ಟ ಪಟ್ಟಣ ಕೊಸ್ಟ್ಯಾನ್‌ಟಿನಿವ್‌ಕಾ ಎಂಬಲ್ಲಿ ನಮ್ಮ ಭೇಟಿ ಎಂದು ತೀರ್ಮಾನವಾಗಿತ್ತು. ಅಲ್ಲಿ ನೋಡಿದರೆ ಮಿಲಿಟರಿ ವಾಹನಗಳೇ ಮುಕ್ಕಿರಿದಿದ್ದವು. ಟ್ಯಾಂಕ್‌ನಂಥ ಬೃಹತ್ ವಾಹನಗಳ ನಿರಂತರ ಸಂಚಾರದಿಂದಾಗಿ ಯುದ್ಧಕ್ಕೆ ಅಭಿಮುಖವಾಗಿರುವ ಪಟ್ಟಣದ ರಸ್ತೆಗಳು ಹಾಳಾಗಿದ್ದವು. ಸ್ಫೋಟದ ಸದ್ದು ಕಿವಿಗೆ ಅಪ್ಪಳಿಸುತ್ತಲೇ ಇತ್ತು.

ರಷ್ಯಾದ ಕ್ಷಿಪಣಿ ದಾಳಿಗೆ ಸೂರು ಕಳೆದುಕೊಂಡ ಶಾಲೆಯ ಸಮೀಪ ನಮ್ಮ ಭೇಟಿ ಎಂದು ನಿಗದಿಯಾಗಿತ್ತು. ಅಲ್ಲಿಯೇ ನಾನು ಕಾಯುತ್ತಿದ್ದೆ. ಸಮರಕ್ಕೆ ಹೊರಡುವಾಗ ಧರಿಸುವ ಉಡುಗೆ ತೊಟ್ಟ ಇಬ್ಬರು ಸಾಧಾರಣ ಮೈಕಟ್ಟಿನ ಯೋಧರು ಪಿಕಪ್‌ ಟ್ರಕ್‌ಗಳಿಂದ ಕೆಳಗೆ ಧುಮುಕಿದರು. ಇಬ್ಬರ ಕೈಲೂ ಮಷೀನ್‌ಗನ್‌ಗಳಿದ್ದವು. ಮೂರನೆಯ ವ್ಯಕ್ತಿಗಾಗಿ ನನ್ನ ಕಣ್ಣುಗಳು ಹುಡುಕಾಡಿದವು.

ನಾನೊಮ್ಮೆ ಮುಗುಳ್ನಕ್ಕು, 'ನಮಸ್ತೆ' ಎಂದೆ. ನನ್ನ ಕೈಹಿಡಿದ ಯೋಧ, 'ಸ್ಲಾವಾ ಉಕ್ರೇನಿಯಾ' ಎಂದ. 'ಯುದ್ಧಕ್ಕೆ ಮೊದಲು ನನ್ನ ಗಡ್ಡ ಬೆಳ್ಳಗಿತ್ತು. ನೋಡಿ ಈಗ ಹೀಗಾಗಿದೆ' ಎಂದು ಬಿಳುಪಾಗಿದ್ದ ಗಡ್ಡ ತೋರಿದ. ತನ್ನ ಭಾರತೀಯ ಹೆಸರು ಹೇಳಲು, ಕ್ಯಾಮೆರಾಗೆ ಮುಖ ತೋರಲು ಇಷ್ಟಪಡಲಿಲ್ಲ. ‘ಅಂಡ್ರೀ’ ಅಂತ ಇಲ್ಲಿ ನನ್ನ ಹೆಸರು, ಭಾರತದ ಮಧ್ಯಪ್ರದೇಶದವನು' ಎಂದಷ್ಟೇ ಹೇಳಿದರು.

ಆದರೆ ಅವರೊಂದಿಗೆ ಇದ್ದ ಮತ್ತೊಬ್ಬ ಭಾರತ ಮೂಲದ ಯೋಧ ಮೂಲತಃ ಹರಿಯಾಣದವರು. ಅವರಿಗೆ ಚಿತ್ರ ತೆಗೆಸಿಕೊಳ್ಳಲು ಯಾವ ತಕರಾರೂ ಇರಲಿಲ್ಲ. ತನ್ನ ಹೆಸರನ್ನು ನವೀನ್ ಎಂದು ಹೇಳಿಕೊಂಡರು. ಅದು ನಿಜವಾದ ಹೆಸರು ಎಂದು ನಾನು ಹೇಳಲಾರೆ. ಉಕ್ರೇನ್ ಯೋಧರು ಅವರ ಉಪನಾಮದ ಸಹಿತ (ಮನೆತನದ ಹೆಸರು) ಪೂರ್ತಿ ಹೆಸರು ಹೇಳುವಂತಿಲ್ಲ ಎಂಬ ನಿಯಮವಿದೆ.

ನನಗೆ ಅವರು ಸಿಕ್ಕಷ್ಟೇ, ಅವರಿಗೂ ನಾನು ಸಿಕ್ಕಿದ್ದು ಖುಷಿಯಾಗಿರಬೇಕು. ಹಿಂದಿಯಲ್ಲೇ ಮಾತನಾಡಿದರು. 'ನಾನು ದಕ್ಷಿಣ ಭಾರತದವನು, ನನ್ನ ಹಿಂದಿ ಅಷ್ಟೇನೂ ಚೆನ್ನಾಗಿಲ್ಲ' ಎಂದು ನಾನು ಹೇಳಿದೆ. ಶಾಲೆಯ ಅವಶೇಷಗಳು ಹಿನ್ನೆಲೆಯಾಗಿ ಬರುವಂತೆ ಫ್ರೇಮ್ ಕಂಪೋಸ್ ಮಾಡಿ ಒಂದಿಷ್ಟು ಫೋಟೊ ತೆಗೆದುಕೊಂಡೆ. ಇವರಿಬ್ಬರೂ ಓದಲೆಂದು ಉಕ್ರೇನ್‌ಗೆ ಬಂದವರು. ಆಮೇಲೆ ಉಕ್ರೇನ್‌ನ ಯುವತಿಯರನ್ನೇ ಇಷ್ಟಪಟ್ಟು ಮದುವೆಯಾಗಿ, ಈಗ ಅಲ್ಲಿನವರೇ ಆಗಿಬಿಟ್ಟಿದ್ದಾರೆ. ಇಬ್ಬರಿಗೂ ರಷ್ಯಾ ಬಗ್ಗೆ ಅಗಾಧವಾದ ಸಿಟ್ಟು ಇತ್ತು.

"ರಷ್ಯನ್ನರು ಈಗ ಹಳೆಯ ಸೋವಿಯತ್ ಯುಗದ ರಾಕೆಟ್‌ಗಳನ್ನು ಹಾರಿಸುತ್ತಿದ್ದಾರೆ. ಕೈಕೈ ಮಿಲಾಯಿಸುವ ಹೋರಾಟಕ್ಕೆ ಬಂದರೆ ಅವರು ಸೋಲುತ್ತಾರೆ" ಎಂದು ಆಂಡ್ರೀ ಹೇಳಿದರು. ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನ ಖರೀದಿಸುವ ಭಾರತದ ನಿರ್ಧಾರದ ಬಗ್ಗೆ ಅವರಿಗೆ ಸಿಟ್ಟಿತ್ತು. "ರಷ್ಯಾ ಇಲ್ಲಿನ ಜನಸಾಮಾನ್ಯರನ್ನು ಸಾಯಿಸುತ್ತಿದೆ. ಗಂಡನ ಎದುರು ಹೆಂಡತಿಯ ಅತ್ಯಾಚಾರ ಮಾಡುತ್ತಿದ್ದಾರೆ. ಅವರು ಮನುಷ್ಯರೇ ಅಲ್ಲ, ಅವರಿಗಿಂತ ಮೃಗಗಳು ಎಷ್ಟೋ ವಾಸಿ. ಅವರು ಉಕ್ರೇನ್‌ನಿಂದ ಹೊರಗೆ ಹೋಗಲೇಬೇಕು. ಇಲ್ಲಿ ಅವರಿಗೆ ಏನೂ ಸಿಗಲ್ಲ" ಎಂದು ಆಂಡ್ರೀ ಸಿಟ್ಟಿನಲ್ಲಿ ಮಾತನಾಡಿದರು.

ಹೀಗೆ ಮಾತನಾಡುತ್ತಿರುವಾಗಲೇ ನಮ್ಮ ತಲೆಯ ಮೇಲೆ ದೊಡ್ಡ ಸದ್ದು ಕೇಳಿಸಿತು. ಅದು ರಾಕೆಟ್ ಎಂದು ಆಂಡ್ರೀ-ನವೀನ್ ಹೇಳಿದರು. ಕೆಲವೇ ಹೊತ್ತಿನಲ್ಲಿ ಸುಖೋಯ್ ಎಸ್‌-25 ಯುದ್ಧವಿಮಾನದ ಹಾರಾಟ ಕಾಣಿಸಿತು. "ಸ್ವಲ್ಪ ದಿನ ಅಷ್ಟೇ, ಇಲ್ಲಿಗೆ ಎಫ್‌-16 ಜೆಟ್ ಬರುತ್ತೆ" ಎಂದು ಆಂಡ್ರೀ ಹೇಳಿದರು. "ಭಾರತದಲ್ಲಿ ರಷ್ಯಾ ಪರ ಪ್ರೋಪಗಾಂಡ (ಪ್ರಚಾರ) ಕೆಲಸ ಮಾಡುತ್ತಿದೆ. ಭಾರತೀಯರಿಗೆ ಇಲ್ಲಿನ ನೈಜ ಪರಿಸ್ಥಿತಿ ಗೊತ್ತಿಲ್ಲ. ಉಕ್ರೇನ್ ಜನರಿಗೆ ಸಹಾಯ ಮಾಡಬೇಕೆಂದು ಭಾರತ ಸರ್ಕಾರವನ್ನು ನಾನು ಕೋರುತ್ತೇನೆ" ಎಂದು ಆಂಡ್ರೀ ಒತ್ತಿಹೇಳಿದರು.

'ಭಾರತ ಅಂದ್ರೆ ಏನು ನೆನಪಾಗುತ್ತೆ' ಎಂದು ಪ್ರಶ್ನೆ ಮುಂದಿಟ್ಟೆ. ಆಂಡ್ರೀ ತುಸು ಯೋಚಿಸಿ, 'ನನಗೆ ಇಡ್ಲಿ-ದೋಸೆ ಇಷ್ಟ. ಕೆಜಿಎಫ್-1, ಕೆಜಿಎಫ್-2 ಸಿನಿಮಾಗಳನ್ನು ಎಷ್ಟೋ ಸಲ ನೋಡಿಬಿಟ್ಟಿದ್ದೆ. ಜ್ಯೂನಿಯರ್ ಎನ್‌ಟಿಆರ್ ನನ್ನ ನೆಚ್ಚಿನ ನಟ' ಎಂದು ಹೇಳಿದ. ನವೀನ್‌ ಕಡೆ ತಿರುಗಿದಾಗ, 'ನನಗೆ ಕ್ರಿಕೆಟ್ ಇಷ್ಟ. ಹಾಗಂತ ಐಪಿಎಲ್ ನೋಡಲ್ಲ ನಾನು. ಒನ್‌ಡೇ ಮ್ಯಾಚ್ ಇಷ್ಟಪಡ್ತೀನಿ' ಎಂದ.

ಸ್ವಲ್ಪ ಹೊತ್ತಿಗೆ ಸಮರಭೂಮಿಯಿಂದ ಸೇನೆಯ ಪಿಕಪ್ ವಾಹನ ಬಂತು. ಹೊರಡುವ ಮೊದಲು ಮೂವರೂ ಸೇರಿ ಒಂದು ಸೆಲ್ಫಿ ಕ್ಲಿಕ್ ಮಾಡಿಕೊಂಡ್ವಿ. ರಷ್ಯಾ-ಉಕ್ರೇನ್ ಯುದ್ಧಭೂಮಿಯಲ್ಲಿ ಆ ದಿನ ಮೂವರು ಭಾರತೀಯರು ಇದ್ದೆವು!

(ಕನ್ನಡ ಅನುವಾದ: ಡಿ.ಎಂ.ಘನಶ್ಯಾಮ)

---

‘ದಿ ವೀಕ್’ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಫೋಟೊ ಜರ್ನಲಿಸ್ಟ್ ಭಾನುಪ್ರಕಾಶ್ ಚಂದ್ರ ಅವರ ಮೂಲ ಲೇಖನದ ಸಂಗ್ರಹ ಅನುವಾದ ಇದು. ಕನ್ನಡದ ಓದುಗರಿಗೆ ಈ ಮೌಲಿಕ ಓದಲು ಸಿಗಬೇಕು ಎನ್ನುವ ಕಾರಣಕ್ಕೆ ಕೃತಜ್ಞತಾಪೂರ್ಕವಾಗಿ ಪ್ರಕಟಿಸಲಾಗಿದೆ. Courtesy: The Week, Issue Date: August 13, 2023. ಮೂಲ ಲೇಖನ ಓದಲು ಲಿಂಕ್: Meet the Indians who are fighting for Ukraine

ಉಕ್ರೇನ್ ಪ್ರವಾಸದ ಬಗ್ಗೆ ಭಾನು ಪ್ರಕಾಶ್ ಚಂದ್ರ ಕನ್ನಡದಲ್ಲಿ ಪಬ್ಲಿಷ್ ಮಾಡಿರುವ ವಿಡಿಯೊ
ಉಕ್ರೇನ್ ಪ್ರವಾಸದ ಬಗ್ಗೆ ಭಾನು ಪ್ರಕಾಶ್ ಚಂದ್ರ ಕನ್ನಡದಲ್ಲಿ ಪಬ್ಲಿಷ್ ಮಾಡಿರುವ ವಿಡಿಯೊ (Bhanu Prakash Chandra)

ಭಾನು ಪ್ರಕಾಶ್ ಚಂದ್ರ ಅವರು ಕನ್ನಡದಲ್ಲಿ ವಿವರಣೆ ನೀಡಿರುವ ವಿಡಿಯೊ ನೋಡಲು ಲಿಂಕ್: ಉಕ್ರೇನ್‌ನಲ್ಲಿರುವ ಭಾರತ ಮೂಲದ ಯೋಧರು

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.