ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಯಾವಾಗ? ದಿನಾಂಕ, ಸಮಯ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
ಈಚೆಗೆ ಮುಕ್ತಾಯವಾದ ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಯಾವಾಗ, ದಿನಾಂಕ, ಫಲಿತಾಂಶವನ್ನು ಎಲ್ಲಿ ಮತ್ತು ಹೇಗೆ ನೋಡುವುದು, ಮತದಾನತ್ತೋರ ಸಮೀಕ್ಷೆಗಳು ಏನು ಹೇಳಿದ್ದವು ಎಂಬುದನ್ನು ತಿಳಿಯೋಣ.
ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪಕ್ಷಕ್ಕೆ ಸರ್ಕಾರ ಅಧಿಕಾರಕ್ಕೆ ಬರುತ್ತದೆ, ಹರಿಯಾಣದಲ್ಲಿ ಅನ್ನದಾತರು ಯಾವ ಪಕ್ಷವನ್ನು ಬೆಂಬಲಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ರಾಷ್ಟ್ರಮಟ್ಟದಲ್ಲಿ ಕಾತುರ ಹೆಚ್ಚಾಗಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ (ಅಕ್ಟೋಬರ್ 8, ಮಂಗಳವಾರ) ಕೇಂದ್ರ ಚುನಾವಣಾ ಆಯೋಗ ಫಲಿತಾಂಶವನ್ನು ಪ್ರಕಟಿಸಲಿದೆ. ನಾಳೆ ಮಧ್ಯಾಹ್ನದ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.
2019ರಲ್ಲಿ ಆರ್ಟಿಕಲ್ 370 ರದ್ದಾದ ಬಳಿಕ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರಲ್ಲಿ ಚುನಾವಣೆ ನಡೆದಿದ್ದು, ಪ್ರಮುಖವಾಗಿ ಡೆಮಾಕ್ರಟಿಕ್ ಪಕ್ಷ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸೇರಿದಂತೆ ಸ್ಥಳೀಯ ಪಕ್ಷಗಳು ಹಾಗೂ ಕಾಂಗ್ರೆಸ್ ಪ್ರಬಲ ಪೈಪೋಟಿ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೂಡ ಇಲ್ಲಿ ಸ್ಪರ್ಧೆಯನ್ನು ನೀಡಿದೆ. 19 ವಿಧಾನಸಭಾ ಕ್ಷೇತ್ರಗಳ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಪ್ಟೆಂಬರ್ 15, ಸೆಪ್ಟೆಂಬರ್ 25 ಹಾಗೂ ಅಕ್ಟೋಬರ್ 1 ರಂದು ಕ್ರಮವಾಗಿ ಮೂರು ಹಂತಗಳಲ್ಲಿ ಮತದಾನ ನಡೆದಿತ್ತು.
ಈ ಕೇಂದ್ರಾಡಳಿತ ಪ್ರದೇಶದಲ್ಲಿ 2018 ರ ಜೂನ್‌ನಲ್ಲಿ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಆ ನಂತರ ಯಾವುದೇ ಸರ್ಕಾರಗಳು ಬಂದಿರಲಿಲ್ಲ. ಆರು ವರ್ಷಗಳ ನಂತರ ಚುನಾಯಿತ ಸರ್ಕಾರ ಬರಲಿದೆ. ಅಕ್ಟೋಬರ್ 8ರ ಮಂಗಳವಾರ ನಡೆಯಲಿರುವ ಮತ ಎಣಿಕೆ ನಡೆಯುವ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಬಹು ಹಂತದ ಭದ್ರತೆಯನ್ನು ಒದಗಿಸಲಾಗಿದೆ.
ಅಧಿಕಾರಿಗಳು ಬೆಳಿಗ್ಗೆ 8 ಗಂಟೆಗೆ ಬಿಗಿ ಭದ್ರತೆಯ ನಡುವೆ ಸ್ಟ್ರಾಂಗ್ ರೂಮ್‌ಗಳನ್ನು ತೆರೆಯಲಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲು ಪ್ರಾರಂಭಿಸುತ್ತಾರೆ, ನಂತರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳಿಂದ (ಇವಿಎಂ) ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಯು ಸಂಜೆ 6 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಈ ಬಾರಿಯ ಚುನಾವಣೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ಜಮ್ಮು ಮತ್ತು ಕಾಶ್ಮೀರದಲ್ಲಿ ಶೇಕಡಾ 63.45 ರಷ್ಟು ಮತದಾನವಾಗಿದ್ದು, ಇದು 2014 ರ ವಿಧಾನಸಭಾ ಚುನಾವಣೆಯಲ್ಲಿ ದಾಖಲಾದ ಶೇಕಡಾ 65.52 ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಪೈಕಿ, ಭಾರತೀಯ ಜನತಾ ಪಕ್ಷವು 62 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ, ಜಮ್ಮು ಪ್ರದೇಶದಲ್ಲಿ 43 ಮತ್ತು ಕಾಶ್ಮೀರದಲ್ಲಿ 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ದಕ್ಷಿಣ ಕಾಶ್ಮೀರದ 16 ವಿಧಾನಸಭಾ ಸ್ಥಾನಗಳಿಂದ 8, ಮಧ್ಯ ಕಾಶ್ಮೀರದ 15 ಕ್ಷೇತ್ರಗಳ ಪೈಕಿ 6 ಮತ್ತು ಉತ್ತರ ಕಾಶ್ಮೀರದ 16 ಕ್ಷೇತ್ರಗಳ ಪೈಕಿ 5 ಅಭ್ಯರ್ಥಿಗಳಿಗೆ ಪಕ್ಷ ಟಿಕೆಟ್ ನೀಡಿತ್ತು.
ಏತನ್ಮಧ್ಯೆ, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದವನ್ನು ಮಾಡಿಕೊಂಡಿದ್ದವು. ಕಾಂಗ್ರೆಸ್ 33 ಸ್ಥಾನಗಳಲ್ಲಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ 52 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಉಳಿದ ಐದು ಸ್ಥಾನಗಳಿಗೆ ಉಭಯ ಪಕ್ಷಗಳು ಸ್ನೇಹಪರ ಹೋರಾಟದಲ್ಲಿ ತೊಡಗಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಎಂ) ಮತ್ತು ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಗೆ ತಲಾ ಒಂದು ಸ್ಥಾನವನ್ನು ಬಿಟ್ಟುಕೊಟ್ಟಿದ್ದವು.
ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶ ಹೇಗಿತ್ತು
ಬಹುತೇಕ ಎಲ್ಲಾ ಮತದಾನೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ಪಕ್ಷಗಳು ಅಧಿಕಾರಕ್ಕೆ ಅಧಿಕಾರಕ್ಕೆ ಬರುತ್ತವೆ ಎಂದು ಅಂದಾಜಿಸಿವೆ. ಬಿಜೆಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಅಕ್ಟೋಬರ್ 8ರ ಮಂಗಳವಾರದ ಫಲಿತಾಂಶದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.
ಹರಿಯಾಣ ವಿಧಾನಸಭಾ ಚುನಾವಣಾ ಚಿತ್ರಣ
ಅಕ್ಟೋಬರ್ 5 ರಂದು ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆದಿದ್ದು, ನಾಳೆ (ಅಕ್ಟೋಬರ್ 8, ಮಂಗಳವಾರ) ಫಲಿತಾಂಶ ಹೊರಬೀಳಲಿದೆ. ಹರಿಯಾಣದಲ್ಲಿ ಮೊದಲು ಅಕ್ಟೋಬರ್ 1ಕ್ಕೆ ಚುನಾವಣೆ ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಹೇಳಿತ್ತು. ನಂತರ ಆ ದಿನಾಂಕವನ್ನು ಅಕ್ಟೋಬರ್ 5ಕ್ಕೆ ಮುಂದೂಡಿಕೆ ಮಾಡಿತ್ತು.
ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಇಂಡಿಯನ್ ನ್ಯಾಷನಲ್ ಲೋಕದಳ ಪ್ರಮುಖ ಪಕ್ಷಗಳಾಗಿ ಚುನಾವಣೆಯಲ್ಲಿ ಸ್ಪರ್ಧಿಸಿವೆ. ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಜಿಂದ್ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 72 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿಕೊಂಡರೆ ಈ ಬಾರಿ ಹರಿಯಾಣದಲ್ಲಿ ಕಡಿಮೆ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 2014 ರಲ್ಲಿ 1,351 ಅಭ್ಯರ್ಥಿಗಳು, 2019ರ ವಿಧಾನಸಭೆ ಚುನಾವಣೆಯಲ್ಲಿ 1,169 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2024ರ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಶೇಕಡಾ 67.90 ರಷ್ಟು ಮತದಾನವಾಗಿದೆ.
ಹರಿಯಾಣದಲ್ಲಿ ಮತದಾನೋತ್ತರ ಸಮೀಕ್ಷೆ ಫಲಿತಾಂಶ
ಹರಿಯಾಣದಲ್ಲಿ ಈ ಬಾರಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಆಡಳಿತ ಪಕ್ಷವಾಗಿದ್ದ ಬಿಜೆಪಿ ಈ ಬಾರಿ ಅಧಿಕಾರವನ್ನು ಕಳೆದುಕೊಳ್ಳುವ ಸಾಕಷ್ಟು ಸಾಧ್ಯತೆ ಇದೆ ಎಂದು ಹೇಳಿವೆ. ಅಂತಿಮವಾಗಿ ಯಾವ ಪಕ್ಷವನ್ನು ಮತದಾರ ಅಧಿಕಾರ ನಡೆಸಲು ಗ್ರೀನ್ ಸಿಗ್ನಲ್ ನೀಡಿದ್ದಾನೆ ಅನ್ನೋದು ಅಕ್ಟೋಬರ್ 8ರ ಮಂಗಳವಾರ ಗೊತ್ತಾಗಲಿದೆ. ಕೇಂದ್ರ ಚುನಾವಣಾ ಆಯೋಗದ ವೆಬ್‌ಸೈಟ್ ಹಾಗೂ ಇತರೆ ಸುದ್ದಿ ಸಂಸ್ಥೆಗಳ ಮೂಲಕ ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶವನ್ನು ತಿಳಿಯಬಹುದು.